ಹಣ ಗಳಿಕೆ ಹಿಂದೆ ಬೀಳಬೇಡಿ
ಹುಬ್ಬಳ್ಳಿ: ಭಾರತೀಯ ಯುವಕರು ಕೇವಲ ಹಣ ಗಳಿಕೆ ಉದ್ದೇಶದಿಂದಾಗಿ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕ ಮತ್ತಿತರ ದೇಶಗಳಲ್ಲಿನ ತಂತ್ರಜ್ಞಾನ ಸಂಸ್ಥೆಗಳಲ್ಲಿ ಅರ್ಧದಷ್ಟು ಉದ್ಯೋಗಿಗಳು ಭಾರತದವರೇ ಇದ್ದಾರೆ. ಯುವಕರು ಹಣ ಗಳಿಕೆಯೊಂದನ್ನೇ ಗುರಿಯಾಗಿಟ್ಟುಕೊಳ್ಳದೇ ದೇಶಕ್ಕಾಗಿ ದುಡಿಯುವ ಸಮರ್ಪಣಾ ಭಾವನೆ ಬೆಳೆಸಿಕೊಳ್ಳಬೇಕು ಎಂದು 'ಭಾರತ ರತ್ನ' ಪ್ರಶಸ್ತಿ ಪುರಸ್ಕೃತ, ವಿಜ್ಞಾನಿ ಡಾ. ಸಿ.ಎನ್.ಆರ್. ರಾವ್ ಸಲಹೆ ನೀಡಿದ್ದಾರೆ.
ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ಬಿವಿಬಿ ತಾಂತ್ರಿಕ ಉದ್ಯಮಶೀಲತೆ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದು. ಹಿರಿಯರು ಯುವಕರ ಸಾಧನೆ ನೋಡಿ ಹೊಟ್ಟೆಕಿಚ್ಚು ಪಡುವ ಬದಲು ಅವರಿಗೆ ಪ್ರೋತ್ಸಾಹ ನೀಡಬೇಕು. ಇಡೀ ಜಗತ್ತಿನಲ್ಲಿ ಯುವಕರು ಹೆಚ್ಚಿರುವ ದೇಶ ಭಾರತ. ದೇಶದ ಎಲ್ಲ ಕ್ಷೇತ್ರಗಳಲ್ಲಿ ಯುವಕರೇ ಹೆಚ್ಚಿದ್ದಾರೆ. ದೇಶದ ಭವಿಷ್ಯ ಯುವಕರ ಕೈಯಲ್ಲಿದೆ ಎಂದರು.
ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟೂರಾದ ಚಿಕ್ಕಬಳ್ಳಾಪುರ ಬಳಿಯ ಮುದ್ದೇನಹಳ್ಳಿಯಲ್ಲಿ ತೈವಾನ್ ಮಾದರಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸ್ಥಾಪಿಸಲು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆ. ಆದರೆ ಈ ವರೆಗೂ ಅಲ್ಲಿ ತಾಂತ್ರಿಕ ಸಂಸ್ಥೆ ನಿರ್ಮಾಣ ಪ್ರಾರಂಭಗೊಂಡಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಪಠ್ಯಪುಸ್ತಕದಲ್ಲಿರುವುದನ್ನು ಮಾತ್ರ ಕಲಿಸದೇ, ಭವಿಷ್ಯದಲ್ಲಿ ದೇಶಕ್ಕಾಗಿ ದುಡಿಯುವ ಮನೋಭಾವನೆಯನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು ಎಂದು ಸಲಹೆ ನೀಡಿದರು.
ದೇಶದ ಮಾಹಿತಿ ಮತ್ತು ತಂತ್ರಜ್ಞಾನದ ರಾಜಧಾನಿಯೆಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ಯುವಕರು ಹಣ ಗಳಿಸುವುದರ ಹಿಂದೆ ಬಿದ್ದಿದ್ದಾರೆ. ಇದರೊಂದಿಗೆ ಯುವಕರು ಹೆಚ್ಚಿನ ಆತ್ಯಹತ್ಯೆ ಮಾಡಿಕೊಳ್ಳುವ ನಗರವೆಂಬ ಕಪ್ಪುಚುಕ್ಕೆಯೂ ಬೆಂಗಳೂರಿಗೆ ಅಂಟಿದೆ ಎಂದು ಸಿ.ಎನ್. ಆರ್. ರಾವ್ ಖೇದ ವ್ಯಕ್ತಪಡಿಸಿದರು.
ಇದೇ ಸಂದರ್ಭ ಡಾ. ಸಿ.ಎನ್.ಆರ್. ರಾವ್ ದಂಪತಿಯನ್ನು ಸನ್ಮಾನಿಸಲಾಯಿತು. ಕೆಎಲ್ಇ ಸೊಸೈಟಿ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿದ್ದರು. ಇಂದುಮತಿ ರಾವ್ ಉಪಸ್ಥಿತರಿದ್ದರು.
ಬಿವಿಬಿ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಶೆಟ್ಟರ್ ಸ್ವಾಗತಿಸಿದರು. ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎಂ.ಐ. ಸವದತ್ತಿ ಪರಿಚಯಿಸಿದರು. ಡಾ. ಬಿ.ಎಲ್. ದೇಸಾಯಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

