ಟೆಂಡರ್ ನಿಯಮ ಲೆಕ್ಕಕ್ಕಿಲ್ಲ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 30
ಯಾವುದೇ ಅಭಿವೃದ್ಧಿ ಕಾರ್ಯದ ಟೆಂಡರ್ ಕರೆಯುವ ಸಮಯದಲ್ಲಿ ಕೆಲಸ ಆರಂಭಿಸುವ ದಿನ ಹಾಗೂ ಕೆಲಸ ಮುಗಿಸುವ ದಿನ ನಿಗದಿ ಪಡಿಸಲಾಗಿರುತ್ತದೆ. ಒಂದೊಮ್ಮೆ ಸಮಯ ಮೀರಿದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸಂಬಂಧಪಟ್ಟ ಇಲಾಖೆಗೆ ಇರುತ್ತದೆ. ಆದರೆ ಹು-ಧಾ ಪಾಲಿಕೆ ವಿಷಯಕ್ಕೆ ಬಂದಾಗ ಈ ನಿಯಮ ಸಂಬಂಧಿಸುವುದೇ ಇಲ್ಲ ಎನ್ನುವಂತಿದೆ.
ಹೌದು, ನೀತಿ ನಿಯಮ ಗಾಳಿಗೆ ತೂರುವುದರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯದ್ದು ಎತ್ತಿದ ಕೈ. ರು. 30 ಕೋಟಿ ಅನುದಾನದಲ್ಲಿ ಅವಳಿನಗರದಲ್ಲಿ ಕೈಗೆತ್ತಿಕೊಂಡ ರಸ್ತೆ ಅಭಿವೃದ್ಧಿ ಕಾರ್ಯ ಕಾಮಗಾರಿ ಅವಧಿ ಮೀರಿದ್ದರೂ ಪಾಲಿಕೆ ಗುತ್ತಿಗೆದಾರರ ಪರ ಮೃದುಧೋರಣೆ ತೋರಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ರಸ್ತೆ ಕಾಮಗಾರಿಯ ಪ್ಯಾಕೆಜ್ ನಂ. 1 ಹಾಗೂ 2ರಲ್ಲಿ ಅವಾಂತರವಾಗಿರುವಂತೆ 3 ಮತ್ತು 4ರಲ್ಲಿಯೂ ಸಾಕಷ್ಟು ಲೋಪ ದೋಷಗಳಾಗಿವೆ.
ಪ್ಯಾಕೆಜ್ ನಂ. 3: ಧಾರವಾಡ ದಕ್ಷಿಣ ಭಾಗದಲ್ಲಿ ರು. 5.96 ಕೋಟಿ ವೆಚ್ಚದಲ್ಲಿ 12.48 ಕಿ. ಮೀ. ರಸ್ತೆ ನಿರ್ಮಿಸುವ ಗುತ್ತಿಗೆಯನ್ನು 11 ಸೆಪ್ಟಂಬರ್ 2005ರಲ್ಲಿ ಎನ್. ಎಸ್. ನಾಯಕ ಆ್ಯಂಡ್ ಸನ್ಸ್ ಕಂಪನಿಗೆ ನೀಡಲಾಗಿತ್ತು. ಜತೆಗೆ 11 ರಸ್ತೆ ನಿರ್ಮಿಸುವ ಈ ಕಾಮಗಾರಿಯನ್ನು 10 ಮೇ 2006ರಲ್ಲಿ ಮುಗಿಸುವಂತೆ ಗಡುವು ನೀಡಲಾಗಿತ್ತು. ಆದರೆ ಕೆಲಸ ಆರಂಭಿಸಿ 8 ವರ್ಷ ಕಳೆದಿದ್ದರೂ 12.48 ಕಿ. ಮೀ. ಪೈಕಿ ಈವರೆಗೆ ಕೆಲಸ ಮುಗಿದಿರುವುದು ಕೇವಲ 6.75 ಕಿ.ಮೀ. ಮಾತ್ರ.
ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾದಾಗಲೇ ಈ ಭಾಗದಲ್ಲಿ ಕುಡಿಯುವ ನೀರು ಪೂರೈಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದರಿಂದಾಗಿ ರಸ್ತೆ ಕಾಮಗಾರಿಗೆ ಅಡೆತಡೆಯುಂಟಾಯಿತು. ಇದಕ್ಕಾಗಿ ಗುತ್ತಿಗೆದಾರರು ಕೆಲಸಕ್ಕೆ ಮತ್ತಷ್ಟು ಕಾಲಾವಕಾಶ ಕೋರಿದ್ದರಿಂದ ಪಾಲಿಕೆ, ಕೆಲಸ ಮುಗಿಸುವ ಅಂತಿಮ ದಿನಾಂಕವನ್ನು 15 ನವೆಂಬರ್ 2006ಕ್ಕೆ ಮುಂದೂಡಿತು. ಈ ಅವಧಿ ಮುಗಿದು ಏಳು ವರ್ಷ ಗತಿಸಿದರೂ ರಸ್ತೆ ಪ್ರಗತಿಯಾಗಿದ್ದು ಮಾತ್ರ ಶೇ. 54.08 ಮಾತ್ರ. ಈ ಕಾಮಗಾರಿಯಲ್ಲಿ ಪಾಲಿಕೆ ಗುತ್ತಿಗೆದಾರರಿಗೆ ಪಾವತಿಸಿದ್ದು ರು. 1.50 ಕೋಟಿ ಮಾತ್ರ ಎನ್ನುವುದು ಸಮಾಧಾನಕರ ಸಂಗತಿ.
ಪ್ಯಾಕೆಜ್ ನಂ. 4: ಧಾರವಾಡ ಉತ್ತರ ಭಾಗದಲ್ಲಿ 8.45 ಕಿ. ಮೀ. ರಸ್ತೆ ನಿರ್ಮಿಸುವ ಕಾಮಗಾರಿಯನ್ನು 16 ಸಪ್ಟೆಂಬರ್ 2005ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಈ 12 ಕಾಮಗಾರಿಯನ್ನು ಮುಗಿಸಲು ಗುತ್ತಿಗೆ ಪಡೆದ ಬಿ. ಟಿ. ರೆಡ್ಡಿಯವರಿಗೆ 15 ಮೇ 2006ರ ಗಡುವ ನೀಡಲಾಗಿತ್ತು. ಆದರೆ ಕೆಲಗೇರಿ ಬಳಿ ಕುಡಿಯುವ ನೀರಿನ ಪೈಪ್ ಜೋಡಣೆ ಹಾಗೂ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಗುತ್ತಿಗೆದಾರರು ಕಾಲಾವಕಾಶ ಕೋರಿದ್ದರು. ಕೋರಿಕೆಗೆ ಪ್ರತಿಯಾಗಿ ಪಾಲಿಕೆ 15 ನವೆಂಬರ್ 2006ರ ವರೆಗೆ ಸಮಯ ನೀಡಿತು. ಅವಧಿ ಮೀರಿದ್ದರೂ ಈವರೆಗೆ ಮುಗಿದಿರುವ ಕಾಮಗಾರಿ 7.50 ಕಿ. ಮೀ. ಮಾತ್ರ. ಶೇ. 88.76ರಷ್ಟು ಕೆಲಸ ಮುಗಿದಿದೆ ಇದಕ್ಕಾಗಿ ಪಾಲಿಕೆ ಗುತ್ತಿಗೆದಾರರಿಗೆ ರು. 1.78 ಕೋಟಿ ಪಾವತಿಸಿದೆ.
ಮೃದು ಧೋರಣೆ ಏಕೆ?: ಈ ಎರಡೂ ಪ್ಯಾಕೆಜ್ನ್ನು ಕೂಲಂಕುಶವಾಗಿ ಗಮನಿಸಿದರೆ ಗುತ್ತಿಗೆದಾರರು ಕೆಲಸ ಮುಗಿಸುವ ಗಡುವು ದಾಟಿದ್ದರೂ ಕೆಲಸ ಪೂರ್ಣಗೊಳಿಸದಿರುವುದು ಕಂಡು ಬರುತ್ತದೆ. ಹೀಗಿರುವಾಗ ಪಾಲಿಕೆ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಪಾಲಿಕೆ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದರ ಹಿಂದಿನ ಗುಟ್ಟೇನು? ಎನ್ನುವ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಪಾಲಿಕೆ ಅಧಿಕಾರಿಗಳೇ ಉತ್ತರಿಸಬೇಕಿದೆ.
ಬಾಕಿ ಹಣವೆಲ್ಲಿ?
ಪಾಲಿಕೆ ಅಧಿಕಾರಿಗಳು ನೀಡಿರುವ ದಾಖಲೆಯ ಪ್ರಕಾರ ರು. 30 ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಪೈಕಿ 9.92 ಕೋಟಿ ಮಾತ್ರ ಗುತ್ತಿಗೆದಾರರಿಗೆ ಸಂದಾಯ ಮಾಡಿರುವುದಾಗಿ ತಿಳಿಸಿದೆ. ಹಾಗಿದ್ದರೆ ವಿವಿಧ ಬ್ಯಾಂಕ್ಗಳಿಂದ ಸಾಲ ಪಡೆದು ಅನುದಾನ ಸೃಷ್ಟಿಸಿಕೊಂಡ ರು. 30 ಕೋಟಿ ಪೈಕಿ ಬಾಕಿ ರು. 20 ಕೋಟಿ ಎಲ್ಲಿದೆ ಎಂದು ಪಾಲಿಕೆ ಅಧಿಕಾರಿಗಳೇ ಉತ್ತರಿಸಬೇಕಿದೆ.
ಸಮಗ್ರ ತನಿಖೆ ಮಾಡುವೆ...
'ಕನ್ನಡಪ್ರಭ'ದಲ್ಲಿ ಪ್ರಕಟವಾಗುತ್ತಿರುವ ಸರಣಿ ಲೇಖನ ರು. 30 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಅಸಲಿಯತ್ತನ್ನು ಜನತೆ ಮುಂದಿಟ್ಟಿದೆ. 9.92 ಕೋಟಿ ಮಾತ್ರ ಗುತ್ತಿಗೆದಾರರಿಗೆ ಸಂದಾಯವಾಗಿದೆ ಎಂದಾದರೆ ಬಾಕಿ ರು. 20 ಕೋಟಿ ಎಲ್ಲಿ ಹೋಯಿತು? ಗುತ್ತಿಗೆದಾರರು ಹದ್ದು ಮೀರಿ ವರ್ತಿಸಿದರೂ ಪಾಲಿಕೆ ಅಧಿಕಾರಿಗಳು ಮೃದು ಧೋರಣೆ ತಾಳಿದ್ದರ ಕಾರಣವೇನು? ಎಂಬಿತ್ಯಾದಿ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿ ತನಿಖೆ ಕೈಗೊಳ್ಳಲು ಆದೇಶಿಸಲಾಗುವುದು.
- ಶಿವು ಹಿರೇಮಠ, ಮೇಯರ್
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

