ಸಂಶೋಧನೆ ಪದವಿಗೆ ಸೀಮಿತ
ಧಾರವಾಡ: ವಿಶಾಲ ತಳಹದಿ ಬಯಸುವ ಸಂಶೋಧನೆ ಸದ್ಯ ಪದವಿ, ಪ್ರಸಿದ್ಧಿ ಹಾಗೂ ಪ್ರಶಸ್ತಿಗೆ ಸೀಮಿತವಾಗಿದೆ ಎಂದು ಸಂಶೋಧಕ ಎಂ.ಎಂ. ಕಲಬುರ್ಗಿ ವಿಷಾದಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಶನಿವಾರ ನಡೆದ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿನ ಸಂಶೋಧನೆ ಇತ್ತೀಚಿನ ಪ್ರವೃತ್ತಿಗಳು ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಧ್ಯಯನ ಬೇಕಿಲ್ಲ. ಕೇವಲ ಪಿಎಚ್.ಡಿ. ಪಡೆಯುವುದಕ್ಕೆ ಒಂದು ವಿಷಯ ಆಯ್ದುಕೊಂಡು ಈ ಹಿಂದೆ ಯಾರೋ ಪ್ರಬಂಧದಲ್ಲಿ ಮಂಡಿಸಿದ ಸಾಮಗ್ರಿಗಳನ್ನು ಪಡೆದು ಪದವಿ, ಪ್ರಶಸ್ತಿ ಪಡೆದುಕೊಂಡು ಹೋಗುತ್ತಿದ್ದಾರೆ. ವಿನೂತನ ಮಾಹಿತಿ ಕಲೆ ಹಾಕುವುದು, ಹೆಚ್ಚಿನ ಅಧ್ಯಯನ, ವೈವಿಧ್ಯಮಯ ಇಂದಿನ ವಿದ್ಯಾರ್ಥಿಗಳಿಗೆ ಬೇಕಿಲ್ಲ. ಅವರಿಗೆ ಬೇಕಿರುವುದು ಕೇವಲ ಪದವಿ. ಹಾಗಾಗಿ, ಇಂದಿನ ಯುವಕರಲ್ಲಿ ಸಂಶೋಧನಾ ಆಸಕ್ತಿ ಕಡಿಮೆಯಾಗಿದೆ. ಆದರೆ, ನಿಜವಾದ ಸಂಶೋಧಕನಿಗೆ ಚಿಂತನೆ, ಸಾಹಿತ್ಯ ಅಧ್ಯಯನ, ಸಂಶೋಧನಾಸಕ್ತಿ, ಸಂಶೋಧನಾ ವಿಧಾನ, ಹೊಸ ಸಂಗತಿ, ಆಯಾಮ, ಮಗ್ಗಲುಗಳ ಮೇಲೆ ಬೆಳಕು ಚೆಲ್ಲುವ ಹವಣಿಕೆಯಲ್ಲಿರಬೇಕು. ಆದರೆ, ಇಂದಿನ ಅನೇಕ ಸಂಶೋಧಕರು ಪಿಎಚ್ಡಿ ಪದವಿ, ಹಣಕ್ಕಾಗಿ ಸಂಶೋಧನೆ ಕೈಗೊಳ್ಳುತ್ತಿದ್ದು, ಹೊಸ ವೈಚಾರಿಕತೆ ಮರೆಯಾಗುತ್ತಿದೆ ಎಂದರು. ಸಂಶೋಧಕ ಎಸ್. ಶೆಟ್ಟರ್, ಪಂಪನ ಕಾವ್ಯದಲ್ಲಿ ಸಾಂಸ್ಕೃತಿಕ ಆಯಾಮಗಳಿವೆ. ಪಂಪನ ಪ್ರಕಾರ ಸತಿಪದ್ಧತಿ ರಾಜ್ಯದಲ್ಲಿ ಎಲ್ಲರನ್ನು ಕಾಡುತ್ತಿತ್ತು. ಆದರೆ, ಬ್ರಾಹ್ಮಣರು ಮಾತ್ರ ಈ ಪದ್ಧತಿಯನ್ನು ಅನುಸರಿಸುತ್ತಿರಲಿಲ್ಲ. ಯುದ್ಧ ಮಾಡುವ ನಾಯಕ ಜನಾಂಗ ಈ ಪದ್ಧತಿ ಅನುಸರಿಸುತ್ತಿತ್ತು ಎಂಬ ಗಂಭೀರ ಅಂಶ ಸಂಶೋಧನೆ ಮೂಲಕ ತಿಳಿದು ಬಂದಿದೆ. ಈ ಹಿಂದೆ ಯುದ್ಧಕ್ಕೆ ಹೋಗಲು ಯಾವುದೇ ವೈಷಮ್ಯ ಇರಲಿಲ್ಲ. ಸಂಪತ್ತು ಕೊಳ್ಳೆ ಹೊಡೆಯಲು ಮತ್ತು ದಿಗ್ವಿಜಯ ಸಾಧಿಸಲು ಯುದ್ಧಗಳು ನಡೆಯುತ್ತಿದ್ದವು ಎಂದು ವಿಷದೀಕರಿಸಿದರು. ಜೈನ, ಬೌದ್ಧ ಸ್ತ್ರೀಯರಿಗೆ ವಿಶೇಷ ಸ್ಥಾನಮಾನ ನೀಡಿರುವ ಬಗ್ಗೆ ಕೆಲ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ ವೈದಿಕ ಧರ್ಮದ ಮಹಿಳೆಯರಿಗೆ ಯಾವುದೇ ಸ್ಥಾನಮಾನ ದೊರೆತಿಲ್ಲ. ರಾಜರುಗಳ ಕಾಲದಲ್ಲಿ ನಡೆಯತಕ್ಕಂತಹ ಪ್ರಮುಖ ಘಟನೆಗಳನ್ನು ವಿಶ್ವಕರ್ಮಿಗಳು ಸಂಸ್ಕೃತ ಭಾಷೆಯಲ್ಲಿ ದಾಖಲಿಸುತ್ತಿದ್ದರು. ಹಾಗಾಗಿ, ವಿಶ್ವಕರ್ಮಿಗಳ ಮಹಿಳೆ ಹಾಗೂ ಅವರ ಕಾರ್ಯವೈಖರಿಗಳ ಬಗ್ಗೆ ಶಾಸನಗಳಲ್ಲಿ ಹೆಚ್ಚು ಉಲ್ಲೇಖಗಳಾಗಿವೆ. ಅಲ್ಲದೆ, ಬ್ರಾಹ್ಮಣರು, ವೈದಿಕರು ಘಟನೆಗಳನ್ನು ದಾಖಲಿಸಿಲ್ಲ ಎಂದು ಸ್ಪಷ್ಟಗೊಳ್ಳುತ್ತದೆ ಎಂದರು. ಅನಾದಿಕಾಲದಲ್ಲೂ ಮಹಿಳೆಯರು ಅನಾದಾರ ಮತ್ತು ಅಲಕ್ಷ್ಯಕ್ಕೆ ಒಳಗಾಗಿದ್ದರು. ಇಂದಿಗೂ ಅದೇ ಪರಿಸ್ಥಿತಿ ಇದೆ. ಸಂಶೋಧನೆಯಲ್ಲಿ ದೊರೆತ ಶಾಸನಗಳಲ್ಲಿ ಸ್ತ್ರೀ ಪತ್ನಿ , ಸಹೋದರಿ ಪಾತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಇದರಿಂದ ಆ ಕಾಲ ಕೂಡ ಪುರುಷ ಪ್ರಧಾನ ಕಾಲ ಎಂದು ಪರಿಗಣಿಸಲಾಗುತ್ತದೆ. ಇಂತಹ ಅನೇಕ ವಿಚಾರಧಾರೆಗಳನ್ನು ಸ್ಪಷ್ಟಪಡಿಸುವ ಸಂಶೋಧನೆ ಇಂದು ಅರ್ಥಹೀನವಾಗುತ್ತಿದೆ. ಇಂದಿನ ಸಂಶೋಧಕರು ಆಳ ಅಧ್ಯಯನ ಕೈಗೊಂಡು ಹೊಸತನ್ನು ತೋರಿಸುವ ಅವಶ್ಯಕತೆ ಇದೆ ಎಂದು ಸಂಶೋಧಕ ಹನುಮಾಕ್ಷಿ ಗೋಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಎನ್.ಎಸ್. ತಾರಾನಾಥ ಗೋಷ್ಠಿಯ ನಿರ್ದೇಶಕರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

