ಶಿವ ಶಿವ ಎಂದರೆ ಭಯವಿಲ್ಲ...
ಗುಲ್ಬರ್ಗ: ನಗರದಲ್ಲಿ ಭಾನುವಾರದ ಶಿವರಾತ್ರಿ ಭಕ್ತಜನರಿಂದ ಸಂಭ್ರಮ- ಸಡಗರಗಳಿಂದ ಆಚರಿಸಲ್ಪಟ್ಟಿತು. ನಗರದಲ್ಲಿರುವ ಪುರಾಣಪ್ರಸಿದ್ಧ ರಾಮತೀರ್ಥ ಶಿವಮಂದಿರ, ಬ್ರಹ್ಮಪುರದ ಸದಾಶಿವ ಮಹಾರಾಜರ ಭವಾನಿ ಶಂಕರ ಮಂದಿರ, ಆಳಂದದ ನರೋಣಾ ಶಿವಮಂದಿರ, ಕಾಳಗಿ ಶಿವಾಲಯ, ಶಿವ ಮಂದಿರ ಸೇರಿದಂತೆ ನಗರ ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ಶಿವದರ್ಶನ ಪಡೆಯಲು ಭಕ್ತರು ಸರತಿಯಲ್ಲಿದ್ದರು.
ರಾಮತೀರ್ಥದಲ್ಲಂತೂ ಶಿವಲಿಂಗಕ್ಕೆ ಮಾಡಲಾಗಿದ್ದ ಪುಷ್ಪಾಲಂಕಾರ ಭಕ್ತರ ಗಮನ ಸೆಳೆಯಿತು. ಗುಲಾಬಿ, ಶಾವಂತಿಗೆ, ಮಲ್ಲಿಗೆ ಸೇರಿದಂತೆ ತರಹೇವಾರಿ ಪುಷ್ಪಗಳಿಂದ ಮಾಡಲಾದ ಅಲಂಕಾರದಲ್ಲಿ ಕಂಗೊಳಿಸಿದ ಶಿವಲಿಂಗಕ್ಕೆ ಭಕ್ತರು ಭಕ್ತಿಯಿಂದ ಪೂಜಿಸಿದರು. ಬೆಳಗ್ಗೆಯಿಂದಲೇ ಶುರುವಾದ ಶಿವಲಿಂಗ ದರುಶನಕ್ಕಾಗಿ ಸರತಿ ಸಾಲು ರಾತ್ರಿಯಾದರೂ ಹಾಗೇ ಮುಂದುವರಿದಿತ್ತು.
ಇತ್ತ ಭವಾನಿ ಶಂಕರ ಮಂದಿರವಿರುವ ಬ್ರಹ್ಮಪುರದಲ್ಲಿಯೂ ಭಕ್ತರ ಸಾಲುಗಳು ಉದ್ದವಾಗೇ ಇದ್ದವು. ಉರಿ ಬಿಸಿಲಿನಿಂದ ಭಕ್ತರಿಗೆ ರಕ್ಷಣೆ ನೀಡಲು ದೇವಸ್ಥಾನ ಮಂಡಳಿ ಶಾಮಿಯಾನಾ ಹಾಕಿಸಿತ್ತು.
ಬಿದ್ದಾಪುರದಲ್ಲಿ ರುದ್ರಾಭಿಷೇಕ: ಇಲ್ಲಿನ ಬಿದ್ದಾಪುರ ರಾಘವೇಂದ್ರ ಸ್ವಾಮಿ ಮಠದಲ್ಲಿರುವ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಲಾಯಿತು.
ರುದ್ರಾಭಿಷೇಕದ ನಂತರ ಲಕ್ಷ ಬಿಲ್ವಾರ್ಚನೆ, ಸಂಜೆ ಹೊತ್ತು ಸೌಂದರ್ಯ ಲಹರಿ ಪಾರಾಯಣ, ಹುಮ್ನಾಬಾದ್ನ ಮಾಣಿಕಪ್ರಭು ಸಂಸ್ಥಾನ ಮಠದ ಜ್ಞಾನರಾಜ ಮಹಾರಾಜ್ರಿಂದ ಉಪನ್ಯಾಸಗಳು ನಡೆದವು.
ವಿದ್ಯಾನಗರದಲ್ಲಿ: ಸೇಡಂ ರಸ್ತೆಯಲ್ಲಿರುವ ವಿದ್ಯಾನಗರದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಕಲಾವಿದರಾದ ಬಸಯ್ಯಸ್ವಾಮಿ ಹಾಗೂ ಗಾಯತ್ರಿ ಇವರ ಗಾಯನ, ರವಿಸ್ವಾಮಿ ಗೋಟೂರ್ ಇವರ ವಚನ ಸಂಗೀತ ಬಡಾವಣೆಯ ಭಕ್ತರ ಗಮನ ಸೆಳೆಯಿತು.
ವಿದ್ಯಾನಗರ ವೆಲ್ಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ನೇತೃತ್ವದಲ್ಲಿ ಇಲ್ಲಿನ ಸಕಲ ಶಿವರಾತ್ರಿ ಕಾರ್ಯಕ್ರಮಗಳು ವಿಶೇಷ ರೀತಿಯಲ್ಲಿ ಆಯೋಜಿತವಾಗಿದ್ದವು. ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

