ಉತ್ತರಕ್ಕೆ ಬಾರದ ರೈಲು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 12
ಮಧ್ಯಂತರ ಬಜೆಟ್ ಮಂಡಿಸಿದರೂ ಮಲ್ಲಿಕಾರ್ಜುನ ಖರ್ಗೆ ಉತ್ತರ ಕರ್ನಾಟಕ ಭಾಗವನ್ನು ಕೇಂದ್ರೀಕರಿಸಿ ವಿವಿಧ ನಗರಗಳಿಗೆ ರೈಲು ಓಡಿಸಿದ್ದಾರೆ. ಅಷ್ಟೇನೂ ಸಮಾಧಾನಕರವಲ್ಲದಿದ್ದರೂ ತೆಗಳಲೂ ಸಾಧ್ಯವಾಗದ ಬಜೆಟ್ ಇದಾಗಿದೆ ಎಂಬುದು ಈ ಭಾಗದ ಜನತೆಯ ಅಭಿಪ್ರಾಯ.
ಉತ್ತರ ಕರ್ನಾಟಕದ ಬೇಕು ಬೇಡಗಳ ಬಗ್ಗೆ ಅರಿತಿರುವ ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಬಜೆಟ್ ಮಂಡಿಸಲು ಮುಂದಾಗಿದ್ದರಿಂದ ಸಹಜವಾಗಿ ಈ ಭಾಗದ ಜನತೆ ನಿರೀಕ್ಷೆಯಿಟ್ಟುಕೊಂಡಿದ್ದರು. ಇದು ಮಧ್ಯಂತರ ಬಜೆಟ್ ಆಗಿದ್ದರೂ ಖರ್ಗೆ ಒಂದಿಷ್ಟು ಕಾಳಜಿ ಉತ್ತರ ಕರ್ನಾಟಕದ ಪರ ತೋರಿದ್ದಾರೆನ್ನುವುದು ಬಿಟ್ಟರೆ ವಿಶೇಷ ಬೇಡಿಕೆಯ ರೈಲುಗಳು ಉ-ಕ ಭಾಗಕ್ಕೆ ಬಾರಲೇ ಇಲ್ಲ.
ಕೊಟ್ಟ ಕೊಡುಗೆ: ಹುಬ್ಬಳ್ಳಿ-ಮುಂಬೈ ಎಕ್ಸ್ಪ್ರೆಸ್ ಹೊಸ ರೈಲು ವಾರಕ್ಕೊಮ್ಮೆ ಬಿಜಾಪುರ, ಸೊಲ್ಲಾಪುರ ಮಾರ್ಗವಾಗಿ ಓಡಾಡಲಿದೆ. ಅಸಲಿಗೆ ಹುಬ್ಬಳ್ಳಿ-ಮುಂಬೈ ಮಧ್ಯೆ ಪ್ರತ್ಯೇಕ ರೈಲು ಬೇಕೆಂಬ ಬಹುಬೇಡಿಕೆ ಇರದಿದ್ದರೂ ಅಗತ್ಯತೆಯನ್ನು ಗಮನದಲ್ಲಿರಿಸಿ ಹೊಸ ರೈಲು ಆರಂಭಿಸಲು ಮುಂದಾಗಿರುವುದರಿಂದ ಸಹಜವಾಗಿ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಮುಂಬೈ ನಡುವಿನ ವ್ಯಾಪಾರ ವಹಿವಾಟು ವೃದ್ಧಿಗೆ ಅನುಕೂಲವಾಗಲಿದೆ. ಹುಬ್ಬಳ್ಳಿ ಹಾಗೂ ಬೆಳಗಾವಿ ನಡುವೆ ನಿತ್ಯ ಫಾಸ್ಟ್ ಪ್ಯಾಸೆಂಜರ್ ರೈಲು ಓಡಾಡಲಿದೆ.
ಇದರಿಂದಾಗಿ ಎರಡೂ ಪ್ರಮುಖ ನಗರಗಳ ಮಧ್ಯೆ ಓಡಾಡುವವರಿಗೆ ಅನುಕೂಲವಾಗಲಿದೆ. ಈ ಹಿಂದೆ ಹುಬ್ಬಳ್ಳಿ-ವಿಜಯವಾಡಾ ಮಧ್ಯೆ ವಾರದಲ್ಲಿ ಮೂರು ದಿನಗಳ ಕಾಲ ಓಡಾಡುತ್ತಿದ್ದ ರೈಲನ್ನು ವಾರದ ಏಳೂ ದಿನ ಓಡಾಡಲಿದೆ. ಇದೇ ರೀತಿ ಹುಬ್ಬಳ್ಳಿ-ಸಿಕಂದರಾಬಾದ್ ರೈಲೂ ಸಹ ವಾರದಲ್ಲಿ ಮೂರು ದಿನ ಮಾತ್ರ ಓಡಾಡುತ್ತಿತ್ತು ಅದನ್ನು ವಾರ ಪೂರ್ತಿ ಓಡಾಡುವಂತೆ ವಿಸ್ತರಿಸಲಾಗಿದೆ. ಬಿಜಾಪುರ ಹಾಗೂ ಮೀರಜ್ ನಡುವೆ ಸಂಪರ್ಕ ಕಲ್ಪಿಸಲು ಹೊಸ ಮಾರ್ಗದ ಸರ್ವೇ ಕೈಗೊಳ್ಳುವುದಾಗಿ ಖರ್ಗೆ ಬಜೆಟ್ನಲ್ಲಿ ಘೋಷಿಸಿದ್ದಾರೆ. ಇದರೊಟ್ಟಿಗೆ ಕಿತ್ತೂರ ಮಾರ್ಗವಾಗಿ ಹುಬ್ಬಳ್ಳಿ-ಬೆಳಗಾವಿ ನಡುವೆ ಹೊಸ ಮಾರ್ಗಕ್ಕೆ ಸರ್ವೇ ಮಾಡುವುದಾಗಿ ಖರ್ಗೆ ಘೋಷಿಸಿದ್ದಾರೆ. ಕಳೆದ ಬಜೆಟ್ನಲ್ಲಿಯೂ ಸರ್ವೇ ವಿಷಯ ಘೋಷಣೆಯಾಗಿತ್ತಾದರೂ, ಪ್ರಕ್ರಿಯೆ ನಡೆದಿರಲಿಲ್ಲ. ಇನ್ನಾದರೂ ಸರ್ವೆಯಾಗುತ್ತದೆಯೋ ಕಾದು ನೋಡಬೇಕಿದೆ.
ಕರ್ನಾಟಕದವರೇ ಆಗಿರುವ ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಬಜೆಟ್ ಮಂಡಿಸಲು ಮುಂದಾಗಿದ್ದರಿಂದ ಜನ ನಿರೀಕ್ಷೆ ಹೊಂದಿದ್ದರು. ಆದರೆ ಇದೊಂದು ನಿರಾಶಾದಾಯಕ ಬಜೆಟ್. ಈ ಬಾರಿಯ ಬಜೆಟ್ನಲ್ಲಿ ಕರ್ನಾಟಕಕ್ಕೆ ಕೆಲ ಹೊಸ ರೈಲು ಹಾಗೂ ಮಾರ್ಗ ಘೋಷಣೆ ನಿರೀಕ್ಷಿಸಿದ್ದೆ. ನಾಲ್ಕು ತಿಂಗಳಿಂದ ಲೇಖಾನುದಾನಕ್ಕೆ ಮಾತ್ರ ಈ ಬಜೆಟ್ ಸೀಮಿತಿವಾಗಿದ್ದರೂ ಒಟ್ಟು 68 ಹೊಸ ರೈಲುಗಳ ಹಾಗೂ ಹಲವಾರು ಹೊಸ ರೈಲು ಮಾರ್ಗಗಳ ಘೋಷಣೆಯಾಗಿದೆ. ಹೊಸ ರೈಲು ಮಾರ್ಗದಲ್ಲಿ ಈಗಾಗಲೇ ಸಮೀಕ್ಷೆ ಮುಗಿದ 2 ವರ್ಷಗಳಾಗಿ ನಿಂತಿರುವ ಧಾರವಾಡ-ಬೈಲಹೊಂಗಲ ಮೂಲಕ ಬೆಳಗಾವಿ ಹೊಸ ಮಾರ್ಗ ಘೋಷಿಸಬಹುದಿತ್ತು. ಅದನ್ನು ಬಿಟ್ಟು ಬೆಳಗಾವಿ-ಕಿತ್ತೂರ-ಹುಬ್ಬಳ್ಳಿ ಹೊಸ ಮಾರ್ಗದ ಸಮೀಕ್ಷೆ ಘೋಷಿಸಿರುವುದು ಅರ್ಥವಿಲ್ಲದ್ದು. ಜನರನ್ನು ದಿಕ್ಕು ತಪ್ಪಿಸಿ ಮೂಗಿಗೆ ತುಪ್ಪ ಸವರುವ ಕಾರ್ಯ ಖರ್ಗೆ ಮಾಡಿದ್ದಾರೆ. ಇದಲ್ಲದೇ ಒಟ್ಟಾರೆ 4 ಹೊಸ ಎಕ್ಸ್ಪ್ರೆಸ್ ರೈಲು, 4 ಪ್ರಿಮಿಯಮ್ ರೈಲು ಹಾಗೂ 4 ಪ್ಯಾಸೆಂಜರ್ ರೈಲು ಕರ್ನಾಟಕಕ್ಕೆ ದಕ್ಕಿದರೂ ಅವುಗಳಲ್ಲಿ ಬಹುಪಾಲು ಗುಲ್ಬರ್ಗಾದತ್ತ ಮುಖ ಮಾಡಿವೆ. ಬೆಂಗಳೂರು-ವೈಷ್ಣೋದೇವಿ ಎಸಿ ರೈಲು, ಮೈಸೂರು-ವಾರಾಣಾಸಿ ಹಾಗೂ ಯಶವಂತಪುರ-ಜೈಪುರ ರೈಲು ಗುಲ್ಬರ್ಗಾ ಮೂಲಕ ಚಲಿಸುತ್ತವೆ. ಕರ್ನಾಟಕಕ್ಕಿಂತ ಗುಲ್ಬರ್ಗಾ ಕೇಂದ್ರೀಕರಿಸಿರುವ ಖರ್ಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಮ್ಮ ಗೆಲುವೊಂದನ್ನೇ ಗುರಿಯಾಗಿಟ್ಟುಕೊಂಡಿದ್ದಾರೆ. ಹುಬ್ಬಳ್ಳಿ-ಮುಂಬೈ, ಹುಬ್ಬಳ್ಳಿ-ಬೆಳಗಾವಿ ಫಾಸ್ಟ್ ಪ್ಯಾಸೆಂಜರ್ ಹೊಸ ರೈಲು ಆರಂಭಿಸಿದ್ದು ಬಿಟ್ಟರೆ, ಹುಬ್ಬಳ್ಳಿ-ಸಿಕಂದರಾಬಾದ್ ನಿತ್ಯ ಓಡಿಸುವ ಪ್ರಸ್ತಾವನೆ ಸಮಾಧಾನಕರ. ಯಶವಂತಪುರ-ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ರೈಲನ್ನು ಹುಬ್ಬಳ್ಳಿ ಮೂಲಕ ನಿತ್ಯ ಓಡಿಸುವ ಮತ್ತು ಹುಬ್ಬಳ್ಳಿ-ಲೋಕಮಾನ್ಯ ತಿಲಕ್ ದಿನನಿತ್ಯ ಓಡಿಸುವ ಕ್ರಮ ಹಾಗೆ ಉಳಿದುಕೊಂಡಿದೆ. ಒಟ್ಟಿನಲ್ಲಿ ನಿರೀಕ್ಷೆ ಮೂಡಿಸಿದ್ದ ಖರ್ಗೆಯವರು ಭಾರತೀಯ ರೈಲನ್ನು ಸುಸೂತ್ರ ಹಾಗೂ ರಚನಾತ್ಮಕವಾಗಿ ಓಡಿಸುವ ಸಮಗ್ರ ಕ್ರಮದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
-ಧಾರವಾಡ ಸಂಸದ
ನಿರೀಕ್ಷೆಗಳಿಗೆ ನೀರು ಬಿಟ್ಟ ಖರ್ಗೆ
ಕರ್ನಾಟಕದವರೇ ಆಗಿರುವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದಲ್ಲಿ ರೇಲ್ವೆ ಮಂತ್ರಿಯಾಗಿದ್ದರೂ ರಾಜ್ಯದ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳಬೇಕಿರುವ ರೇಲ್ವೆ ಯೋಜನೆಗಳ ಸಾಕಾರಕ್ಕೆ ಪ್ರಯತ್ನಿಸಿಲ್ಲ ಎಂಬುದು ಮಧ್ಯಂತರ ಬಜೆಟ್ನಿಂದ ಸಾಬೀತಾಗುತ್ತದೆ. ಹಿಂದಿನ ಹಲವಾರು ರೇಲ್ವೆ ಯೋಜನೆಗಳಿಗೆ ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಿಲ್ಲ. ಈ ಭಾಗದ ಜನರ ನಿರೀಕ್ಷೆಗಳ ಮೇಲೆ ಖರ್ಗೆ ತಣ್ಣಿರೆರಚಿದ್ದಾರೆ.
- ಪಿ.ಜಿ. ನರಸಾಪುರ,
(ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ, ಧಾರವಾಡ)
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

