ಸಾವಿನ ದಾರಿ ತೋರುವ ಬೈಪಾಸ್
ಧಾರವಾಡ: ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವುದಕ್ಕೆ ದಶಕದ ಹಿಂದೆ ನಿರ್ಮಿಸಿದ್ದ ಹು-ಧಾ ಬೈಪಾಸ್ ರಸ್ತೆ ಇದೀಗ ಸಾವಿನ ದಾರಿ ತೋರುವ ರಸ್ತೆಯಾಗಿದೆ.
ಹುಬ್ಬಳ್ಳಿ ಗಬ್ಬೂರು ಕ್ರಾಸ್ನಿಂದ ಧಾರವಾಡ ಹೊರವಲಯದ ನರೇಂದ್ರ ಕ್ರಾಸ್ವರೆಗೆ ನಿರ್ಮಿಸಿದ ಬೈಪಾಸ್ ರಸ್ತೆಯಲ್ಲಿ ಈಗ ಅಪಘಾತಗಳು ಸಾಮಾನ್ಯ ಎನ್ನಿಸಿಬಿಟ್ಟಿವೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಸಂಪರ್ಕಿಸುವ ಈ ಬೈಪಾಸ್ ರಸ್ತೆ ನಿರ್ಮಾಣಗೊಂಡಂದಿನಿಂದ ನಿರಂತರ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ.
ಅಧಿಕೃತ ಮಾಹಿತಿ ಪ್ರಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 245 ಅಪಘಾತಗಳು ಸಂಭವಿಸಿದ್ದು, 79 ಜನರು ಮೃತಪಟ್ಟು 329 ಜನ ಗಾಯಗೊಂಡಿದ್ದಾರೆ. 13 ವರ್ಷಗಳ ಅವಧಿಯಲ್ಲಿ ಈ ಬೈಪಾಸ್ಗುಂಟ ಸಂಭವಿಸಿದ ಅಪಘಾತಗಳ ಲೆಕ್ಕ ನೋಡಿದರೆ ಇದು ಬೈಪಾಸ್ ಅಲ್ಲ, ಬಲಿ ಪಡೆಯುವ ರಸ್ತೆ ಎನ್ನುವುದು ಮನದಟ್ಟಾಗುತ್ತದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿತ್ಯ ಸಾವಿರಾರು ಲಾರಿ, ಕಾರು, ಜೀಪು, ಟ್ಯಾಂಕರ್ಗಳು ಸಂಚರಿಸುತ್ತವೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ಕೆಲವು ಸಂದರ್ಭಗಳಲ್ಲಿ ವಾಹನಗಳ ವೇಗ ಗಂಟೆಗೆ 100 ಕಿ.ಮೀ. ಇರುತ್ತದೆ.
ದ್ವಿಪಥ ಬೈಪಾಸ್ ರಸ್ತೆ: ಸುವರ್ಣ ಚತುಷ್ಪಥ ರಸ್ತೆ ಯೋಜನೆಯಡಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿದೆ. ಆದರೆ ಈ ಬೈಪಾಸ್ ರಸ್ತೆ ಮಾತ್ರ ಇಂದಿಗೂ ದ್ವಿಪಥವಾಗಿಯೇ ಉಳಿದಿದೆ. ಚತುಷ್ಪಥ ರಸ್ತೆಯಲ್ಲಿ ಬೇಕಾಬಿಟ್ಟಿ ವೇಗದಿಂದ ವಾಹನ ಚಲಾಯಿಸಿದ ಚಾಲಕರು ದ್ವಿಪಥ ರಸ್ತೆಗೆ ಬರುತ್ತಿರುವಂತೆಯೇ ಅದೇ ವೇಗದಲ್ಲಿ ವಾಹನಗಳನ್ನು ಓಡಿಸುತ್ತಾರೆ. ಕಿರಿದಾದ ರಸ್ತೆ ಕಾರಣ ವೇಗವಾಗಿ ಚಲಿಸುವ ವಾಹನ ತಕ್ಷಣ ಚಾಲಕನ ನಿಯಂತ್ರಣಕ್ಕೆ ಬರುವುದು ಸಾಧ್ಯವಿಲ್ಲ. ಹೀಗಾಗಿ ಓವರ್ಟೇಕ್ ಮಾಡುವ ಸಂದರ್ಭದಲ್ಲಿಯೋ ಅಥವಾ ವಾಹನ ಬದಿಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ವಾಹನ ಪಲ್ಟಿಯಾಗುವ ಸಾಧ್ಯತೆ ಇರುತ್ತದೆ.
ಇದು ಅಲ್ಲದೇ ವಾಹನಗಳ ಯಾಂತ್ರಿಕ ಸಮಸ್ಯೆಗಳಿಂದ ಅಪಘಾತಗಳಾಗುತ್ತಿವೆ ಎನ್ನು ವುದು ಸ್ಪಷ್ಟವಾಗಿದೆ. ವಿಶೇಷವಾಗಿ 29.5 ಕಿ.ಮೀ. ಉದ್ದದ ಈ ರಸ್ತೆಯಲ್ಲಿ ಇಟಿಗಟ್ಟಿ, ನರೇಂದ್ರ ಕ್ರಾಸ್ ಬಳಿ ಹೆಚ್ಚು ಅಪಘಾತಗಳಾಗುತ್ತಿವೆ ಎನ್ನುವುದು ಈ ಅಪಘಾತಗಳ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿರುವ ಗ್ರಾಮೀಣ ಠಾಣೆ ಪೋಲೀಸರ ಹೇಳಿಕೆ.
ಅಪಘಾತ ಸರಣಿ: 2000-01ರಲ್ಲಿ ಬೈಪಾಸ್ ರಸ್ತೆ ನಿರ್ಮಾಣಗೊಂಡ ಕೆಲವೇ ದಿನಗಳಲ್ಲಿ ಕೆಲಗೇರಿಯ 14 ವರ್ಷದ ಬಾಲಕ ಮಂಜುನಾಥ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ಅಪಘಾತಕ್ಕೆ ಬಲಿಯಾದ ಪ್ರಥಮ ಬಾಲಕ. ಅಲ್ಲಿಂದ ಶುರುವಾದ ಅಪಘಾತಗಳ ಸರಣಿ ಆರಂಭಗೊಂಡಿದ್ದು, ಬಹುತೇಕ ಅಪಘಾತಗಳು ತಡ ರಾತ್ರಿ ಮತ್ತು ನಸುಕಿನ ವೇಳೆ ಸಂಭವಿಸುತ್ತಿವೆ. 13 ವರ್ಷಗಳ ಅವಧಿಯಲ್ಲಿ ಭಾರಿ ಅಪಘಾತ ಸಂಭವಿಸಿದ್ದು, ಜೂ. 14, 2013ರಂದು. ಮುಂಬೈನಿಂದ ಚೆನ್ನೈಗೆ ಹೊರಟಿದ್ದ ನ್ಯಾಶನಲ್ ಟೂರಿಸ್ಟ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಇಟಿಗಟ್ಟಿಯ ಬಳಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಐವರು ಸ್ಥಳದಲ್ಲಿ ಮೃತಪಟ್ಟು 28 ಜನರು ಗಂಭೀರ ಗಾಯಗೊಂಡಿದ್ದರು. ವಾಹನವೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿದ್ದ ಚಾಲಕ, ಬಸ್ ಮೇಲಿನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಕಾರಣವಾಗಿದ್ದ.
ಏಕೆ ಅಗಲೀಕರಣವಿಲ್ಲ: ಗಬ್ಬೂರ್ ಬೈಪಾಸ್ನಿಂದ ನರೇಂದ್ರ ಕ್ರಾಸ್ವರೆಗಿನ ಬೈಪಾಸ್ ರಸ್ತೆಯನ್ನು ನೈಸ್ ಸಂಸ್ಥೆ ನಿರ್ಮಿಸಿದೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಂಡಿರುವುದರಿಂದ ಬೈಪಾಸ್ನಲ್ಲಿ 25 ವರ್ಷಗಳವರೆಗೆ ರಸ್ತೆ ಶುಲ್ಕ ಪಡೆದುಕೊಳ್ಳುವ ಅಧಿಕಾರ ನೈಸ್ಗೆ ಲಭಿಸಿದೆ. ಆದರೆ ಪುಣೆ-ಬೆಂಗಳೂರುವರೆಗಿನ ರಾಷ್ಟ್ರೀಯ ಹೆದ್ದಾರಿ ಆರುಪಥಗಳನ್ನು ಹೊಂದಿದೆ. ಇಲ್ಲಿ ಮಾತ್ರ ದ್ವಿಪಥ ಇರುವ ಕಾರಣ ಅಪಘಾತ ಪ್ರಮಾಣ ಹೆಚ್ಚಾಗುತ್ತಿದೆ. ನೈಸ್ ಸಂಸ್ಥೆಯ ಸುಪರ್ದಿಯಲ್ಲಿರುವ ಈ ರಸ್ತೆ ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ನೈಸ್ ಸಂಸ್ಥೆ ಜತೆ ಚರ್ಚಿಸಿ ಶೀಘ್ರ ನಿರ್ಣಯ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಬೈಪಾಸ್ ರಸ್ತೆ ವಾಹನ ಚಾಲಕರಿಗೆ, ಪ್ರಯಾಣಿಕರಿಗೆ ಸಾವಿನ ದಾರಿ ತೋರಿಸುವ ಮಾರ್ಗವಾಗುವುದರಲ್ಲಿ ಸಂಶಯ ಇಲ್ಲ.
ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

