ಧಾರವಾಡ

ಧಾರವಾಡ: ಯಾರೇ ಗೆದ್ದರೂ ದಾಖಲೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 28
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಪೈಕಿ ಯಾರೇ ಗೆದ್ದರೂ ದಾಖಲೆ ನಿರ್ಮಾಣ ಆಗುವುದಂತೂ ಖಚಿತ.
ಧಾರವಾಡ ಲೋಕಸಭೆ ಕ್ಷೇತ್ರ ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆಮೇಲೆ ಬಿಜೆಪಿ ನೆಲೆಯಾಗಿ ಮಾರ್ಪಟ್ಟಿತು. ಸತತ 10 ಅವಧಿಗಳ ವರೆಗೆ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಕಾಂಗ್ರೆಸ್, ಕಳೆದ 5 ಅವಧಿಯಿಂದ ಅಂದರೆ 1996ರಿಂದ ಕಳೆದುಕೊಳ್ಳುತ್ತಿದೆ. ಈಗ ಮರು ವಶಕ್ಕೂ ಶತಾಯ ಗತಾಯ ಪ್ರಯತ್ನಿಸುತ್ತಿದೆ.
1996ರಿಂದ 1999ರ ಲೋಕಸಭೆ ಚುನಾವಣೆಯಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ತೋರಿದ್ದರು ಬಿಜೆಪಿಯ ವಿಜಯ ಸಂಕೇಶ್ವರ. 2004 ಹಾಗೂ 2009ರಲ್ಲಿ ಸತತ ಎರಡು ಬಾರಿ ಜಯ ಗಳಿಸಿದ್ದ ಬಿಜೆಪಿಯ ಪ್ರಹ್ಲಾದ ಜೋಶಿ, ಈ ಬಾರಿ ಗೆಲುವು ಕಂಡರೆ ಹ್ಯಾಟ್ರಿಕ್ ದಾಖಲಿಸಲಿದ್ದಾರೆ. ಸತತ ಆರು ಬಾರಿ ಬಿಜೆಪಿ ಕ್ಷೇತ್ರದಲ್ಲಿ ಗೆಲುವು ಕಾಣುವ ಮೂಲಕ ಡಬಲ್ ಹ್ಯಾಟ್ರಿಕ್ ಸಾಧನೆ ತೋರಲಿದೆ.
ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಗೆದ್ದಲ್ಲಿ ಐದು ಅವಧಿಯ ನಂತರ ಕ್ಷೇತ್ರವನ್ನು ಮರಳಿ ವಶಪಡಿಕೊಳ್ಳುವಲ್ಲಿ ಸಫಲವಾದರೆ, ಕಾಂಗ್ರೆಸ್ ನಿಟ್ಟುಸಿರು ಬಿಡಲಿದೆ. ಇದರ ಜತೆಗೆ, ಈ ಕ್ಷೇತ್ರದಲ್ಲಿ ಶಾಸಕರೊಬ್ಬರು ಸಂಸದರಾಗಿ ಆಯ್ಕೆಯಾದ ಎರಡನೇ ನಿದರ್ಶನವಾಗಿ ವಿನಯ ಕುಲಕರ್ಣಿ ದಾಖಲಾಗುತ್ತಾರೆ.
ಇದಕ್ಕೂ ಮೊದಲು 1982ರಿಂದ ಸತತ ನಾಲ್ಕು ಬಾರಿ (1984, 1989, 1991) ಸಂಸತ್ ಸದಸ್ಯರಾಗಿ ಈ ಕ್ಷೇತ್ರ ಪ್ರತಿನಿಧಿಸಿದ್ದ ಕಾಂಗ್ರೆಸ್‌ನ ಡಿ.ಕೆ. ನಾಯ್ಕರ್, ಶಾಸಕರಾಗಿ, ಕರ್ನಾಟಕ ಸರ್ಕಾರದಲ್ಲಿ ಕಾನೂನು ಮತ್ತು ಪೌರಾಡಳಿತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಡಿ.ಕೆ. ನಾಯ್ಕರ್ ಬಳಿಕ ಧಾರವಾಡ ಕ್ಷೇತ್ರ ಕಾಂಗ್ರೆಸ್ 'ಕೈ'ನಿಂದ ತಪ್ಪಿಹೋಯಿತು. ಶಾಸಕರಾಗಿ ಅಥವಾ ಸಚಿವರಾಗಿ ಧಾರವಾಡ ಲೋಕಸಭೆ ಚುನಾವಣೆ ಗೆದ್ದ ದಾಖಲೆ ಈವರೆಗೆ ನಾಯ್ಕರ್ ಹೆಸರಿನಲ್ಲೇ ಇದೆ. ಈ ಬಾರಿ ವಿನಯ ಕುಲಕರ್ಣಿ ಸಂಸತ್ ಸದಸ್ಯರಾಗಿ ಚುನಾಯಿತರಾದಲ್ಲಿ ಡಿ.ಕೆ. ನಾಯ್ಕರ್ ದಾಖಲೆ ಹಂಚಿಕೊಳ್ಳಲಿದ್ದಾರೆ. ಸದ್ಯ ಧಾರವಾಡ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿನಯ ಕುಲಕರ್ಣಿ, 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದರು.
1952ರಿಂದ 1991ರ ಲೋಕಸಭೆ ಚುನಾವಣೆವರೆಗೆ ಧಾರವಾಡ ಕ್ಷೇತದಲ್ಲಿ ಕಾಂಗ್ರೆಸ್ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು. 1996ರ ಲೋಕಸಭೆ ಚುನಾವಣೆ ಬಳಿಕ ಇಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಿದೆ. ಆದರೂ, ನೇರ ಎದುರಾಳಿ ಕಾಂಗ್ರೆಸ್. ಈ ಬಾರಿ ಎರಡೂ ಕಡೆ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ, ಧಾರವಾಡ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪಕ್ಷ ಹವಣಿಸುತ್ತಿದೆ. ಇದೇ ವೇಳೆ, ತನ್ನ ಪಾರುಪತ್ಯ ಮುಂದುವರಿಸಲು ಬಿಜೆಪಿ ತವಕಿಸುತ್ತಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಹೊರತುಪಡಿಸಿ, ಮೂರನೇ ಪಕ್ಷ ಗೆದ್ದೇ ಇಲ್ಲ. ಈ ಬಾರಿ ಪ್ರಹ್ಲಾದ ಜೋಶಿ, ವಿನಯ ಕುಲಕರ್ಣಿ ಹೊರತಾಗಿ ಬೇರೆ ಯಾರೇ ಗೆದ್ದರೂ ಅದೂ ಒಂದು ದಾಖಲೆಯೇ ಆಗುತ್ತದೆ. ಎಲ್ಲದಕ್ಕೂ ಮೇ 16ರಂದೇ ಉತ್ತರ ಸಿಗುತ್ತದೆ.
-ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.