ಧಾರವಾಡ

50:50 ಗ್ರಾಮೀಣರ ಲೆಕ್ಕಾಚಾರ

Published On :

ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 17
ಬಿಜೆಪಿನೂ ಐತ್ರಿ, ಅಷ್ಟೇ ಕಾಂಗ್ರೆಸೂ ಐತಿ. ಈ ಚುನಾವಣ್ಯಾಗ ಮತ್ಯಾರು ಅಭ್ಯರ್ಥಿಗಳೂ ನಮ್ಗ ಗೊತ್ಲಿಲ್ಲ ಬಿಡ್ರಿ. ಒಟ್ ಜೋಶಿ ಮತ್ ವಿನಯ ಬಗ್ಗೆ ಫಿಫ್ಟಿ-ಫಿಫ್ಟಿ ಹೇಳಬಹುದ್ ನೋಡ್ರಿ...
ಧಾರವಾಡ, ಕಲಘಟಗಿ ಹಾಗೂ ನವಲಗುಂದ ತಾಲೂಕುಗಳ ಗ್ರಾಮಗಳಲ್ಲಿ ಮತದಾನದ ದಿನ ಗುರುವಾರ ಮತದಾರರಿಂದ ಕೇಳಿ ಬಂದ ಮಾತುಗಳಿವು.
ಮತದಾನ ಮಾಡಿ ಬರುತ್ತಿದ್ದ ಗ್ರಾಮೀಣ ಪ್ರದೇಶದ ಜನರ ಬಾಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಬಿಟ್ಟರೆ ವಿನಯ ಕುಲಕರ್ಣಿ ಅವರದ್ದೇ ಮಾತು. ಅಲ್ಲಲ್ಲಿ ಪ್ರಮೋದ ಮುತಾಲಿಕ ಹೆಸರೂ ಕೇಳಿ ಬರುತ್ತಿತ್ತು. ಆದರೆ, ಮುತಾಲಿಕ್‌ಗೆ ಮತ ಹಾಕಿದ್ದೇವೆಂದು ಯಾರೊಬ್ಬರೂ ಬಾಯಿಬಿಟ್ಟು ಹೇಳಲಿಲ್ಲ.
ಧಗ ಧಗಿಸುವ ಬಿಸಿಲು ಲೆಕ್ಕಿಸದ ಗ್ರಾಮೀಣ ಮತದಾರರು ಮತಗಟ್ಟೆಗಳಿಗೆ ಬಂದು ಮತ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗೆ 7ರಿಂದ ಗ್ರಾಮೀಣ ಪ್ರದೇಶದಲ್ಲಿ ಮತದಾನ ಚುರುಕಾಗಿತ್ತು.
ಧಾರವಾಡ ಮಾಧ್ಯಮ ಪ್ರತಿನಿಧಿಗಳ ಪಯಣ ಮೊದಲಿಗೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಮುಗದಗೆ ಬೆಳಗ್ಗೆ 11ಕ್ಕೆ ತೆರಳಿತು. ಅಲ್ಲಿನ ಮತಗಟ್ಟೆ ನಂ. 26ರಲ್ಲಿ 1,103 ಮತಗಳ ಪೈಕಿ 197 ಚಲಾವಣೆಗೊಂಡಿದ್ದವು. ಅನಂತರ ವರವ ನಾಗಲಾವಿಗೆ ಭೇಟಿ ನೀಡಿದಾಗ 11.30. ಮತಗಟ್ಟೆ 12ರಲ್ಲಿ 808 ಮತಗಳ ಪೈಕಿ 297 ಜನರು ಹಕ್ಕು ಚಲಾಯಿಸಿದ್ದರು. ತದನಂತರ ಧಾರವಾಡ ವಿಧಾನಸಭಾ ಕ್ಷೇತ್ರದ ಕೋಟೂರು, ಗರಗ, ಉಪ್ಪಿನ ಬೆಟಗೇರಿ ಮತಗಟ್ಟೆಗಳಲ್ಲಿ ಮಧ್ಯಾಹ್ನ 1ರ ಹೊತ್ತಿಗೆ ಶೇ. 50ರಷ್ಟು ಮತದಾನವಾಗಿತ್ತು.
ಇನ್ನು, ಧಾರವಾಡ ವಿಧಾನಸಭೆ ಕ್ಷೇತ್ರದ ಹೆಬ್ಬಳ್ಳಿ, ನರೇಂದ್ರ, ಮಾರಡಗಿ, ಶಿವಳ್ಳಿ, ಅಮ್ಮಿನಭಾವಿ, ಯಾದವಾಡ ಮತ್ತಿತರ ಗ್ರಾಮಗಳಲ್ಲೂ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದು ಕಂಡು ಬಂತು.
ಗ್ರಾಮದ ಹಿರಿಯರು, ಅಂಗವಿಕಲರು ಹಾಗೂ ಅಸಹಾಯಕರನ್ನು ವಾಹನಗಳ ಮೂಲಕ ಮತಗಟ್ಟೆಗೆ ತಂದು ಮತದಾನ ಮಾಡಿಸಲಾಗುತ್ತಿತ್ತು. ಹಲವು ಗ್ರಾಮಗಳಲ್ಲಿ ಯುವಕರು ನಾಚುವಂತೆ 90ರ ಆಸುಪಾಸಿನ ವೃದ್ಧರು ಸ್ವಯಂ ಪ್ರೇರಣೆಯಿಂದ ಬಂದು ಮತದಾನ ಮಾಡಿ ಹೋಗುವ ದೃಶ್ಯಗಳು ಕಂಡು ಬಂದವು.
ಮೊರಬದಲ್ಲಿ ಮಳೆ: ನವಲಗುಂದ ವಿಧಾಸಭಾ ಕ್ಷೇತ್ರದ ಶಿರೂರು, ಮೊರಬದಲ್ಲಿ ಮಧ್ಯಾಹ್ನ 3ರ ಸುಮಾರಿಗೆ ಶೇ. 55ರಷ್ಟು ಮತದಾನವಾಗಿತ್ತು. ಮೊರಬ ಗ್ರಾಮಕ್ಕೆ ಭೇಟಿ ನೀಡಿದ ಕೆಲವೇ ನಿಮಿಷಗಳಲ್ಲಿ ಜೋರಾಗಿ ಗುಡುಗು ಸಿಡಿಲಿನ ಮಳೆ ಸುರಿದ ಪರಿಣಾಮ ಅರ್ಧ ಗಂಟೆ ಮತದಾನ ವಿಳಂಬವಾಯಿತು.
ಹೀಗೆ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ತುರುಸಿನಿಂದ ನಡೆಯಿತು. ಮಾಜಿ ಶಾಸಕಿ ಸೀಮಾ ಮಸೂತಿ ಉಪ್ಪಿನ ಬೆಟಗೇರಿಯಲ್ಲಿ ಮತ ಚಲಾಯಿಸಿದರೆ, ಇತ್ತೀಚೆಗೆ ಬಿಜೆಪಿ ಸೇರಿದ ಅಮೃತ ದೇಸಾಯಿ ಹಂಗರಕಿಯಲ್ಲಿ ಮತದಾನ ಮಾಡಿದರು.
ಮತದಾರರ ಮಾತುಗಳು: ಪ್ರಹ್ಲಾದ ಜೋಶಿ ಒಮ್ಮೆಯೂ ನಮ್ಮೂರಿಗೆ ಬರಲಿಲ್ಲ. ಇಲ್ಲಿ ನೀರು, ರಸ್ತೆ ಸೇರಿದಂತೆ ಹತ್ತಾರು ಸಮಸ್ಯೆಗಳಿದ್ದು, ಬಿಜೆಪಿ ಕಾರ್ಯಕರ್ತನಾದ ನಾನೇ ಈ ಬಾರಿ ಕಾಂಗ್ರೆಸ್‌ನ ವಿನಯ ಅವರಿಗೆ ಮತ ಹಾಕಿದ್ದೇನೆಂದು ಉಡವ ನಾಗಲಾವಿ ಮತದಾರನೊಬ್ಬ ಹೇಳಿದರೆ, ಕೋಟೂರಿನ ಇನ್ನೋರ್ವ ಮತದಾರರ, ವಿನಯ ಕುಲಕರ್ಣಿ ಶಾಸಕರಾಗಿ ಬಂದ ಮೇಲಿಂದ ಬರೀ ರಾಜಕೀಯವನ್ನೇ ಮಾಡುತ್ತಿದ್ದು, ಕ್ಷೇತ್ರದ ಅಭಿವೃದ್ಧಿ ಗಮನ ಹರಿಸಿಲ್ಲ. ಆದ್ದರಿಂದ ಬಿಜೆಪಿ ಜೋಶಿಗೆ ಮತ ಹಾಕಿದ್ದೇನೆಂದು ಹೇಳಿದರು.
ದೇಶದ ಭದ್ರತೆ, ಅಭಿವೃದ್ಧಿ ಕಾಪಾಡುವ ನಾಯಕನನ್ನು ಆಯ್ಕೆ ಮಾಡಲು ನನ್ನ ಹಕ್ಕನ್ನು ಚಲಾಯಿಸಿದ್ದೇನೆ ಎಂದು ಮೊದಲ ಬಾರಿ ಮತದಾನ ಮಾಡಿದ ನರೇಂದ್ರದ ವಿಜಯಲಕ್ಷ್ಮೀ ಕುಮಾರದೇಸಾಯಿ ಪತ್ರಿಕೆಗೆ ಹೇಳಿದರು.
ಹೆಬ್ಬಳ್ಳಿಯ ಸುರೇಶ ಹುರಿಗೋಳ, ಬೆಲೆ ಏರಿಕೆ, ರೈತನ ಗೋಳಿಗೆ, ಭ್ರಷ್ಟಾಚಾರಕ್ಕೆ ನನ್ನ ಮತ ಉತ್ತರವಾಗಲಿದೆ ಎಂದರು.
ಶಿವಳ್ಳಿ ಗ್ರಾಮದ ಮಂಜೂರಲಿ ತಾರಿಹಾಳ, ಜಾತಿ-ಧರ್ಮ ಮೀರಿ ಜನರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ಸ್ಥಳೀಯ ನಾಯಕನಿಗೆ ನನ್ನ ಬೆಂಬಲ ನೀಡಿದ್ದೇನೆ ಎಂದರು.
ಒಟ್ಟಾರೆ ಚುನಾವಣೆ ಹಳ್ಳಿಗರಿಗೆ ಹಕ್ಕನ್ನು ಚಲಾಯಿಸುವ ಹಬ್ಬವಾದರೆ, ನಗರ ನಿವಾಸಿಗಳಿಗೆ 'ರಜಾ' ದಿನವಾಗಿತ್ತು. ಗ್ರಾಮಗಳಲ್ಲಿದ್ದ ಮತದಾನ ಉತ್ಸಾಹ ನಗರ ಪ್ರದೇಶದ ಅನೇಕ ಬಡಾವಣೆಗಳಲ್ಲಿ ಕಾಣಲೇ ಎಂಬುದು ಈ ಬಾರಿಯೂ ಸತ್ಯವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.