ಪಲ್ಸ್ ಪೋಲಿಯೋ: 2ನೇ ಸ್ಥಾನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 22
ವಿಶ್ವ ಆರೋಗ್ಯ ಸಂಸ್ಥೆಯಿಂದ ಪೋಲಿಯೋ ಮುಕ್ತ ಭಾರತವೆಂಬ ಮನ್ನಣೆ ಪಡೆದ ನಂತರ ನಡೆದ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಧಾರವಾಡ ಜಿಲ್ಲೆ ಪ್ರತಿಶತ 100.02ರಷ್ಟು ಸಾಧನೆ ಮಾಡುವ ಮೂಲಕ ದಾಖಲೆ ಸೃಷ್ಟಿಸಿದೆ.
ಆ ಮೂಲಕ ಕಳೆದ ಬಾರಿಯ ಶೇ. 100.01ರ ತನ್ನ ದಾಖಲೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿಂದಿಕ್ಕಿದೆ. ಕಳೆದ ಜ. 19ರಿಂದ ಗ್ರಾಮೀಣ ಭಾಗದಲ್ಲಿ ಮೂರು ದಿನ ಹಾಗೂ ನಗರ ಪ್ರದೇಶದಲ್ಲಿ ನಾಲ್ಕು ದಿನದವರೆಗೆ ನಡೆದ ಪಲ್ಸ್ ಪೊಲೀಯೋ ಅಭಿಯಾನ ಧಾರವಾಡ ಜಿಲ್ಲೆಯಲ್ಲಿ ತನ್ನ ಗುರಿ ಸಾಧಿಸಿದೆ. ಅಭಿಯಾನದ ಮೊದಲ ದಿನವೇ ಶೇ. 93ರಷ್ಟು ಗುರಿ ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಧಾರವಾಡ ಜಿಲ್ಲೆ ಎರಡನೇ ಸ್ಥಾನ ಪಡೆಯಿತು. ಶೇ. 95ರಷ್ಟು ಗುರಿ ಸಾಧಿಸಿದ್ದ ಮೈಸೂರು ಜಿಲ್ಲೆ ಪ್ರಥಮ ಸ್ಥಾನಕ್ಕೇರಿತು.
ಕಳೆದ ಐದಾರು ವರ್ಷಗಳಿಂದ 6 ಮತ್ತು 10ನೇ ಸ್ಥಾನಗಳ ಮಧ್ಯೆ ಇದ್ದ ಧಾರವಾಡ ಜಿಲ್ಲೆ, ಈ ಬಾರಿ ಅಭಿಯಾನದ ಮೊದಲ ದಿನವೇ 2ನೇ ಸ್ಥಾನಕ್ಕೇರಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ನಡೆದ ಪೋಲಿಯೋ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯ 2,41,381 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, 2,41,441 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಅಭಿಯಾನದ ಮೊದಲ ದಿನವೇ ಜಿಲ್ಲೆಯ 2,22,871 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಮೂರು ದಿನಗಳವರೆಗೆ ಅಭಿಯಾನ ನಡೆದ ಧಾರವಾಡ ತಾಲೂಕಿನ 32,251 ಮಕ್ಕಳಿಗೆ (ಶೇ. 100.64), ಹುಬ್ಬಳ್ಳಿ ತಾಲೂಕಿನ 17,214 ಮಕ್ಕಳಿಗೆ (ಶೇ. 96.62), ಕಲಘಟಗಿ ತಾಲೂಕಿನ 18,932 ಮಕ್ಕಳಿಗೆ (ಶೇ. 99.05), ಕುಂದಗೋಳ ತಾಲೂಕಿನ 19,673 ಮಕ್ಕಳಿಗೆ (ಶೇ. 100.35), ನವಲಗುಂದ ತಾಲೂಕಿನ 26,984 ಮಕ್ಕಳಿಗೆ (ಶೇ. 100.65), ನಾಲ್ಕು ದಿನಗಳ ಅಭಿಯಾನ ನಡೆದ ಧಾರವಾಡ ನಗರದ 37,650 ಮಕ್ಕಳಿಗೆ (ಶೇ. 100.35), ಹುಬ್ಬಳ್ಳಿ ನಗರದ 88,737 ಮಕ್ಕಳಿಗೆ (ಶೇ. 100.29) ಲಸಿಕೆ ಹಾಕಲಾಗಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು, ಸರ್ಕಾರೇತರ ಸಂಘ-ಸಂಸ್ಥೆಗಳ ಕಾರ್ಯಕರ್ತರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಸೇರಿದಂತೆ ಸುಮಾರು 4 ಸಾವಿರ ಸಿಬ್ಬಂದಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಮೂಲಗಳ ಪ್ರಕಾರ 1999ರಲ್ಲಿ ನವಲಗುಂದ ತಾಲೂಕಿನಲ್ಲಿ ಪೋಲಿಯೋ ಪ್ರಕರಣವೊಂದು ಕಂಡುಬಂದ ನಂತರ ಬೇರೆ ಯಾವುದೇ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿಲ್ಲ. ಫೆ. 23ಕ್ಕೆ ಅಭಿಯಾನದ ಅಂತಿಮ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಮೊದಲ ದಿನ ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ದೇವಸ್ಥಾನಗಳಲ್ಲಿ ಲಸಿಕೆ ಹಾಕಿದ ಕಾರ್ಯಕರ್ತರು ನಂತರದ ದಿನಗಳಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕಿದರು.
ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

