ಗದ್ದಲದ ಗೂಡಾದ ತಾಪಂ ಸಾಮಾನ್ಯ ಸಭೆ
ಧಾರವಾಡ: ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಸಮಾಜದ ಎರಡು ಕಣ್ಣಿದ್ದಂತೆ. ಸಮಾಜದ ನೋವಿಗೆ ಸ್ಪಂದಿಸಿ ಪರಿಹಾರ ಒದಗಿಸಬೇಕಾದ ಇವರು ಅಸಭ್ಯದ ರೂವಾರಿಗಳಾದರೆ ಏನಾದೀತು?
ಇಲ್ಲಿಯ ತಾಪಂ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಒಂದು ಹಂತದಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿತ್ತು. ಅಲ್ಲಿ ಅಧಿಕಾರಿಗಳಿಗೆ ಬೆಲೆಯೇ ಇಲ್ಲದಂತಾಗಿ ಜನಪ್ರತಿನಿಧಿಗಳು ಸಭೆ ಎನ್ನದೇ ಏಕವಚನದಲ್ಲಿಯೇ ಬೈದಾಡಿ ತಮ್ಮ ನೈಜ ಸ್ವರೂಪ ತೋರಿಸಿದರು.
ಬೆಳಗ್ಗೆ 11ಕ್ಕೆ ಆರಂಭವಾಗಿಬೇಕಿದ್ದ ಸಭೆ ಹಲವು ಕಾರಣಗಳಿಂದ ಮಧ್ಯಾಹ್ನ 3.30ಕ್ಕೆ ಆರಂಭವಾಯಿತು. ಆರಂಭದಲ್ಲಿಯೇ ಗ್ರಾಮೀಣ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಶಿಕ್ಷಣ ಕ್ಷೇತ್ರದ ವಿವರ ನೀಡುತ್ತಿದ್ದ ವೇಳೆ, ತಾಪಂ ಸದಸ್ಯ ಯೋಗೀಶಗೌಡ ಮಧ್ಯ ಪ್ರವೇಶಿಸಿ ನೀವು ಇಲ್ಲಿಯವರೆಗೂ ಭೇಟಿ ಮಾಡಿದ ಶಾಲೆಗಳ ವಿವರ ಹಾಗೂ ಆ ಶಾಲೆಗಳ ಪ್ರಗತಿ ಮಾಹಿತಿ ಕೊಡಿ ಎಂದರು. ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಅದನ್ನೇ ಹೇಳುತ್ತಿದ್ದೇನೆ, ಏಕೆ ಜೋರಾಗಿ ಮಾತನಾಡುತ್ತಿದ್ದೀರಿ? ಎಂದರು. ಆಗ ಯೋಗೀಶಗೌಡರು ರೊಚ್ಚಿಗೆದ್ದು ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಗೂಂಡಾಗಿರಿ ಮಾಡುವುದಿದ್ದರೆ ಆಚೆ ಬಾ ಎಂದು ಆಹ್ವಾನ ಕೊಟ್ಟು ಬಿಟ್ಟರು. ಇಬ್ಬರ ಮಧ್ಯೆಯೂ ಮಾತಿನ ಚಕಮಕಿ ಜೋರಾಯಿತು. ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ತಾಪಂ ಉಳಿದ ಸದಸ್ಯರು ಹಾಗೂ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ತಾಪಂ ಸದಸ್ಯ ಯೋಗೀಶಗೌಡರು ಗೂಂಡಾಗಿರಿ ಶಿಕ್ಷಕರಿಂದ ನಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು ಏಕವಚನದಲ್ಲಿ ಅಧಿಕಾರಿಯನ್ನು ಪದೇ ಪದೇ ನಿಂದಿಸಿದರು. ಆದ್ದರಿಂದ ಬೇರೆ ಇಲಾಖೆ ವಿಷಯ ಕೈಗೆತ್ತಿಕೊಳ್ಳಲಾಯಿತು.
ಯಾವ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರಿಗೆ ಕರೆ ಮಾಡಿದರೆ ನಮ್ಮ ಕರೆಗಳನ್ನು ಸ್ವೀಕರಿಸುವುದಿಲ್ಲ. ಯಾವ ಸಭೆ ಸಮಾರಂಭಗಳಿಗೂ ನಮ್ಮನ್ನು ಆಹ್ವಾನಿಸುವುದಿಲ್ಲ. ತಮಗೆ ಬೇಕಾದ ಸದಸ್ಯರನ್ನು ಮಾತ್ರ ಅವರ ಕ್ಷೇತ್ರ ಇರದಿದ್ದರೂ ಆಹ್ವಾನಿಸುತ್ತಾರೆ. ಆದರೆ, ಆ ಕ್ಷೇತ್ರದವರನ್ನು ಕಡೆಗಣಿಸುತ್ತಾರೆ. ಅಂಗನವಾಡಿ ಸಹಾಯಕರು ಶಾಲೆಗಳಲ್ಲಿ ಇರುವುದಿಲ್ಲ. ಬಹು ಗ್ರಾಮ ನೀರಿನ ಯೋಜನೆಯು ತಿಂಗಳು ಕಳೆದರೂ ಪರೀಕ್ಷೆಯೊಂದೇ ನಡೆಯುತ್ತಿದೆ ಹೊರತು ನೀರು ಮಾತ್ರ ಜನರಿಗೆ ಇನ್ನೂ ತಲುಪಿಲ್ಲ. ಹಳ್ಳಿಗಳಲ್ಲಿನ ಆಸ್ಪತ್ರೆಗಳಿಂದ ಜನತೆ ರೋಗ ಮುಕ್ತವಾಗುವ ಬದಲು ಇನ್ನಷ್ಟು ರೋಗಗ್ರಸ್ತರಾಗುವ ಕೆಟ್ಟ ಪರಿಸ್ಥಿತಿ ಬಂದಿದೆ ಎಂದು ಸಭೆಯಲ್ಲಿ ಸದಸ್ಯರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಯಾವುದೇ ವಿಷಯದ ಬಗ್ಗೆ ಸರಿಯಾಗಿ ಚರ್ಚೆಯಾಗದೇ ಬರೀ ಗಲಾಟೆಗೆ ಮಾತ್ರ ತಾಪಂ ಸಭೆ ಸೀಮಿತವಾಗಿ ಸಮಾರೋಪಗೊಂಡಿತು.
ತಾಪಂ ಅಧ್ಯಕ್ಷೆ ಸುಮಂಗಲಾ ಕೌದೆಣ್ಣವರ, ಉಪಾಧ್ಯಕ್ಷ ಈರಪ್ಪ ಕರಲಿಂಗಣ್ಣವರ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಾ ಕೊಳ್ಳಾನಟ್ಟಿ, ತಾಪಂ ಅಧಿಕಾರಿ ಗಂಗಾಧರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

