ಮಹಿಳೆಯಿಂದ ರೈತರಿಗೆ ಪಂಗನಾಮ
ಧಾರವಾಡ: ನಲವತ್ತು ಸಾವಿರ ತುಂಬಿ, ಕೊಳವೆ ಬಾವಿ ಹಾಕಿಸಿಕೊಳ್ಳಿ ಎಂದು ರೈತರಿಗೆ ಟೋಪಿ ಹಾಕಿದ ಪ್ರಸಂಗ ಧಾರವಾಡದಲ್ಲಿ ಇತ್ತೀಚೆಗೆ ನಡೆದಿದೆ.
ಇಂಥದ್ದೊಂದು ಯೋಜನೆ ತೆಗೆದುಕೊಂಡು ಸುಮಾರು 50ಕ್ಕೂ ಹೆಚ್ಚು ರೈತರಿಗೆ ಮೋಸ ಮಾಡಿದ್ದು ಸಾಮಾನ್ಯ ಮಹಿಳೆ. ಮಹಿಳೆ ಎಂದು ಆಕೆಯನ್ನು ನಂಬಿದ ರೈತರೀಗ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಎರಡು ವರ್ಷಗಳಿಂದಲೂ ರೈತರನ್ನು ಪುಸಲಾಯಿಸಿ ಹಣ ಕಬಳಿಸಿದ್ದ ಆ ಚೋರಿ ಇಲ್ಲಿಯ ಶಿವಾನಂದ ನಗರ ನಿವಾಸಿ.
ವಿಜಯಕುಮಾರಿ ಮೋಸ ಮಾಡಿದ ಮಹಿಳೆ. ಇವಳು ರಾಷ್ಟ್ರೀಯ ಸಮಗ್ರ ಗ್ರಾಮೀಣ ಕೃಷಿ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ. ಈ ಸಂಸ್ಥೆ ಅಧ್ಯಕ್ಷರಾಗಿ ರೈತರೊಂದಿಗೆ ಸಂಪರ್ಕ ಬೆಳೆಸಿಕೊಂಡು, ರೈತರ ಮುಗ್ಧತೆ ಬಂಡವಾಳವಾಗಿಸಿಕೊಂಡು, ನೀವು ಕೇವಲ ಒಣ ಬೇಸಾಯ ನಂಬಿ ಕುಳಿತರೆ, ನೀವು ಬದುಕಲು ಸಾಧ್ಯವಿಲ್ಲ. ನೀವು ಎಲ್ಲರಂತೆ ಶ್ರೀಮಂತರಾಗಬೇಕಾದರೆ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಅದಕ್ಕಾಗಿ ರು. 40 ಸಾವಿರ ತುಂಬಿ ಕೊಳವೆ ಬಾವಿ ಹಾಕಿಸಿಕೊಳ್ಳುವ ಒಂದು ಯೋಜನೆಯಿದೆ. ಅದರಡಿ ರು. 40 ಸಾವಿರ ತುಂಬಿ ನಾನು ನಿಮಗೆ ಕೊಳವೆ ಬಾವಿ ಹಾಕಿಸಿಕೊಡುತ್ತೇನೆಂದು ಮತ್ತು ನೀರು ಬಿದ್ದ ಸ್ಥಳಗಳಲ್ಲಿ ಮೋಟಾರ್ ಜೋಡಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತದೆ ಎಂದು ಜನರನ್ನು ನಂಬಿಸಿ, ಅವರಿಂದ ಹಣ ಕಿತ್ತುಕೊಂಡಿದ್ದಾಳೆ. ಒಂದು ವೇಳೆ ಕೊಳವೆ ಬಾವಿಯಲ್ಲಿ ನೀರು ಬೀಳದಿದ್ದರೆ ನಿಮ್ಮ ಹಣ ವಾಪಾಸು ನೀಡಲಾಗುವುದು ಎಂಬ ಭರವಸೆಗಳನ್ನು ಸಹ ರೈತರಿಗೆ ಮಹಿಳೆ ನೀಡಿದ್ದಾಳೆ.
ಮಹಿಳೆಯೆಂಬ ಕಾರಣಕ್ಕೆ ಹಾಗೂ ಇಂಥ ಭರವಸೆಗಳ ಮಾತಿಗೆ ಮೋಡಿಯಾದ ತಾಲೂಕಿನ ಉಪ್ಪಿನ ಬೆಟಗೇರಿ, ಯಾದವಾಡ, ಕಲ್ಲೂರು ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳ ರೈತರು ಇವಳಿಗೆ ಮೋಸ ಹೋಗಿದ್ದಾರೆ. ಹಣ ನೀಡಿ ಒಂದು ವರ್ಷವಾದರೂ ಬೋರೂ ಇಲ್ಲ, ನೀರೂ ಇಲ್ಲ. ಇದರಿಂದ ಆಕ್ರೋಶಗೊಂಡ ರೈತರು ಮಹಿಳೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಮೊದಲು ಬೋರ್ವೇಲ್ ಹಾಕಿಸಿಕೊಡುವುದಾಗಿ ದಿನಗಳನ್ನು ದೂಡಿದ್ದಾಳೆ. ಆದರೆ, ಸಂಪೂರ್ಣವಾಗಿ ಅವಳ ಹಿಂದೆ ಬಿದ್ದಾಗ, ವಿಜಯಕುಮಾರಿ ರೈತರನ್ನು ಸಂಪರ್ಕಿಸಿ, ಎಲ್ಲರಿಗೂ ಹಣ ಮರಳಿ ನೀಡುವುದಾಗಿ ಭರವಸೆ ನೀಡಿದ್ದಾಳೆ.
ಕೆಲ ದಿನ ನೋಡಿ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಕೆಲ ರೈತರು ಹೆದರಿಸಿದ್ದು, ಭಯಗೊಂಡ ವಿಜಯಕುಮಾರಿ ರೈತರಿಗೆ ಚೆಕ್ ನೀಡಿದ್ದರು. ಆದರೆ, ಅವು ನಗದೀಕರಿಸಲು ರೈತರು ಬ್ಯಾಂಕ್ಗೆ ಹೋದರೆ ಚೆಕ್ ಬೌನ್ಸ್ ಆಗಿವೆ. ಈ ಬಗ್ಗೆ ಸತತವಾಗಿ ಒಂದು ವಾರ ಪ್ರಯತ್ನಿಸಿದ ಬಳಿಕ ಸಂಪರ್ಕಕ್ಕೆ ಸಿಕ್ಕ ವಿಜಯಕುಮಾರಿ, ತಾನು ಮಾಡಿದ್ದೆಲ್ಲ ತಪ್ಪು ಎಂದು ತಪ್ಪೊಪ್ಪಿಕೊಳ್ಳುತ್ತಾರೆ. ತನ್ನ ಎಲ್ಲ ಮೋಸಗಳಿಗೆ ತನ್ನ ಸಹ ಉದ್ಯೋಗಿ ಸುರೇಖಾ ಕಾರಣ ಎಂದು ಹೇಳುತ್ತಿದ್ದಾಳೆ. ಇದೀಗ ಎಲ್ಲರೂ ಕೂಡಿ ಪೊಲೀಸ್ ಮೆಟ್ಟಿಲು ಏರುವ ಕೊನೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೋಸ ಹೋದ ಸೋಮು, ಚಂದ್ರಶೇಖರ್ ಎಂಬ ರೈತರು ಪತ್ರಿಕೆಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

