ಜಿಲ್ಲೆಯಲ್ಲಿ 13.81 ಲಕ್ಷ ಮತದಾರರು
ಧಾರವಾಡ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ ಹೊರತುಪಡಿಸಿ ಜಿಲ್ಲೆಯ ಒಟ್ಟು ಏಳು ಕ್ಷೇತ್ರಗಳಲ್ಲಿ 13,81,244 ಮತದಾರರಿದ್ದಾರೆ. ಜನವರಿ 31ರ ವರೆಗೆ ಅಂದರೆ ಚುನಾವಣೆ ಘೋಷಣೆಗೂ ಮುಂಚೆ ಜಿಲ್ಲೆಯಲ್ಲಿ 13,41,458 ಮತದಾರರಿದ್ದರು. ಚುನಾವಣೆ ಘೋಷಣೆ ನಂತರ 40,888 ಹೊಸ ಮತದಾರರು ಪಟ್ಟಿಯಲ್ಲಿ ಸೇರಿದ್ದಾರೆ. 1102 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ನವಲಗುಂದ - 1,87,745 (ಹೆಚ್ಚುವರಿ - 3125) , ಕುಂದಗೋಳ 1,73,255 (ಹೆಚ್ಚುವರಿ 3490), ಧಾರವಾಡ 1,92,359 (4481), ಹು-ಧಾ ಪೂರ್ವ 1,90,149 (8703), ಹು-ಧಾ ಕೇಂದ್ರ 2,27,814 (10,784), ಹು-ಧಾ ಪಶ್ಚಿಮ 2,36,151 (7891) ಹಾಗೂ ಕಲಘಟಗಿ 1,73,771 (2407) ಇದ್ದಾರೆ. ಈ ಪಟ್ಟಿ ಗಮನಿಸಿದರೆ ಹು-ಧಾ ಕೇಂದ್ರ ಕ್ಷೇತ್ರದಲ್ಲಿ ಅತಿ ಹೆಚ್ಚು 10,784 ಮತದಾರರು, ಅತಿ ಕಡಿಮೆ ಕಲಘಟಗಿಯಲ್ಲಿ 2407 ಮತದಾರರು ಸೇರ್ಪಡೆಯಾಗಿದ್ದಾರೆ.
ಏ. 1ರಂದು ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶ
ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಶ್ರೀ ಕೃಷ್ಣಕಲ್ಯಾಣ ಮಂಟಪದಲ್ಲಿ ಏ. 1ರಂದು ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶ ಆಯೋಜಿಸಲಾಗಿದೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮೇಶ ಹಾವೇರಿಪೇಟ ಮಾತನಾಡಿ, ಅಂದು ಬೆಳಗ್ಗೆ 11.30ಕ್ಕೆ ಸಮಾವೇಶ ಮಾಜಿ ಸಿಎಂ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದು, ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅಧ್ಯಕ್ಷತೆ ವಹಿಸುವರು. ಬಳ್ಳಾರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹಾಗೂ ರಾಜ್ಯ ಬಿಜೆಪಿ ಎಸ್ಟಿ ಘಟಕದ ಅಧ್ಯಕ್ಷ ಬಿ. ಸೋಮಲಿಂಗಪ್ಪ ಉಪಸ್ಥಿತರಿರುವರು. ಸಮಾವೇಶಕ್ಕೆ ಕಾರ್ಯಕರ್ತರು ಸ್ವಂತ ವಾಹನದಲ್ಲಿ ಆಗಮಿಸುವ ಜೊತೆಗೆ ತಮ್ಮ ಊಟ ತರುತ್ತಿದ್ದಾರೆ ಎಂದರು. ಜಿಲ್ಲಾ ಬಿಜೆಪಿ ಎಸ್ಟಿ ಘಟಕದ ಅಧ್ಯಕ್ಷ ಅರುಣಕುಮಾರ ಹುಂಡಮಿ, ಲಕ್ಷ್ಮಣ ಬೀಳಗಿ, ವೀರೇಶ ಸಂಗಳದ, ರಂಗಾ ಬದ್ದಿ, ವೆಂಕಟೇಶ ಹುಬ್ಬಳ್ಳಿ ಇದ್ದರು.
ಶಿವಪ್ಪಯ್ಯ ಶಿವಯೋಗಿಗಳವುಠದ ಜಾತ್ರೆ
ಧಾರವಾಡ: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಶಿವಪ್ಪಯ್ಯ ಶಿವಯೋಗಿಗಳ ಮಠದ ಜಾತ್ರೆ ಏ. 1ರಿಂದ ಜರುಗಲಿದೆ. ಮಹಾತಪಸ್ವಿ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳು ಸದಾಕಾಲ ಮನುಕುಲದ ಅಭ್ಯುದಯಕ್ಕಾಗಿ ಶ್ರಮಿಸಿದ್ದು, ಜಾತ್ರೆಯ ದಿನ ಶಿವಪ್ಪಯ್ಯ ಶಿವಯೋಗಿಗಳ ಗದ್ದುಗೆಗೆ ಏಕಾದಶ ರುದ್ರಾಭಿಷೇಕ ಮಹಾಪೂಜೆ, ಸಹಸ್ರ ಬಿಲ್ವಾರ್ಚನೆ ಮತ್ತು ಮಹಾಮಂಗಳಾರತಿ ಶ್ರೀಮಠದ ಪ್ರಧಾನ ವೈದಿಕರ ನೇತೃತ್ವದಲ್ಲಿ ನಡೆಯುವವು. ಏ. 1ರಂದು ಮುಂಜಾನೆ 10ಕ್ಕೆ ವಿವಿಧ ಜನಪದ ವಾದ್ಯ-ಮೇಳ, ಪೂರ್ಣಕುಂಭಗಳೊಂದಿಗೆ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಭಾವಚಿತ್ರದ, ಪಲ್ಲಕ್ಕಿ ಉತ್ಸವ ಉಗರಗೋಳ ಗ್ರಾಮದಲ್ಲಿ ಜರುಗಲಿದೆ. ಏ. 15 ರಿಂದ 36 ದಿನ ವೀರಮಾಹೇಶ್ವರ ಜಂಗಮ ವಟುಗಳಿಗಾಗಿ ವೇದಾಧ್ಯಯನ ಸಂಸ್ಕಾರ ಶಿಬಿರದ ವ್ಯವಸ್ಥೆ ಮಾಡಲಾಗಿದೆ. ಇಷ್ಟಲಿಂಗ ಪೂಜಾ ವಿಧಾನ ಸೇರಿದಂತೆ ವೀರಶೈವ ಧರ್ಮದ ವಿವಿಧ ಹವ್ಯಕವ್ಯಾದಿಗಳ ಕುರಿತು ತರಬೇತಿ ನೀಡಲಾಗುವುದು. ಮಾಹಿತಿಗೆ 93413 51366 ವೇದಮೂರ್ತಿ ಅವರನ್ನು ಸಂಪರ್ಕಿಸಬಹುದು ಎಂದು ಜಿ.ಆರ್. ಹಿರೇಮಠ ತಿಳಿಸಿದ್ದಾರೆ.
ಧಾರವಾಡ: ಏ. 1ರಿಂದ ವ್ಯಕ್ತಿತ್ವ ವಿಕಸನ ಶಿಬಿರ
ಧಾರವಾಡ: ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ 7, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಏಪ್ರಿಲ್ 1 ರಿಂದ 10ರವರೆಗೆ ಪ್ರತಿ ದಿನ ಬೆಳಗ್ಗೆ 9ರಿಂದ 12ರವರೆಗೆ ಉಚಿತ ವ್ಯಕ್ತಿತ್ವ ವಿಕಸನ ಶಿಬಿರ ಹಮ್ಮಿಕೊಂಡಿದೆ. ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃದ್ಧಿ ಮಾಡಲು, ಏಕಾಗ್ರತೆ, ಆತ್ಮವಿಶ್ವಾಸ, ದೃಢತೆ ಹಾಗೂ ಇಚ್ಚಾಶಕ್ತಿಯನ್ನು ಬೆಳೆಸಲು ಶಿಬಿರದಲ್ಲಿ ವಿಶೇಷ ಗಮನ ನೀಡಲಾಗುವುದು. ನೈತಿಕ ಮತ್ತು ಮೌಲ್ಯ ಶಿಕ್ಷಣ, ಆರೋಗ್ಯ, ಯೋಗಾಸನಗಳು, ಶ್ಲೋಕ ಹಾಗೂ ವಚನ ಪಠಣ, ಮೌಲ್ಯಯುಕ್ತ ಆಟಗಳು ಮತ್ತು ಅಧ್ಯಾತ್ಮ ಲೋಕದ ಅದ್ಭುತ ರಹಸ್ಯಗಳು ಹಾಗೂ ಧ್ಯಾನದ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಲಾಗುವುದು. ದುರ್ಗಾ ದೇವಿ ಗುಡಿ ಹತ್ತಿರದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶಿಬಿರ ನಡೆಯಲಿದ್ದು, ಆಸಕ್ತರು ಮಾ. 31ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 0836 2791447 ಸಂಪರ್ಕಿಸಬಹುದು.
ಮಹಿಳೆಗೆ ಸವಾಲಾದ ಸಾಧನೆ: ನಿರ್ಮಲಾ ಎಲಿಗಾರ
ಧಾರವಾಡ: ಸ್ತ್ರೀಯರ ವ್ಯಕ್ತಿತ್ವದ ಬೆಳವಣಿಗೆಗೆ ನೂರೆಂಟು ಅಡಚಣೆ, ಸಾಂಪ್ರದಾಯಿಕ ಸಂಕೊಲೆಗಳಿದ್ದರೂ ತನ್ನ ಅಸ್ತಿತ್ವ ಉಳಿಸಿಕೊಂಡು ಇತರರಿಗೆ ಮಾದರಿಯಾದ ಅನೇಕ ಮಹಿಳೆಯರು ಕನ್ನಡ ನಾಡಿನಲ್ಲಿದ್ದಾರೆ ಎಂದು ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ವಾಹಕಿ ಡಾ. ನಿರ್ಮಲಾ ಎಲಿಗಾರ ಹೇಳಿದ್ದರು. ಕರ್ನಾಟಕ ಕಲಾ ಕಾಲೇಜಿನ ಮಹಿಳಾ ಸಂಘ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಹಿಳೆಗೆ ಸಾಧನೆ ಒಂದು ಸವಾಲು. ಅನೇಕ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮೆಟ್ಟಿ ನಿಲ್ಲುವ ಛಾತಿ ಮಹಿಳೆಯರಿಗೆ ಇದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಸ್. ಕಟ್ಟಿಮನಿ, ಉಪಪ್ರಾಚಾರ್ಯ ಡಾ. ರಾಜೇಶ್ವರಿ ಮಹೇಶ್ವರಯ್ಯ, ಮಹಿಳಾ ಸಂಘದ ಕಾರ್ಯಾಧ್ಯಕ್ಷ ಡಾ. ಸಲೀಮಾ ಕೋಳೂರ ಮಾತನಾಡಿದರು. ಮೊದಲನೆ ಗೋಷ್ಠಿಯಲ್ಲಿ ಮಹಿಳೆಯ ಸಾಧನೆಗೆ ನೆರವು ಕುರಿತು ಹುರಕಡ್ಲಿ ಅಜ್ಜ ಕಾನೂನು ಕಾಲೇಜ್ನ ಪ್ರಾಧ್ಯಾಪಕಿ ಡಾ. ಶಾರದಾ ನಿರ್ವಾಣಿ, 2ನೇ ಗೋಷ್ಠಿಯಲ್ಲಿ ಎಸ್ಡಿಎಂ ವೈದ್ಯಕೀಯ ಕಾಲೇಜ್ನ ಮಾನಸಿಕ ತಜ್ಞ ಡಾ. ಜಯಶ್ರೀ, ಮಾನಸಿಕ ಒತ್ತಡ ನಿಯಂತ್ರಿಸುವ ಬಗ್ಗೆ ಮಂಡಿಸಿದರು.
ಈಶ್ವರೀಯ ವಿವಿಯಿಂದ ಯುಗಾದಿ ಕಾರ್ಯಕ್ರಮ
ಹುಬ್ಬಳ್ಳಿ: ಯುಗಾದಿ ಹಬ್ಬದ ನಿಮಿತ್ತ ಹುಬ್ಬಳ್ಳಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಈಚೆಗೆ ಜೆ.ಸಿ. ನಗರದ ರಾಜಯೋಗ ಭವನದಲ್ಲಿ ಯುಗಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಸಾವಿತ್ರಿ ಗುಂಡಿ, ಇಂದು ಎಲ್ಲಿ ನೋಡಿದಲ್ಲಿ ಅಲ್ಲಿ ಅತ್ಯಾಚಾರ, ಅನ್ಯಾಯ, ಅನೀತಿ ಮತ್ತು ಅಧರ್ಮ ಹೆಚ್ಚಾಗಿದೆ. ಈ ಕೆಟ್ಟ ಗುಣಗಳು ನಿರ್ಮೂಲನೆಗೊಂಡರೆ ಮಾತ್ರ ನಿಜವಾದ ಯುಗಾದಿ ಅಚರಿಸಿದಂತೆ ಎಂದರು. ಸಂಗೀತ ಕಲಾವಿದ ಸಂಗಮೇಶ್ವರ, ಸಂಗೀತವು ಪರಮಾತ್ಮನ ಬಳಿಗೆ ಕರೆದೊಯ್ಯುವ ಸಾಧನವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರಾಜಯೋಗಿನಿ ಬಿ.ಕೆ. ನಿರ್ಮಲಾ, ಯುಗದ ಆದಿಯೇ ಯಗಾದಿ ಆಗಿದ್ದು, ಈ ಹಬ್ಬ ನಮಗೆ ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಸಾಗುವ ಅಸತ್ಯದಿಂದ ಸತ್ಯದತ್ತ ಸಾಗುವುದಕ್ಕೆ ಸೂಚಿಸುತ್ತದೆ ಎಂದು ಹೇಳಿದರು.
ಕೈ ತೆಕ್ಕೆಗೆ ದಾಯಗೋಡಿ, ದೊಡಮನಿ
ಹುಬ್ಬಳ್ಳಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಮಾಜಿ ಪಾಲಿಕೆ ಸದಸ್ಯ ಹೂವಪ್ಪ ದಾಯಗೋಡಿ ಅವರು ಶನಿವಾರ ಜರುಗಿದ ಹುಬ್ಬಳ್ಳಿ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ಇದೇ ಜೆಡಿಎಸ್ನೊಂದಿಗೆ ಗುರುತಿಸಿಕೊಂಡಿದ್ದ ಮಾಜಿ ಪಾಲಿಕೆ ಸದಸ್ಯ ಹಜರತ್ ಅಲಿ ದೊಡಮನಿ ಮತ್ತು ಅನುರಾಧಾ ದಾಯಗೋಡಿ ಸೇರಿದಂತೆ ಇನ್ನಿತರರು ಕಾಂಗ್ರೆಸ್ ಸೇರ್ಪಡೆಯಾದರು. ಧಾರವಾಡ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ, ಶಾಸಕ ಪ್ರಸಾದ ಅಬ್ಬಯ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಮುಂತಾದವರು ವಿವಿಧ ಪಕ್ಷಗಳ ಸ್ಥಳೀಯ ಮುಖಂಡರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡರು. ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಜಬ್ಬಾರ್ಖಾನ್ ಹೊನ್ನಳ್ಳಿ, ಡಾ. ಮಹೇಶ ನಾಲವಾಡ, ಪ್ರೊ. ಐ.ಜಿ. ಸನದಿ, ಶಿರಾಜ್ ಅಹ್ಮದ್ ಕುಡಚಿವಾಲೆ ಇತರರು ಇದ್ದರು.
ಶ್ರೀನಿವಾಸ ಬನ್ನಿಗೋಳ ಅವಿರೋಧ ಆಯ್ಕೆ
ಹುಬ್ಬಳ್ಳಿ: ಹೊಸದಿಲ್ಲಿಯ ಭಾರತೀಯ ವೈದ್ಯ ಪದ್ಧತಿಗಳ ಕೇಂದ್ರ ಪರಿಷತ್ನ (ಸಿಸಿಐಎಂ) ಕಾರ್ಯಕಾರಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಗರದ ಡಾ. ಶ್ರೀನಿವಾಸ ಬನ್ನಿಗೋಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಸಿಸಿಐಎಂ ಸದಸ್ಯರಾಗಿ ಆಯುರ್ವೇದ ಶಿಕ್ಷಣ ಹಾಗೂ ಚಿಕಿತ್ಸಾ ಪದ್ಧತಿಯ ಬೆಳವಣಿಗಾಗಿ ಇವರು ಮಾಡಿರುವ ಸೇವೆಗೆ ಈ ಗೌರವ ಸಂದಿದೆ. ಭಾರತೀಯ ವೈದ್ಯ ಪದ್ಧತಿಗಳ ಕೇಂದ್ರ ಪರಿಷತ್ನ ಕಾರ್ಯಕಾರಿ ಮಂಡಳಿ ಸರ್ವೋಚ್ಛ ಸಂಸ್ಥೆಯಾಗಿದ್ದು, ಆಯುರ್ವೇದ ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳ ಬೆಳವಣಿಗೆಗೆ ಆವಶ್ಯಕ ಇರುವ ನಿರ್ಣಯಗಳನ್ನು ಕೈಗೊಳ್ಳುವ ಹಾಗೂ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ಕಾರ್ಯವ್ಯಾಪ್ತಿ ಹೊಂದಿದೆ. ಡಾ. ಶ್ರೀನಿವಾಸ ಬನ್ನಿಗೋಳ ಅವರು ನಗರದ ಆಯುರ್ವೇದ ಮಹಾವಿದ್ಯಾಲಯದಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪ್ರಹ್ಲಾದ ಜೋಶಿ ಚುನಾವಣಾ ಪ್ರಚಾರ
ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿಯ ಧಾರವಾಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ ಜೋಶಿ ಶನಿವಾರ ಹುಬ್ಬಳ್ಳಿಯ ವಿವಿಧ ವಾರ್ಡ್ಗಳಲ್ಲಿ ಪ್ರಚಾರ ನಡೆಸಿದರು. ಹಳೇ ಹುಬ್ಬಳ್ಳಿಯ ಅಕ್ಕಸಾಲಿಗರ ಓಣಿ, ಕರ್ಜಗಿ ಓಣಿ, ಅಕ್ಕಿ ಪೇಟ, ಬೆಳಮಕರ ಗಲ್ಲಿ, ಜಂಗ್ಲೀ ಪೇಟ ಮತ್ತು ನೇಕಾರ ನಗರದ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಕಾರ್ಯಕರ್ತರೊಡಗೂಡಿ ಘೋಷಣೆ ಕೂಗುತ್ತಾ ಸಂಚರಿಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಸತೀಶ ಶೇಜವಾಡಕರ, ಪ್ರಭು ನವಲಗುಂದಮಠ, ಸಂತೋಷ ಅರಕೇರಿ, ರಾಜು ಜರತಾರಘರ, ಯಮನೂರ ಜಾಧವ, ಮಂಜುನಾಥ ಕಾಟಕರ, ವೆಂಕಟೇಶ ಹುಬ್ಬಳ್ಳಿ, ವೀರೇಶ ಸಂಗಳದ, ಅರವಿಂದ ಘೋಡಕೆ, ಲೀಲಾ ಪಾಸ್ತೆ, ಲಕ್ಷ್ಮಣ ಬೀಳಗಿ, ಶೋಭಾ ನಾಕೋಡ, ಮಂಜುಳಾ ಶಿಂಧೆ, ವೀರೇಶ ನೀಲನೂರ ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿ ಪ್ರಚಾರ ಕಾರ್ಯಾಲಯ ಉದ್ಘಾಟನೆ
ಕಲಘಟಗಿ: ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಚುನಾವಣಾ ಪ್ರಚಾರ ಕಾರ್ಯಾಲಯವನ್ನು ಕಾಡಾದ ಮಾಜಿ ಅಧ್ಯಕ್ಷ ಸಿ.ಎಂ. ನಿಂಬಣ್ಣವರ ಹಾಗೂ ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ ಎಂ.ಆರ್. ಪಾಟೀಲ ಉದ್ಘಾಟಿಸಿದರು. ಬಿಜೆಪಿ ತಾಲೂಕಾಧ್ಯಕ್ಷ ವೈ.ಎನ್. ಪಾಟೀಲ, ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ಜಯತೀರ್ಥ ಕಟ್ಟಿ, ಜಿಪಂ ಅಧ್ಯಕ್ಷ ಎಸ್.ಸಿ. ಅಗಡಿ, ಸದಸ್ಯ ವೈ.ಬಿ. ದಾಸನಕೊಪ್ಪ, ಐ.ಸಿ.ಗೋಕುಲ, ಮಾಲಾ ಗೋಕುಲ, ಗೀತಾ ಮರಲಿಂಗಣ್ಣವರ, ಶಕುಂತಲಾ ನಾಡಗೌಡ, ವಜ್ರಕುಮಾರ ಮಾದನಬಾವಿ, ತಾ.ಪಂ. ಅಧ್ಯಕ್ಷ ಎಂ.ಎಫ್. ಜಾವೂರ, ಶೇಖಪ್ಪ ಹುಲಗೂರ, ಬಸವಣ್ಣಯ್ಯ ಹಿರೇಮಠ, ಬಸವರಾಜ ಶೆರೆವಾಡ, ಪರಶುರಾಮ ರಜಪೂತ, ಅರ್ಜುನ ಲಮಾಣಿ, ರಾಜು ಕಡಬಿ, ಹನಮಂತ ಚವರಗುಡ್ಡ, ಲಿಂಗರೆಡ್ಡಿ ನಡುವಿನಮನಿ, ಚನ್ನವ್ವ ದೊಡ್ಡಮನಿ, ಅನಸೂಯಾ ಇದ್ದರು.
ಕ್ರಿಕೆಟ್: ಎಸ್ಡಿಎಂಸಿಗೆ ಭರ್ಜರಿ ಗೆಲವು
ಹುಬ್ಬಳ್ಳಿ: ಶನಿವಾರ ಇಲ್ಲಿನ ಕರ್ನಾಟಕ ಜಿಮ್ಖಾನಾ ಕ್ರಿಕೆಟ್ ಮೈದಾನದಲ್ಲಿ ನಡೆದಿರುವ ಕೆಎಸ್ಸಿಎ ಅಂತರ್ ಕಾಲೇಜು ಕ್ರಿಕೆಟ್ ಟೂರ್ನಿಯಲ್ಲಿ ಧಾರವಾಡದ ಎಸ್ಡಿಎಂಸಿ ಕಾಲೇಜು 146 ರನ್ಗಳ ಅಂತರದಿಂದ ಬೆಳಗಾವಿಯ ಮರಾಠಾ ಮಂಡಳ ಎಂಜಿನಿಯರಿಂಗ್ ಕಾಲೇಜು ತಂಡವನ್ನು ಪರಾಭವಗೊಳಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂ ಗ್ ಮಾಡಿದ ಬೆಳಗಾವಿ ಮರಾಠಾ ಮಂಡಳ ಎಂಜಿನಿಯರಿಂಗ್ ಕಾಲೇಜು ತಂಡ ಎಸ್ಡಿಎಂಸಿ ತಂಡದ 229 ರನ್ಗಳ ಸವಾಲು ಬೆನ್ನತ್ತಲಾಗದೆ 24. 3 ಓವರ್ಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 32 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ಪ್ರವೀಣ ಸತ್ತೂರ (4), ಬಸವರಾಜ ದ್ಯಾಮಪ್ಪನವರ (3), ಯೂಸುಫ ಗೋಲಂದಾಜ (2) ವಿಕೆಟ್ ಪಡೆದರು. ಇದಕ್ಕೂ ಮುನ್ನ ಎಸ್ಡಿಎಂ ಕಾಲೇಜು ತಂಡ 45.3 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 228 ರನ್ ಕಲೆ ಹಾಕಿತು. ಎಸ್ಡಿಎಂ ಆರಂಭಿಕ ಬ್ಯಾಟ್ಸ್ಮನ್ ಕಿರಣ್ ಅಸಂಗಿ (37), ಅಕ್ಷಯ ಅಂಗಡಿ (39), ಬ್ಯಾಟ್ಸ್ಮನ್ ಬಸವರಾಜ ದ್ಯಾಮಪ್ಪನವರ (59), ಪ್ರವೀಣ ಸುತಾರ (20) ರನ್ ಗಳಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟಿಸಿದರು.
ಶ್ರೀ ಗುರು ನೀಲಕಂಠೇಶ್ವರ ಜಯಂತಿ ಉತ್ಸವ
ಹುಬ್ಬಳ್ಳಿ: ಕುರುಹಿನಶೆಟ್ಟಿ ಸಮಾಜದ ವತಿಯಿಂದ ಹಳೆಹುಬ್ಬಳ್ಳಿಯ ಜಗದ್ಗುರು ಶ್ರೀ ವೀರಭಿಕ್ಷಾವರ್ತಿ ಮಠದಲ್ಲಿ ಏ. 6ರಂದು ಶ್ರೀ ಗುರು ನೀಲಕಂಠೇಶ್ವರ ಜಯಂತ್ಯುತ್ಸವ ನಡೆಯಲಿದೆ ಎಂದು ಸಂಗಪ್ಪ ಮಳ್ಳಿ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 8 ಗಂಟೆಗೆ ಶ್ರೀ ಗುರು ನೀಲಕಂಠೇಶ್ವರ ಭಾವಚಿತ್ರದ ಮೆರವಣಿಗೆ, ಸಕಲ ವಾದ್ಯವೃಂದದೊಂದಿಗೆ ಪೂರ್ಣಕುಂಭ ಮೆರವಣಿಗೆ ನಡೆಯಲಿದೆ. ಅಂದು ಬೆಳಗ್ಗೆ 11ಕ್ಕೆ ಧರ್ಮಸಭೆ ನಡೆಯಲಿದ್ದು, ಮೂಡಲಗಿ ನೀಲಕಂಠ ಮಠದ ಶಿವಾನಂದ ಸ್ವಾಮೀಜಿ, ನಾಸಿಕ ಶರಣ್ಣಪ್ಪನವರ ಮಠದ ವಾಸುದೇವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಗಪ್ಪ ಮಳ್ಳಿ, ಡಾ. ಪಿ. ಐ. ರಕ್ಕಸಗಿ, ಎಂ. ಬಿ. ರೋಣದ, ಈಶ್ವರಪ್ಪ ಉಳ್ಳಾಗಡ್ಡಿ, ಸಿದ್ದಪ್ಪ ಡಂಬಳ, ಪ್ರಭುದೇವ ಹಿಪ್ಪರಗಿ, ಗುರುಪಾದಪ್ಪ ಹಳ್ಳಿಕೇರಿ, ಬಾಬಣ್ಣ ಬಂಡಿವಾಡ, ಚಂದ್ರಶೇಖರ ಶಿರಹಟ್ಟಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಹಲವರನ್ನು ಸನ್ಮಾನಿಸಲಾಗುವುದು.
ಎಂಬಿಎ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್
ಹುಬ್ಬಳ್ಳಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ 2011-13ನೇ ಸಾಲಿನಲ್ಲಿ ನಡೆಸಿದ ಎಂಬಿಎ ಸ್ನಾತಕೋತ್ತರ ಪದವಿಯಲ್ಲಿ ಪವನ ಪಿ. ಅಪರಂಜಿ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.ಇತ್ತೀಚಿಗೆ ನಡೆದ ಕವಿವಿ 64ನೇ ಘಟಿಕೋತ್ಸವದಲ್ಲಿ ಅಪರಂಜಿ ಪ್ರಶಸ್ತಿ ಸ್ವೀಕರಿಸಿದರು. ನಗರದ ಪ್ರತಿಷ್ಠಿತ ಡಾ. ಡಿ. ವೀರೇಂದ್ರ ಹೆಗ್ಗಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ನಲ್ಲಿ ಅಪರಂಜಿ ಎಂಬಿಎ ಪೂರೈಸಿದ್ದಾರೆ. ಸದ್ಯ ಹುಬ್ಬಳ್ಳಿಯ ಶಾರದಾ ಆದರ್ಶ ಪಿಯು ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಜೆ.ಕೆ. ಡಿಗ್ರಿ ಕಾಲೇಜ್ ಆಫ್ ಕಾಮರ್ಸ್ನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.
ಧಾರವಾಡ: ಪುನರ್ ಮನನಶಿಬಿರದ ಸಮಾರೋಪ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾಜ ವಿಜ್ಞಾನ ಸಂಶೋಧನಾ ವಿಧಾನದ ಪುನರ್ಮನನ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಲ್ಲಿನ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದಲ್ಲಿ ಜರುಗಿತು. ಸುಮಾರು 35 ಮಹಾವಿದ್ಯಾಲಯ ಹಾಗೂ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಉಪನ್ಯಾಸಕರು ಪಾಲ್ಗೊಂಡಿದ್ದರು. ನುರಿತ ಪ್ರಾಧ್ಯಾಪಕರಿಂದ ಬೋಧನಾಮಟ್ಟ, ಸಂಶೋಧನಾಯುಕ್ತ ಚಟುವಟಿಕೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗಾಗಿ ವಿವಿಧ ವಿಷಯದಲ್ಲಿ ಉಪನ್ಯಾಸಗಳು ನಡೆದವು. ಪ್ರಾಧ್ಯಾಪಕ ಪ್ರೊ. ಜಿ.ಕೆ. ಕಡೇಕೊಡಿ ಸಮಾಜ ವಿಜ್ಞಾನ ಸಂಶೋಧನಾ ವಿಧಾನಕ್ಕೆ ಸಂಬಂಧಿಸಿದಂತೆ ಮಾತನಾಡಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಐ.ಕೆ. ಪತ್ತಾರ ಶಿಬಿರ ಸಂಯೋಜಕರಾಗಿದ್ದರು. ಅಧ್ಯಕ್ಷತೆಯನ್ನು ಯುಜಿಸಿ-ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದ ಪ್ರಭಾರಿ ನಿರ್ದೇಶಕ ಪ್ರೊ. ಆರ್. ನಝೀರ್ ಅಹ್ಮದ್ ವಹಿಸಿದ್ದರು. ಶಕುಂತಲಾ ಅಜ್ಜನ್ನವರ, ಡಾ.ಡಿ.ಎಲ್. ಹೆಬ್ಬಾರ ಇದ್ದರು.
ಧಾರವಾಡ: ಬಿಜೆಪಿಗೆ ರಾಯಣ್ಣ ಸೇನೆ ಬೆಂಬಲ
ಧಾರವಾಡ: ಇಲ್ಲಿಯ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಸೇನೆ ಹಾಗೂ ಅಭಿಮಾನ ಬಳಗವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿವೆ. ಗಾನಯೋಗಿ ಪಂಚಾಕ್ಷರಿ ಗವಾಯಿ ಕಲ್ಯಾಣ ಮಂಟಪದಲ್ಲಿ ಜರುಗಿದ್ದ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಬಜೆಪಿ ಕಂಕಣ ಬದ್ಧವಾಗಿದೆ. ಅಧಿಕಾರ ಬಂದರೆ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ರಚಿಸಲಾಗುವುದೆಂದರು. ಸೇನೆಯ ಅಧ್ಯಕ್ಷ ರವಿ ಕಂಬಳಿ, ನಾಗರಾಜ, ರಾಜೇಶ್ವರಿ ಸಾಲಗಟ್ಟಿ, ಸುಧೀರ ಕ್ಷತ್ರಿಯ, ಮಹೇಶ ಅಕ್ಕಿ, ಶಿವಾನಂದ ದೇಸಾಯಿ, ಸಂತೋಷ ಬೆಣ್ಣಿ, ಶರಣು ಬೆನಕೊಪ್ಪ, ವಿಜಯ ಕ್ಷತ್ರಿಯ, ಸಂತೋಷ ದೇವರಡ್ಜಿ, ರಮೇಶ ಹೂಗಾರ ಇದ್ದರು.
ಏ. 1ರಿಂದ ವ್ಯಕ್ತಿತ್ವ ವಿಕಸನ ಶಿಬಿರ
ಧಾರವಾಡ: ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ 7, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಏಪ್ರಿಲ್ 1 ರಿಂದ 10ರವರೆಗೆ ಪ್ರತಿ ದಿನ ಬೆಳಗ್ಗೆ 9ರಿಂದ 12ರವರೆಗೆ ಉಚಿತ ವ್ಯಕ್ತಿತ್ವ ವಿಕಸನ ಶಿಬಿರ ಹಮ್ಮಿಕೊಂಡಿದೆ. ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃದ್ಧಿ ಮಾಡಲು, ಏಕಾಗ್ರತೆ, ಆತ್ಮವಿಶ್ವಾಸ, ದೃಢತೆ ಹಾಗೂ ಇಚ್ಛಾಶಕ್ತಿಯನ್ನು ಬೆಳೆಸಲು ಶಿಬಿರದಲ್ಲಿ ವಿಶೇಷ ಗಮನ ನೀಡಲಾಗುವುದು. ನೈತಿಕ ಮತ್ತು ಮೌಲ್ಯ ಶಿಕ್ಷಣ, ಆರೋಗ್ಯ, ಯೋಗಾಸನಗಳು, ಶ್ಲೋಕ ಹಾಗೂ ವಚನ ಪಠಣ, ಮೌಲ್ಯಯುಕ್ತ ಆಟಗಳು ಮತ್ತು ಅಧ್ಯಾತ್ಮ ಲೋಕದ ಅದ್ಭುತ ರಹಸ್ಯಗಳು ಹಾಗೂ ಧ್ಯಾನದ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಲಾಗುವುದು. ದುರ್ಗಾ ದೇವಿ ಗುಡಿ ಹತ್ತಿರದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶಿಬಿರ ನಡೆಯಲಿದ್ದು, ಆಸಕ್ತರು ಮಾ. 31ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 0836 2791447 ಸಂಪರ್ಕಿಸಬಹುದು.
ಹುಬ್ಬಳ್ಳಿ: ಭಗತ್ಸಿಂಗ್ 83ನೇ ಪುಣ್ಯಸ್ಮರಣೆ
ಹುಬ್ಬಳ್ಳಿ: ನಗರದ ಭಗತ್ ಸಿಂಗ್ ಸೇವಾ ಸಮಿತಿ ವತಿಯಿಂದ ಈಚೆಗೆ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ 83ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಶಿಶೇಖರ ಡಂಗನವರ ಭಗತ್ ಸಿಂಗ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚಣೆ ಮಾಡಿದರು. ಭಗತ್ ಸಿಂಗ್ ಸೇವಾ ಸಮಿತಿ ಪದಾಧಿಕಾರಿಗಳಾದ ರಾಜು ಅಗಸರ, ಶ್ರೀಧರ ವಡೆಕರ್, ವೀರೇಶ ಕೆಸರಪ್ಪನವರ, ಈರಣ್ಣ ಅಂಗಡಿ, ಆನಂದ್ ಮುಗದುಮ್, ಸುಪ್ರೀತ್ ಶೆಟ್ಟಿ, ಬಸವರಾಜ ಹಿತ್ತಲಮನಿ, ಅಭಿಷೇಕ ಪರಾಂಜಪೆ, ಮಂಜು ನಾಯಕ್ ಇದ್ದರು. ಸಮಿತಿಯ ಕಾರ್ಯದರ್ಶಿ ಪ್ರವೀಣ ಶೆಲವಡಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

