ಧಾರವಾಡ

ನಗರ-ಹಳ್ಳಿಯಲ್ಲಿ ಮತ ಉತ್ಸಾಹ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 17
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಈ ಹಿಂದಿನ ಚುನಾವಣೆಗೆ ಹೋಲಿಸಿದಾಗ ಮತದಾನದಲ್ಲಿ ಉತ್ಸುಕತೆಯಿಂದ ಪಾಲ್ಗೊಂಡಿದ್ದು ಕಂಡು ಬಂತು. ವಿಶೇಷವಾಗಿ ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಸಕ್ರೀಯವಾಗಿದ್ದು ಗಮನ ಸೆಳೆಯಿತು.
ವಿಶೇಷವಾಗಿ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ, ಕುಂದಗೋಳ ತಾಲೂಕಿನಲ್ಲಿ ಮಧ್ಯಾಹ್ನದ ಹೊತ್ತಿಗೆ ಬಿಸಿಲೇರುತ್ತಿದ್ದರೂ ಜನ ಮಾತ್ರ ಉತ್ಸಾಹ ಕಳೆದುಕೊಳ್ಳಲಿಲ್ಲ. ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಹುಬ್ಬಳ್ಳಿ ಗಾರ್ಡ್‌ನ ಪೇಟೆಯ ಪಾಲಿಕೆ ಕಚೇರಿ ವಲಯ ಸಂಖ್ಯೆ 11ರ ಮತಗಟ್ಟೆಯಲ್ಲಿ 11 ಗಂಟೆಯ ಹೊತ್ತಿಗಾಗಲೇ ಶೇ. 25ರಷ್ಟು ಮತದಾನವಾಗಿತ್ತು. ನ್ಯೂ ಇಂಗ್ಲಿಷ್ ಮಿಡಿಯಮ್ ಸ್ಕೂಲ್‌ನಲ್ಲಿ ಮತದಾನಕ್ಕೆ ಜನ ಕಿಕ್ಕಿರಿದು ನಿಂತಿದ್ದರು.
ಗ್ರಾಮೀಣ ಪ್ರದೇಶದಲ್ಲಿಯೂ ಮತದಾನ ತುರುಸಿನಿಂದ ನಡೆದಿತ್ತು. ಅದರಗುಂಚಿ ಗ್ರಾಮದಲ್ಲಿ ಬೆಳಗ್ಗೆ 11.15ರ ಹೊತ್ತಿಗಾಗಲೇ ಶೇ. 28ರಷ್ಟು ಮತದಾನವಾಗಿತ್ತು. ಇಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇಲ್ಲಿನ ಮತಗಟ್ಟೆ 60ರಲ್ಲಿ 108 ವರ್ಷ ವಯಸ್ಸಿನ ಗುಡನಬಿ ನದಾಫ ಮೊಮ್ಮಕ್ಕಳ ಸಹಾಯದಿಂದ ಬಂದು ಮತ ಚಲಾಯಿಸಿದರು.
ಕುಂದಗೋಳ ನಗರದಲ್ಲಿಯೂ ಬಿರುಸಿನ ಮತದಾನ ನಡೆದಿತ್ತು. ಮತಗಟ್ಟೆಯ ಸುತ್ತ ವಿವಿಧ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಗೆ ಬರುತ್ತಿರುವ ಮತದಾರರಿಗೆ ಕೈಮುಗಿದು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿರುವುದು ಕಂಡು ಬಂತು. ಕೆಲವರಂತೂ ಮತದಾರರನ್ನು ಇನ್ನೋವಾದಂತಹ ಐಶಾರಾಮಿ ವಾಹನದಲ್ಲಿ ಕರೆ ತರುತ್ತಿದ್ದರು. ಪೊಲೀಸ್ ಅಧಿಕಾರಿಗಳು ಮಾತ್ರ ಈ ಬಗ್ಗೆ ಚಕಾರವೆತ್ತಲಿಲ್ಲ.
ಬಹಿಷ್ಕಾರ ಹಿಂದಕ್ಕೆ: ಗುರುವಿನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯನ್ನು ಮಳಲಿ ಗ್ರಾಮಕ್ಕೆ ಸ್ಥಳಾಂತರಿಸಿದ್ದನ್ನು ಪ್ರತಿಭಟಿಸಿ ಚುನಾವಣೆ ಬಹಿಷ್ಕರಿಸಲು ಗ್ರಾಮದ ಮುಖಂಡರು ನಿರ್ಧರಿಸಿದ್ದರು. ಇದನ್ನು ಮನಗಂಡು ಜಿಲ್ಲಾಡಳಿತ ಗ್ರಾಮಸ್ಥರ ಮನವೊಲಿಸಿತ್ತು. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದರು. ಇದಾದ ಬಳಿಕ ತಾಲೂಕು ಪಂಚಾಯಿತಿ ಹಾಗೂ ವಿಧಾನಸಭೆ ಸಭೆ ಚುನಾವಣೆಗೆ ಗ್ರಾಮಸ್ಥರು ಮತ ಚಲಾಯಿಸಿದ್ದರು. ಆದರೆ ಜಿಲ್ಲಾಡಳಿತ ಪಂಚಾಯಿತಿ ಕಚೇರಿ ಪುನಃ ಗುರುವಿನಹಳ್ಳಿಗೆ ಸ್ಥಳಾಂತರಿಸುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದರು. ಬೆಳಗ್ಗೆ 9 ಗಂಟೆಯಾದರೂ ಮತಗಟ್ಟೆ ಸಂಖ್ಯೆ 156ರಲ್ಲಿ ಕೇವಲ 3 ಮತ ಚಲಾವಣೆಗೊಂಡಿತ್ತು. ಬಳಿಕ ಒಂದಿಷ್ಟು ಮತ ಪ್ರಕ್ರಿಯೆ ಚುರುಕುಗೊಂಡಿತಾದರೂ ಒಟ್ಟಾರೆ ಮತದಾನ ಪ್ರಮಾಣ ಕಡಿಮೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.