ಫೆ. 2ರಂದು ಲಕ್ಷ ಜನರ ಮಹಾಸಂಗ್ರಾಮ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 6
ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಫೆ. 2ರಂದು ಒಂದು ಲಕ್ಷ ಜನರ ಉಪಸ್ಥಿತಿಯಲ್ಲಿ 'ಮಹಾಸಂಗ್ರಾಮ' ಸಮಾವೇಶ ಆಯೋಜಿಸಲಾಗುವುದು ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಮಹತ್ವ ಪ್ರಚುರ ಪಡಿಸುವ ನಿಟ್ಟಿನಲ್ಲಿ ಹಾಗೂ ಭ್ರಷ್ಟಾಚಾರ ಮುಕ್ತ ಭಾರತ, ಭಯೋತ್ಪಾದನೆ ಮುಕ್ತ ಭಾರತ, ಸುರಕ್ಷಿತ ಭಾರತ, ಸಮಾನತೆಯ ಭಾರತ ನಿರ್ಮಾಣಕ್ಕಾಗಿ ಮಹಾಸಂಗ್ರಾಮ ಸಮಾವೇಶ ಆಯೋಜಿಸಲಾಗುತ್ತಿದೆ. ಜತೆಗೆ ಈ ಸಮಾವೇಶ ಹಿಂದೂ ಸಂಘಟನೆಗಳನ್ನು ಒಂದುಗೂಡಿಸುವ ವೇದಿಕೆಯೂ ಆಗಲಿದೆ ಎಂದರು.
ಸಮಾವೇಶದಲ್ಲಿ ಹಿಂದೂ ಸಮಾಜಕ್ಕಾಗಿ ಹೋರಾಡಿ ಪೊಲೀಸ್ ಕೇಸ್ ದಾಖಲಿಸಿಕೊಂಡಿರುವವರನ್ನು ಸನ್ಮಾನಿಸಲಾಗುವುದು. ಈಗಾಗಲೇ ಇಂಥ 1200 ಜನರನ್ನು ಗುರುತಿಸಲಾಗಿದೆ. ಸುಮಾರು 5ರಿಂದ 6 ಸಾವಿರ ಜನರನ್ನು ಸನ್ಮಾನಿಸಲಾಗುವುದು. ಜತೆಗೆ ಹಿಂದೂ ಹೋರಾಟಗಾರರ ಪರ ವಕಾಲತ್ತು ನಡೆಸಿದ ವಕೀಲರನ್ನು ಹಾಗೂ ಜಾಮೀನುದಾರರನ್ನು ಸನ್ಮಾನಿಸಲಾಗುವುದು. 150ಕ್ಕೂ ಹೆಚ್ಚು ಸ್ವಾಮೀಜಿಗಳನ್ನು ಒಂದೇ ವೇದಿಕೆಗೆ ಆಹ್ವಾನಿಸಲಾಗುವುದು. ಈಗಾಗಲೇ 80 ಸ್ವಾಮೀಜಿಗಳಿಗೆ ಆಹ್ವಾನ ನೀಡಿದ್ದು, ಅವರು ಸಮಾವೇಶಕ್ಕೆ ಬರುವುದಾಗಿ ಒಪ್ಪಿಕೊಂಡಿದ್ದಾರೆ. ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಸುತ್ತೂರು ಸ್ವಾಮೀಜಿ, ಬಾಬಾ ರಾಮದೇವ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತಿತರ ಪ್ರಮುಖರನ್ನು ಆಹ್ವಾನಿಸಲಾಗುವುದು ಎಂದು ಮುತಾಲಿಕ್ ತಿಳಿಸಿದರು.
ಶ್ರೀರಾಮಸೇನೆ, ಹಿಂದೂ ಮಹಾಸಭಾ, ಹಿಂದೂ ಜನಜಾಗೃತಿ ಸಮಿತಿ ಆಶ್ರಯದಲ್ಲಿ ಸಮಾವೇಶ ನಡೆಯುತ್ತಿದ್ದು ಇನ್ನಿತರ ಹಿಂದೂ ಸಂಘಟನೆಗಳೂ ಸಮಾವೇಶಕ್ಕೆ ಕೈಜೋಡಿಸಲಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಬಜರಂಗದಳವನ್ನೂ ಸಂಪರ್ಕಿಸಲಾಗುವುದು ಎಂದರು.
ದುರ್ಗಾಸೇನೆ ಅಧಿವೇಶನ: ದಾವಣಗೆರೆಯಲ್ಲಿ ಜ. 19ರಂದು ದುರ್ಗಾಸೇನೆಯ ಅಧಿವೇಶನ ನಡೆಯಲಿದೆ. ಒಂದು ದಿನದ ಅಧಿವೇಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಅಧಿವೇಶನಕ್ಕೆ ಚಾಲನೆ ನೀಡುವರು. ಹಿಮಾನಿ ಸಾವರ್ಕರ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದ ಮುತಾಲಿಕ್, ಎಸ್. ಆರ್. ಹಿರೇಮಠ ಹೋರಾಟಕ್ಕೆ ಶ್ರೀರಾಮಸೇನೆಯ ಬೆಂಬಲವಿದೆ ಎಂದು ಹೇಳಿದರು.
ಸಿದ್ದಲಿಂಗ ಸ್ವಾಮೀಜಿ, ಕುಮಾರ ಹಕಾರೆ, ಮಹಾಸಂಗ್ರಾಮದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಈಶ್ವರಗೌಡ ಪಾಟೀಲ ಗೋಷ್ಠಿಯಲ್ಲಿದ್ದರು.
ಶ್ರೀರಾಮ ಸೇನೆಯಿಂದ 3 ಮುಖಂಡರ ವಜಾ
ಹುಬ್ಬಳ್ಳಿ: ಶ್ರೀರಾಮ ಸೇನೆ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದ ಮೂವರು ಮುಖಂಡರನ್ನು ಶ್ರೀರಾಮ ಸೇನೆ ಸಂಘಟನೆ ಜವಾಬ್ದಾರಿಯಿಂದ ವಜಾಗೊಳಿಸಿದೆ. ಹುಬ್ಬಳ್ಳಿಯಲ್ಲಿ ನಡೆದ ಶ್ರೀರಾಮ ಸೇನೆಯ ಪ್ರಾಂತ ಬೈಠಕ್ನಲ್ಲಿ ಬೆಳಗಾವಿಯ ವಿಲಾಸ ಪವಾರ, ಗದಗನ ರವಿ ಸಿದ್ಲಿಂಗ, ಮಂಗಳೂರಿನ ಪ್ರಸಾದ ಅತ್ತಾವರ ಅವರನ್ನು ಜವಾಬ್ದಾರಿಯಿಂದ ವಜಾಗೊಳಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಗೆ: ಶ್ರೀರಾಮ ಸೇನೆಯಿಂದ ವಜಾಗೊಂಡಿರುವ ಮೂವರು ಪ್ರಮುಖರು ಬಿಜೆಪಿಯ ಬಾಗಿಲು ಬಡಿದಿದ್ದಾರೆ. ಜ. 4ರಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಯವರನ್ನು ಹುಬ್ಬಳ್ಳಿಯ ಪ್ರವಾಸಿ ಗೃಹದಲ್ಲಿ ಭೇಟಿ ಮಾಡಿರುವ ರವಿ ಸಿದ್ಲಿಂಗ್ ಹಾಗೂ ವಿಲಾಸ ಪವಾರ ಬಿಜೆಪಿ ಸೇರುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಆದರೆ ಬಿಜೆಪಿ ಸೇರ್ಪಡೆಯ ದಿನಾಂಕ ಮಾತ್ರ ನಿಗದಿಯಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

