ಯೋಗ್ಯರಿಗೆ ಪ್ರಶಸ್ತಿ ಸಂದಾಯ
ವಿಶ್ವಾಮಿತ್ರ ಹೆಗಡೆ
ಕನ್ನಡಪ್ರಭ ವಾರ್ತೆ, ಶಿರಸಿ, ಜ. 18
ಮಯೂರವರ್ಮ ವೇದಿಕೆ ಬನವಾಸಿ
ಕನ್ನಡದ ಪ್ರಥಮ ರಾಜಧಾನಿ ಎಂಬ ಹೆಗ್ಗಳಿಕೆಯ ಬನವಾಸಿಯಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧ್ಯುಕ್ತವಾಗಿ ಕದಂಬೋತ್ಸವ ಉದ್ಘಾಟಿಸಿದರು. ಈ ಸಂದರ್ಭದಲ್ಲಿ 23ನೇ ಪಂಪ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತು.
ಪಂಪ ಪ್ರಶಸ್ತಿ ಪುರಸ್ಕೃತ ಡಾ. ಡಿ.ಎನ್. ಶಂಕರಭಟ್ಟ ಅವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಪ ಪ್ರಶಸ್ತಿಯನ್ನು ಶಂಕರ ಭಟ್ಟ ಅವರ ಮನೆಗೆ ಭಾನುವಾರದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀಯವರು ತಲುಪಿಸಲಿದ್ದಾರೆ. ಈಗ ಪ್ರದಾನ ಮಾಡುತ್ತಿರುವ ಪಂಪ ಪ್ರಶಸ್ತಿ 2012ರದ್ದಾಗಿದೆ. ಶಂಕರ ಭಟ್ಟ ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದವರಾಗಿದ್ದು ಯೋಗ್ಯರಿಗೆ ಪ್ರಶಸ್ತಿ ಸಂದಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಭಾಷಿಗರು ನಿರಭಿಮಾನಿಗಳೂ ಆಗಬಾರದು, ದುರಭಿಮಾನಿಗಳೂ ಆಗಬಾರದು. ಅಗತ್ಯ ಇರುವಷ್ಟು ಅಭಿಮಾನ ಇಟ್ಟುಕೊಂಡರೆ ಕನ್ನಡ ಭಾಷೆ ಬೆಳವಣಿಗೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಗಟ್ಟಿಯಾದ ಭಾಷೆ. ಈ ಕಾರಣಕ್ಕಾಗಿಯೇ ಕನ್ನಡ ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿದೆ ಎಂದರು.
ಉತ್ಸವದ ಅಗತ್ಯತೆ ಪ್ರಸ್ತಾಪ: ಪ್ರೌಢಶಿಕ್ಷಣದವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣಾಭ್ಯಾಸ ನಡೆಯಬೇಕು. ಯಾವುದೇ ಭಾಷೆಯನ್ನಾದರೂ ಜ್ಞಾನಕ್ಕಾಗಿ ಕಲಿಯಬಹುದು. ಆದರೆ ಶಿಕ್ಷಣ ಮಾಧ್ಯಮ ಕನ್ನಡವೇ ಆಗಬೇಕು. ಕನ್ನಡದಲ್ಲೇ ಆಡಳಿತ ನಡೆಯಬೇಕು. ಹಾಗಾಗಿ ಆಡಳಿತ ಭಾಷೆಯೂ ಕನ್ನಡ ಆದಾಗ ಕನ್ನಡ ಸಾರ್ವಭೌಮ ಭಾಷೆಯಾಗುತ್ತದೆ. ಕದಂಬೋತ್ಸವ ಅಥವಾ ಸರ್ಕಾರ ಆಚರಿಸುವ ಇನ್ನಿತರ ಐತಿಹಾಸಿಕ ಉತ್ಸವಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳೆಯಲು ಪೂರಕವಾಗಿದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಉತ್ಸವಗಳ ಕೊಡುಗೆ ಗಮನಾರ್ಹವಾದದ್ದು. ಇತಿಹಾಸದ ಪುಟಗಳನ್ನು ತಿರುವಿದಾಗ ನಮ್ಮ ರಾಜ ಮಹಾರಾಜರು ಕನ್ನಡದ ಶ್ರೀಮಂತಿಕೆಯನ್ನು ಸಾರಿ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಬನವಾಸಿ ಕನ್ನಡದ ಪ್ರಥಮ ರಾಜಧಾನಿ ಎನ್ನಿಸಿಕೊಂಡಿದೆ ಎಂದು ಹೇಳಿದರು. ಇತಿಹಾಸ ನೆನಪು ಮಾಡಿಕೊಡುವ ದೃಷ್ಟಿಯಿಂದ ಮತ್ತು ಮುಂದಿನ ತಲೆಮಾರು ಇತಿಹಾಸವನ್ನು ಮೆಲುಕು ಹಾಕುವ ಅಗತ್ಯದಿಂದಾಗಿ ಕದಂಬೋತ್ಸವವೂ ಸೇರಿದಂತೆ ನಾಡಿನಲ್ಲಿ ಆಚರಿಸಲ್ಪಡುವ ಹಲವಾರು ಉತ್ಸವಗಳು ಮಹತ್ವ ಪಡೆದುಕೊಂಡಿದೆ. ಇತಿಹಾಸವನ್ನು ಪರಿಚಯಿಸುವ ಹಾಗೂ ಐತಿಹ್ಯ ಸಾರಿ ಹೇಳುವ ಪ್ರಮುಖ ಪ್ರದೇಶಗಳಲ್ಲಿ ಉತ್ಸವವನ್ನು ಆಚರಿಸಲಾಗುತ್ತಿದೆ. ಇತಿಹಾಸ, ಸಾಹಿತ್ಯ, ಸಂಸ್ಕೃತಿ ಅರಿವು ಉತ್ಸವಗಳಿಂದ ಆಗಬೇಕಾಗಿದೆ. ಜನರು ಇತಿಹಾಸವನ್ನು ಮರೆಯಬಾರದು. ಇತಿಹಾಸ ಗೊತ್ತಿಲ್ಲದವರು ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಇತಿಹಾಸ ಮತ್ತು ಬದುಕು ಗೊತ್ತಿದ್ದವರು ಮಾತ್ರ ನಾಡಿನ ಭವಿಷ್ಯ ರೂಪಿಬಲ್ಲರು ಎಂದು ಸಿದ್ದರಾಮಯ್ಯ ಉತ್ಸವದ ಅಗತ್ಯತೆಯನ್ನು ಪ್ರತಿಪಾದಿಸಿದರು.
ಹಿಂದಿನ ಸರ್ಕಾರ ಬರಗಾಲದ ನೆಪ ಹೇಳಿ ಉತ್ಸವವನ್ನು ನಿಲ್ಲಿಸಿತ್ತು. ಇದು ಕೇವಲ ಅಂದಿನ ಸರ್ಕಾರದ ಪಲಾಯನವಾದ. ಆಗ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಮನಸ್ಸು ಮಾಡಿದ್ದರೆ ಉತ್ಸವವನ್ನು ಮಾಡಬಹುದಿತ್ತು. ಅವರಿಗೆ ಅಂದು ನೆನಪಾಗದ ಉತ್ಸವ ಇಂದು ನೆನಪಾಗಿದೆ. ಪ್ರಸ್ತುತ 98 ತಾಲೂಕಿನಲ್ಲಿ ಬರಗಾಲವಿದೆ. ಆದರೂ ಸರ್ಕಾರ ಉತ್ಸವಗಳನ್ನು ಆಯೋಜಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿಯವರು ಕೇವಲ ರಾಜಕಾರಣ ಮಾಡುವುದರಲ್ಲಿ ನಿರತರಾಗುತ್ತಾರೆಯೇ ಹೊರತು ಉತ್ಸವ, ಸಂಸ್ಕೃತಿ, ಕಲೆ, ಸಾಹಿತ್ಯದ ಕುರಿತು ನಿಷ್ಕ್ರೀಯರಾಗಿದ್ದಾರೆ. ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಲೇ ಇಂಥ ಸಂದರ್ಭಗಳಲ್ಲೂ ಒಳಗಿಂದೊಳಗೆ ರಾಜಕಾರಣ ಮಾಡುತ್ತಾರೆ ಎಂದು ತಿವಿದ ಸಿದ್ದರಾಮಯ್ಯ, ಅಡಕೆ ನಿಷೇಧ ವಿಚಾರದಲ್ಲೂ ಬಿಜೆಪಿಯವರು ಅನಾವಶ್ಯಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದನ್ನೇ ಮುಂದು ಮಾಡಿಕೊಂಡಿರುವ ಬಿಜೆಪಿಗರು ಅಡಕೆ ನಿಷೇಧದ ಗುಮ್ಮವನ್ನು ಹರಿಬಿಟ್ಟಿದ್ದಾರೆ. ಕೇಂದ್ರ ಸರ್ಕಾರವೂ ಅಡಕೆ ನಿಷೇಧ ಮಾಡುವುದಿಲ್ಲ ಎಂದು ಹೇಳಿದೆ. ರಾಜ್ಯ ಸರ್ಕಾರದ ಮುಂದೆ ಅಂಥ ಯಾವುದೇ ಪ್ರಸ್ತಾವನೆ ಇಲ್ಲ. ಇನ್ನೊಮ್ಮೆ ಘಂಟಾಗೋಷವಾಗಿ ಹೇಳುತ್ತೇನೆ. ಅಡಕೆಯನ್ನು ನಿಷೇಧ ಮಾಡಲು ಬಿಡುವುದಿಲ್ಲ. ಬಿಜೆಪಿಯವರು ಇನ್ನಾದರೂ ಇಂಥ ಗೊಂದಲದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.
ದೇವಾಲಯ ನವೀಕರಣ
ಪಂಪ ಬನವಾಸಿ ಕುರಿತು ಮರುಜನ್ಮ ಅಂತಿದ್ದರೆ ಬನವಾಸಿಯಲ್ಲೇ ಜನಿಸುತ್ತೇನೆ ಎಂದು ಹೇಳಿರುವುದು ಬನವಾಸಿಯ ಮಹತ್ವವನ್ನು ತಿಳಿಸುತ್ತದೆ. ಪಲ್ಲವರನ್ನು ಮಣಿಸಿದ ಕದಂಬರು ಕನ್ನಡ ರಾಜ್ಯ ಸ್ಥಾಪನೆ ಮಾಡಿದರು. ಬನವಾಸಿಯಲ್ಲೂ ಶಿಲ್ಪಕಲೆಗಳು ಸಮೃದ್ಧವಾಗಿದೆ. ಇವೆಲ್ಲವುಗಳನ್ನೂ ಉಳಿಸುವ ಕೆಲಸ ಸರ್ಕಾರದ್ದಾಗಿದೆ. ಬನವಾಸಿಯ ಮಧುಕೇಶ್ವರ ದೇವಾಲಯವನ್ನು ನವೀಕರಣಗೊಳಿಸುವ ಕುರಿತಂತೆಯೂ ಸರ್ಕಾರ ಕ್ರಮ ಕೈಗೊಳ್ಳಲಿದೆ. ಬನವಾಸಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಬನವಾಸಿಯನ್ನು ಇನ್ನಷ್ಟು ಸಮೃದ್ಧಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

