ಕೈ ಹಿಡಿದ ಖಾದ್ಯ ತಯಾರಿಕೆ
ಅದ್ಯಾವುದೋ ಕಾರಣದಿಂದಾಗಿ ಪತಿಯೊಂದಿಗೆ ಮನೆಯ ಹೊರಗೆ ಕಾಲಿಟ್ಟ ಧಾರವಾಡದ ಮಹಿಳೆಯೊಬ್ಬರು ಒಂಬತ್ತು ವರ್ಷಗಳ ಅವಧಿಯಲ್ಲಿ ಸಾಧಿಸಿದ ಆರ್ಥಿಕ ಸ್ವಾವಲಂಬನೆಯ ಕಥಾನಕ ಇದು.
ಮನೆ, ಮಠ, ಆಸ್ತಿ-ಪಾಸ್ತಿ, ತುಂಬು ಕುಟುಂಬ ಇದ್ದರೂ ಕೌಟುಂಬಿಕ ಭಿನ್ನಾಭಿಪ್ರಾಯದಿಂದಾಗಿ ಪತಿಯೊಂದಿಗೆ ಮನೆಯ ಹೊಸ್ತಿಲು ದಾಟಿ ಹೊರಗೆ ಬಂದ ಇಲ್ಲಿನ ಚೈತನ್ಯ ನಗರದ ಭಾವನಾ ದೇಶಪಾಂಡೆ ಅವರಲ್ಲಿ ಮನೆ ಬಿಟ್ಟು ಹೊರ ಬಿದ್ದಾಗ ಕೈಯಲ್ಲಿ ಪುಡಿಗಾಸಿಲ್ಲ. ಪತಿಯ ಖಾಸಗಿ ಉದ್ಯೋಗವನ್ನೇ ನಂಬಿ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿತ್ತು. ಇಂತಹ ಕ್ಲಿಷ್ಟಕರ ಸಮಯದಲ್ಲಿ ಅವರ ಕೈಹಿಡಿದಿದ್ದು, ತವರಿನಲ್ಲಿ ಕಲಿತಿದ್ದ ವಿಶೇಷ ತಿಂಡಿಗಳನ್ನು ಸಿದ್ಧಪಡಿಸುವ ಕೌಶಲ್ಯ.
ಈ ಕೌಶಲ್ಯವನ್ನೇ ಸ್ವ-ಉದ್ಯೋಗವನ್ನಾಗಿ ಮಾಡಿಕೊಂಡ ಭಾವನಾ, ಧಾರವಾಡದ ರುಡ್ಸೆಟ್ನಲ್ಲಿ ತರಬೇತಿ ಪಡೆದು ಶಾವಿಗೆ, ಸಂಡಿಗೆ, ಹಪ್ಪಳ, ಚಕ್ಕುಲಿ, ಲಾಡು, ಸೇವ್, ನಿಪ್ಪಟ್ಟು ಹೀಗೆ ನಿತ್ಯ ಬಳಕೆಯ ಖಾದ್ಯಗಳನ್ನು ರುಚಿಕಟ್ಟಾಗಿ ಸಿದ್ಧಪಡಿಸುವ ಕಲೆಕರಗತ ಮಾಡಿಕೊಂಡರು. ರುಡ್ಸೆಟ್ನ ತರಬೇತಿ ಅವಧಿಯಲ್ಲಿ, ಪ್ಯಾಕಿಂಗ್ ಹಾಗೂ ಮಾರುಕಟ್ಟೆ ಕೌಶಲ ಕಲಿತರು. ಇದಲ್ಲದೇ ಸಿರಿಧಾನ್ಯಗಳ ತಿಂಡಿ-ತಿನಿಸುಗಳನ್ನು ಮಾಡುವುದು ಭಾವನಾ ಅವರ ವಿಶೇಷ. ನವಣೆಯಿಂದ ಭಾವನಾ ಅವರು ಸಿದ್ಧಪಡಿಸುವ ಉಂಡೆ, ಚಕ್ಕುಲಿ, ಪಾಲಕ್ ಸೇವ್, ನಿಪ್ಪಟ್ಟು ಬಾಯಲ್ಲಿ ನೀರು ತರಿಸುವಷ್ಟು ರುಚಿಕಟ್ಟಾಗಿರುತ್ತವೆ.
ಮತ್ತೊಬ್ಬರಿಗೂ ಮಾದರಿ: ನಿತ್ಯ ತಿಂಡಿ ತಿನಿಸುಗಳ ತಯಾರಿಕೆ ಜೊತೆಗೆ ಭಾವನಾ ರುಡ್ಸೆಟ್ನಲ್ಲಿ ತರಬೇತಿ ಪಡೆಯುವ ಮಹಿಳೆಯರಿಗೂ ಖಾದ್ಯ ತಯಾರಿಕಾ ಕೌಶಲ್ಯ ಹೇಳಿಕೊಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಗೌರಿ ಸ್ವ-ಸಹಾಯ ಮಹಿಳಾ ಸಂಘವೊಂದನ್ನು ಮುನ್ನಡೆಸುತ್ತಿದ್ದು, ಸ್ವ-ಉದ್ಯೋಗದಿಂದ ಸಿದ್ಧಪಡಿಸಿದ ಆಹಾರ ಪದಾರ್ಥಗಳು ಸೇರಿದಂತೆ ಹತ್ತಾರು ರೀತಿಯ ವಸ್ತುಗಳನ್ನು ಈ ಸಂಘದ ವತಿಯಿಂದ ಪ್ರತಿ ವಾರ ಗಾಂಧಿ ಶಾಂತಿ ಪ್ರತಿಷ್ಠಾನದ ಎದುರು ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಭಾವನಾ ತಾವು ಒಬ್ಬರೇ ಆರ್ಥಿಕ ಸ್ವಾವಲಂಬಿಯಾಗದೇ ತನ್ನ ಜತೆಗೆ ಇತರ ಸಮಾನ ಮನಸ್ಕ ಮಹಿಳೆಯರೂ ಆರ್ಥಿಕವಾಗಿ ಸ್ವಾವಲಂಬನೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಸಿಕ ರು. 15-20 ಸಾವಿರ ಆದಾಯ: ತಮ್ಮ ಸ್ವ-ಉದ್ಯೋಗದ ಯಶಸ್ಸನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡ ಭಾವನಾ ದೇಶಪಾಂಡೆ, ಪ್ರತಿಯೊಬ್ಬ ಮಹಿಳೆಯಲ್ಲೂ ಒಂದೊಂದು ಕೌಶಲ್ಯ ಇದ್ದೇ ಇರುತ್ತದೆ. ಆದರೆ, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪ್ರಸ್ತುತ, ಆರ್ಥಿಕ ಸ್ವಾವಲಂಬನೆ ಗಳಿಸಿಕೊಳ್ಳುವ ಸಂದರ್ಭವೂ ಪ್ರತಿಯೊಬ್ಬ ಮಹಿಳೆಯ ಎದುರಿಗಿದೆ. ಮನೆಯಲ್ಲಿ ಸುಮ್ಮನೆ ಕೂರುವ ಬದಲು ಹೊಲಿಗೆ, ವಿಶೇಷ ಖಾದ್ಯಗಳ ತಯಾರಿಕೆ, ಪೇಪರ್ ಬ್ಯಾಗ್ ಸಿದ್ಧಪಡಿಸುವುದು ಸೇರಿದಂತೆ ಹಲವು ಸ್ವ-ಉದ್ಯೋಗಗಳನ್ನು ಕಂಡುಕೊಳ್ಳಬಹುದು. ಮನೆಯಲ್ಲಿ ಇದ್ದುಕೊಂಡು ಮನೆ ಕೆಲಸ ಮುಗಿಸಿ ಪತಿಯನ್ನು ಕಚೇರಿಗೆ ಹಾಗೂ ಮಕ್ಕಳನ್ನು ಶಾಲೆಗೂ ಕಳುಹಿಸಿ ತಿಂಗಳಿಗೆ ಅಂದಾಜು ರು. 15ರಿಂದ 20 ಸಾವಿರ ಗಳಿಸುತ್ತೇನೆ. ನಾನು ತಯಾರಿಸಿದ ಆಹಾರ ಪದಾರ್ಥಗಳು ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ, ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ, ಧಾರವಾಡ ಉತ್ಸವ ಹಾಗೂ ರಾಜ್ಯದ ವಿವಿಧ ಮೇಳಗಳಲ್ಲಿ ಮಾರಾಟವಾಗಿವೆ. ರುಡ್ಸೆಟ್ನಲ್ಲಿ ಹತ್ತಾರು ಮಹಿಳೆಯರಿಗೆ ತರಬೇತಿ ನೀಡುತ್ತಿರುವುದು ಹೆಮ್ಮೆ ಎನಿಸುತ್ತದೆ. ಇನ್ನೊಬ್ಬರ ಅಡಿಯಾಳಾಗಿ ಕೆಲಸ ಮಾಡುವ ಬದಲು ಸ್ವ-ಉದ್ಯೋಗದಿಂದ ಜೀವನ ಕಂಡುಕೊಳ್ಳುವುದು ಎಷ್ಟೋ ಉತ್ತಮ ಎನ್ನುತ್ತಾರೆ ಅವರು.
ಸ್ವ-ಉದ್ಯೋಗದಿಂದ ಕುಟುಂಬದ ಜವಾಬ್ದಾರಿ ಹೊತ್ತಿರುವ ಭಾವನಾ ದೇಶಪಾಂಡೆ ಅವರಂತೆ ಮಹಿಳೆಯರು ಯಾವುದಾದರೂ ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸುವುದು ಇಂದಿನ ಅಗತ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

