ಇನ್ನೇನಿದ್ದರೂ ಅಂತಿಮ ಯತ್ನ
- ಆನಂದ ಅಂಗಡಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 14
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ನೇರ ಪೈಪೋಟೆಗೆ ಸಜ್ಜಾಗಿರುವ ಬಿಜೆಪಿ-ಕಾಂಗ್ರೆಸ್ಗೆ ಅಂತಿಮ ಕ್ಷಣದಲ್ಲಿ ಇನ್ನಷ್ಟು ಮತದಾರರನ್ನು ಸೆಳೆಯುವ ತವಕ.
ಏ. 17ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಏ. 15ರ ಸಂಜೆ 6ಕ್ಕೆ ತೆರೆ ಬೀಳಲಿದೆ. ಬಹಿರಂಗ ಪ್ರಚಾರ ಕೊನೆಗೊಳ್ಳಲು ಕ್ಷಣಗಣನೆ ಪ್ರಾರಂಭಗೊಂಡಿದೆ.
ಈ ಅಂತಿಮ ಘಳಿಗೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಮತ್ತಷ್ಟು ಮತದಾರರನ್ನು ಸೆಳೆಯುವುದಕ್ಕಾಗಿ ಸ್ಟಾರ್ ಪ್ರಚಾರಕರಿಗೆ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳಿಬ್ಬರೂ ಏ. 15ರಂದು ಹುಬ್ಬಳ್ಳಿಯಲ್ಲಿ ರೋಡ್ ಶೋ ಹಾಗೂ ಬಹಿರಂಗ ಪ್ರಚಾರ ನಡೆಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಪಕ್ಷದ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಏ. 15ರಂದು ಮಧ್ಯಾಹ್ನ 2ಕ್ಕೆ ಇಲ್ಲಿಯ ಮೂರುಸಾವಿರ ಮಠದಿಂದ ರೋಡ್ ಶೋ ನಡೆಸಲಿದ್ದಾರೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಲ್ಲಿಯ ನೆಹರು ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಮತಯಾಚಿಸಿ, ಭಾಷಣ ಮಾಡಲಿದ್ದಾರೆ.
ಕೂಗಳತೆ ದೂರದಲ್ಲಿರುವ ಮೂರುಸಾವಿರ ಮಠದ ಮೈದಾನ ಹಾಗೂ ನೆಹರು ಮೈದಾನಗಳಲ್ಲಿ ಎರಡೂ ಪಕ್ಷಗಳ ಸ್ಟಾರ್ ಪ್ರಚಾರಕರು ಒಬ್ಬರ ಮೇಲೊಬ್ಬರು ಕೆಸೆರೆರಚುವ ಮೂಲಕ ತಮ್ಮ ಆಡಳಿತಾವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಮತದಾರರಿಗೆ ತಲುಪಿಸುವ ಕೊನೆಯ ಪ್ರಯತ್ನ ಮಾಡಲಿದ್ದಾರೆ.
ಇದುವರೆಗಿನ ಪ್ರಚಾರ: ಧಾರವಾಡ, ಹುಬ್ಬಳ್ಳಿ-ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಹುಬ್ಬಳ್ಳಿ-ಧಾರವಾಡ ಕೇಂದ್ರ, ಕಲಘಟಗಿ, ಕುಂದಗೋಳ, ನವಲಗುಂದ ಹಾಗೂ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ಧಾರವಾಡ ಲೋಕಸಭೆ ಕ್ಷೇತ್ರದ ಪ್ರತಿ ಹಳ್ಳಿಗಳ ಮತದಾರರನ್ನು ಯಾವುದೇ ಪಕ್ಷದ ಅಭ್ಯರ್ಥಿಗಳು ತಲುಪಲಾಗದೇ ಇರುವುದು ಬಹಿರಂಗ ಸತ್ಯ.
ಹುಬ್ಬಳ್ಳಿ-ಧಾರವಾಡ ಮಹಾನಗರ, ಕಲಘಟಗಿ, ನವಲಗುಂದ, ಕುಂದಗೋಳ, ಶಿಗ್ಗಾಂವಿ, ಅಣ್ಣಿಗೇರಿ, ಸವಣೂರು, ಬಂಕಾಪುರ ಪಟ್ಟಣಗಳ ಜೊತೆಗೆ 560 ಗ್ರಾಮಗಳಿರುವ ಧಾರವಾಡ ಲೋಕಸಭೆ ಕ್ಷೇತ್ರದ ಕೊನೆಯ ಮತದಾರನನ್ನು ತಲುಪಲು ಪ್ರಮುಖ ಮೂರೂ ಪಕ್ಷಗಳ ಮುಖಂಡರಿಗೆ ಸಾಧ್ಯವಾಗಿಲ್ಲ.
ನಾಮಪತ್ರ ಸಲ್ಲಿಸುವ ಅಂತಿಮ ಕ್ಷಣಗಳಲ್ಲಿ ಹನುಮಂತ ಬಂಕಾಪುರ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದ್ದು, ಇದುವರೆಗೂ ಪ್ರಚಾರದ ಅಬ್ಬರ ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರಕ್ಕೆ ಸ್ಟಾರ್ ಪ್ರಚಾರಕರು ಬಂದರೆ ಜೆಡಿಎಸ್ ಮುಖಂಡರು ಕ್ಷೇತ್ರಕ್ಕೆ ಬರಲೇ ಇಲ್ಲ.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಬಿಟ್ಟರೆ ಬೇರಾರೂ ಜೆಡಿಎಸ್ ಪರ ಪ್ರಚಾರ ಮಾಡಿಲ್ಲ. ಜೆಡಿಎಸ್ ಟಿಕೆಟ್ ಅಂತಿಮಗೊಳ್ಳುವ ದಿನವೇ ಹುಬ್ಬಳ್ಳಿಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಮೇಲೆ ಧಾರವಾಡ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ.
ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ ಕ್ಷೇತ್ರವಾದ ಧಾರವಾಡದಲ್ಲಿ ಮತ್ತಷ್ಟು ಮತದಾರರನ್ನು ಸೆಳೆಯುವ ಅಂತಿಮ ಪ್ರಯತ್ನಕ್ಕೆ ಮುಖಂಡರು ಸಜ್ಜಾಗಿದ್ದಾರೆ. ಬಹಿರಂಗ ಪ್ರಚಾರದ ಕೊನೆಯ ದಿನ ಸ್ಟಾರ್ ಪ್ರಚಾರಕರ ಅಬ್ಬರದ ಭಾಷಣ ಮತದಾರರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

