ಧಾರವಾಡ

ಹೊರವಾರ ಆಚರಣೆಅಘೋಷಿತ ಬಂದ್

Published On :

ಕಲಘಟಗಿ: ಪಟ್ಟಣದ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಚರಿಸಲ್ಪಡುವ ಹೊರವಾರ ದಿನವಾದ ಮಂಗಳವಾರ ಇಡೀ ದಿನ ಗ್ರಾಮಸ್ಥರು ಮನೆಬಿಟ್ಟು ತೆರಳಿದ್ದ ಪರಿಣಾಮ ಅಘೋಷಿತ ಬಂದ್ನ ವಾತಾವರಣ ನಿರ್ಮಾಣಗೊಂಡಿತ್ತು. ಮಾ. 12ರಿಂದ ಒಂಬತ್ತು ದಿನಗಳ ಕಾಲ ಶ್ರೀ ಗ್ರಾಮದೇವಿ ಜಾತ್ರೆ ನಡೆಯಲಿದೆ. ಮಹೋತ್ಸವದ ಅಂಗವಾಗಿ ಹೊರವಾರ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಪಪಂ ವ್ಯಾಪ್ತಿಯಲ್ಲಿನ ಸರ್ಕಾರಿ ಕಚೇರಿ, ಶಾಲಾ-ಕಾಲೇಜ್ಗಳು ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದು ಹೊರತುಪಡಿಸಿದರೆ ಗ್ರಾಮದಲ್ಲಿ ಸಂಪೂರ್ಣ ಅಘೋಷಿತ ವಾತಾವರಣ ಕಂಡು ಬಂದಿತು. ಬೆಳಗ್ಗೆ ಸುಮಾರು 11ಕ್ಕೆ ಮನೆಯಿಂದ ಊಟ-ಉಪಾಹಾರ ಕಟ್ಟಿಕೊಂಡು ದೂರದ ಸ್ಥಳಗಳಿಗೆ ತೆರಳಿದ ಗ್ರಾಮಸ್ಥರು ಸಂಜೆವರೆಗೂ ಕಾಲ ಕಳೆದು ನಂತರ ಮನೆಗೆ ಮರಳಿದರು. ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟು ಬಂದ್ ಮಾಡಿದ್ದು ಗಮನ ಸೆಳೆಯಿತು. ಜಾತ್ರಾ ಮಹೋತ್ಸವ ಪೂರ್ಣಗೊಳ್ಳುವವರೆಗೂ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಎಂ. ನಿಂಬಣ್ಣವರ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸುಧೀರ ಬೋಳಾರ ವಿನಂತಿಸಿದ್ದಾರೆ.
ಆಶ್ರಯ ಅರ್ಜಿ: ಆಟೋ ಚಾಲಕರ ಪ್ರತಿಭಟನೆ
ಹುಬ್ಬಳ್ಳಿ: ಆಶ್ರಯ ಯೋಜನೆಯಡಿ ಅರ್ಜಿ ಆಹ್ವಾನಿಸುವ ಮೂಲಕ ಆಟೋ ಚಾಲಕರಲ್ಲಿ ಗೊಂದಲ ಸೃಷ್ಟಿಸಿರುವ ಕ್ರಮ ಖಂಡಿಸಿ ನೂರಾರು ಆಟೋ ಚಾಲಕರು ಇಲ್ಲಿಯ ಮಹಾನಗರ ಪಾಲಿಕೆ ಮುಖ್ಯ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ಪಾಲಿಕೆ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಚಾಲಕರು, ಆಶ್ರಯ ಯೋಜನೆಯಡಿ ನೀಡುವ ನಿವಾಸಗಳಲ್ಲಿ ಬಡ ಆಟೋ ಚಾಲಕರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು. ಆಶ್ರಯ ಮನೆಗಳಿಗಾಗಿ ಅರ್ಜಿ ವಿತರಣೆಯಲ್ಲಿ ಗೊಂದಲ ಸೃಷ್ಟಿಸುತ್ತಿರುವ ಪಾಲಿಕೆ ಅಧಿಕಾರಿಗಳ ಕ್ರಮ ಖಂಡಿಸಿದ ಪ್ರತಿಭಟನಾಕಾರರು, ಅರ್ಹ ಹಾಗೂ ಬಡವರಿಗೆ ಯಾವುದೇ ಗೊಂದಲ ಇಲ್ಲದಂತೆ ಅರ್ಜಿ ವಿತರಿಸಬೇಕು. ಆಶ್ರಯ ಮನೆ ವಿತರಿಸುವ ಸಂದರ್ಭದಲ್ಲಿ ತಾರತಮ್ಯ ಮಾಡದಂತೆ ಎಚ್ಚರಿಕೆ ನೀಡಿದರು. ಬಿ.ಎ. ಮುಧೋಳ, ದೇವಾನಂದ ಜಗಾಪುರ, ದಾದಾಪೀರ ಬೇಪಾರಿ, ರಮೇಶ ಬೋಸಲೆ, ಬಿ. ಗೋವಿಂದ, ಗಫೂರ ಫಣಿಬಂದ, ಅಶೋಕ ಉಪ್ಪಿನ, ಸುಲೇಮಾನ ಶೇಖ ಮತ್ತಿತರರು ಪಾಲ್ಗೊಂಡಿದ್ದರು.
ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಅವಶ್ಯ
ಅಣ್ಣಿಗೇರಿ: ಗ್ರಾಮೀಣ ಪ್ರದೇಶದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಅನುಕೂಲವಾಗಲು ಗ್ರಾಮಾಂತರ ಪ್ರದೇಶಗಳಲ್ಲಿ ಡಾ. ಎಸ್.ಎಚ್. ರೆಡ್ಡಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಜ್ಞಾನಾರ್ಜನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಪ್ರೊ. ಎಸ್.ವಿ. ಸಂಕನೂರ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಸೆಂಟ್ರಲ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಮಕ್ಕಳು ಈ ಶಿಕ್ಷಣ ಸಂಸ್ಥೆಯ ಪ್ರಯೋಜನ ಪಡೆದುಕೊಂಡು ಜೀವನದಲ್ಲಿ ಸಾಧನೆಗೈಯಬೇಕೆಂದರು. ಪ್ರೊ. ಆರ್.ಡಿ. ಕಡ್ಲಿಕೊಪ್ಪ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು ಎಂದರು. ಡಾ. ಎಸ್.ಎಚ್. ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಪದ್ಮಾವತಿ, ರಾಜ್ಯ ಪ್ರಶಸ್ತಿ ವಿಜೇತ ಚನ್ನಬಸಪ್ಪ ಅಂಗಡಿ, ಶಿಕ್ಷಕಿ ಹಸೀನಾ ಅತ್ತರ ಇದ್ದರು.  
ವ್ಯಾಜ್ಯ ವಿಲೇವಾರಿ ಶಿಬಿರದ ಉದ್ಘಾಟನೆ
ಕಲಘಟಗಿ: ಸ್ಥಳೀಯ ಗುಡ್ನ್ಯೂಸ್ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪರ್ಯಾಯ ವ್ಯಾಜ್ಯ ವಿಲೇವಾರಿ ಶಿಬಿರವನ್ನು ದಿವಾಣಿ ನ್ಯಾಯಾಧೀಶ ಜಿ.ಆರ್. ಕುಲಕರ್ಣಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ ಕಾನೂನು ಜ್ಞಾನ ಹೊಂದುವುದು ಅತಿ ಅವಶ್ಯಕವಾಗಿದೆ. ಇದರಿಂದ ವ್ಯಾಜ್ಯ ಸಂಖ್ಯೆಯಲ್ಲಿ ಕಡಿಮೆಯಾಗಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಹೆಚ್ಚೆಚು ಪಾಲ್ಗೊಂಡು ಕಾನೂನು ಜ್ಞಾನ ಹೊಂದಬೇಕೆಂದರು. ಸರ್ಕಾರಿ ಅಭಿಯೋಜಕ ಆರ್.ಎಂ. ಮಳಗಿಕರ, ನ್ಯಾಯವಾದಿ ಬಿ.ಎ. ಪಾಟೀಲ, ಜಿ.ಬಿ. ನೇಕಾರ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಕಾಲೇಜ್ನ ಪ್ರಾಚಾರ್ಯ ಎಂ.ಎಸ್. ಮುರುಗೋಡಮಠ, ಸಾಬು ಜೋಸೆಫ್ ಮತ್ತಿತರರು ಪಾಲ್ಗೊಂಡಿದ್ದರು.
ಡಾ. ಸುಮಿತ್ರಾಗೆ ಉಪಾಯನ ಪ್ರಶಸ್ತಿ
ಧಾರವಾಡ: ವಿವಿಧ ಸಂಘ-ಸಂಸ್ಥೆಗಳಿಂದ 16 ಪ್ರಶಸ್ತಿಗಳಿಗೆ ಪಾತ್ರರಾದ ಇಲ್ಲಿಯ ಹಿರಿಯ ಲೇಖಕಿ ಡಾ. ಸುಮಿತ್ರಾ ಮೋತಿಲಾಲ ಹಲವಾಯಿ ಅವರಿಗೆ ಶಿರಸಿ ಮೂಲದ ಕವಿ ಕಾವ್ಯ ಬಳಗದ ವತಿಯಿಂದ ಉಪಾಯನ ಪ್ರಶಸ್ತಿ ಲಭಿಸಿದೆ. ಡಾ. ವಿಜಯ ನಳಿನಿ, ಆರ್.ಡಿ. ಹೆಗಡೆ ಹಾಗೂ ಎನ್.ಆರ್. ರೂಪಶ್ರೀ ಅವರಿದ್ದ ಆಯ್ಕೆ ಸಮಿತಿಯು 2014ರ ಪ್ರಶಸ್ತಿಗಾಗಿ ಡಾ. ಸುಮಿತ್ರಾ ಅವರನ್ನು ಆಯ್ಕೆ ಮಾಡಿದೆ ಎಂದು ಹಿರಿಯ ಲೇಖಕಿ ಭಾಗೀರಥಿ ಹೆಗಡೆ ತಿಳಿಸಿದ್ದಾರೆ. ಫೆ. 23ರಂದು ಬಳಗದ ವಾರ್ಷಿಕೋತ್ಸವದಲ್ಲಿ ಡಾ. ಸುಮಿತ್ರಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಶಯಾಸ್ಪದ ಸಾವು
ಧಾರವಾಡ: ಇಲ್ಲಿಯ ಸಿಬಿಟಿಯ ಆನಂದ ಬಾರ್ ಬಳಿ ಸಂಶಯಾಸ್ಪದವಾಗಿ ವ್ಯಕ್ತಿಯೋರ್ವ ಮಂಗಳವಾರ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ಪುಂಡಲೀಕ ಬಸಪ್ಪ ಬಡಿಗೇರ (50) ಎಂದು ಗುರುತಿಸಲಾಗಿದ್ದು, ಈತನ ದೇಹದ ಮೇಲೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಈತ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂದು ಮಾಹಿತಿ ಬಂದಿದ್ದು, ಈ ಕುರಿತು ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುಬಸಯ್ಯ ಹಿರೇಮಠ ನಿಧನ
ಕಲಘಟಗಿ: ಪಟ್ಟಣದ ಗುರುಬಸಯ್ಯ ಷಲ್ಲಯ್ಯ ಮಠದ ಉರ್ಫ್ ಹಿರೇಮಠ (85) ಇತ್ತೀಚಿಗೆ ನಿಧನ ಹೊಂದಿದರು. ಮೃತರಿಗೆ ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.
ವಿಜೃಂಭಣೆಯ ಗರಗ ಮಡಿವಾಳೇಶ್ವರ ಜಾತ್ರೆ
ಧಾರವಾಡ: ಉತ್ತರ ಕರ್ನಾಟಕದ ಪ್ರತಿಷ್ಠಿತ ಜಾತ್ರೆಗಳಲ್ಲಿ ಒಂದಾದ ಗರಗ ಶ್ರೀ ಮಡಿವಾಳೇಶ್ವರ ಜಾತ್ರೆ ಮಂಗಳವಾರ ಸಂಜೆ ಅದ್ಧೂರಿಯಿಂದ ಜರುಗಿತು. ಸಂಜೆ 4.30ರ ಸುಮಾರಿಗೆ ನಡೆದ ಮಡಿವಾಳೇಶ್ವರ ಜಾತ್ರೆಯ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣು ತೂರಿದರು. ಸುತ್ತ್ತಲಿನ ತಡಕೋಡ, ಮಾದನಬಾವಿ, ಮುಮ್ಮಿಗಟ್ಟಿ, ಯಾದವಾಡ, ಲಕಮಾಪುರ, ಹೆಬ್ಬಳ್ಳಿ, ಉಪ್ಪಿನ ಬೆಟಗೇರಿ, ನರೇಂದ್ರ, ಹಂಗರಕಿ ಹೀಗೆ ಹತ್ತಾರು ಊರುಗಳ ಸಾವಿರಾರು ಭಕ್ತರು ಚಕ್ಕಡಿ, ಟ್ರ್ಯಾಕ್ಟರ್, ಲಾರಿ ಇನ್ನಿತರ ವಾಹನಗಳಲ್ಲಿ ಬಂದು ಜಾತ್ರೆಯಲ್ಲಿ ಸಂಭ್ರಮಿಸಿದರು. ಫೆ. 15ರಂದು ಉಳವಿ ಜಾತ್ರೆ ಮುಗಿಸಿಕೊಂಡು ನೇರವಾಗಿ ಗರಗ ಜಾತ್ರೆಗೆ ಬಂದವರು ಸಾಕಷ್ಟು ಜನ. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯ ಅಂಗವಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಂಗಳವಾರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.