ಧಾರವಾಡ

ಅವ್ಯವಹಾರಕ್ಕೆ ಆಶ್ರಯ ಮನೆ ಯೋಜನೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 21
ರಾಜಕೀಯ ದಾಳ, ಹೋರಾಟಕ್ಕೆ ನಾಂದಿ, ಗೊಂದಲಕ್ಕೆ ಕಾರಣ, ಹಣ ಮಾಡಿಕೊಳ್ಳುವವರಿಗೆ ರಹದಾರಿ...
ಈ ಎಲ್ಲ ಅವಕಾಶಗಳನ್ನು ಹುಟ್ಟು ಹಾಕಿದ್ದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಮಂಟೂರು ರಸ್ತೆಯ ಯಲ್ಲಾಪುರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಿ 2 (ಅಪಾರ್ಟ್ಮೆಂಟ್) ಮಾದರಿಯ ಆಶ್ರಯ ಮನೆಗಳು.
ಹೌದು, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗಾಗಿ ನಗರ ವಸತಿ ಯೋಜನೆ ಅಡಿಯಲ್ಲಿ 2014-15ನೇ ಸಾಲಿನಲ್ಲಿ ಸುಮಾರು 3 ಸಾವಿರ ಮನೆಗಳನ್ನು ಪಾಲಿಕೆ ನಿರ್ಮಿಸಲು ಮುಂದಾಗಿದ್ದು ಹಲವು ಅವಾಂತರಗಳನ್ನು ಹಾಗೂ ಅವ್ಯವಹಾರಕ್ಕೆ ಅವಕಾಶವನ್ನೂ ಸೃಷ್ಟಿಸಿದೆ.
ಯೋಜನೆಯ ಹೆಸರಲ್ಲಿ ರಾಜಕೀಯ ಬಿಲ್ಡಪ್ ತೆಗೆದುಕೊಳ್ಳಲು, ಹಣ ಮಾಡಿಕೊಳ್ಳುವವರ ಪಾಲಿಗೆ ಸುಗ್ಗಿಯಾಗಿದ್ದಂತೂ ಸುಳ್ಳಲ್ಲ. ಪಾಲಿಕೆ ಸ್ಪಷ್ಟ ಮಾಹಿತಿ ನೀಡದೇ ಏಕಾಏಕಿ ಅರ್ಜಿ ಆಹ್ವಾನಿಸಿದ್ದೂ ಈ ಗೊಂದಲಕ್ಕೂ ಕಾರಣವಾಗಿದೆ.
ಸೂರಿಗಾಗಿ ಮುಗಿ ಬಿದ್ದಿದ್ದಾರೆ: ಬಡವರ ಪಾಲಿಗೆ ಸ್ವಂತ ಮನೆ ಗಗನ ಕುಸುಮವೇ ಸರಿ. ಅಂಥದರಲ್ಲಿ ಸರ್ಕಾರವೇ ಆಶ್ರಯ ಮನೆ ನಿರ್ಮಿಸಿಕೊಡಲು ಮುಂದಾಗುತ್ತಿದೆ ಎಂದ ಮೇಲೆ ಬಡಬಗ್ಗರು ಸೂರು ಕಂಡುಕೊಳ್ಳಲು ಮುಗಿ ಬಿದ್ದಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುವವರು ಮಾತ್ರ ಆಶ್ರಯ ಯೋಜನೆಯ ಮನೆ ಪಡೆದುಕೊಳ್ಳಲು ಅರ್ಹರು. ಆದರೆ ಮನೆ ಸಿಗುತ್ತದೆ ಎಂದ ಮೇಲೆ ಬೇಕಾಬಿಟ್ಟಿಯಾಗಿ ವ್ಯಾಪ್ತಿಗೆ ಒಳಪಡದವರೂ ಅರ್ಜಿಗಾಗಿ ಮುಗಿ ಬಿದ್ದಿದ್ದಾರೆ. ಇದರಿಂದಾಗಿಯೇ ಆಶ್ರಯ ಮನೆ ಅರ್ಜಿ ನೀಡುವ ಪಾಲಿಕೆಯ ವಲಯ ಕಚೇರಿ ಮುಂದೆ ಜನ ಜಂಗುಳಿ ಜಮಾಯಿಸಿದೆ.
ಅರ್ಜಿಗೆ ಕಡಿಮೆ ಅವಧಿ: ಪಾಲಿಕೆ ದಿಢೀರನೆ ಆಶ್ರಯ ಮನೆಗಳಿಗಾಗಿ ಅರ್ಜಿ ಆಹ್ವಾನಿಸಿದೆ ಹಾಗೂ ಕಡಿಮೆ ಕಾಲಾವಕಾಶ ನೀಡಿದೆ. ಜಿ 2 ಮಾದರಿಯ ಆಶ್ರಯ ಮನೆಗಳು ನಿರ್ಮಾಣವಾಗಲಿವೆ ಎಂಬ ಸುದ್ದಿ ಹೊರ ಬಿದ್ದು ಅನೇಕ ದಿನಗಳಾಗಿವೆ. ಆದರೆ ಈ ಬಗ್ಗೆ ಯಾವುದೇ ನಿಖರತೆ ಇದ್ದಿರಲಿಲ್ಲ. ಆದರೀಗ ಇದ್ದಕ್ಕಿದ್ದಂತೆ ಪಾಲಿಕೆ ಅರ್ಜಿ ಆಹ್ವಾನಿಸಿದ್ದು ಏಕೆ? ಎನ್ನುವ ಪ್ರಶ್ನೆಗೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ.
ಇನ್ನು, ಆಶ್ರಯ ಮನೆಗಳಿಗೆ ಅರ್ಜಿ ಸಲ್ಲಿಸುವಂತೆ ಪಾಲಿಕೆ ಫೆ. 6ರಂದು ಆದೇಶ ಹೊರಡಿಸಿದೆ. ಇದರಲ್ಲಿ ಫೆ. 28 ರೊಳಗಾಗಿ ಅರ್ಜಿ ಸಲ್ಲಿಸಬೇಕೆಂದು ಸೂಚನೆ ನೀಡಿದೆ. ಅಂದರೆ ಅರ್ಜಿ ಸಲ್ಲಿಸಲು ಒಟ್ಟಾರೆ ಕೇವಲ 22 ದಿನ ಮಾತ್ರ ಕಾಲಾವಕಾಶ ನೀಡಿದೆ.
ದಾಖಲೆಗಾಗಿ ಪರದಾಟ: ಅರ್ಜಿ ಸಲ್ಲಿಸಲು ಕಡಿಮೆ ಅವಧಿ ನಿಗದಿ ಮಾಡಿರುವುದರಿಂದ ದಾಖಲೆ ಸಮೇತ ಅರ್ಜಿ ಸಲ್ಲಿಸಲು ಫಲಾನುಭವಿಗಳು ಪರದಾಡುವಂತಾಗಿದೆ. ಆಶ್ರಯ ಮನೆ ಅರ್ಜಿ ಸಲ್ಲಿಸುವ ವೇಳೆ ಕಡ್ಡಾಯವಾಗಿ ಪಡಿತರ ಚೀಟಿ, ಆದಾಯಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ (ಅರ್ಹರಿಗೆ ಮಾತ್ರ), ಅಂಗವಿಕಲರಿದ್ದರೆ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್, 10 ಪಾಸ್ಪೋರ್ಟ್ ಸೈಜ್ ಪೋಟೋ ನೀಡಬೇಕು. ಇನ್ನುಳಿದ ದಾಖಲೆಗಳು ಸಲೀಸಾಗಿ ಸಿಕ್ಕರೂ  ಜಾತಿ, ಆದಾಯ, ಅಂಗವಿಕಲ ಪ್ರಮಾಣಪತ್ರಕ್ಕಾಗಿ ಜನ ಪರದಾಡುತ್ತಿದ್ದಾರೆ. ಆದಷ್ಟು ಬೇಗನೆ ಪ್ರಮಾಣ ಪತ್ರ ಪಡೆದುಕೊಳ್ಳಲು ಹಣ ತೆತ್ತ್ತಿದ್ದಾರೆ. ಈ ಪ್ರಮಾಣ ಪತ್ರಗಳನ್ನು ಕೊಡಿಸಲೆಂದೇ ಒಂದಿಷ್ಟು ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ.
ದಾರಿ ತಪ್ಪಿಸಿದ ವೆಬ್ಸೈಟ್: ಇವೆಲ್ಲದರ ಮಧ್ಯೆ ಪಾಲಿಕೆ ಆಶ್ರಯ ಮನೆಗಳ ಅರ್ಜಿ ಫಾರ್ಮ್ನ್ನು ವೆಬ್ಸೈಟ್ನಿಂದ ಪಡೆದುಕೊಳ್ಳಬಹುದೆಂದು ತಿಳಿಸಿತ್ತು. ಆದರೆ ಆ ವೆಬ್ಸೈಟೇ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. ವೆಬ್ಸೈಟ್ನಿಂದ ಪಡೆದುಕೊಂಡ ಅರ್ಜಿಯಲ್ಲಿ ವಿಧಾನಸಭೆ ಕ್ಷೇತ್ರ ನಮೂದಾಗಿರಲಿಲ್ಲ. ಇಂಥ ಅರ್ಜಿಗಳು ವಲಯ ಕಚೇರಿಯಲ್ಲಿ ಸ್ವೀಕಾರವಾಗಲಿಲ್ಲ. ಆದಾಗಲೇ ಸಾವಿರಾರು ಅರ್ಜಿಗಳು ಡೌನ್ಲೋಡ್ ಆಗಿ ಬಿಟ್ಟಿದ್ದವು. ಇದು ಜನರನ್ನು ತೊಂದರೆಗೀಡು ಮಾಡೀತು. ಇದೀಗ ಪಾಲಿಕೆ ಪುನಃ ಪರಿಷ್ಕೃತ ಅರ್ಜಿಯನ್ನು ವೆಬ್ಸೈಟ್ನಲ್ಲಿ ಬಿಟ್ಟಿದೆಯಾದರೂ ಈಗಾಗಲೇ ಅರ್ಜಿ ಪಡೆದುಕೊಳ್ಳಲು ಹಣ ಖರ್ಚು ಮಾಡಿದ್ದು ನೀರು ಪಾಲಾಯಿತು. ಒಟ್ಟಾರೆ ಯೋಜನೆ ಪೂರ್ಣಗೊಂಡು ಫಲಾನುಭವಿಗಳಿಗೆ ಸೂರು ಯಾವಾಗ ಲಭಿಸುತ್ತದೆಯೋ ಗೊತ್ತಿಲ್ಲ. ಯೋಜನೆ ಗೊಂದಲದ ಗೂಡಾಗಿ ಅವಾಂತರ, ಅವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಿದಂತೂ ನಿಜ.
ರಾಜಕೀಯ ದಾಳ
ಪಾಲಿಕೆಯ ಜಿ 2 ಮಾದರಿ ಆಶ್ರಯ ಮನೆ ಯೋಜನೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ಪಾಲಿಗೆ ಸುಗ್ಗಿಹಬ್ಬ. ಕೆಲ ಮರಿಪುಢಾರಿಗಳು ತಾವೇ ಈ ಯೋಜನೆ ಜಾರಿಯಾಗಲು ಕಾರಣ ಎನ್ನುವಂತೆ ವರ್ತಿಸುತ್ತಿದ್ದಾರೆ. ಅರ್ಜಿ ನೀಡುವ ಸ್ಥಳಗಳಿಗೆ ಹೋಗಿ ಜನರ ಮುಂದೆ ಬಿಲ್ಡಪ್ ಕೊಡುತ್ತಿದ್ದಾರೆ. ಸಾಲದ್ದಕ್ಕೆ ಅರ್ಜಿ ನೀಡುವಲ್ಲಿ ಸಹಕರಿಸಿದಂತೆ ಮಾಡುವುದು, ಅರ್ಜಿಯೊಂದಿಗೆ ಯಾವ ದಾಖಲೆಗಳನ್ನು ಲಗತ್ತಿಸಬೇಕು, ಲಗತ್ತಿಸಿದ ದಾಖಲೆ ಸರಿಯಾಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿದಂತೆ ನಾಟಕವಾಡಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ.
ಮೋಸ ಹೋಗದಿರಿ
ಆಶ್ರಯ ಮನೆ ಎಂದ ಕೂಡಲೇ ಮನೆ ಕೊಡಿಸುತ್ತೇವೆಂದು ಮಧ್ಯವರ್ತಿಗಳು ಹುಟ್ಟಿಕೊಳ್ಳುವುದು ಸಹಜ. ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜಿ 2 ಮಾದರಿ ಆಶ್ರಯ ಮನೆ ಯೋಜನೆ ಘೋಷಣೆಯಾಗಿದ್ದೇ ತಡ ತಾವು ಮನೆ ಕೊಡಿಸುತ್ತೇವೆ ಎಂದು ಸುಳ್ಳು ಹೇಳಿ ಬಡ ಜನರನ್ನು ಮೋಸ ಮಾಡುವವರೂ ಹುಟ್ಟಿಕೊಂಡಿದ್ದಾರೆ. ಇಂಥವರಿಗೆ ಹಣ ಕೊಟ್ಟಲ್ಲಿ ಮೋಸ ಹೋಗುವುದು ಗ್ಯಾರಂಟಿ. ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆಯಲಿದೆ. ಹೀಗಾಗಿ ಜನ ನಯವಂಚಕರ ಮಾತಿಗೆ ಮರುಳಾಗದಿರಲಿ.
ಆಶ್ರಯ ಯೋಜನೆಯಡಿಯಲ್ಲಿ ಯಲ್ಲಾಪುರ ಬಳಿ ಕಾಯ್ದಿರಿಸಲಾಗಿರುವ 34 ಎಕರೆ 27 ಗುಂಟೆ ಜಾಗದಲ್ಲಿ ಮನೆ ನಿರ್ಮಿಸಲು ಯೋಜಿಸಲಾಗಿದೆ. ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ವಲಯ ಕಚೇರಿಯಿಂದ ಅಥವಾ ವೆಬ್ಸೈಟ್ ಮೂಲಕ ಪಡೆಯಬಹುದು. ಈ ಕುರಿತು ಗೊಂದಲ ಬೇಡ. ಅರ್ಜಿಗಾಗಿ ಹಗಲಿರುಳು ಸಾಲಿನಲ್ಲಿ ನಿಲ್ಲುವುದು ಬೇಡ. ಅಮಾಯಕರನ್ನು ಗುರಿಯಾಗಿಸಿಕೊಂಡು ಕೆಲವರು ಅರ್ಜಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಂಥವರಿಗೆ ಬಲಿ ಬೀಳಬಾರದು.
- ಪ್ರಸಾದ ಅಬ್ಬಯ್ಯ, ಶಾಸಕ


-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.