ಗುಲ್ಬರ್ಗಾ

ಸಮಸ್ಯೆಗೆ ಮುಕ್ತಿ ಯಾವಾಗ?

Published On :

ಚಿತ್ತಾಪುರ ಬಸ್ ಘಟಕದಲ್ಲಿ ಬಸ್ಸಿಗೇನು ಕೊರತೆಯಿಲ್ಲ; ನಿರ್ವಹಣೆ ಮಾತ್ರ ಶೂನ್ಯ
ಕನ್ನಡಪ್ರಭ ವಾರ್ತೆ ಚಿತ್ತಾಪುರ ಆ.12
ಒಂದು ಕಾಲಕ್ಕೆ ಜಿಲ್ಲೆಯಲ್ಲಿಯೇ ಯಶಸ್ವಿ ಎಂದು ಪ್ರಸಿದ್ಧಿಯಾಗಿದ್ದ ಚಿತ್ತಾಪುರ ಬಸ್ ಘಟಕ ಇಂದು ಅನೇಕ ವಿವಾದಗಳಲ್ಲಿ ಸಿಲುಕಿರುವುದು ವಿಪರ್ಯಾಸ.
ಬಸ್ ಘಟಕವಾಗಲಿ ಅಥವಾ ಬಸ್ ನಿಲ್ದಾಣವಾಗಲಿ ಚರ್ಚೆಯಲ್ಲಿರುವುದು ಸಾಮಾನ್ಯ ವಿಷಯವಾಗಿದೆ. ಆದರೆ ನಡುದಾರಿಯಲ್ಲಿ ಬಸ್ ನಿಂತಾಗ ಹತ್ತಾರು ಪ್ರಯಾಣಿಕರು ಹೊಗಲಿ ಸ್ವಾಮಿ ಮುಂದಕ್ಕೆ, ಹೋಗಲ್ಲಿ ಸ್ವಾಮಿ ಮುಂದಕ್ಕೆ... ಎಂದು ಕೂಗುವುದು ಕಂಡರೇ ಅದು ಚಿತ್ತಾಪುರ ಘಟಕದ ಬಸ್ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಗೋಳಿನ ಕಥೆ: ಚಿತ್ತಾಪುರ ಘಟಕದಲ್ಲಿ ಬಸ್ಸಿಗೇನು ಕೊರತೆಯಿಲ್ಲ. ಅಲ್ಲದೆ ಸಿಬ್ಬಂದಿ ಹಾಗೂ ಮೆಕಾನಿಕ್‌ರಿಗೂ ಬರವಿಲ್ಲ. ಉತ್ತಮ ಅನುಭವ ಹೊಂದಿರುವ ಚಾಲಕರು ಮತ್ತು ನಿರ್ವಾಹಕರು ಕೂಡ ಹೊಂದಿದೆ. ಆದರೆ ಅವರಿಂದ ಕೆಲಸ ತೆಗೆಸಿಕೊಳ್ಳುವ ಮನೋಭಾವ ಅಧಿಕಾರಿಗಳಿಗಿಲ್ಲ.
ಇರುವ ಬಸ್‌ಗಳಿಗೆ ಸರಿಯಾದ ನಿರ್ವಹಣೆ ಇಲ್ಲದೇ ಇರುವುದರಿಂದ ಒಡೆದಿರುವ ಗಾಜು, ಹರಿದು ಹೋಗಿರುವ ಸೀಟು, ಗಾಜುಗಳಿಲ್ಲದ ಕಿಟಕಿ, ಕಿತ್ತುಹೋಗಿರುವ ಟಾಪ್- ಇವೆಲ್ಲ ಚಿತ್ತಾಪುರ ಘಟಕದ ಬಸ್ಸುಗಳ ವಿಶೇಷತೆ.
ಇಂತಹ ಬಸ್‌ನಲ್ಲಿ ಪ್ರಯಾಣಿಕರು ರಾತ್ರಿ ವೇಳೆ ಪ್ರಯಾಣಿಸಿದರೆ ಖಂಡಿತ ಊರು ತಲುಪುವುದು ಗ್ಯಾರಂಟಿಯಿಲ್ಲ. ಇದು ಚಿತ್ತಾಪುರ ಬಸ್ ಡಿಪೋದ ನಿತ್ಯದ ಗೋಳಿನ ಕಥೆಯಿದು. ತಾಲೂಕಿನಲ್ಲಿ ಉನ್ನತ ವ್ಯಾಸಂಗಕ್ಕೆ ಸರಿಯಾದ ಶಾಲಾ- ಕಾಲೇಜುಗಳು ಇಲ್ಲದೆ ಇರುವುದರಿಂದ ಹೆಚ್ಚಿನ ಮಕ್ಕಳು ಗುಲ್ಬರ್ಗಕ್ಕೆ ಹೋಗುವರು. ವ್ಯಾಪಾರಸ್ಥರು, ಸರ್ಕಾರಿ ನೌಕರರು, ಪ್ರಯಾಣಿಕರು ಪ್ರತಿದಿನ ಗುಲ್ಬರ್ಗಕ್ಕೆ ಹೋಗುವ ಅನಿವಾರ್ಯತೆ ಇದೆ.
ಭರವಸೆ ಇಲ್ಲದ ಬಸ್: ನಮಗೆ ಸರಿಯಾಗಿ ಸಮಯಕ್ಕೆ ಬಸ್ ಸಿಗುತ್ತದೆ ಎಂದು ತಿಳಿದುಕೊಂಡರೆ ಅದು ತಪ್ಪು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಧ್ಯಾಹ್ನ 2 ಗಂಟೆಗೆ ಬಿಟ್ಟು ನಿಲ್ದಾಣಕ್ಕೆ ಬಂದರೆ ಸಂಜೆ 6 ತನಕ ಬಸ್ಸಿಗಾಗಿ ಕಾಯಬೇಕು. ಇದು ಭರವಸೆ ಇಲ್ಲದ ಬಸ್ ಡಿಪೋ ಎಂದು ವಿದ್ಯಾರ್ಥಿ ಮಲ್ಲಿಕಾರ್ಜುನ ಕೊಡದೂರ ನೋವಿನಿಂದ ಹೇಳುತ್ತಾರೆ.
ಒಂದು ದಿನದ ಪಾಸ್ ವ್ಯವಸ್ಥೆ ಮಾಡಬೇಕು ಎನ್ನುವುದು ಬಹುದಿನದ ಬೇಡಿಕೆ ಇನ್ನುವರೆಗೂ ಈಡೇರಿಲ್ಲ. ಜಿಲ್ಲೆಯಲ್ಲಿ ಅತೀ ಹೆಚ್ಚು ಲಾಭ ತರುವ ಡಿಪೋ ಎಂದು ಹೆಸರು ಇತ್ತು. ಅಂತಹ ಟಾಪ್ ಡಿಪೋ ಇಂತಹ ಸ್ಥಿತಿಗೆ ಬರಲು ಕಾರಣ ಯಾರು? ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ.

ಕೆಸರು ಗದ್ದೆಯಾದ ರಾವೂರ- ಚಿತ್ತಾಪುರ ರಸ್ತೆ
ಕನ್ನಡಪ್ರಭ ವಾರ್ತೆ ಚಿತ್ತಾಪುರ ಆ.12
ಚಿತ್ತಾಪುರ ಕ್ರಾಸ್‌ನಿಂದ ರಾವೂರ ಕ್ರಾಸ್‌ವರೆಗಿನ ಸುಮಾರು 5 ಕಿ.ಮೀ. ರಸ್ತೆ ಕಾಮಗಾರಿ ಆರಂಭವಾಗಿ ಹಲವು ತಿಂಗಳುಗಳು ಕಳೆದರೂ ಮುಗಿಯುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಇದಕ್ಕೆಲ್ಲಾ ಪರಿಹಾರ ಕಂಡು ಹಿಡಿಯಬೇಕಾದವರು ಮಾತ್ರ ಇದರ ಕಡೆ ಗಮನಹರಿಸದಿರುವುದು ಇಲ್ಲಿನ ಜನರ ದುರಾದೃಷ್ಠವೇ ಸರಿ.
ಈಗ ಮಳೆಗಾಲವಾಗಿರುವುದರಿಂದ ಅಲ್ಲದೇ ಕಳೆದ ಹದಿನೈದು ದಿನಗಳಿಂದ ಈ ಭಾಗದಲ್ಲಿ ತುಂತುರು ಮಳೆ ಬರುತ್ತಿರುವುದರಿಂದ ರಸ್ತೆಯು ಸಂಪೂರ್ಣ ಕೆಸರಿನಿಂದ ಕೂಡಿದ ಗದ್ದೆಯಂತಾಗಿದ್ದು, ಇದರಿಂದ ಚಿತ್ತಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು 6 ಕಿ.ಮೀ. ರಸ್ತೆಯಲ್ಲಿ ಸಂಚರಿಸುವಾಗ ತಮ್ಮ ಜೀವ ಕೈಯಲ್ಲಿ ಹಿಡಿದು ಯಾವ ಕ್ಷಣದಲ್ಲಿ ಏನಾಗುವುದೋ ಎಂಬ ಆತಂಕದಲ್ಲಿ ಪ್ರಯಾಣಿಸಬೇಕಾದ ಸ್ಥಿತಿ ಬಂದೋದಗಿದೆ. ಇದರಿಂದ  ಜನಸಾಮಾನ್ಯರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸರಿಯಾದ ಸಮಯಕ್ಕೆ ತಲುಪದೆ ತುಂಬಾ ತೊಂದರೆ ಅನುಭವಿಸುವಂತಾಗಿದೆ.
ರಸ್ತೆಯ ಅರ್ಧಭಾಗ ಕಾಮಗಾರಿ ಪೂರ್ತಿಗೊಳಿಸಿದ ನಂತರ ಇನ್ನು ಅರ್ಧ ಕಾಮಗಾರಿ ಪ್ರಾರಂಭಿಸದೆ ಪೂರ್ತಿ ರಸ್ತೆಯನ್ನು ಅಗೆದು, ಕಂಕರ್, ಮುರುಮ ಹಾಕಿರುವುದರಿಂದ ಮಳೆಗೆ ಮುರುಮ ಕೊಚ್ಚಿಕೊಂಡು ಹೋಗಿ ತಗ್ಗುಗಳು ಬಿದ್ದು ವಾಹನಗಳು ಸಂಚರಿಸಲು ತೊಂದರೆಪಡುತ್ತಿದ್ದು, ಇದರಿಂದ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿ ಜನತೆ ಗಾಯಗೊಂಡಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಈ ರಸ್ತೆಯನ್ನು ಖುದ್ದಾಗಿ ಗಮನಿಸಿ ಕಾಮಗಾರಿ ವಿಳಂಬ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂಬುವುದು ಜನರ ಒತ್ತಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.