ಧಾರವಾಡ

ಮೇವಿಗೆ ಬರ, ದನಕರು ತತ್ತರ

Published On :

ಹುಬ್ಬಳ್ಳಿ: ಬಿಸಿಲಿನ ಬೇಗೆಗೆ ಉತ್ತರ ಕರ್ನಾಟಕ ತತ್ತರಿಸುತ್ತಿದೆ. ಇದರೊಟ್ಟಿಗೆ ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಮೇವಿನ ಕೊರತೆ ಎದುರಾಗಿದೆ. ಮೂಕ ಪ್ರಾಣಿಗಳ ವೇದನೆ ಹೇಳತೀರದಾಗಿದೆ.
ಭಯಂಕರ ಬಿಸಿಲಿನ ತಾಪ ಹಾಗೂ ರೈತರು ವಾಣಿಜ್ಯ ಬೆಳೆಯತ್ತ ಮುಖ ಮಾಡಿರುವುದು ಮೇವಿನ ಕೊರತೆಗೆ ಪ್ರಮುಖ ಕಾರಣ. ಹೆಚ್ಚಿನ ಲಾಭಕ್ಕಾಗಿ ಬಹುತೇಕ ರೈತರು ವಾಣಿಜ್ಯ ಬೆಳೆ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಆದರೆ ಇದರ ವ್ಯತಿರಿಕ್ತ ಪರಿಣಾಮ ರೈತರ ಜೀವಾಳವೆನಿಸಿದ ದನಕರುಗಳ ಮೇಲೆಯೇ ಆಗಿದೆ.
ಆರ್ಥಿಕ ಲಾಭ ತರುವ ಬೆಳೆ ಬೆಳೆಯಲು ರೈತರು ಮುಗಿಬಿದ್ದಿದ್ದು, ಪರಂಪರಾಗತವಾಗಿ ಬೆಳೆ ಬೆಳೆಯುವ ಪದ್ಧತಿಗೆ ಎಳ್ಳುನೀರು ಬಿಡುವ ಸ್ಥಿತಿ ಬಂದಿದೆ. ರೈತರು ಪರಿವರ್ತನೆಯ ಹಾದಿ ಹಿಡಿದಿರುವುದು ಉತ್ತಮ ಬೆಳವಣಿಗೆಯೇ. ಆದರೆ ದನಕರುಗಳಿಗೆ ಮೇವು ಸಿಗದ ಮಟ್ಟಿಗೆ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದ್ದು, ಮೂಕ ಪ್ರಾಣಿಗಳಿಗೆ ಪ್ರಾಣ ಸಂಕಟ ತಂದೊಡ್ಡಿದೆ.
ಈ ಹಿಂದೆ ರೈತ ತನಗೆ, ತನ್ನ ಕುಟುಂಬಕ್ಕೆ ಬೇಕಾಗುವ ಆಹಾರದ ಬೆಳೆದುಕೊಳ್ಳುವುದರ ಜತೆಗೆ ತನ್ನ ಕೃಷಿ ಕಾಯಕದ ಸಂಗಾತಿಗಳಾದ ದನಕರುಗಳಿಗಾಗಿ ಮೇವು ಸಿಗುವಂತೆಯೂ ಮಾಡುತ್ತಿದ್ದ. ಇತ್ತೀಚೆಗೆ ಬಹುಪಾಲು ರೈತರು ಮೇವಿನ ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿ, ವಾಣಿಜ್ಯ ಬೆಳೆಗೆ ಒತ್ತು ನೀಡುತ್ತಿದ್ದಾರೆ. ಇದು ಮೇವಿನ ಕೊರತೆ ಸೃಷ್ಟಿಸಿದೆ.
ಜೋಳದ ದಂಟು ಆಹಾರ: ಬಿಳಿ ಜೋಳದ ದಂಟು ಉತ್ತರ ಕರ್ನಾಟಕ ಭಾಗದಲ್ಲಿ ದನಕರುಗಳಿಗೆ ನೀಡುವ ಪ್ರಮುಖ ಮೇವು. ಆದರೆ ಮಾರುಕಟ್ಟೆಯಲ್ಲಿ ಇತರೆ ಬೆಳೆಗಳಿಗೆ ಹೋಲಿಸಿದಾಗ ಬಿಳಿಜೋಳದ ಬೆಲೆ ತೀರಾ ಕಡಿಮೆ. ಈ ಬೆಳೆ ಬೆಳೆಯಲು ಶ್ರಮ ಹಾಗೂ ಖರ್ಚೂ ಹೆಚ್ಚು. ಹೀಗಾಗಿ ಬಿಳಿ ಜೋಳ ಬೆಳೆಯುವುದರಿಂದ ರೈತರು ವಿಮುಖರಾಗುತ್ತಿದ್ದಾರೆ.
ಇಡೀ ಉತ್ತರ ಕರ್ನಾಟಕದಲ್ಲಿ ಹಿಂಗಾರಿ ಬಿತ್ತನೆಯಲ್ಲಿ ವರ್ಷದಿಂದ ವರ್ಷಕ್ಕೆ ಬಿಳಿಜೋಳ ಬಿತ್ತನೆ ಪ್ರಮಾಣ ಗಣನೀಯ ಕುಸಿತಗೊಂಡಿದೆ. ರೈತರು ಈರುಳ್ಳಿ, ಕಡಲೆ, ಬಿಟಿಹತ್ತಿ, ಸೂರ್ಯಕಾಂತಿ, ಹೆಸರು ಸೇರಿದಂತೆ ಹೆಚ್ಚಿನ ಲಾಭ ತರುವ ಆರ್ಥಿಕ ಬೆಳೆ ಬೆಳೆದಿದ್ದಾರೆ.
ಬೆಲೆ ಏರಿಕೆ ಬಿಸಿ: ಮೇವಿನ ಬೆಳೆ ಪ್ರಮಾಣ ಕಡಿಮೆಯಾದ ಬೆನ್ನಲ್ಲೇ ಮೇವಿನ ಬೆಲೆಯೂ ಗಗನಕ್ಕೆ ಏರಿದೆ. ರು. 1500-2000ಕ್ಕೆ ಸಿಗುತ್ತಿದ್ದ ಪ್ರತಿ ಟ್ರ್ಯಾಕ್ಟರ್ ಬಿಳಿಜೋಳದ ಮೇವಿಗೆ ಈಗ ರು. 7ರಿಂದ ರು. 8 ಸಾವಿರ ಬೆಲೆ ಬಂದಿದೆ. ಮುಂದೆ ಮೇವಿನ ಬೆಲೆ ಇನ್ನಷ್ಟು ಹೆಚ್ಚಬಹುದೆಂಬ ಕಾರಣಕ್ಕೆ ದುಡ್ಡು ಕೊಡುತ್ತೇನೆಂದರೂ ಮೇವು ಮಾರಾಟ ಮಾಡಲು ಹಲವು ರೈತರು ಸಿದ್ಧರಿಲ್ಲ. ಹೀಗಾಗಿ, ದನಕರುಗಳ ಜತೆ ಅವುಗಳನ್ನು ಸಾಕುತ್ತಿರುವ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇವಿಲ್ಲದೆ ದನಕರುಗಳು ಬದುಕುವುದಾದರೂ ಹೇಗೆ? ಕೆಲವರಂತೂ ದನಕರುಗಳಿಗೆ ಮೇವು ಒದಗಿಸಲು ಸಾಧ್ಯವಾಗದೆ ಅವುಗಳನ್ನು ಕಟುಕರ ಕೈಗೆ ಮಾರುತ್ತಿದ್ದಾರೆ.
ಎದುರಾಗಿರುವ ಮೇವಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಜತೆಗೆ ದನಕರುಗಳಿಗೆ ಮೇವು ಒದಗಿಸುವ ಬೆಳೆ ಬೆಳೆಯುವಂತೆ ರೈತರ ಮನಃಪರಿವರ್ತನೆ ಮಾಡುವ ಕೆಲಸವನ್ನೂ ಕೃಷಿ ಇಲಾಖೆ ಮಾಡಬೇಕಿದೆ.

ಬಿಳಿ ಜೋಳ ಬಿತ್ತನೆ ಪ್ರಮಾಣ (ಹೆಕ್ಟೇರ್‌ಗಳಲ್ಲಿ)
ಜಿಲ್ಲೆ    2011    2012    2013
ಧಾರವಾಡ    39,750    37,783    40,946
ಗದಗ    56,917    45,752    16,800
ಹಾವೇರಿ    27,000    17,000    26,000
ಕೊಪ್ಪಳ    45,134    23,874    27,506
ಬಳ್ಳಾರಿ    18,566    06,545    17,244

ಮೇವು ಬ್ಯಾಂಕ್‌ಗೆ ಕ್ರಮ
ಮೇವಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಇನ್ನೆರಡು ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ಕೂಲಂಕಷವಾಗಿ ಚರ್ಚಿಸಲಾಗುವುದು. ಇದೇ ವೇಳೆ ಮೇವು ಬ್ಯಾಂಕ್ ತೆರೆಯುವ ಕುರಿತೂ ಕ್ರಮ ಕೈಗೊಳ್ಳಲಾಗುವುದು.
-ಸಮೀರ ಶುಕ್ಲ
ಜಿಲ್ಲಾಧಿಕಾರಿ, ಧಾರವಾಡ

-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.