ಸುಫಿಯಾನ್ ಶೇಖ್ ಪ್ರಥಮ ಸ್ಥಾನ
ಹುಬ್ಬಳ್ಳಿ: ನಗರದ ಡಿ. ಕೆ. ಪಬ್ಲಿಕ್ ಸ್ಕೂಲ್ನಲ್ಲಿ ಇತ್ತೀಚೆಗೆ ನಡೆದ ಅಂತರ್ ಶಾಲಾ ಸ್ಕೇಟಿಂಗ್ ಸ್ಪರ್ಧೆಯ 4ನೇ ತರಗತಿ ವಿಭಾಗದಲ್ಲಿ ಶಾಲೆಯ ವಿದ್ಯಾರ್ಥಿ ಸುಫಿಯಾನ್ ಶೇಖ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಚಿನ್ನಾಭರಣ ದೋಚಿದ ಕಳ್ಳರು
ಹುಬ್ಬಳ್ಳಿ: ತಾಜ ನಗರದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರುಪಾಯಿ ಬೆಲೆ ಬಾಳುವ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ಚಂದ್ರಶೇಖರ ಬೂದಿಮಠ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆ ಮಂದಿ ಇಲ್ಲದಿರುವುದನ್ನು ಹೊಂಚು ಹಾಕಿ ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಲಾಕರ್ನಲ್ಲಿದ್ದು ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ತನಿಖೆ ನಡೆಸಿದ್ದಾರೆ. ವಿದ್ಯಾನಗರ ಸಿಪಿಐ ಗಿರೀಶ ರೋಡಕರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹುಬ್ಬಳ್ಳಿ: ನಗದು ಕಳ್ಳತನ
ಹುಬ್ಬಳ್ಳಿ: ಕೇಶ್ವಾಪುರ ಬಾಲಾಜಿನಗರದಲ್ಲಿರುವ ಧನಂಜಯ ಅವಧಾನಿ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಮನೆಯ ಕೀಲಿಕೈ ಮುರಿದು ಒಳನುಗ್ಗಿ ನಗದು ಹಾಗೂ ಬೆಳ್ಳಿ ಒಡವೆ ಕದ್ದಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆಸಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟು ಮುರಿದು ಅದರಲ್ಲಿದ್ದ ರು. 12 ಸಾವಿರ, 3100 ಬೆಲೆ ಬಾಳುವ ಬೆಳ್ಳಿಯ ವಸ್ತುಗಳನ್ನು ದೋಚಿದ್ದಾರೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: ಬಂಧನ
ಹುಬ್ಬಳ್ಳಿ: ಉಣಕಲ್ ಹನುಮಂತ ನಗರ ರಸ್ತೆಯ ಪಕ್ಕದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ. ಗುರುನಾಥ ಗುಂಡಳ್ಳಿ, ರಾಜು ವಾಟಕರ, ಇಸ್ಲಾಯಿಲ್ ನೀಲಗಾರ ಹಣಕ್ಕೋಸ್ಕರ್ ಇಸ್ಪೀಟ ಆಟವಾಡುತ್ತಿದ್ದರು. ಮಾಹಿತಿ ಮೇರೆಗೆ ದಾಳಿ ನಡೆಸಿದ ವಿದ್ಯಾನಗರ ಪೊಲೀಸರು ಆರೋಪಿತರನ್ನು ಬಂಧಿಸಿ ರು. 1870 ವಶ ಪಡಿಸಿಕೊಂಡಿದ್ದಾರೆ.
ಆಸ್ತಿ ವಿವಾದ: ಮೂವರ ಮೇಲೆ ಹಲ್ಲೆ
ಧಾರವಾಡ: ತಾಲೂಕಿನ ಕಬ್ಬೇನೂರ ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದ ಘಟನೆ ನಡೆದಿದೆ. ಗ್ರಾಮದ ಮುತ್ತನಗೌಡ ಮಹಾದೇವಗೌಡ ಪಾಟೀಲ, ಆತನ ತಂದೆ ಮಹದೇವಗೌಡ ಮತ್ತು ತಾಯಿ ಚಿನ್ನವ್ವ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ದಾಯಾದಿಗಳಾದ ಸಿದ್ಧನಗೌಡ ಚಂದ್ರಗೌಡ ಭರಮಗೌಡ್ರ, ಚಂದ್ರಗೌಡ ಭರಮಗೌಡ್ರ, ಮಹಾದೇವಿ ಭರಮಗೌಡ್ರ ಮತ್ತು ನೇತಾಜಿ ಭರಮಗೌಡ್ರ ಹಲ್ಲೆ ಮಾಡಿದ್ದಾರೆ. ಕಳೆದ ಕೆಲದಿನಗಳಿಂದ ದಾಯಾದಿಗಳ ಮಧ್ಯೆ ಇದ್ದ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಮಹದೇವಗೌಡ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಮುತ್ತನಗೌಡ ಮತ್ತು ಚಿನ್ನವ್ವ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಅಪಘಾತ: ಓರ್ವ ಸಾವು
ಧಾರವಾಡ: ಸಮೀಪದ ನರೇಂದ್ರ ಬೈಪಾಸ್ ಹತ್ತಿರ ಭಾನುವಾರ ರಾತ್ರಿ ಬೈಕ್ ನಿಯಂತ್ರಣ ತಪ್ಪಿ ನೆಲಕ್ಕುರುಳಿದ ಪರಿಣಾಮ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಪಾಟ್ನಾ ಮೂಲದ ಸುದೀಪ ಸುಮನ್ (20) ಮೃತಪಟ್ಟ ವಿದ್ಯಾರ್ಥಿ. ಪಾಟ್ನಾದ ಇನ್ನೋರ್ವ ವಿದ್ಯಾರ್ಥಿ ಆಯುಷ್ ಪೃಥ್ವೀಸ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಗರದ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ಸೆಮಿಸ್ಟರ್ನಲ್ಲಿ ಇಬ್ಬರೂ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಭಾನುವಾರ ರಾತ್ರಿ ಆರು ಬೈಕಿನಲ್ಲಿ ಊಟ ಮಾಡಲು ತೇಗೂರ ಬಳಿಯ ದಾಬಾಕ್ಕೆ ತೆರಳಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

