ಧಾರವಾಡ

ಮರ ಮಾಯ: ಹವಾಮಾನ ಏರುಪೇರು

Published On :

 ಹೊನ್ನಪ್ಪ ಲಕ್ಕಮ್ಮನವರ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 22
ಮಾನವ ತನ್ನ್ನ ಹೇಯ ಕೃತ್ಯದಿಂದ ಅರಣ್ಯಗಳ ಒಳ ಹೊಕ್ಕು ಬೋಳು ಮಾಡಿದ್ದಾಯಿತು. ಇದೀಗ ನಗರದಲ್ಲಿ ಅಲ್ಲೊಂದು ಇಲ್ಲೊಂದು ಇರುವ ಮರಗಳಿಗೂ ಕೈ ಹಾಕಿದ್ದಾನೆ. ಇದು ಧಾರವಾಡಿಗರ ಚಿಂತೆಗೆ ಕಾರಣವಾಗಿದೆ.
ಇದರಿಂದಾಗಿಯೇ ಉತ್ತಮ ವಾತಾವರಣವುಳ್ಳ ಧಾರವಾಡಲ್ಲಿಯೂ 38ರಿಂದ 40 ಡಿಗ್ರಿ ಸೆಲ್ಸಿಯಸ್ ಬಿಸಿಲು ಏರುವಂತಾಗಿದೆ. ಸದ್ಯ ನಗರದಲ್ಲಿನ ರಸ್ತೆ ಪಕ್ಕದ ಮರಗಳು ಒಂದೊಂದೆ ಕಾಣೆಯಾಗುತ್ತಿವೆ. ಹಳ್ಳಿಗಳಲ್ಲಿನ ರಸ್ತೆಯುದ್ದಕ್ಕೂ ಬೆಳೆದು ನಿಂತಿದ್ದ ಮರಗಳು ಪ್ರತಿದಿನವೂ ಅಲ್ಲಿ ಸಂಚರಿಸುವವರಿಗೆ ತಿಳಿಯದಂತೆ ಉರುಳುತ್ತಿವೆ.
ಯಾವ ಉದ್ದೇಶಕ್ಕೆ..?: ಹಲವು ಕಾರಣಗಳಿಂದಾಗಿ ನಿತ್ಯ ಗಿಡ-ಮರಗಳು ನೆಲಕ್ಕೆ ಉರುಳುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿ ಗಿಡಮರಗಳು ಕಡಿಯಲಾಗುತ್ತಿದ್ದರೆ, ಉರುವಲಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಗಿಡಗಳು ಸಾಯುತ್ತಿವೆ. ಇಲ್ಲಿಯ ಸವದತ್ತಿ ರಸ್ತೆ, ಅಳ್ನ್ನಾವರ-ರಾಮನಗರ, ಹು-ಧಾ ಮಧ್ಯದ ರಸ್ತೆ ಅಭಿವೃದ್ಧಿಗೆ ನೂರಾರು ಗಿಡಗಳು ಈಗಾಗಲೇ ನೆಲಕ್ಕುರುಳಿವೆ.
ಇನ್ನೂ ಧಾರವಾಡದ ವಿವಿಧ ರಸ್ತೆಯಲ್ಲಿರುವ ಮರಗಳನ್ನ್ನು ಅಲ್ಲಿಯ ಸುತ್ತಮುತ್ತಲಿನ ಸ್ಥಳಗಳ ಹಾಗೂ ಅಂಗಡಿ ಮುಂಗಟ್ಟುಗಳ ಮಾಲೀಕರು ಹೆಚ್ಚು ಜಾಗದ ಅನುಕೂಲತೆಗಾಗಿ ಜಾಣತನ ಬಳಸಿ ಉರುಳಿಸುತ್ತಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಒಂದು ಟೊಂಗೆ ಕಡಿದು ಹಾಕಿದರೆ, ಕೆಲದಿನಗಳ ನಂತರ ಮತ್ತೊಂದು ಟೊಂಗೆ ಕಡಿಯುತ್ತಾರೆ. ದಿನಕಳೆದಂತೆ ನೆಲದಿಂದ ಅಭದ್ರವಾಗುವ ಮರವನ್ನು ಸುರಕ್ಷತಾ ದೃಷ್ಟಿಯಿಂದ ಸಂಪೂರ್ಣವಾಗಿ ಕಡಿದು ಹಾಕಲಾಗುತ್ತಿದೆ!
ಹಳ್ಳಿಗಳ ರಸ್ತೆಯುದ್ದಕ್ಕೂ ಬೆಳೆದು ನಿಂತಿರುವ ಮರಗಳ ಪರಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಇದರಿಂದಾಗಿ ರಸ್ತೆಯ ಪಕ್ಕದಲ್ಲಿನ ಮರಗಳು ವರ್ಷದಿಂದ ವರ್ಷಕ್ಕೆ ಕಮ್ಮಿಯಾಗುತ್ತ ಸಾಗಿವೆ. ಇಷ್ಟೆಲ್ಲ ಅವಾಂತರಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆಯವರೂ ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.
1400 ಕೋಟಿ...: ಒಂದು ಅಂದಾಜಿನ ಪ್ರಕಾರ ಜಗತ್ತಿನಲ್ಲಿ 1400 ನೂರು ಕೋಟಿ ಮರಗಳ ಅವಶ್ಯವಿದೆ. ಈ ಮರಗಳ ಅವಶ್ಯಕತೆಯ ಅಂಕಿ ಅಂಶ ಹೆಚ್ಚುತ್ತಲೇ ಸಾಗಿದೆ. ಮೊದಲು ನಾಲ್ಕು ತಿಂಗಳಿಗೊಮ್ಮೆ ಋತು ಮಾನ ಬದಲಾಗುತ್ತಿದ್ದರೆ, ಸದ್ಯ ಪ್ರತಿದಿನವೂ ವಾತಾವರಣದಲ್ಲಿ ಏರುಪೇರು ಆಗುತ್ತಿದೆ.
ಮಳೆಗಾಲದ ಸಮಯದಲ್ಲೂ ಉರಿ ಬಿಸಿಲು, ಬೇಸಿಗೆ ಕಾಲದಲ್ಲಿ ಗುಡುಗು ಸಿಡಿಲಿನ ಆಲಿಕಲ್ಲು ಮಳೆಯಾಗುತ್ತಿರುವುದು ಇದೇ ಕಾರಣಕ್ಕೆ.
ಒಂದೆಡೆ ಮಳೆಗಾಲದ ಸಮೀಪ ಗಿಡ ಹಚ್ಚುವ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಬೇಸಿಗೆಯಲ್ಲಿ ಬೆಳೆದು ದೊಡ್ಡದಾದ ಗಿಡಗಳೇ ನೆಲಕ್ಕೆ ಉರುತ್ತಿರುವುದು ಸೋಜಿಗದ ಸಂಗತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.