ಮರಿಬೇಡಿ, ನಾಳೆಯೇ ಮತದಾನ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 14
ಅತ್ಯಂತ ಕುತೂಹಲ ಕೆರಳಿಸಿರುವ ಪ್ರಸಕ್ತ ಲೋಕಸಭೆ ಚುನಾವಣೆಯ ಮತದಾನದ ಮಹೂರ್ತ ಕೂಡಿ ಬಂದಿದ್ದು, ಮತ ಚಲಾವಣೆಗೆ ಒಂದು ದಿನ ಮಾತ್ರ ಬಾಕಿ ಉಳಿದಿವೆ.
ಚುನಾವಣೆಯ ಎಲ್ಲ ಹಂತಗಳಲ್ಲಿಯೇ ಮತದಾನ ಪ್ರಮುಖ ಘಟ್ಟವಾಗಿದ್ದು, ಗುರುವಾರ ಬೆಳಗ್ಗೆ 7 ರಿಂದ ಸಂಜೆ 6ರ ವರಗೆ ಧಾರವಾಡ ಲೋಕಸಭೆ ಚುನಾವಣೆಯ ಎಂಟೂ ವಿಧಾನಸಭಾ ಕ್ಷೇತ್ರಗಳ ಒಟ್ಟು 1703 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮತದಾನ ಸುಸೂತ್ರವಾಗಿ ನಡೆಯಲೆಂದು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ.
ಎಷ್ಟು ಜನ ಸಿಬ್ಬಂದಿ...: ಮತದಾನಕ್ಕಾಗಿ 2600ಕ್ಕೂ ಹೆಚ್ಚು ಪೊಲೀಸ ಸಿಬ್ಬಂದಿ ಸೇರಿದಂತೆ ಒಟ್ಟು 11,912 ಸಿಬ್ಬಂದಿ ನೇಮಿಸಿದ್ದು, ಈಗಾಗಲೇ ಅವರಿಗೆ ಎರಡು ಹಂತದ ತರಬೇತಿ ನೀಡಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ ಸಿಬ್ಬಂದಿ ನೇಮಿಸಿ ಯಾವುದೇ ರೀತಿಯ ಗದ್ದಲ-ಗೊಂದಲ ಆಗದಂತೆ ಎಚ್ಚರ ವಹಿಸಲಾಗುತ್ತಿದೆ. ಪ್ರಸಕ್ತ ಬಾರಿ ಚುನಾವಣೆ ಕರ್ತವ್ಯಕ್ಕೆ ನೇಮಿಸಿದ ಸಿಬ್ಬಂದಿಗೆ ಹಾಗೂ ಮತದಾರರಿಗೆ ಯಾವುದೇ ತೊಂದರೆಗಳು ಎದುರಾಗದಂತೆ ಜಿಲ್ಲಾಡಳಿತ ಸ್ಪಂದಿಸಿದೆ. ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸೌಕರ್ಯ, ಮಧ್ಯಾಹ್ನ ಊಟ ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಗವಿಕಲರಿಗೆ ರ್ಯಾಂಪ್ ಸಹ ಪ್ರತಿ ಮತಗಟ್ಟೆಗಳಲ್ಲಿ ಇಡಲಾಗುತ್ತಿದೆ.
15 ಲಕ್ಷಕ್ಕೂ ಹೆಚ್ಚು ಮತದಾರರು...: ಈ ಹಿಂದಿನ ಎಲ್ಲ ಚುನಾವಣೆಗಳಲ್ಲಿ ಆದ ಮತದಾನದ ಪ್ರಮಾಣಕ್ಕಿಂತ ಈ ಬಾರಿ ಗರಿಷ್ಠ ಮಟ್ಟದ ಮತದಾನ ಆಗುವಂತೆ ಮತದಾರರ ಜಾಗೃತಿ ಸಮಿತಿ ಭಗೀರಥ ಪ್ರಯತ್ನ ನಡೆಸಿದೆ. ಚುನಾವಣಾ ಆಯೋಗವೇ ಮನೆ-ಮನೆಗೆ ಹೋಗಿ ಮತದಾರರರಿಗೆ ಮತ ಚೀಟಿಯನ್ನು ವಿತರಿಸುತ್ತಿದೆ. ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 8,07,973 ಪುರುಷ, 7,69,083 ಮಹಿಳಾ ಮತದಾರರು ಹಾಗೂ 88 ಇತರೆ ಸೇರಿದಂತೆ ಒಟ್ಟು 15,77,144 ಮತದಾರರು ಇದ್ದಾರೆ.
ಕಣದಲ್ಲಿರುವವರು..: ಚುನಾವಣಾ ಕಣದಲ್ಲಿ 17 ಜನ ಅಭ್ಯರ್ಥಿಗಳಿದ್ದು, ಈ ಪೈಕಿ ಸೋಮವಾರವಷ್ಟೇ ಪಕ್ಷೇತರ ಅಭ್ಯರ್ಥಿ ವಿಕಾಸ ಸೊಪ್ಪಿನ ಕಮ್ಯೂನಿಷ್ಟ ಪಕ್ಷದ ಅಭ್ಯರ್ಥಿ ಗಂಗಾಧರ ಅವರಿಗೆ ಬೆಂಬಲ ಸೂಚಿಸಿದ್ದರೆ, ಎರಡು ದಿನಗಳ ಹಿಂದೆ ಸಂಜೀವ ಕೊಠಾರಿ ಬಿಜೆಪಿಗೆ ಸೇರ್ಪಡೆಯಾದರು. ಇನ್ನುಳಿದ 15 ಜನ ಅಭ್ಯರ್ಥಿಗಳ ಪೈಕಿ ಸದ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆದಿದ್ದು, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಹನುಮತಪ್ಪ ಬಂಕಾಪುರ ಕಣದಲ್ಲಿದ್ದಾರೆ.
ಇನ್ನು, ಆಮ್ ಆದ್ಮಿ ಪಕ್ಷದಿಂದ ಹೇಮಂತಕುಮಾರ ಪಾಂಚಾಳ, ಪಕ್ಷೇತರ ಅಭ್ಯರ್ಥಿ ಪ್ರಮೋದ ಮುತಾಲಿಕ್, ಎಸ್ಯುಸಿಐ ಅಭ್ಯರ್ಥಿ ಗಂಗಾಧರ ಬಡಿಗೇರ ತುಸು ಪ್ರಚಾರದಲ್ಲಿ ತೊಡಗಿದ್ದಾರೆ. ಬಿಎಸ್ಪಿಯಿಂದ ಈರಪ್ಪ ಮಾದರ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಗುರುಶಾಂತಪ್ಪ ಚಲವಾದಿ ಹಾಗೂ ಪಕ್ಷೇತರರಾಗಿ ಇಮಾಮಸಾಬ ತೊರಗಲ್, ಇರ್ಷಾದ ಬೇಗಂ, ಮಾರುತಿ ಹನಸಿ, ಶೈಲೇಂದ್ರಕುಮಾರ ಪಾಟೀಲ, ಆನಂದರಾವ್ ಡೊಕ್ಕಾ, ಶಕೀಲ ದೊಡಮನಿ, ಶ್ರೀಕಾಂತ ಕಬಾಡಿ ಹೇಳಿಕೊಳ್ಳುವ ಪ್ರಚಾರದಲ್ಲಿ ತೊಡಗಿಲ್ಲ.
ಮತ ಚಲಾವಣೆ ಕುರಿತು ಮಾಹಿತಿ
ಧಾರವಾಡ: ಜಿಲ್ಲಾ ಸ್ವೀಪ್ ಕಾರ್ಯಕ್ರಮದ ಮತದಾರರ ಜಾಗೃತಿ ಕಾರ್ಯಕ್ರಮದ ಅಡಿಯಲ್ಲಿ ಜಿಗಳೂರು ಮಹಿಳಾ ಕಾಲೇಜ್ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಾನಿಕ್ ಮತ ಯಂತ್ರದ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾವತಿ ಕೊಪ್ಪರದ ಯಂತ್ರದ ಮೂಲಕ ಹೇಗೆ ಮತ ಚಲಾಯಿಸಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಪ್ರಾಚಾರ್ಯ ಡಾ. ಭಾರತಿ ಹಿರೇಮಠ, ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಪುಷ್ಪಾ ಅಬ್ಬಿಗೇರಿ, ಶಕುಂತಲಾ ಬಿರಾದಾರ, ಉಷಾದೇವಿ ಕೋಹಳ್ಳಿ, ಡಾ.ಆರ್. ಲಕ್ಷ್ಮಿ, ಡಾ. ರಾಜೇಶ್ವರಿ ಸಾಲಿ, ಡಾ. ಸಾಧನಾ ಮಠದ, ಡಾ. ನಿರ್ಮಲಾ ಹಿರೇಗೌಡರ, ಶಾಂತಾ ಪಾಟೀಲಕುಲಕರ್ಣಿ, ಡಾ. ಗಿರಿಜಾ ಯಾಬಣ್ಣವರ, ಡಾ. ರಾಜೇಶ್ವರಿ ಶೆಟ್ಟರ ಇದ್ದರು.
ವೋಟ್ ಹಾಕಿದವರಿಗೆ ಡಿಸ್ಕೌಂಟ್
ಹುಬ್ಬಳ್ಳಿ: ಲೋಕಸಭೆ ಚುನಾವಣೆ ವೇಳೆ ವೋಟ್ ಹಾಕಿದವರಿಗೆ ವೈದ್ಯರು ತಮ್ಮ ಸಲಹಾ ಶುಲ್ಕದಲ್ಲಿ ರಿಯಾಯಿತಿ ನೀಡುವುದಕ್ಕೆ ಬದ್ಧರಾಗಿದ್ದಾರೆ. ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ವಿನೂತನ ಕ್ರಮ ತೆಗೆದುಕೊಂಡಿದ್ದು, ಮತ ಚಲಾಯಿಸಿದವರು ಅನಾರೋಗ್ಯ ಪೀಡಿತರಾಗಿ ವೈದ್ಯರ ಬಳಿಗೆ ಹೋದರೆ ಸಲಹಾ ಶುಲ್ಕದಲ್ಲಿ ಶೇ. 25 ರಿಯಾಯಿತಿ ನೀಡುವಂತೆ ರಾಜ್ಯದ ವೈದ್ಯರಿಗೆ ಸೂಚಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಐಎಂಎ ಈ ರಿಯಾಯಿತಿ ಅವಧಿ ಏ. 17ರಿಂದ 24ರವರೆಗೆ ಜಾರಿಯಲ್ಲಿರುತ್ತದೆ. ಮತದಾನ ಮಾಡಿದ ಒಂದು ವಾರದೊಳಗೆ ಯಾರಾದರೂ ಅನಾರೋಗ್ಯಕ್ಕೆ ಈಡಾದರೆ ಬೆರಳಿಗೆ ಹಾಕಿರುವ ಶಾಹಿ ಗುರುತನ್ನು ವೈದ್ಯರಿಗೆ ತೋರಿಸಿ ಶುಲ್ಕದಲ್ಲಿ ರಿಯಾಯಿತಿ ಪಡೆಯಬಹುದು.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

