'ಅಕ್ಷಯ ಪಾತ್ರೆ' ಯೋಜನೆ ಜಾರಿಗೆ
ಗುಲ್ಬರ್ಗ: ನಗರದ ವಿದ್ಯಾನಗರದ ಶ್ರೀಕೃಷ್ಣ ಮಂದಿರದ ಜಯತೀರ್ಥ ವಿದ್ಯಾರ್ಥಿ ನಿಲಯದಲ್ಲಿ ವಾಸಿಸುವ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸುವ ಸಲುವಾಗಿ ಸೋಮವಾರದಿಂದ ಅಕ್ಷಯ ಪಾತ್ರೆ ಯೋಜನೆಯನ್ನು ಪ್ರಾರಂಭಿಸಲಾಗಿದೆ.ಈ ಯೋಜನೆಯಡಿ ಸದಸ್ಯರು, ಪೋಷಕರು, ಮಹಾಪೋಷಕರು ಎಂದು ಸದಸ್ಯತ್ವ ಮಾಡಲಾಯಿತು. ಸದಸ್ಯತ್ವ ಕಾಣಿಕೆ 5000, ಪೋಷಕರು 5000 ಮೇಲ್ಪಟ್ಟು, 25000 ಮೇಲ್ಪಟ್ಟು ಕೊಡುವವರನ್ನು ಮಹಾಪೋಷಕರೆಂದು ಸದಸ್ಯತ್ವವನ್ನು ಪಡೆಯಲಾಯಿತು. ಈ ಯೋಜನೆ ಸದಸ್ಯರೆಲ್ಲರನ್ನು ಶ್ರೀಕೃಷ್ಣ ವರ್ಧಂತಿ ಉತ್ಸವದಂದು ಆಮಂತ್ರಿಸಿ ಗೌರವ ಸಮರ್ಪಿಸಲಾಗುವುದು.
ಜನಮನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ಗುಲ್ಬರ್ಗ: ಜಿಲ್ಲೆಯ ಇಂಗನಕಲ್ ಗ್ರಾಮದ ಹನುಮಾನ್ ದೇವಸ್ಥಾನದ ಆವರಣದಲ್ಲಿ ಲಲಿತ ಕಲಾ ಸೇವಾ ಸಂಸ್ಥೆ ಹಾಗೂ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 58ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಹೊಸಮನಿ ಕಾರ್ಯಕ್ರಮ ಉದ್ಘಾಟಿಸಿದರು. ವೀರಭದ್ರಯ್ಯ ಸ್ವಾಮಿ, ಸಿದ್ದಣ್ಣ ಮಂಗಲಗಿ, ಶಿವರಾಯ ಕೊರಬಾ, ಅಮೃತರಾಯ ಮಾಸ್ತರ್, ಚಂದ್ರಶೇಖರ ಹಾಳಕಾಯಿ, ಕಂಟೆಪ್ಪ ಮಾನಕರ್, ರುಕುಮ ಶಾಹ ಮಂಗಲಗಿ, ರೇವಣಸಿದ್ದಪ್ಪ ಮುದಗೊಂಡ ಮತ್ತಿಮಡು, ಚಂದ್ರಶಾ ಹುಣಸಿಕರ್, ಗ್ರಾಮದ ಸಮಸ್ತ ಗಣ್ಯರು ಉಪಸ್ಥಿತರಿದ್ದರು. ಸೈದಪ್ಪ ಚೌಡಾಪುರ, ರುದ್ರಪ್ಪ ಪಾಟೀಲ್, ಬಸವರಾಜ ಶೆಳ್ಳಗಿ, ದೇವೇಂದ್ರ ಸ್ವಾಮಿ ಅವರು ಜನಪದ ಗೀತೆ, ವಚನ ಗಾಯನ, ಭಕ್ತೀ ಗೀತೆಗಳನ್ನು ಹಾಡಿ ಜನಮನ ರಂಜಿಸಿದರು. ಇವರಿಗೆ ರವಿಸ್ವಾಮಿ ಗೋಟೂರ್ ತಬಲಾ ಸಾಥ್ ನೀಡಿದರು. ನಂತರ ಹೇಮಂತ ಮಾಲಗತ್ತಿ (ಜೂ. ರಾಜಕುಮಾರ್) ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ದೇವಾನಂದ ಬಿಲಗುಂದಿ ಅಧ್ಯಕ್ಷತೆ ವಹಿಸಿದ್ದರು. ಅಣ್ಣಾರಾವ ಶೆಳ್ಳಗಿ ಮತ್ತಿಮಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಸ್ವಾಗತಿಸಿ, ಕರಣಪ್ಪ ನಿರೂಪಿಸಿದರು. ಬಾಬುರಾವ ಕೋಬಾಳ ವಂದಿಸಿದರು.
ರಾಚಣ್ಣದೇವರ ಜಾತ್ರೆ ಇಂದಿನಿಂದ
ಗುಲ್ಬರ್ಗ: ತಾಲೂಕಿನ ಪಟ್ಟಣ ಗ್ರಾಮದ ಶ್ರೀರಾಚಣ್ಣ ದೇವರ ಜಾತ್ರಾ ಮಹೋತ್ಸವ ನ.8 ಮತ್ತು 9ರಂದು ನಡೆಯಲಿದೆ ಎಂದು ಶಹಾಬಾದ್ ವಿಶ್ವಕರ್ಮ ವಿಕಾಸ ಸಂಸ್ಥೆ ಅಧ್ಯಕ್ಷ ವೀರಣ್ಣ ಸುತಾರ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 8ಕ್ಕೆ ಅಗ್ನಿ ಪುಟು ಮತ್ತು ಭಜನೆ ಕಾರ್ಯಕ್ರಮ ನಡೆಯುವುದು. 9ರಂದು ಬೆಳಗ್ಗೆ 5ಕ್ಕೆ ಅಗ್ನಿ ಪ್ರವೇಶ, ಗ್ರಾಮದ ಬೀದಿಗಳಲ್ಲಿ ಪುರವಂತರ ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವ ನಡೆಯುವುದು ಎಂದು ತಿಳಿಸಿದ್ದಾರೆ.
ಮೂಲಸೌಕರ್ಯಕ್ಕೆ 1 ಕೋಟಿ
ಚಿಂಚೋಳಿ: ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಬರುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಾಡಿ, ಪೋಡು, ಹಟ್ಟಿ, ಓಣಿಗಳಲ್ಲಿ ವಾಸಿವ ಜನರಿಗೆ ಸರ್ಕಾರ ಮೂಲಸೌಕರ್ಯ ನೀಡುವುದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ 2013-14ನೇ ಸಾಲಿನಲ್ಲಿ 1 ಕೋಟಿ ಮಂಜೂರಿಗೊಳಿಸಿದ್ದು, ಈಗಾಗಲೇ 40 ಲಕ್ಷ ಬಿಡುಗಡೆಯಾಗಿದೆ. ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ್ ಸುಗಂಧಿ ತಿಳಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ ಜನರು ವಾಸಿಸುವ ಬಡಾವಣೆಯಗಳಲ್ಲಿ ಸಿಮೆಂಟ್ ರಸ್ತೆ ಮತ್ತು ಒಳಚರಂಡಿ ನಿರ್ಮಾಣ, ಬೀದಿ ದೀಪ, ಸಾಮೂಹಿಕ ಮಹಿಳಾ ಶೌಚಾಲಯ, ಕುಡಿವ ನೀರಿನ ಮೂಲ ಸೌಕರ್ಯಗಳನ್ನು ನೀಡುವುದು ಸರ್ಕಾರದ ಮುಖ್ಯ ಉದ್ದೇಶ. ಶಾಸಕ ಡಾ. ಉಮೇಶ ಜಾಧವ ಅವರ ಅಧ್ಯಕ್ಷತೆಯಲ್ಲಿ ಗ್ರಾಮಗಳ ಆಯ್ಕೆಗೊಳಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ರಾಜ್ಯಪ್ರಶಸ್ತಿ
ಗುಲ್ಬರ್ಗ: ನಗರದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿರುವ ಬಾವಿದೊಡ್ಡಿ ಅವರು 8 ವರ್ಷಗಳ ಕಾಲ ಎನ್ಎನ್ಎಸ್ ಅಧಿಕಾರಿಯಾಗಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರಿಗೆ ಈಚೆಗೆ ಬೆಂಗಳೂರಿನಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಜ್ಯಪಾಲ ಹಂಸರಾಜ ಭಾರದ್ವಾಜ ಪ್ರಶಸ್ತಿ ನೀಡಿ ಗೌರವಿಸಿದರು.
ಕೆಲ್ಲೂರ ಗ್ರಾಪಂಗೆ ಸಾಬಮ್ಮ ಅಧ್ಯಕ್ಷೆ
ಜೇವರ್ಗಿ: ತಾಲೂಕಿನ ಕೆಲ್ಲೂರ ಗ್ರಾಮ ಪಂಚಾಯತಿ ಎರಡನೇ ಅವಧಿಯ ನೂತನ ಅಧ್ಯಕ್ಷರಾಗಿ ಸಾಬಮ್ಮ ಸಾಯಿಬಣ್ಣ ಶಖಾಪುರ ಗುರುವಾರ ಅವಿರೋಧ ಆಯ್ಕೆಯಾದರು.ಅಧ್ಯಕ್ಷ ಸ್ಥಾನಕ್ಕೆ ಏಕೈಕ ಸದಸ್ಯ ಸಾಬಮ್ಮ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಮಲ್ಲಿಕಾರ್ಜುನರೆಡ್ಡಿ ಅವಿರೋಧ ಆಯ್ಕೆ ಘೋಷಿಸಿದರು.ಕಾಂಗ್ರೆಸ್ ಬೆಂಬಲಿತ ಸದಸ್ಯರ ಹಿಡಿತದಲ್ಲಿರುವ ಕೆಲ್ಲೂರ ಗ್ರಾಪಂ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ತಲಾ 10 ತಿಂಗಳ ಒಡಂಬಡಿಕೆಯಂತೆ ಸಾಬಮ್ಮ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಿಜಯೋತ್ಸವ: ನೂತನ ಅಧ್ಯಕ್ಷರಾಗಿ ಸಾಬಮ್ಮ ಶಖಾಪುರ ಆಯ್ಕೆಯಾಗುತ್ತಿದಂತೆಯೇ ಕಾಂಗ್ರೆಸ್ ಪಕ್ಷದ ಮುಖಂಡರು ವಿಜಯೋತ್ಸವ ಆಚರಿಸಿದರು.ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ ಶಿವಗೊಂಡ, ಸಿದ್ದಣ್ಣ ದೇಸಾಯಿ, ಶಾಂತಗೌಡ ಹಾಲಗಡ್ಲಾ, ಪ್ರೇಮಣಗೌಡ ಪೊಲೀಸ್ ಪಾಟೀಲ್, ಮಲ್ಲಿಕಾರ್ಜುನಯ್ಯ ಸ್ವಾಮಿ ಸ್ಥಾವರಮಠ, ಚನ್ನಬಸಪ್ಪ ಸಾಹು ಹಂಗರಗಿ, ಬಸವಂತರಾಯ ದಳಪತಿ, ಗುಂಡಪ್ಪ ಗುತ್ತೇದಾರ, ಮಲ್ಲಿಕಾರ್ಜುನ ಇನಾಮದಾರ, ಅಮಲಪ್ಪ ಶರ್ಮಾ, ಸಾಹೇಬಗೌಡ ಕಡ್ಲಿ, ಈಶ್ವರಪ್ಪ ಮಾವನೂರ, ಶರಣಪ್ಪಗೌಡ ದೇಸಾಯಿ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ನಾಳೆ ಸಲಹೆ ಕಾರ್ಯಕ್ರಮ
ಗುಲ್ಬರ್ಗ: ನಗರದ ಸೇಡಂ ರಸ್ತೆಯ ಆರ್ಟಿಓ ವೃತ್ತದಲ್ಲಿರುವ ವಾತ್ಸಲ್ಯ ಆಸ್ಪತ್ರೆಯಲ್ಲಿ ನ.9 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ಗರ್ಭಿಣಿಯರಿಗೆ ವಿವಿಧ ವಿಷಯಗಳ ಕುರಿತು ಸಮಗ್ರ ಮಾಹಿತಿ ಹಾಗೂ ಸಲಹೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆಹಾರ ಯೋಗ, ಪೌಷ್ಠಿಕಾಂಶ ಗರ್ಭಿಣಿಯರ ಎಲ್ಲ ರೀತಿಯ ಸಮಸ್ಯೆಗಳ ಕುರಿತು ಸ್ತ್ರೀ ಮತ್ತು ಪ್ರಸೂತಿ ತಜ್ಞ ವೈದ್ಯರಾದ ಡಾ. ಶ್ವೇತಾ ಪಾಟೀಲ್ ಅವರು ಮಾಹಿತಿ ನೀಡಲಿದ್ದಾರೆ. ಗರ್ಭಿಣಿ ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಯ ಕುರಿತು ಉಚಿತ ಸಲಹೆ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ವಾತ್ಸಲ್ಯ ಆಸ್ಪತ್ರೆ, ದೂರವಾಣಿ ಸಂಖ್ಯೆ 08472- 222299, ಮೊಬೈಲ್ ನಂ. 9480647909 ಸಂಖ್ಯೆಗೆ ಕರೆ ಮಾಡಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

