ಮತದಾರ ಪಟ್ಟಿ: 40 ಸಾವಿರ ಹೊಸ ಅರ್ಜಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 14
ಕರ್ನಾಟಕ ಚುನಾವಣಾ ಆಯೋಗವು 'ಮತದಾರ' ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಲು ನಿಗದಿಪಡಿಸಿದ್ದ ಕಾಲಾವಧಿಯನ್ನು ಜ. 31ಕ್ಕೆ ವಿಸ್ತರಿಸಿದ್ದು, 2014ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂಬ ಉಮೇದಿನಲ್ಲಿರುವ ಯುವ ಸಮುದಾಯದಲ್ಲಿ ಸಂತಸ ಮೂಡಿಸಿದೆ.
ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಈ ಬಾರಿ ರಾಷ್ಟ್ರದ ರಾಜಕಾರಣದ ದಿಕ್ಕನ್ನೇ ಬದಲಾಯಿಸಲಿದೆ ಎಂಬ ಚರ್ಚೆ ಸಾರ್ವಜನಿಕರಲ್ಲಿ ಚುನಾವಣೆ ಹಾಗೂ ಮತದಾನದ ಬಗ್ಗೆ ಕುತೂಹಲ ಮೂಡಿಸಿದೆ.
ಚುನಾವಣೆಗಳಲ್ಲಿ ಆಯಾ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಏನೆಲ್ಲ ಕಸರತ್ತು ನಡೆಸುವುದು ಸಾಮಾನ್ಯ ಸಂಗತಿ. ಆದರೆ, ಈ ಬಾರಿ ಯಾವುದೇ ಪಕ್ಷಗಳೊಂದಿಗೆ ಗುರುತಿಸಿಕೊಳ್ಳದೇ ಇರುವ ಸಂಘ-ಸಂಸ್ಥೆಗಳು ಹೊಸ ಮತದಾರರನ್ನು ಗುರುತಿಸಿ ಅವರ ಹೆಸರನ್ನು 'ಮತದಾರ' ಯಾದಿಯಲ್ಲಿ ಸೇರಿಸಲು ಮುಂದಾಗಿದ್ದು ಸಹಜವಾಗಿಯೇ ಚುನಾವಣೆ ಬಗ್ಗೆ ಮತ್ತಷ್ಟು ಕುತೂಹಲ ಸೃಷ್ಟಿಯಾಗಿದೆ.
ಜನವರಿ 31ಕ್ಕೆ: ಕರ್ನಾಟಕ ಚುನಾವಣಾ ಆಯೋಗ ಜ. 6ರವರೆಗೆ ಹೊಸಬರಿಗೆ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಆದರೆ, ಹೊಸದಾಗಿ ಮತದಾರ ಪಟ್ಟಿಯಲ್ಲಿ ಸೇರ್ಪಡೆಯಾಗುವವರ ಸಂಖ್ಯೆ ಧಾರವಾಡ ಜಿಲ್ಲೆಯಲ್ಲಿ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತ ಸಾಗಿದ್ದರ ಹಿನ್ನೆಲೆಯಲ್ಲಿ ಮತದಾರರ ಅನುಕೂಲಕ್ಕಾಗಿ ಇದನ್ನು ಜ. 31ರವರೆಗೆ ವಿಸ್ತರಿಸಿ ಆದೇಶಿಸಿದೆ.
ಈ ವರೆಗೂ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿದ ಪಾಲಿಕೆ ಚುನಾವಣಾ ಇಲಾಖೆ, ಅವುಗಳ ಅನುಮೋದನೆಗಾಗಿ ಈಗಾಗಲೇ ಕರ್ನಾಟಕ ಚುನಾವಣಾ ಆಯೋಗಕ್ಕೆ ರವಾನಿಸಿದೆ. ಬಾಕಿ ಉಳಿದಿರುವ ಇನ್ನೂ 15 ದಿನಗಳಲ್ಲಿ ಅಂದಾಜು 20 ಸಾವಿರ ಅರ್ಜಿಗಳು ಸಲ್ಲಿಕೆಯಾಗಬಹುದೆಂದು ಅಂದಾಜಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಫೆಬ್ರುವರಿಯಲ್ಲಿ: ಮತದಾರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಹೊಸದಾಗಿ ಅರ್ಜಿ ಸಲ್ಲಿಸಿರುವ ಮತದಾರರ ಅರ್ಜಿಗಳಿಗೆ ಆಯೋಗ, ಅನುಮೋದನೆ ನೀಡಿದ್ದಲ್ಲಿ ಅಂತಹ ಮತದಾರರಿಗೆ ಫೆಬ್ರುವರಿ 1ನೇ ಅಥವಾ 2ನೇ ವಾರದಲ್ಲಿ ಗುರುತಿನ ಕಾರ್ಡ್ ವಿತರಿಸುವುದಕ್ಕೆ ಪಾಲಿಕೆ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.
ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ಸಲ್ಲಿಕೆಯಾಗಿರುವ ಅರ್ಜಿಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಗಳ ಬಗ್ಗೆ ಜ. 31ರಂದು ಜಾಹೀರಾತಿನ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದು, ನಂತರ ಹೊಸ ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಸರಾಸರಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ತಿಂಗಳು ಕಾಲ ನಡೆದ ಈ ಅಭಿಯಾನದಲ್ಲಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ, ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭೆ ಕ್ಷೇತ್ರ ಹಾಗೂ ಧಾರವಾಡ ವಿಧಾನಸಭೆ ಕ್ಷೇತ್ರಗಳಲ್ಲಿ ಸರಾಸರಿ 8-10 ಸಾವಿರ ಜನರು ಹೊಸದಾಗಿ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.
ಈ ನಾಲ್ಕು ಕ್ಷೇತ್ರಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಜನರು ಹೊಸದಾಗಿ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಶೇಕಡಾವಾರು ಮತದಾನದ ಮೇಲೆಯೂ ಇದು ಸಾಕಷ್ಟು ಪ್ರಭಾವ ಬೀರಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಅಲ್ಲದೆ, ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಬೆರಳೆಣಿಕೆಯಷ್ಟು ಅರ್ಜಿಗಳು ಮಾತ್ರ ಅನುರ್ಜಿತಗೊಂಡಿವೆ ಎನ್ನಲಾಗಿದೆ. ಬಹುತೇಕ ಅರ್ಜಿಗಳು ಸೂಕ್ತ ದಾಖಲಾತಿಗಳನ್ನು ಹೊಂದಿರುವ ಕಾರಣ, ಪರಿಶೀಲನಾ ಅಧಿಕಾರಿಗಳಿಗೂ ಆಯಾ ವ್ಯಕ್ತಿಗಳನ್ನು ಗುರುತಿಸಲು ಯಾವುದೇ ರೀತಿಯ ಗೊಂದಲ ಉಂಟಾಗಿಲ್ಲ ಎಂದು ಪಾಲಿಕೆಯ ಚುನಾವಣಾ ಇಲಾಖೆ ಕಚೇರಿ ಮೂಲಗಳು ತಿಳಿಸಿವೆ.
ಮಾಹಿತಿ: ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ತಿರಸ್ಕೃತಗೊಂಡ ಅರ್ಜಿಗಳ ಬಗ್ಗೆ ಸಂಬಂಧಿತ ವ್ಯಕ್ತಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಇಂತಹ ಜನರು ಸಹ ಜ. 31ರವರೆಗೆ ಸೂಕ್ತ ದಾಖಲಾತಿಗಳೊಂದಿಗೆ ಪುನಃ ಅರ್ಜಿ ಸಲ್ಲಿಸಬಹುದಾಗಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಯುವ ಸಮುದಾಯವನ್ನು ತಮ್ಮತ್ತ ಸೆಳೆದುಕೊಳ್ಳಲು ರಾಷ್ಟ್ರೀಯ ಪಕ್ಷಗಳಿಂದ ಹಿಡಿದು ಪ್ರಾದೇಶಿಕ ಪಕ್ಷಗಳು ಸಾಕಷ್ಟು ತಂತ್ರಗಾರಿಕೆ ರೂಪಿಸುತ್ತಿವೆ.
ರಾಜಕೀಯ ಪಕ್ಷಗಳ ನಡೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುವ ಯುವ ಮತದಾರರು, ಲೋಕಸಭೆ ಚುನಾವಣೆ ನಂತರ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ತರಲು ಕಟಿಬದ್ಧರಾಗಿದ್ದಾರೆ.
ಯುವ ಶಕ್ತಿಯಿಂದ ಏನ್ನೆಲ್ಲ ಬದಲಾವಣೆ ತರಲು ಸಾಧ್ಯ ಎಂದು ಸಾರಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವಾಣಿಯ ಪ್ರಭಾವ ಈ ಬಾರಿ ಚುನಾವಣೆಯಲ್ಲಿ ವೀಕ್ಷಿಸಬಹುದೆಂಬಂತ ವಾತಾವರಣ ಸೃಷ್ಟಿಯಾಗತೊಡಗಿದೆ.
ಏನೇ, ಇರಲಿ ಚುನಾವಣೆ ಹಾಗೂ ಮತದಾನದ ಬಗ್ಗೆ ಶ್ರೀಸಾಮಾನ್ಯರಲ್ಲಿಯೂ ಜಾಗೃತಿ ಮಾಡಿದ್ದು ಉತ್ತಮ ರಾಜಕೀಯ ಭವಿಷ್ಯ ನಿರ್ಮಾಣಕ್ಕೆ ವೇದಿಕೆಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

