ಧಾರವಾಡ

ಅರಾಜಕತೆ ಹೊಡೆದೋಡಿಸಿ: ಕಣವಿ

Published On :

ಧಾರವಾಡ: ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಇಂದು ಅರಾಜಕತೆ ತಲೆತೋರಿದ್ದು, ಇದನ್ನು ಹೊಡೆದೋಡಿಸಲು ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ನಾಡೋಜ ಡಾ. ಚನ್ನವೀರ ಕಣವಿ ಹೇಳಿದರು.
ಕರ್ನಾಟಕ ವಿವಿ ಜಾನಪದ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ. ಶಾಲಿನಿ ರಘುನಾಥ ಅವರಿಗೆ ಮಂಗಳವಾರ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಇಂದು ಅರಾಜಕತೆಯ ಮಾತೇ ಕೇಳುತ್ತಿದ್ದೇವೆ. ಇದರ ತಡೆಗೆ ಎಲ್ಲರೂ ಬದ್ಧರಾಗಿ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಿಸಿದರು.
ಮನುಷ್ಯನಲ್ಲಿ ಮಾನಸಿಕ ಹಾಗೂ ದೈಹಿಕ ಪಕ್ವತೆ ಉಂಟಾಗಬೇಕಿದ್ದು, ಆತ್ಮರಂಗದ ಒಳಗಣ್ಣಿನ ಅರಿವು ಮೂಡಬೇಕಿದೆ. ಈ ಅರಿವಿನ ಬೆಳಕು ಹಾಗೂ ಪಕ್ವತೆ ಮನುಷ್ಯನಲ್ಲಿ ಮೂಡಿದರೆ ಸಂಸ್ಕೃತಿಯ ಸಿಂಚನವಾಗುವುದು. ಆಗ ಮಾತ್ರ ಸಂಸ್ಕೃತಿಯಿಂದ ಎಂದಿಗೂ ಮನುಷ್ಯ ದೂರವಾಗಲಾರನು ಎಂದು ಕಣವಿ ಹೇಳಿದರು. ದೇಸಿ ಸಂಪದ ಶಾಲಿನಿ ಅಭಿನಂಧನಾ ಗ್ರಂಥ ಬಿಡುಗಡೆಗೊಳಿಸಿದ ಬಿಜಾಪುರ ಮಹಿಳಾ ವಿವಿ ಕುಲಪತಿ ಡಾ. ಮೀನಾ ಚಂದಾವರಕರ ಮಾತನಾಡಿ, ಹಣ ಗಳಿಕೆ, ಹೊಗಳಿಕೆ ಹಾಗೂ ಪ್ರಶಸ್ತಿಗಳಿಂದ ವ್ಯಕ್ತಿಯನ್ನು ಅಳೆಯಲಾಗದು. ಅದರಿಂದ ಆ ವ್ಯಕ್ತಿ ಕೂಡ ತೃಪ್ತಿ ಕಾಣಲಾರ. ವ್ಯಕ್ತಿಯ ವ್ಯಕ್ತಿತ್ವ ಉಳಿದವರ ಹೃದಯದಲ್ಲಿ ಅಭಿಮಾನ ಮೂಡುವಂತೆ ಇದ್ದರೆ ಅದುವೇ ನಿಜವಾದ ಆಸ್ತಿ. ಆ ಸಂಪತ್ತು ಶಾಲಿನಿ ಅವರ ಪಾಲಾಗಿದೆ ಎಂದರು. ವ್ಯಕ್ತಿತ್ವ ವಿಕಾಸದಲ್ಲಿ ಮಾನಸಿಕ ಹಾಗೂ ದೈಹಿಕ ವಿಕಾಸದ ಪಾತ್ರ ಮುಖ್ಯವಾದುದು. ಸಿಟ್ಟು, ಸೊಕ್ಕು, ಸೇಡು ಮನಸ್ಸಿನ ಕೆಡಕಿನ ವೈರಿಗಳಾದರೆ ಉಪ್ಪು, ಸಕ್ಕರೆ ಹಾಗೂ ಜಡ್ಡು ದೇಹದ ಶತ್ರುಗಳಾಗಿವೆ. ಇವುಗಳಿಂದ ದೂರ ಉಳಿಯದೇ ಹೋದರೆ ಮನಸ್ಸು-ದೇಹವನ್ನು ವಿಕಾರಗೊಳಿಸುತ್ತೇವೆ ಎಂದ ಅವರು, ನಕಾರಾತ್ಮಕ ವಿಚಾರ, ಚಿಂತನೆಗಳಿಂದ ದೂರ ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು ಎಂದರು. ಡಾ. ಶಾಲಿನಿ ರಘುನಾಥ ಅವರ ಅಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಬಂಧುಗಳು ಅವರಿಗೆ ಆತ್ಮೀಯ ಸನ್ಮಾನ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದರು. ಗ್ರಂಥ ಕುರಿತು ಡಾ. ಎಂ.ಎಸ್. ವೆಂಕಟೇಶ ಹಾಗೂ ಪ್ರೊ. ಎಚ್.ಎಂ. ಬೀಳಗಿ ಡಾ. ಗೀತಾ ವಸಂತ ಮಾತನಾಡಿದರು. ಜೆಎಸ್ಸೆಸ್ ಕಾಲೇಜು ಪ್ರಾಚಾರ್ಯ ಡಾ. ಅಜಿತ ಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಗಾಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.