ಬಿಜೆಪಿ ಮುಖಂಡರಿಗೆ ಸಂಘದ ಪಾಠ
ಹುಬ್ಬಳ್ಳಿ: ಎದುರಾಗಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಜೆಪಿ ನಾಯಕರಿಗೆ ಹುಬ್ಬಳ್ಳಿಯಲ್ಲಿ ಚುನಾವಣಾ ಪಾಠ ಹೇಳಿ ಕೊಟ್ಟಿದೆ.
ಯಾವುದೇ ಸದ್ದು ಗದ್ದಲವಿಲ್ಲದೇ ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್ನಲ್ಲಿ ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಮುಖರನ್ನೊಂಡಗೊಂಡ ಆರ್ಎಸ್ಎಸ್ ಹಾಗೂ ಬಿಜೆಪಿ ಸಮನ್ವಯ ಸಭೆ ನಡೆದಿದೆ. ಸಭೆಗೆ ಪ್ರಮುಖರನ್ನು ಬಿಟ್ಟು ಮತ್ಯಾರಿಗೂ ಪ್ರವೇಶವಿದ್ದಿರಲಿಲ್ಲ.
ಚುನಾವಣಾ ತಂತ್ರ...: ಸಭೆಯಲ್ಲಿ ಬರಲಿರುವ ಲೋಕಸಭೆ ಚುನಾವಣೆಯ ವಿಷಯವಾಗಿ ಸುದೀಘ ಚರ್ಚೆ ನಡೆದಿದೆ. ಬೆಳಗ್ಗೆ 10.30ಕ್ಕೆ ಆರಂಭವಾದ ಸಭೆ ಸಂಜೆ 5.30ಕ್ಕೆ ಕೊನೆಗೊಂಡಿದೆ. ಪ್ರಸಕ್ತ ಎದುರಾಗಲಿರುವ ಲೋಕಸಭೆ ಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಮೋದಿಯವರನ್ನು ಪ್ರಧಾನಿಯಾಗಿಸಲೇಬೇಕು. ಈ ನಿಟ್ಟಿನಲ್ಲಿ ರಚನಾತ್ಮಕ ಪ್ರಚಾರ ಕೈಗೊಳ್ಳಬೇಕು ಎಂದು ಪಾಠ ಮಾಡಲಾಗಿದೆ. ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಪ್ರಚಾರಕ ಮಂಗೇಶ ಭೇಂಡೆ ನೇತೃತ್ವ ವಹಿಸಿದ್ದರು.
7 ಲೋಕಸಭೆ ಕ್ಷೇತ್ರ: ಹುಬ್ಬಳ್ಳಿಯಂತೆ ರಾಜ್ಯದ ರಾಯಚೂರು, ಶಿವಮೊಗ್ಗ, ಮಂಗಳೂರು, ಬೆಂಗಳೂರು ವಿಭಾಗದಲ್ಲಿ ಸಂಘ ಹಾಗೂ ಬಿಜೆಪಿ ಮುಖಂಡರ ಉಪಸ್ಥಿತಿಯಲ್ಲಿ ಸಮನ್ವಯ ಸಭೆಗಳು ನಡೆದಿವೆ. ಹುಬ್ಬಳ್ಳಿಯಲ್ಲಿ ಧಾರವಾಡ, ಹಾವೇರಿ, ಬೆಳಗಾವಿ, ಚಿಕ್ಕೋಡಿ, ಬಿಜಾಪುರ, ಬಾಗಲಕೋಟೆ, ಕೆನರಾ ಲೋಕಸಭೆಯನ್ನು ಕೇಂದ್ರವಾಗಿರಿಸಿಕೊಂಡು ಸಭೆ ನಡೆಸಲಾಗಿದೆ.
ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಸಂಸದರಾದ ಸುರೇಶ ಅಂಗಡಿ, ಪಿ. ಸಿ. ಗದ್ದಿಗೌಡ್ರ, ಶಿವಕುಮಾರ ಉದಾಸಿ, ಅನಂತಕುಮಾರ ಹೆಗಡೆ ಪಾಲ್ಗೊಂಡಿದ್ದರು. ಅಲ್ಲದೇ ಏಳೂ ಲೋಕಸಭೆ ವ್ಯಾಪ್ತಿಗೆ ಒಳಪಡುವ ಜಿಲ್ಲಾಧ್ಯಕ್ಷರು, ಚುನಾವಣೆಯ ಉಸ್ತುವಾರಿ ಪ್ರಮುಖರು ಸೇರಿದಂತೆ ಕೋರ್ ಕಮಿಟಿ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು.
ಡ್ಯಾಮೇಜ್ ಕಂಟ್ರೋಲ್: ಬಿಜೆಪಿಗೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಬಿಜೆಪಿ ಇಬ್ಭಾಗವಾಗಿದ್ದು ಕೆಟ್ಟ ಕನಸು. ಆದರೀಗ ಬಿಜೆಪಿ ಒಂದಾಗಿದೆ ಆಗಿರುವ ಪ್ರಮಾದವನ್ನು ಬದಿಗೊತ್ತಿ ಎಲ್ಲರೂ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕಿದೆ. ವೈಯಕ್ತಿಕ ದ್ವೇಷ, ಹಗೆತನ ಸಾಧಿಸಿದರೆ ಸಹಿಸಿಕೊಳ್ಳಲಾಗುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತರಾಗಿ ಕೆಲಸ ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಿದೆ. ಅಭ್ಯರ್ಥಿಗಳೂ ಮುಖಂಡರು, ಕಾರ್ಯಕರ್ತರೊಂದಿಗೆ ನಿತ್ಯ ಸಂಪರ್ಕದಲ್ಲಿರಬೇಕು ಎಂದಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದೊಂದೇ ಗುರಿಯಾಗಿರಿಸಿಕೊಳ್ಳಬೇಕೆಂದು ಸೂಚಿಸಿದ್ದಾರೆ.
ಪ್ರತ್ಯೇಕ ಚರ್ಚೆ: ಬಿಜೆಪಿ ರಾಜ್ಯ ನಾಯಕರು ಹಾಗೂ ಸಂಘದ ಪ್ರಮುಖರು, ಚುನಾವಣಾ ಉಸ್ತುವಾರಿಗಳು, ವಿಭಾಗವಾರು ಪ್ರಮುಖರು ಹೀಗೆ ಪ್ರತ್ಯೇಕ ಗುಂಪು ಚರ್ಚೆ ಮಾಡಲಾಗಿದೆ. ಈ ವರೆಗೆ ಚುನಾವಣೆಯ ಹಿನ್ನೆಲೆಯಲ್ಲಿ ಮಾಡಿಕೊಂಡ ಸಿದ್ಧತೆ ಏನು? ಮುಂದಿನ ಯೋಜನೆ ಏನು? ಎಂಬ ಮಾಹಿತಿ ಪಡೆಯಲಾಯಿತು. ಈ ಎಲ್ಲ ಮಾಹಿತಿಯನ್ನು ಕಲೆ ಹಾಕಿದ ಬಳಿಕ ಸಂಘದ ಪ್ರಮುಖರು ಇದನ್ನು ಪರಿಶೀಲಿಸಿದ್ದಾರೆ.
ಮೂರು ತಿಂಗಳ ಪಟ್ಟಿ ರೆಡ್: ಇದಾದ ಬಳಿಕ ಆಯಾ ಲೋಕಸಭೆ ಕ್ಷೇತ್ರವಾರು ಕೈಗೊಳ್ಳಬೇಕಾದ ಚುನಾವಣೆಯ ಪ್ರಚಾರದ ಪಟ್ಟಿ ಪ್ರಮುಖರ ಕೈಗೆ ನೀಡಲಾಗಿದೆ. ಫೆಬ್ರುವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳಾಂತ್ಯದ ವರೆಗಿನ ಪ್ರಚಾರ ಕಾರ್ಯದ ಪಟ್ಟಿ ಮಾಡಲಾಗಿದೆ. ಮೋದಿ ಪೋಸ್ಟರ್ಸ್, ಬ್ಯಾನರ್ಸ್ಗಳ ಜತೆಗೆ ಮನೆ ಮನೆ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮೋದಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಮಾತನ್ನು ಜನರಿಗೆ ಮನದಟ್ಟು ಮಾಡಬೇಕು. ಇದೇ ವೇಳೆ ಎಲ್ಲ ವರ್ಗದ ಜನರ ಮತ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಬೇಕು ಎಂದು ತಿಳಿ ಹೇಳಲಾಗಿದೆ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

