ಧಾರವಾಡ ಹೈಕೋರ್ಟಲ್ಲೂ ನೋಟಾ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 21
ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗ ನೋಟಾ ಬಳಸುವ ಅವಕಾಶ ಕಲ್ಪಿಸಿದ್ದು, ಇದರಿಂದ ಪ್ರೇರಣೆ ಪಡೆದ ಧಾರವಾಡ ಹೈಕೋರ್ಟ್ ವಕೀಲರ ಸಂಘವೂ ಮೊದಲ ಬಾರಿಗೆ ತನ್ನ ಚುನಾವಣೆಯಲ್ಲಿ ನೋಟಾ ವ್ಯವಸ್ಥೆ ಪರಿಚಯಿಸುತ್ತಿದೆ.
ಒಂದು ತಿಂಗಳಿಂದ ಇದ್ದ ಲೋಕಸಭೆ ಚುನಾವಣೆ ಕಾವು ಈಗ ತಣ್ಣಗಾಗಿದ್ದರೆ, ಧಾರವಾಡದ ಹೈಕೋರ್ಟ್ ವಕೀಲರ ಸಂಘದಲ್ಲಿ ಆಡಳಿತ ಮಂಡಳಿಗೆ ಏ. 24ರಂದು ನಡೆಯುತ್ತಿರುವ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಚುನಾವಣೆಯಲ್ಲಿ ನೋಟಾ ಜಾರಿ ಮಾಡಲಾಗುತ್ತಿದೆ.
ಈ ಚುನಾವಣೆಯಲ್ಲಿ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ (ನೋಟಾ) ಎಂಬುದನ್ನು ನಮೂದಿಸಲು ಸದಸ್ಯರು ಅಧಿಕಾರ ಪಡೆದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಂತ ನೋಟಾಕ್ಕೆ ಮತಗಳು ಹೆಚ್ಚಾಗಿದ್ದರೆ, ಈ ಸ್ಥಾನಕ್ಕೆ ಮರು ಚುನಾವಣೆ ನಡೆಸಲೂ ಸಂಘ ತೀರ್ಮಾನಿಸಿದೆ.
ಅರ್ಹರಲ್ಲ: ಲೋಕಸಭೆ ಚುನಾವಣೆಯಲ್ಲಿ ಮತಯಂತ್ರದಲ್ಲೇ ನೋಟಾ ಬಟನ್ ಅಳವಡಿಸಲಾಗಿತ್ತು. ನಮ್ಮ ಚುನಾವಣೆಯಲ್ಲಿ ಮತ ಪತ್ರದಲ್ಲಿ 'ಯಾರೂ ನನ್ನ ಮತಕ್ಕೆ ಅರ್ಹರಲ್ಲ' ಎಂಬುದನ್ನು ಬರೆಯಬಹುದು. ಈ ವ್ಯವಸ್ಥೆಯನ್ನು ಚುನಾವಣೆಗಳಲ್ಲಿ ಅಳವಡಿಸಲು ಸುಪ್ರೀಂಕೋರ್ಟ್ ಖುದ್ದಾಗಿ ಒಪ್ಪಿಗೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಸಂಘದ ಚುನಾವಣೆಯಲ್ಲಿ ಅಳವಡಿಸುತ್ತಿದ್ದೇವೆ. ಸೂಕ್ತ ಅಭ್ಯರ್ಥಿ ಆಯ್ಕೆಯಾಗಿ ಬರಲು ಅವಕಾಶವಿರುತ್ತದೆ ಎಂದು ಚುನಾವಣಾಧಿಕಾರಿಗಳಾದ ಎಸ್.ಎಸ್. ಕಾಯಕಮಠ ಹಾಗೂ ಮೃತ್ಯುಂಜಯ ಬಾಂಗಿ ಹೇಳುತ್ತಾರೆ.
ಮತ್ತಷ್ಟು ಬದಲಾವಣೆ: ವಕೀಲರ ಸಂಘದ ಚುನಾವಣೆಯಲ್ಲಿ ಈ ಬಾರಿ ನೋಟಾ ಮಾತ್ರವಲ್ಲದೆ, ಆಡಳಿತ ಮಂಡಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮೂರು ನಿಮಿಷಗಳ ಕಾಲ ಒಂದು ವಿಷಯದ ಬಗ್ಗೆ ಮಾತನಾಡುವ ಅವಕಾಶವನ್ನೂ ನೀಡಲಾಗಿದೆ. ಹೈಕೋರ್ಟ್ನಲ್ಲಿ ಸಭೆ-ಸಮಾರಂಭಗಳು ನಡೆದಾಗ, ಮುಖ್ಯ ನ್ಯಾಯಮೂರ್ತಿಗಳು ಹಾಗೂ ಅತಿಥಿಗಳು ಬಂದಾಗ ಸಮರ್ಪಕವಾಗಿ ಹಾಗೂ ಸ್ಪಷ್ಟವಾಗಿ ವಿಚಾರ ಮಂಡಿಸಲು ಅಭ್ಯರ್ಥಿಗೆ ಸಾಮರ್ಥ್ಯ ಇರಬೇಕೆನ್ನುವ ಉದ್ದೇಶದಿಂದ ಈ ಪದ್ಧತಿ ಆರಂಭಿಸಲಾಗಿದೆ ಎನ್ನುವುದು ಚುನಾವಣಾಧಿಕಾರಿಗಳ ಹೇಳಿಕೆ.
ಕುತೂಹಲ ಮೂಡಿಸಿದೆ: ವಕೀಲರ ಸಂಘದ ಚುನಾವಣೆ ಕಳೆದ ಬಾರಿಗಿಂತ ಈ ಸಲ ತುಸು ತುರುಸಿನಿಂದ ಕೂಡಿದ್ದು, ಏ. 24ರಂದು ಹೈಕೋರ್ಟ್ ಆವರಣದಲ್ಲೇ ಮತದಾನ ನಡೆಯಲಿದೆ. ಅದೇ ದಿನ ಸಂಜೆ ಫಲಿತಾಂಶ ಹೊರಬರಲಿದ್ದು, ಹೊಸ ವ್ಯವಸ್ಥೆ, ಪದ್ಧತಿಗಳೊಂದಿಗೆ ಹೊಂದಿಕೊಂಡು ಯಾರು ಗೆದ್ದು ಬರುತ್ತಾರೆಂಬುದು ಕುತೂಹಲ ಮೂಡಿಸಿದೆ.
ಯಾರ್ಯಾರು ಹುರಿಯಾಳು?
ಚುನಾವಣೆಯಲ್ಲಿ 425 ಮತದಾರರು ಹಕ್ಕು ಚಲಾಯಿಸಲಿದ್ದು, ನಾಮಪತ್ರ ಸಲ್ಲಿಕೆ, ವಾಪಸಾತಿ ಎಲ್ಲವೂ ಆಗಿ, ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿದೆ. ನಿರ್ಗಮಿತ ಅಧ್ಯಕ್ಷ ಬಿ.ಡಿ. ಹಿರೇಮಠ ಹಾಗೂ ನ್ಯಾಯವಾದಿ ಮದನಮೋಹನ ಕುಣ್ಣೂರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಬಿ. ಕರಿಗಾರ, ಎಂ.ಎಚ್. ಪಾಟೀಲ ಹಾಗೂ ಶಿವರಾಜ ಮುಧೋಳ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂದ್ರಶೇಖರ ಐನಾಪುರ, ರಾಜಶೇಖರ ಗುಂಜಳ್ಳಿ ಹಾಗೂ ಹರೀಶ ಮೈಗೂರ ಕಣದಲ್ಲಿದ್ದಾರೆ. ಖಜಾಂಚಿ ಸ್ಥಾನಕ್ಕೆ ಎಂ.ಎಸ್. ಹರವಿ, ಸುರೇಶ ನವಲಗುಂದ ಹಾಗೂ ಶ್ರೀಹರ್ಷ ನಿಲೋಪಂತ ಇದ್ದರೆ. ಮಹಿಳಾ ಪ್ರತಿನಿಧಿಗಾಗಿ ಅನುರಾಧಾ ದೇಶಪಾಂಡೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ. ಆಡಳಿತ ಮಂಡಳಿಯ ಐದು ಸದಸ್ಯ ಸ್ಥಾನಕ್ಕೆ ಏಳು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

