ಶೇ. 80 ಮತದಾನ ನಮ್ಮ ಗುರಿ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 18
ಇಲ್ಲಿಯ ವರೆಗಿನ ಎಲ್ಲ ಚುನಾವಣೆಗಳಲ್ಲಿ ಮತದಾನ ಪ್ರಮಾಣವನ್ನು ಅವಲೋಕಿಸಿದಾಗ ಸುಶಿಕ್ಷಿತರು ಹಾಗೂ ಪ್ರಜ್ಞಾವಂತರೇ ಮತದಾನದಿಂದ ದೂರ ಉಳಿದಿರುವುದು ಕಂಡು ಬಂದಿದೆ ಎಂದು ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ಪಿ.ಎ. ಮೇಘಣ್ಣವರ ಆತಂಕ ವ್ಯಕ್ತಪಡಿಸಿದರು.
ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಪಾಲಿಕೆಯ ಆಶ್ರಯದಲ್ಲಿ ಮಂಗಳವಾರ ನಡೆದ ಮತ ಶಕ್ತಿಯೇ ಜನ ಶಕ್ತಿ ಎಂಬ ಮತದಾರರ ಜಾಗೃತಿ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸುಶಿಕ್ಷಿತರು ಮತದಾನವನ್ನು ತಮ್ಮ ನೈತಿಕ ಹಕ್ಕೆಂದು ತಿಳಿದುಕೊಂಡು ಮತದಾನ ಮಾಡುವವರೆಗೂ ದೇಶದ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದರು.
ಧಾರವಾಡ ಲೋಕಸಭೆ ಕ್ಷೇತ್ರ ನೋಡಿದಾಗ ಹುಬ್ಬಳ್ಳಿ- ಧಾರವಾಡ ಶಹರ ಭಾಗವು ಎಲ್ಲ ಚುನಾವಣೆಗಳಲ್ಲಿ ಅತಿ ಕಡಿಮೆ ಪ್ರತಿಶತ ಮತ ಚಲಾವಣೆಯಾಗಿದ್ದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಭಾಗಗಳಲ್ಲಿ ಹೆಚ್ಚಿನ ಮತದಾನವಾಗುವಂತೆ ನಾಗರಿಕರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಹಮ್ಮಿಕೊಂಡಿದೆ ಎಂದು ಮೇಘಣ್ಣವರ ವಿವರಿಸಿದರು.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕುಂದಗೋಳ ಹಾಗೂ ನವಲಗುಂದ ಕ್ಷೇತ್ರಗಳಲ್ಲಿ ಶೇ. 60ರಷ್ಟು ಮತದಾನವಾಗಿರುವುದೇ ಗರಿಷ್ಠ ಮತದಾನವಾಗಿತ್ತು. ಆದರೆ ಈ ಬಾರಿ ಶೇ. 80ಕ್ಕೂ ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳುವ ಗುರಿ ಹೊಂದಿದ್ದೇವೆ. ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾನುಪಾತದ ವ್ಯತ್ಯಾಸ ಕಂಡುಬರುತ್ತಿದ್ದು, ಸರಿಪಡಿಸುವ ನಿಟ್ಟಿನಲ್ಲಿ ಅಲ್ಲಿನ ಜನತೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸದ್ಯ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಮತದಾನದ ಜಾಗೃತಿಗಾಗಿ ನಿರ್ಮಿಸಿಕೊಂಡು ಬೂತ್ ಮಟ್ಟದಿಂದಲೇ ಜನತೆಯಲ್ಲಿ ಮತದಾನದ ಹಕ್ಕಿನ ಬಗ್ಗೆ ತಿಳಿವಳಿಕೆ ಕಾರ್ಯವನ್ನು ಮತದಾನದ ದಿನಾಂಕದ ವರೆಗೂ ಮಾಡಲಾಗುವುದು ಎಂದರು.
ಪಣ ತೊಡಿರಿ: ಕೇಂದ್ರ ಚುನಾವಣಾ ಆಯೋಗದ ಮತದಾರರ ಜಾಗೃತಿ ವೀಕ್ಷಕ ವೈ.ಕೆ. ಬವೇಜಾ, ನಾಗರಿಕರು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಸ್ವಯಂ ಸ್ಫೂರ್ತಿಯಿಂದ ಮತ ಚಲಾಯಿಸಬೇಕು. ಒಳ್ಳೆಯ ಚಾರಿತ್ರ್ಯವುಳ್ಳ ವ್ಯಕ್ತಿಯನ್ನು ಗುರುತಿಸಿ ಆಯ್ಕೆ ಮಾಡಿ, ಸದೃಢ ದೇಶವನ್ನು ನಿರ್ಮಾಣ ಮಾಡುವಲ್ಲಿ ಪಣ ತೊಡಬೇಕು ಎಂದರು. ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ನಿಷ್ಪಕ್ಷಪಾತವಾಗಿ ಯಾವುದೆ ಆಸೆ, ಆಮಿಷ, ದಬ್ಬಾಳಿಕೆಗೆ ಶರಣಾಗದೇ ನಾಗರಿಕರು ಚುನಾವಣೆಯಲ್ಲಿ ಭಾಗವಹಿಬೇಕು ಎಂದರು.
ಹು-ಧಾ ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶೇ. 58ರಷ್ಟು ಮತದಾನವಾದರೆ, ಧಾರವಾಡದಲ್ಲಿ ಶೇ. 56ರಷ್ಟು ಮಾತ್ರ ಮತದಾನವಾಗಿತ್ತು. ಅದಕ್ಕಾಗಿ ಈ ಬಾರಿ ಜನತೆಯಲ್ಲಿ ಮತದಾನದ ಬಗ್ಗೆ ತಿಳಿವಳಿಕೆ ನೀಡುವ ಕುರಿತು ಹಲವಾರು ಕಾರ್ಯಕ್ರಮಗಳನ್ನು ಚುರುಕುಗೊಳಿಸಲಾಗಿದೆ ಎಂದು ಹೇಳಿದರು.
ಈ ಬಾರಿ ಸ್ವೀಪ್ ಸಮಿತಿ ರಚನೆ ಮಾಡಿ ಅದರಡಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರಿಂದ ಮತದಾನದದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಯೋಗ್ಯರನ್ನು ಗುರುತಿಸಿ: ಕರ್ನಾಟಕ ಕಲಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಆರ್.ವಿ. ಹೊರಡಿ, ಜಗತ್ತಿನಲ್ಲಿಯೇ ಅತಿ ಹೆಚ್ಚು ಜನ ಶಕ್ತಿಯನ್ನು ಹೊಂದಿದ ದೇಶ ನಮ್ಮದು. ಈ ಬಾರಿ 81.45 ಕೋಟಿ ಜನ ಮತ ಚಲಾಯಿಸಲಿದ್ದಾರೆ. ಎಲ್ಲರೂ ಪವಿತ್ರ ಭಾವನೆಯಿಂದ ಯೋಗ್ಯ ಅಭ್ಯರ್ಥಿಗಳನ್ನು ವಿವೇಚನೆಯಿಂದ ಆಯ್ಕೆ ಮಾಡಿದರೆ ಮಾತ್ರ ದೇಶ ಎಲ್ಲ ರಂಗಗಳಲ್ಲೂ ದೊಡ್ಡ ದೇಶವಾಗಿ ಹೊರ ಹೊಮ್ಮಲು ಸಾಧ್ಯ ಎಂದರು.
ಜಾತಿ, ಧರ್ಮ, ಭಾಷೆ ಮರೆತು ಯೋಗ್ಯರನ್ನು ಗುರುತಿಸುವ ಮನೋವಿಶಾಲತೆಯನ್ನು ಜನ ಬೆಳೆಸಿಕೊಳ್ಳಬೇಕು. ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ, ಡಿಡಿಪಿಐ ಡಾ. ಬಿ.ಕೆ.ಎಸ್. ವರ್ಧನ್, ಗುರುಮೂರ್ತಿ ಯರಗಂಬಳಿಮಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

