ಧಾರವಾಡ: ನಾಳೆ ಜಾನಪದ ಹಬ್ಬ
ಧಾರವಾಡ: ವಾರ್ತಾ ಪ್ರಚಾರ ಇಲಾಖೆಯಿಂದ ಜ. 29ರಂದು ಧಾರವಾಡ ನಗರದಲ್ಲಿ ಬೆಳಗಾವಿ ವಿಭಾಗ ಮಟ್ಟದ ಬುಡಕಟ್ಟು ಕಲಾವಿದರ ಜಾನಪದ ಹಬ್ಬ ನಡೆಯಲಿದೆ ಎಂದು ಇಲಾಖೆಯ ಉಪನಿರ್ದೇಶಕ ಬಸವರಾಜ ಕಂಬಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ವಿಭಾಗದ ಬುಡಕಟ್ಟು ಕಲಾವಿದರ ಜಾನಪದ ಹಬ್ಬ ಧಾರವಾಡ ರಂಗಾಯಣದ ಬಸವರಾಜ ರಾಜಗುರು ರಂಗಾಯಣದಲ್ಲಿ ಜ. 29ರಂದು ಸಂಜೆ 6ಕ್ಕೆ ನಡೆಯಲಿದೆ.
ಬೆಳಗಾವಿ ವಿಭಾಗದ ವ್ಯಾಪ್ತಿಯ ವಿವಿಧ ಜಿಲ್ಲೆಗಳ ಆರು ಬುಡಕಟ್ಟು ಕಲಾವಿದರ ತಂಡಗಳ 35 ಕಲಾವಿದರನ್ನು ಜಾನಪದ ಹಬ್ಬ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ. ತಮ್ಮ ಸಮುದಾಯ ಹಾಗೂ ಪ್ರದೇಶಗಳಿಗೆ ಸೀಮಿತವಾಗಿರುವ ಈ ಬುಡಕಟ್ಟು ಜನರ ಜಾನಪದ ಕಲೆ ಇದೀಗ ಎಲ್ಲರಿಗೂ ಲಭಿಸಲಿ ಎನ್ನುವ ಉದ್ದೇಶದಿಂದ ಇಲಾಖೆ ಜಾನಪದ ಹಬ್ಬ ಆಯೋಜಿಸಿದೆ. ಕಳೆದ ವರ್ಷದಿಂದ ಜಾನಪದ ಕಲೆ ಹಬ್ಬವನ್ನು ರಾಜ್ಯದ ಎಲ್ಲ ವಿಭಾಗಗಳಲ್ಲಿ ಆಯೋಜಿಸುವಂತೆ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿಸಿದರು.
ವಾರ್ತಾ ಇಲಾಖೆಯ ಸಂಗೀತ ವಿಭಾಗದ ನಿರ್ದೇಶಕ ಅಮರದೇವ, ರಾಜ್ಯಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ದರೋಜಿ ಈರಮ್ಮ ತಂಡದಿಂದ ಬುರ್ರೆ ಕಥಾ ನಡೆಯಲಿದೆ. ಜಾನಪದ ಮತ್ತು ಬುಡಕಟ್ಟು ಸಮುದಾಯದ ವಿವಿಧ ಕಥೆಗಳನ್ನು ದರೋಜಿ ಈರಮ್ಮ ಕಳೆದ ಹಲವಾರು ವರ್ಷಗಳಿಂದ ಹಳ್ಳಿ-ಹಳ್ಳಿ ಸುತ್ತಿ ಹಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಗಿಯ ವೀಣಾ ಮಹಿಳಾ ಕಲಾ ತಂಡದಿಂದ ಮಹಿಳಾ ಡೊಳ್ಳು ಕುಣಿತ, ಹಳಿಯಾಳದ ಆಮ್ಚೆ ಮೂಳೆ ಸಿದ್ಧಿ ಸಂಸ್ಕೃತಿ ಕಲಾ ತಂಡದಿಂದ ಢಮಾಮಿ ನೃತ್ಯ, ಬಳ್ಳಾರಿಯ ಕಂಪ್ಲಿ ಆದಿವಾಸಿ ಬುಡಕಟ್ಟು ಜನಪದ ಶಬ್ದವಾದ್ಯ ತಂಡದಿಂದ ತಾಷಾರಾಂಡೋಲ, ಹಕ್ಕಿಪಿಕ್ಕಿ ಜಾನಪದ ನೃತ್ಯ, ಬಳ್ಳಾರಿಯ ವೀರಾಪುರದ ಶ್ರುತಿಲಯ ಕಲಾ ಸಂಘದಿಂದ ಸಂಗ್ಯಾಬಾಳ್ಯಾ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಇದೇ ವೇಳೆ ಕೆಲ ಬುಡಕಟ್ಟು ತಂಡಗಳಿಂದ ಕಲಾ ಪ್ರದರ್ಶನಗಳು ನಡೆಯಿತು. ಸುದ್ದಿಗೋಷ್ಠಿಯಲ್ಲಿ ವಾರ್ತಾ ಇಲಾಖೆ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಪಿ.ಎಸ್. ಹಿರೇಮಠ, ಹಿರಿಯ ಸಹಾಯಕ ನಿರ್ದೇಶಕ ಸಿ.ಪಿ. ಮಾಯಾಚಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

