17ರಂದು ದೇವಸ್ಥಾನ ಉದ್ಘಾಟನೆ
ಗುಲ್ಬರ್ಗ: ತಾಲೂಕಿನ ಜಾಫರಬಾದ್ ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ವೆ ನಂ. 21/5ರಲ್ಲಿ ಆದಿಶಕ್ತಿ ಅಂಬಾ ಭವಾನಿ ಗುಡಿ ಕಟ್ಟಡದ ಉದ್ಘಾಟನಾ ಸಮಾರಂಭ ಮತ್ತು ಮೂರ್ತಿ ಪ್ರತಿಷ್ಠಾನ ಕಾರ್ಯಕ್ರಮ ಮೇ 17ರಂದು ನಡೆಯಲಿದೆ. ಮೇ 14ರಂದು ಸಂಜೆ 4ರಿಂದ 6ರವರೆಗೆ ಮೂರ್ತಿ ಮೆರವಣಿಗೆ ನಡೆಯಲಿದೆ. ಮೇ 15ರಂದು ಗೋಮಯಾದಿ ವಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೇ 16ರಂದು ಮೂರ್ತಿಯ ಬಲ ಅಭಿಷೇಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೇ 17ರಂದು ಕಟ್ಟಡದ ಉದ್ಘಾಟನೆ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮ ನಡೆಯಲಿದೆ. ಬಬಲಾದ ಮಠದ ರೇವಣಸಿದ್ದ ಶಿವಾಚಾರ್ಯರು, ಸಾವಳಗಿ ಮಠದ ಸಿದ್ಧಬಸವ ಕಬೀರಾನಂದ ಸ್ವಾಮೀಜಿ, ರುಕ್ಮೊದ್ದೀನ್ ತೋಲಾ ದರ್ಗಾದ ಹಜರತ್ ಬಾಷುಮಿಯಾ ಸಜ್ಜಾದೆ, ಅಣ್ಣಾರಾವ ಮಲ್ಲಿಕರಾವ ಮಗರ ತುಳಜಾಪುರ ಭೂತೆ ಪಾಲ್ಗೊಳ್ಳಲಿದ್ದಾರೆ.
ಬೈಕ್ ಚಾಲಕನ ವಿರುದ್ಧ ದೂರು
ಗುಲ್ಬರ್ಗ: ಮಧ್ಯಪಾನ ಮಾಡಿ ದ್ವಿಚಕ್ರ ವಾಹನವನ್ನು ವೇಗವಾಗಿ ಚಲಿಸಿ ಸಾರ್ವಜನಿಕರಿಗೆ ಭಯ ಹುಟ್ಟಿಸಿದ ಚಾಲಕನ ವಿರುದ್ಧ ಹೆಚ್ಚುವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೋಹರ ಎಂಬಾತ ಮಧ್ಯಪಾನ ಮಾಡಿ ದ್ವಿಚಕ್ರ ವಾಹನದ ಮೇಲೆ ಇಬ್ಬರನ್ನು ಕೂಡಿಸಿಕೊಂಡು ಕುಳಗೇರಿ ಕ್ರಾಸ್ ಕಡೆಯಿಂದ ಲಾಹೋಟಿ ಕ್ರಾಸ್ ಕಡೆಗೆ ಇತರ ವಾಹನ ಸವಾರರಿಗೆ ಭಯ ಹುಟ್ಟಿಸುವಂತೆ ವಾಹನ ಚಲಿಸಿಕೊಂಡು ಬರುತ್ತಿರುವುದನ್ನು ಗಮನಿಸಿ ಹೆಚ್ಚುವರಿ ಪಿಎಸ್ಐ ಚಂದ್ರಶೇಖರ ತಿಗಡಿ ಅವರು ಹಿಡಿದು ಆತನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಜೂಜುಗಾರರ ಬಂಧನ
ನಗರದ ಮಾಸಾಪ್ತಿ ದರ್ಗಾದ ಹತ್ತಿರ ಗಿಡದ ಕೆಳಗೆ ಜೂಜಾಟದಲ್ಲಿ ತೊಡಗಿದ್ದ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ನೂರಂದಯ್ಯ ಸ್ವಾಮಿ ಮಠಪತಿ, ಸಂತೋಷ ಗಾಜಿಲೆ, ಶರಣು ಬಂಡೆಪ್ಪ ಮಹಾಗಾಂವ, ಭೀಮಾಶಂಕರ ಹೂಗಾರ, ರಾಚಣ್ಣ ಚುಂಚಕೋಟಿ, ಆನಂದ ಸೂಗೂರ, ಲಿಂಬಾಜಿ ಸಿಂಧೆ, ವಿಠ್ಠಲ ಸಿಂಧೆ ಎಂಬುವರನ್ನು ಬಂಧಿಸಿ ಜೂಜಾಟಕ್ಕೆ ಬಳಸಿದ ನಗದು ಹಣವಶಪಡಿಸಿಕೊಂಡಿದ್ದಾರೆ. ಗುಲ್ಬರ್ಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ
ಗುಲ್ಬರ್ಗ: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ 2013- 14ನೇ ಸಾಲಿನ ಮೂರು ಹಾಗೂ ಐದನೇ ಸೆಮಿಸ್ಟರ್ಗೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಸೆಮಿಸ್ಟರ್ಗಳಿಗೆ ಪ್ರವೇಶ ಪಡೆಯಲು 2009- 10ನೇ ಸಾಲಿನಲ್ಲಿದ್ದಂತೆ ಉಚ್ಚ ನ್ಯಾಯಾಲಯದ 10.9.2012ರ ಆದೇಶದನ್ವಯ 1ರಿಂದ 4ನೇ ಸೆಮಿಸ್ಟರ್ಗಳಲ್ಲಿ ನಾಲ್ಕು ಅಥವಾ ಕಡಿಮೆ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಲ್ಲಿ ಮಾತ್ರ ಅರ್ಹತೆಯನ್ನು ಹೊಂದಿರುತ್ತಾರೆ ಎಂದು ಪ್ರಾಚಾರ್ಯ ಪಾಟೀಲ್ ತಿಳಿಸಿದ್ದಾರೆ.
ಹತ್ತಿಕುಣಿ: ಬಸವ ಜಯಂತಿ ಆಚರಣೆ
ಯಾದಗಿರಿ: ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಸೋಮವಾರ ಸ್ಥಳೀಯ ವೀರಶೈವ ಸಮಾಜದ ವತಿಯಿಂದ ಬಸವ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆ ಗ್ರಾಮದ ಹಿಂದುಳಿದ ವರ್ಗದ ವಸತಿ ಗೃಹದ ಮುಖ್ಯ ರಸ್ತೆಯಲ್ಲಿ ವೇದಮೂರ್ತಿ ಶರಣಯ್ಯ ಸ್ವಾಮಿ ಹಿರೇಮಠ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು, ಹಲಗೆ, ಬಾಜಾ ಭಜಂತ್ರಿ ವಿವಿಧ ಸಂಗೀತ ವಾದ್ಯಗಳು ಮೆರವಣಿಗೆಗೆ ಮೆರಗು ನೀಡಿದವು. ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಗಮಗೊಂಡಿತು. ಮೆರವಣಿಗೆಯಲ್ಲಿ ಗ್ರಾಮದ ವೀರಶೈವ ಸಮಾಜದ ಮುಖಂಡರು ಹಾಗೂ ಯುವಕರು ಅಪಾರ ಜನತೆ ಪಾಲ್ಗೊಂಡಿದ್ದರು.
ನಗರಾಭಿವೃದ್ಧಿ ಸಂಘ ಪದಾಧಿಕಾರಿಗಳು
ಗುಲ್ಬರ್ಗ: ಗೋದುತಾಯಿ ನಗರ ಅಭಿವೃದ್ಧಿ ಸಂಘದ 2013-14ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಬಸವರಾಜಪ್ಪ ಅಪ್ಪ ಅವರ ಸಮ್ಮುಖದಲ್ಲಿ ಹಾಲಿ ಅಧ್ಯಕ್ಷ ಜಂಬನಗೌಡ ಶೀಲವಂತ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸೋಮಶೇಖರ ಟೆಂಗಳಿ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಖಾಡೆ, ಜಾನಪ್ಪಗೌಡ, ಗಂಗಾಧರ ಮುನ್ನೋಳ್ಳಿ, ಶರಣಗೌಡ ಪಾಟೀಲ್, ಕಾರ್ಯದರ್ಶಿಯಾಗಿ ಶಾಂತವೀರ ತುಪ್ಪದ, ಸಂಘಟನಾ ಕಾರ್ಯದರ್ಶಿಯಾಗಿ ಎಸ್.ಎಂ. ಹೊಳಿ, ಸಹ ಕಾರ್ಯದರ್ಶಿಯಾಗಿ ಶಿವಶಂಕರ ಶೀಲವಂತ, ಗುರುಸ್ವಾಮಿ ಕೆ. ಮತ್ತು ಖಜಾಂಚಿಯಾಗಿ ಗುರುನಾಥ ಭಾವಿ ಆಯ್ಕೆಗೊಂಡರು. ಚಂದ್ರಶೇಖರ ಶೀಲವಂತ, ಚಂದ್ರಶೇಖರ ಶೀಲವಂತ ಇತರರು ಉಪಸ್ಥಿತರಿದ್ದರು.
ಕಾಮೆಡ್- ಕೆ ಪರೀಕ್ಷೆ ಯಶಸ್ವಿ
ಗುಲ್ಬರ್ಗ: ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯ ಮೊದಲಾದ ವೃತ್ತಿಪರ ಶಿಕ್ಷಣ ಪ್ರವೇಶಕ್ಕಾಗಿ ಖಾಸಗಿ ಆಡಳಿತ ಮಂಡಳಿಗಳು ನಡೆಸುವ ಕಾಮೆಡ್- ಕೆ ಸ್ಪರ್ಧಾತ್ಮಕ ಪರೀಕ್ಷೆಗಳು ಗುಲ್ಬರ್ಗದಲ್ಲಿ ಭಾನುವಾರ ನಡೆದವು. ನಗರದ ಶರಣಬಸವೇಶ್ವರ ವಿಶ್ವವಿದ್ಯಾಲಯ, ನೊಬೆಲ್, ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ನಗರದ 6ಕ್ಕೂ ಕೇಂದ್ರಗಳಲ್ಲಿ ಕಾಮೆಡ್- ಕೆ ಸಿಇಟಿ ನಡೆಯಿತು. ಗುಲ್ಬರ್ಗ ಹಾಗೂ ನೆರೆಯ ಜಿಲ್ಲೆಗಳ ವಿದ್ಯಾರ್ಥಿಗಳು ಸೇರಿದಂತೆ 5100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು. ಅದರಲ್ಲೂ ನೆರೆಯ ಆಂಧ್ರಪ್ರದೇಶದ ಹೈದ್ರಾಬಾದ್, ಮೆಹಬೂಬನಗರ, ಕಡಪಾ, ಮೇಡಕ್, ಕರ್ನೂಲ್ ಮೊದಲಾದ ಜಿಲ್ಲೆಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಪರೀಕ್ಷೆಯನ್ನು ಬರೆದಿದ್ದು ವಿಶೇಷ. ಅಪ್ಪ ವಿಶ್ವವಿದ್ಯಾಲಯ ಬಳಿ ವಾಹನಗಳು ರಸ್ತೆಯ ಬದಿಯಲ್ಲಿ ನಿಂತಿದ್ದವು. ಪರೀಕ್ಷೆಗೆ ಮುನ್ನಾ ದಿನವೇ ಮಕ್ಕಳೊಂದಿಗೆ ಪೋಷಕರು ಬಿಸಿಲೂರು ಗುಲ್ಬರ್ಗಕ್ಕೆ ಬಂದಿದ್ದರಿಂದ ನಗರದ ಎಲ್ಲ ಖಾಸಗಿ ವಸತಿ ಗೃಹಗಳು ಫುಲ್ ರಶ್ ಆಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

