ಧಾರವಾಡ

ರಂಗಿನ ಹಬ್ಬದ ಸಂಭ್ರಮದ ಗುಂಗು

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 16
ಒಂದೆಡೆ ಚುನಾವಣೆಯ ರಂಗು ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ತವಕ, ಮತ್ತೊಂದೆಡೆ ನೆತ್ತಿ ಸುಡುವ ಬಿಸಿಲು. ಇದರ ಮಧ್ಯ ಆಗಮಿಸಿದೆ  ರಂಗು ರಂಗಿನ ಹೋಳಿ.
ಈ ವರ್ಷದ ಹೋಳಿಯನ್ನು ಧಾರವಾಡದ ಮಂದಿ ಕುತೂಹಲದಿಂದ ಬರಮಾಡಿಕೊಳ್ಳಲು ಸಿದ್ಧರಾಗಿ ನಿಂತಿದ್ದಾರೆ. ಭಾನುವಾರ ನಗರ ಸೇರಿದಂತೆ, ಜಿಲ್ಲೆಯ ಗ್ರಾಮೀಣ ಭಾಗಗಳು ರತಿ, ಕಾಮಣ್ಣನ ಹಬ್ಬಕ್ಕೆ ಸಿದ್ದಗೊಳ್ಳುತ್ತಿವೆ. ನಗರದ ಮಾರುಕಟ್ಟೆಗಳು ಬಹುತೇಕ ಹಲವು ಬಗೆ ಬಗೆಯ ಬಣ್ಣಗಳ, ತುತ್ತೂರಿ, ಹೋಳಿಯ ಟೊಪ್ಪಿಗೆ, ಓಕುಳಿಯ ಪ್ಲಾಸ್ಟಿಕ್ ಗನ್ ಮಾರಾಟವಾಗುತ್ತಿವೆ.
ಬೆಳಗ್ಗೆಯಿಂದಲೇ ಜನತೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು. ಜಾತಿ-ಮತ, ವಯಸ್ಸಿನ ಭೇದವನ್ನು ಮರೆಸುವ ಈ ಹಬ್ಬವನ್ನು ನಗರಕ್ಕಿಂತ, ಹಳ್ಳಿಯ ಜನರು ಪ್ರೀತಿಯಿಂದ ಆಚರಿಸುತ್ತಾರೆ. ಈಗಾಗಲೇ ರತಿ ಕಾಮಣ್ಣರ ಮೂರ್ತಿ ಎಲ್ಲೆಡೆ ಪ್ರತಿಷ್ಠಾಪನೆಗೊಂಡಿವೆ. ಹಳ್ಳಿಗಳಲ್ಲಂತೂ ಓಣಿಗೊಂದು ಕಾಮಣ್ಣನ ಮೂರ್ತಿ ಎದ್ದು ನಿಂತಿದೆ. ನಗರದ ಹೊಸ ಯಲ್ಲಾಪುರ, ಭೂಸಗಲ್ಲಿ, ಕಾಮನಕಟ್ಟಿ, ರವಿವಾರ ಪೇಟೆ ಹಾಗೂ ಹಲವು ಭಾಗಗಳಲ್ಲಿ  ರತಿ ಕಾಮಣ್ಣರ ಮೂರ್ತಿ ಸಿದ್ಧಗೊಂಡು ಚಿಕ್ಕ ಮಕ್ಕಳ ಹಾಗೂ ದೊಡ್ಡವರ ಹಲಗೆ ಶಬ್ದ ನಗರದ ತುಂಬ ಮಾರ್ದನಿಸುತ್ತಿದೆ. ಪ್ರಹ್ಲಾದನನ್ನು ಕೊಲ್ಲಲು ಬಂದ ಹೋಲಿಕಾ ಎಂಬ ರಾಕ್ಷಸಿಯ ಸಂಹಾರದ ದಿನವೆಂದು ಹಲವರ ನಂಬಿಕೆ, ಶ್ರೀಕೃಷ್ಣನು ಪುತನಿಯನ್ನು ಕೊಂದ ದಿನವೆಂದು, ರಾಮ, ರಾವಣನನ್ನು ಸಂಹರಿಸಿದ ನೆನಪಿಗಾಗಿ ಈ ಹಬ್ಬವನ್ನು ಆಚರಿಸುತ್ತಾರೆಂಬ ಹಲವು ನಂಬುಗೆಯಿಂದ ಈ ಹಬ್ಬ ಆಚರಣೆಯಲ್ಲಿದೆ.
ತಾಲೂಕಿನ ಮುಳಮುತ್ತಲದ ಕಾಮಣ್ಣ ದೇಶದ ಉದ್ದಗಲಕ್ಕೂ ಚಿರಪರಿಚಿತ. ಬೇಡಿದ ವರವನ್ನು ನೀಡುವ ಕಲ್ಪವೃಕ್ಷ. ಈ ಕಾಮಣ್ಣನ ಮೂರ್ತಿ ಸಿದ್ಧವಾದರೆ ಸಾವಿರಾರು ಸಂಖ್ಯೆಯಲ್ಲಿ ಜನ ಈ ಗ್ರಾಮಕ್ಕಾಗಮಿಸಿ ದರ್ಶನ ಪಡೆದುಕೊಳ್ಳುತ್ತಾರೆ. ಹೀಗೆ ಹಲವು ಹಳ್ಳಗಳಲ್ಲಿ ಈ ಹಬ್ಬ ಭಕ್ತಿಯ ಸಿಂಚನವಾಗಿದೆ.
ರಂಗಿನ ಹಬ್ಬಕ್ಕೆ ಜನತೆ ಸಿದ್ಧಗೊಂಡಂತೆ, ಪೊಲೀಸರು ಸಿದ್ಧಗೊಂಡಿದ್ದಾರೆ. ನಗರದ ತುಂಬೆಲ್ಲ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನೂ ಬಣ್ಣಗಳ ಬಗ್ಗೆ ಹಲವು ತಿಳಿವಳಿಕೆ ನೀಡಿದರೂ ರಾಸಾಯನಿಕ ಬಣ್ಣಗಳ ಮಾರಾಟ ಜೋರಾಗಿಯೆ ನಡೆದಿದೆ.
ರಾಸಾಯನಿಕ ಬಣ್ಣ ಬಳಿಸಿದರೆ ಹಲವಾರು ಶಾರೀರಿಕ ತೊಂದರೆಗಳು ನಮ್ಮ ಬಾಳಿನಲ್ಲಿ ನೋವನ್ನು ತರಬಹುದು. ನಾವು ಬಳಸುವ ಹಲವು  ಬಣ್ಣಗಳಲ್ಲಿ ತಾಮ್ರ, ಸೀಸ, ಅಲ್ಯೂಮಿನಿಯಂ ಹಾಗೂ ಐಯೋಡಿನ್‌ನಂಥ ರಾಸಾಯನಿಕ ಮಿಶ್ರಿತ ಬಣ್ಣಗಳೊಂದಿಗೆ ಓಕುಳಿಯಾಡಿದಾಗ ಮೊದಲು ಹಾನಿಗೊಳ್ಳುವುದು ದೇಹದ ಚರ್ಮ ಹಾಗೂ ಕೂದಲು ಅದಕ್ಕಾಗಿ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಬೇಕೆಂಬುದು ಪ್ರಜ್ಞಾವಂತ ಜನರ ಆಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.