ಧಾರವಾಡ

ಶಿಕ್ಷಣ ಮಾತೃಭಾಷೆಯಲ್ಲಿರಲಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 13
ದೇಶಿ ಭಾಷೆಗಳು ಉಳಿಯಬೇಕೋ ಅಥವಾ ಇಲ್ಲವೋ ಅಳಿಯಬೇಕೋ ಎನ್ನುವ ಪ್ರಶ್ನೆ ಇದೀಗ ನಿರ್ಧಾರದ ಹಂತ ತಲುಪಿದೆ ಎಂದು ಹಿರಿಯ ಪತ್ರಕರ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾತೃಭಾಷೆಯಲ್ಲಿಯೇ ಶಿಕ್ಷಣ ಒದಗಿಸಲು ಸರ್ಕಾರ ಬದ್ಧವಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಪಾಪು, ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ಜಾಗರೂಕರಾಗಿ, ಮಕ್ಕಳ ಶಿಕ್ಷಣ ಮಾಧ್ಯಮವು ಅವರ ಮಾತೃಭಾಷೆಯಲ್ಲಿ ಇರಬೇಕೆಂದು ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ನಡೆಸಿ ಗೆಲ್ಲಬೇಕು. ಈ ವಾದದಲ್ಲಿ ಸೋತರೆ ಎಲ್ಲ ದೇಶಿಯ ಭಾಷೆಗಳು ಕ್ರಮೇಣವಾಗಿ ನಾಶಗೊಳ್ಳುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಶಿಕ್ಷಣ ಅವರ ಮಾತೃಭಾಷೆಯಲ್ಲಿ ಎನ್ನುವುದು ಸಮಗ್ರ ಲೋಕವೇ ಒಪ್ಪಿರುವ ನೀತಿ. ಹಾಗಿದ್ದರೂ, ಬೆಂಗಳೂರಿನ ಕೆಲವರು ಮಕ್ಕಳ ಶಿಕ್ಷಣ ಮಾಧ್ಯಮವು ಅವರ ತಂದೆ-ತಾಯಿಗಳು ನಿರ್ಧರಿಸುವ ಭಾಷೆಯಲ್ಲಿ ಇರಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಪ್ರಶ್ನೆಗೆ ಸಂಬಂಧಿಸಿದಂತೆ ನಾವು ತಳೆಯಬೇಕಾದ ನಿಲುವನ್ನು ಕುರಿತು ಚರ್ಚಿಸಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಜ. 16ರಂದು ಸಭೆ ಕರೆಯಲಾಗಿದೆ. ಈ ಸಭೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆದಿದ್ದರೆ ಹೆಚ್ಚು ಪರಿಣಾಮಕಾರಿ ಆಗುತ್ತಿತ್ತು ಎಂದು ಪಾಪು ಅಭಿಪ್ರಾಯಿಸಿದ್ದಾರೆ.
21ಕ್ಕೆ ವಿಚಾರಣೆ: ಈ ಪ್ರಶ್ನೆಯನ್ನು ಇತ್ಯರ್ಥಪಡಿಸುವುದಕ್ಕೋಸ್ಕರ ಸರ್ವೋಚ್ಚ ನ್ಯಾಯಾಲಯದಲ್ಲಿ ಜ. 21ರಂದು ವಿಚಾರಣೆ ಆರಂಭವಾಗಲಿದೆ. ಮಕ್ಕಳ ಶಿಕ್ಷಣ ಮಾಧ್ಯಮ ಏನಿರಬೇಕೆನ್ನುವುದು ಕೇವಲ ಕರ್ನಾಟಕಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಭಾರತದ ರಾಜ್ಯಗಳಲ್ಲಿ ಇರುವ ಎಲ್ಲ ದೇಶಿಯ ಭಾಷೆಗಳಿಗೆ ಅನ್ವಯಿಸುತ್ತದೆ. ಆದುದರಿಂದ ಭಾರತದ ಎಲ್ಲ ರಾಜ್ಯಗಳ ಪ್ರಮುಖ ಭಾಷೆಗಳು ಈ ಮಾಧ್ಯಮದ ಪ್ರಶ್ನೆಗಳಿಗೆ ಒಳಪಡುತ್ತದೆ. ಆ ಪ್ರಯುಕ್ತ ಈಗ ಕರ್ನಾಟಕವು ಭಾರತದ ಎಲ್ಲ ಪ್ರಮುಖ ಭಾಷೆಗಳ ಪ್ರತಿನಿಧಿಗಳೊಂದಿಗೆ ಶಿಕ್ಷಣ ಮಾಧ್ಯಮದ ಹೋರಾಟ ಕೈಕೊಳ್ಳಬೇಕು. ಸರ್ವೋಚ್ಚ ನ್ಯಾಯಾಲಯವು ಕರ್ನಾಟಕದ ಕೆಲವರು ಎತ್ತಿದ ಪ್ರಶ್ನೆಯನ್ನು ಎತ್ತಿ ಹಿಡಿದರೆ ಅದು ಭಾರತದ ಎಲ್ಲ ದೇಶಿಯ ಭಾಷೆಗಳಿಗೆ ಮಾರಕವಾಗಿ ಪರಿಣಮಿಸುತ್ತದೆ.
ಆದಕಾರಣ ಈ ಭಾಷಾ ಮಾಧ್ಯಮದ ಹೋರಾಟದಲ್ಲಿ ನಾವು ಗೆಲ್ಲಲೇಬೇಕು. ಗೆದ್ದರೆ ನಮ್ಮ ಭಾಷೆ ಉಳಿಯುತ್ತದೆ. ಮೈ ಮರೆತು ಕುಳಿತರೆ ಅದು ಅಳಿದು ಹೋಗುತ್ತದೆ. ನಮ್ಮ ಭಾಷೆಯ ಮರಣ ಶಾಸನ ನಾವು ಆಮಂತ್ರಿಸಿ ಕರೆದುಕೊಳ್ಳಬಾರದು. ನಮ್ಮ ಸರ್ಕಾರ ಹಾಗೂ ಭಾರತದ ಇನ್ನುಳಿದ ಸರ್ಕಾರಗಳು ಈ ವಿಷಯದ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಭಾಷೆಗಳು ನಮ್ಮ ಕಣ್ಣೆದುರಿನಲ್ಲಿಯೇ ಸತ್ತು ಹೋಗುವ ಸ್ಥಿತಿ ತಂದುಕೊಳ್ಳುತ್ತೇವೆ ಎಂದು ಡಾ. ಪಾಟೀಲ ಪುಟ್ಟಪ್ಪ ಅವರು ಮುಖ್ಯಮಂತ್ರಿಯವರಿಗೆ ಪತ್ರದಲ್ಲಿ  ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.