ಧಾರವಾಡ

ದರ ಏರಿಕೆ: ಆಟೋ ಚಾಲಕರ ಧರಣಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 10
ಎಲ್‌ಪಿಜಿ ಗ್ಯಾಸ್, ಪೆಟ್ರೋಲ್ ದರ ಏರಿಕೆ ವಿರೋಧಿಸಿ,  ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧಾರವಾಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘದ ನೇತೃತ್ವದಲ್ಲಿ ಆಟೋ ಚಾಲಕರು ಇಲ್ಲಿಯ ಮಹಾನಗರ ಪಾಲಿಕೆ ಮುಖ್ಯ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.
ಕೇಂದ್ರ ಸರ್ಕಾರ 2011ರಿಂದ ಇದುವರೆಗೆ 15ಕ್ಕೂ ಹೆಚ್ಚು ಬಾರಿ ಪೆಟ್ರೋಲ್ ದರ ಏರಿಸಿದೆ. 2013ರಲ್ಲಿ ನಾಲ್ಕು ಬಾರಿ ಆಟೋ ಎಲ್‌ಪಿಜಿ ಗ್ಯಾಸ್ ದರ ಏರಿಸಿದೆ. ಇದರೊಂದಿಗೆ ಡೀಸೆಲ್ ಹಾಗೂ ಸಬ್ಸಿಡಿ ಇಲ್ಲದ ಗ್ಯಾಸ್ ಬೆಲೆಗಳನ್ನೂ ಏರಿಸುತ್ತ ಸಾಗಿದೆ. ಇದರಿಂದ ಆಟೋ ಚಾಲಕರು ಹಾಗೂ ಮಧ್ಯಮ ವರ್ಗದವರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಧರಣಿ ನಿರತರು ಅಸಮಾಧಾನ ವ್ಯಕ್ತಪಡಿಸಿದರು.
ಎಲ್‌ಪಿಜಿ ಆಟೋಗ್ಯಾಸ್, ಪೆಟ್ರೋಲ್ ದರ ತಕ್ಷಣ ಇಳಿಸಬೇಕು. ರಾಜ್ಯ ಸರ್ಕಾರ ಗ್ಯಾಸ್ ಹಾಗೂ ಪೆಟ್ರೋಲ್ ಮೇಲೆ ವಿಧಿಸುತ್ತಿರುವ ತೆರಿಗೆ ಹಿಂದಕ್ಕೆ ಪಡೆಯಬೇಕು. ಆಟೋಗಳ ಪ್ರಯಾಣ ದರ ಕನಿಷ್ಠ 1.6 ಕಿ.ಮೀ.ಗೆ ರು. 30 ನಿಗದಿಪಡಿಸಬೇಕು. ನಗರದ ಪ್ರಮುಖ ರಸ್ತೆಗಳಲ್ಲಿ ರಿಕ್ಷಾಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಒಳಚರಂಡಿ ಕಾಮಗಾರಿಯಿಂದ ಅವಳಿ ನಗರದ ರಸ್ತೆಗಳು ಹಾಳಾಗಿದ್ದು, ತಕ್ಷಣ ದುರಸ್ತಿಗೊಳಿಸಬೇಕು. 500 ಜನ ಆಟೋ ಚಾಲಕರಿಗೆ ವಾಜಪೇಯಿ ಆಶ್ರಯ ಯೋಜನೆಯಡಿ ವಸತಿ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ಸ್ಟೇಶನ್ ರಸ್ತೆಯ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿದ ಆಟೋ ಚಾಲಕರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಯವರಿಗೆ ತಹಸೀಲ್ದಾರ್ ಕಚೇರಿ ಅಧಿಕಾರಿಗಳ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮೂಲಕ ಮನವಿ ಸಲ್ಲಿಸಿದರು.
ಬಿ.ಎ. ಮುಧೋಳ, ದೇವಾನಂದ ಜಗಾಪುರ, ಸುಲೇಮಾನ ಶೇಖ, ಹನುಮಂತಪ್ಪ ಪವಾಡಿ, ಮಹ್ಮದಜಾಫರ ಸೋಲಾಪುರ, ದೂರಪ್ಪ ಗಾಂಡೋಳಿಕರ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.