ಜೋಶಿ ಕ್ಲಿಕ್, ವಿನಯ ಫ್ಲಾಪ್
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 16
ಮೋದಿ ಅಲೆ, ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತ ಜಾತಿ ಬೆಂಬಲ, 10 ವರ್ಷಗಳ ಸಾಧನೆ, ಪಕ್ಷದ ಕಾರ್ಯಕರ್ತರ ಶ್ರಮ - ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿಗೆ ಬಲ ತಂದುಕೊಟ್ಟ ಪ್ರಮುಖ ಅಂಶಗಳು.
ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಶಾಸಕ ವಿನಯ ಕುಲಕರ್ಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಾಗ, ಪ್ರಹ್ಲಾದ ಜೋಶಿ ಅವರ ಹ್ಯಾಟ್ರಿಕ್ ಗೆಲುವಿಗೆ ಬ್ರೆಕ್ ಬಿತ್ತು ಎಂದೇ ಭಾವಿಸಲಾಗಿತ್ತು. ನಾಮಪತ್ರ ಸಲ್ಲಿಸಿ ಪ್ರಚಾರ ಶುರು ಮಾಡಿದಾಗಲೂ, ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತರು ಈ ಬಾರಿ ಒಂದಾಗಿ ಲಿಂಗಾಯತ ಕೋಮಿನವರೇ ಆದ ವಿನಯ ಕುಲಕರ್ಣಿ ಅವರಿಗೆ ಮತ ಹಾಕ್ತಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರೆಲ್ಲರೂ ಒಂದಾಗಿದ್ದು, ಜೋಶಿಗೆ ಇದು ಟಫ್ ಎಲೆಕ್ಷನ್ ಎನ್ನಲಾಗಿತ್ತು. ಶಾಸಕ ವಿನಯ ಕುಲಕರ್ಣಿ ಸಂಸದರಾಗುವುದು ನಿಶ್ಚಿತವೆಂದು ಒಂದು ಹಂತದಲ್ಲಿ ಅಂದಾಜಿಸಲಾಗಿತ್ತು.
ಲೆಕ್ಕಾಚಾರ ತಿರುವು-ಮುರುವು: ಆದರೆ, ಕಾಂಗ್ರೆಸಿಗರ ಲೆಕ್ಕಾಚಾರ ಶುಕ್ರವಾರ ತಿರುವು-ಮುರುವಾಗಿದ್ದು, ಮೋದಿ ಅಲೆಯ ನೆರವಿನೊಂದಿಗೆ ಪ್ರಹ್ಲಾದ ಜೋಶಿ, ವಿನಯ ಕುಲಕರ್ಣಿ ಅವರಿಗಿಂತ 1,13,657 ಮತಗಳ ಭಾರಿ ಅಂತರದಿಂದ ಜಯ ಗಳಿಸಿದರು. 17 ಸುತ್ತಗಳ ಪೈಕಿ ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡ ಜೋಶಿ, ಅರ್ಧ ಎಣಿಕೆ ಮುಗಿಯುವ ಹೊತ್ತಿಗೆ ತಮ್ಮ ಗೆಲವು ಬಹುತೇಕ ಖಚಿತಪಡಿಸಿಕೊಂಡಿದ್ದರು. ಮತ ಎಣಿಕೆ ಕೇಂದ್ರದ ಎದುರು ಆಗಲೇ ಬಿಜೆಪಿ ಕಾರ್ಯಕರ್ತರು ಖುಷಿಯಲ್ಲಿ ತೇಲುತ್ತಿದ್ದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೇರಿದಂತೆ ಬಿಜೆಪಿ ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಘಟಿತರಾಗಿ ಎಡಬಿಡದೆ ಪ್ರಾಮಾಣಿಕವಾಗಿ ಪ್ರಚಾರ ಕೈಗೊಂಡು ಎಲ್ಲ ಮತದಾರರನ್ನು ತಲುಪಿದ್ದರು. ಇದು ಪ್ರಹ್ಲಾದ ಜೋಶಿ ಅವರನ್ನು ಮತ್ತೆ ದೆಹಲಿಗೆ ಕಳುಹಿಸಲು ಸಾಧ್ಯವಾಯಿತು. ಇದೇ ವೇಳೆ, ಗುಂಪುಗಾರಿಕೆ ಬದಿಗಿಟ್ಟು ಕಾಂಗ್ರೆಸ್ ಮುಖಂಡರು ಹಗಲಿರುಳು ಶ್ರಮಿಸಿದರೂ ಮತದಾರರ ಮನ ಗೆಲ್ಲುವಲ್ಲಿ ವಿಫಲರಾದರು.
ಅಲ್ಲದೆ ಜೆಡಿಎಸ್ ಜಿಪಂ ಸದಸ್ಯ ಚುನಾವಣಾ ಪೂರ್ವದಲ್ಲಿಯೇ ಕಮಲ ಪಾಳೆಯಕ್ಕೆ ಜಿಗಿದಿದ್ದು ಜೋಶಿಗೆ ಬಲ ತಂದುಕೊಟ್ಟಿತು. ಇದರ ಪರಿಣಾಮ ವಿನಯ ಕುಲಕರ್ಣಿ ಪ್ರತಿನಿಧಿಸುತ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಮತಗಳಿಗಿಂತ ಈ ಬಾರಿ ವಿನಯ ಕಡಿಮೆ ಮತಗಳನ್ನು ಪಡೆಯಬೇಕಾಯಿತು. ಒಟ್ಟಾರೆ ಈ ಫಲಿತಾಂಶ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ತಂದಿಟ್ಟಿತು.
ಒಟ್ಟಾರೆಯಾಗಿ ಪ್ರಸ್ತುತ ಲೋಕಸಭಾ ಚುನಾವಣೆ ಫಲಿತಾಂಶ ಪ್ರಹ್ಲಾದ ಜೋಶಿ ಅವರಿಗೆ ಗೆಲುವಿನ ನಗೆ ಬೀರಲು ಅವಕಾಶ ಕಲ್ಪಿಸಿದರೆ, ಶಾಸಕ ವಿನಯ ಕುಲಕರ್ಣಿ ಸಂಸದರಾಗುವ ಕನಸನ್ನು ನುಚ್ಚುನೂರಾಗಿಸಿತು.
12,937 ನೋಟಾ ಚಲಾವಣೆ
ಧಾರವಾಡ: ಧಾರವಾಡ ಲೋಕಸಭೆ ಕ್ಷೇತ್ರದ ಚುನಾವಣಾ ಫಲಿತಾಂಶದಲ್ಲಿ 12,937 ನೋಟಾ (ತಿರಸ್ಕಾರದ ಮತ) ಗಳು ಬೀಳುವ ಮೂಲಕ 3ನೇ ಸ್ಥಾನ ಪಡೆದುಕೊಂಡಿದೆ. ಬಿಜೆಪಿಯ ಪ್ರಹ್ಲಾದ ಜೋಶಿ,5,45,395 ಮತ ಪಡೆದು ಜಯ ಸಾಧಿಸಿದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ವಿನಯ ಕುಲಕರ್ಣಿ 4,31,738 ಮತ ಪಡೆದು 2ನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ಜೆಡಿಎಸ್ ನ ಹನುಮಂತಪ್ಪ ಬಂಕಾಪುರ 8834 ಮತಗಳನ್ನು ಪಡೆದಿದ್ದರೂ ಹನುಮಂತಪ್ಪಗಿಂತ ನೋಟಾ ಮತಗಳೇ ಅಂದರೆ 12,937 ಜಾಸ್ತಿ ಇವೆ. ನವಲಗುಂದ ಕ್ಷೇತ್ರದಲ್ಲಿ 1462, ಕುಂದಗೋಳದಲ್ಲಿ 1702, ಧಾರವಾಡದಲ್ಲಿ 1901, ಹು-ಧಾ ಪೂರ್ವ 1222, ಹು-ಧಾ ಸೆಂಟ್ರಲ್ 1522, ಹು-ಧಾ ಪಶ್ಚಿಮ 1717, ಕಲಘಟಗಿ 1643, ಶಿಗ್ಗಾಂವ ಕ್ಷೇತ್ರದಲ್ಲಿ 1874 ಸೇರಿದಂತೆ ಒಟ್ಟು 12,937 ನೋಟಾ ಮತಗಳು ಬಿದ್ದಿವೆ.
ರಾಜ್ಯಾಧ್ಯಕ್ಷನಾಗಿ ಹೆಮ್ಮೆ...
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಸೋಲಿಗೆ ಕಾಂಗ್ರೆಸ್ ಅಪಹಾಸ್ಯ ಮಾಡಿತ್ತು. ಈಗ ಕಾಂಗ್ರೆಸ್ಸಿಗೆ ತಕ್ಕ ಶಾಸ್ತಿ ಆಗಿದೆ. ನಾನು ಬರಿ ಧಾರವಾಡದಲ್ಲಿ ಮಾತ್ರವಲ್ಲದೆರಾಜ್ಯದಲ್ಲೇ ಗೆದ್ದಿದ್ದೇನೆ. ಇಡೀ ರಾಜ್ಯಾದ್ಯಂತ ಬಿಜೆಪಿಗೆ ಅತ್ಯಧಿಕ ಸ್ಥಾನಗಳು ದೊರೆತಿದ್ದು, ರಾಜ್ಯಾಧ್ಯಕ್ಷನಾಗಿ ನನಗೆ ಹೆಮ್ಮೆ ಇದೆ.
- ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ
17 ಸುತ್ತಿನಲ್ಲೂ ಮುನ್ನಡೆ
ಮತ ಎಣಿಕೆಯ ದಿನ ಶುಕ್ರವಾರ ಸರಿಯಾಗಿ 8ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಯಿತು. ಆರಂಭದಲ್ಲಿ ಅಂಚೆ ಮತಗಳನ್ನು ಎಣಿಸಲಾಯಿತು. ಒಟ್ಟು 1,040 ಅಂಚೆ ಮತಗಳಲ್ಲಿ ಪ್ರಹ್ಲಾದ ಜೋಶಿಗೆ 538, ಕಾಂಗ್ರೆಸ್ಸಿನ ವಿನಯ ಕುಲಕರ್ಣಿಗೆ 229 ಮತಗಳ ಬಿದ್ದವು. ಮತಯಂತ್ರಗಳ ಮತ ಎಣಿಕೆ ಆರಂಭವಾದಾಗ, ಮೊದಲ ಸುತ್ತಿನಿಂದ 17 ಸುತ್ತಿನ ವರೆಗೂ ಪ್ರಹ್ಲಾದ ಜೋಶಿ ಭಾರಿ ಮುನ್ನಡೆ ಕಾಯ್ದುಕೊಂಡು ಬಂದರು.
ಯಾರ್ಯಾರಿಗೆ ಎಷ್ಟು ಮತ?
ಅಭ್ಯರ್ಥಿ ಪಕ್ಷ ಪಡೆದ ಮತ
ಪ್ರಹ್ಲಾದ ಜೋಶಿ ಬಿಜೆಪಿ 5,45,395
ವಿನಯ ಕುಲಕರ್ಣಿ ಕಾಂಗ್ರೆಸ್ 4,31,738
ಹನುಮಂತಪ್ಪ ಬಂಕಾಪುರ ಜೆಡಿಎಸ್ 8,836
ಈರಪ್ಪ ಮಾದರ ಬಿಎಸ್ಪಿ 6,858
ಶೈಲೇಂದ್ರಪಾಟೀಲ ಆಪ್ ಬಂಡಾಯ 6,196
ಪ್ರಮೋದ ಮುತಾಲಿಕ ಪಕ್ಷೇತರ 5,465
ಹೇಮಂತಕುಮಾರ್ ಆಪ್ 4,349
ಗುರುಶಾಂತಪ್ಪ ಚಲವಾದಿ ಆರ್ಪಿಓಐ 4,128
ಶ್ರೀಕಾಂತ ಕಬಾಡಿ ಪಕ್ಷೇತರ 3,018
ಸಂಜಯ ಕೊಠಾರಿ ಪಕ್ಷೇತರ 2,359
ವಿಕಾಸ ಸೊಪ್ಪಿನ ಪಕ್ಷೇತರ 2,174
ಗಂಗಾಧರ ಬಡಿಗೇರ ಕಮ್ಯುನಿಸ್ಟ್ 1,785
ಮಾರುತಿ ಹನಸಿ ಪಕ್ಷೇತರ 1,587
ಶಕೀಲ ದೊಡವಾಡ ಪಕ್ಷೇತರ 1,368
ಇರ್ಷಾದ್ ಅದೋನಿ ಪಕ್ಷೇತರ 1,053
ಇಮಾಮ್ಸಾಬ್ ತೋರಗಲ್ ಪಕ್ಷೇತರ 995
ಡೊಕ್ಕಾ ಆನಂದರಾಜ್ ಪಕ್ಷೇತರ 985
--
ಸುತ್ತು ಜೋಶಿ ಕುಲಕರ್ಣಿ ಅಂತರ
1. 36667 26781 9886
2. 73494 54517 18977
3. 104553 87720 16833
4. 144309 113625 30684
5. 183431 139545 43886
6. 220970 166396 54574
7. 255930 197418 58512
8. 293325 224142 69183
9. 330005 250842 79163
10. 362214 282937 79277
11. 392864 314021 78846
12. 428083 342886 85197
13. 465334 372078 93256
14. 497535 397112 100423
15. 526791 416654 110137
16. 541993 429181 112812
17. 545395 431738 113657
ವಿಧಾನಸಭೆ ಕ್ಷೇತ್ರವಾರು ಮತ
ಕ್ಷೇತ್ರ ಜೋಶಿ ಕುಲಕರ್ಣಿ
ನವಲಗುಂದ 55,213 59,334
ಕುಂದಗೋಳ 58,535 49,137
ಧಾರವಾಡ 74,349 49,760
ಹು-ಧಾ ಪೂರ್ವ 55,903 64,038
ಹು-ಧಾ ಸೆಂಟ್ರಲ್ 82,108 50,026
ಹು-ಧಾ ಪಶ್ಚಿಮ 77,496 56,009
ಕಲಘಟಗಿ 71,448 45,200
ಶಿಗ್ಗಾಂವಿ 69,805 58,005
ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

