ಗುಲ್ಬರ್ಗಾ

ಕಸದ ಪ್ರಭಾವಳಿ ಕೀಟಗಳ ಹಾವಳಿ

Published On :

ನೋಟ
ಊರ ಮುಂದಿನ ಶಾಲೆಯ ಪಕ್ಕದಲ್ಲೇ ಇರುವ ದೇವರಕಟ್ಟೆ ಮ್ಯಾಗೆ ಕುಂತರಂತೂ ನೊಣಗಳ ಹಾವಳಿ ಹೇಳತೀರದು. ಸಿಹಿ ತಿಂಡಿ, ಪೆಪ್ಪರ್‌ಮಿಂಟ್ ಜೊತೆ ಬಂದರಂತೂ ಅವರ ಬಾಯಾಗೇ ನೊಣ ಹೋಗ್ತಾವ್ರಿ. ಇದೇನ್ ತ್ರಾಸ್ ಬಂತ್ರಿಯಪ್ಪಾ, ದಣದು ಬಂದು ಕಟ್ಟಿಗೆ ಮೈ ಹಚ್ಚಬೇಕಂದ್ರನೂ ನೊಣ- ದ್ವಾಮಿ(ಸೊಳ್ಳೆ) ಬಿಡವಲ್ಲು. ಮೊದಲೆಲ್ಲ ನಮ್ಮೂರಾಗ ಹಾವಳಿ ಇರಲಿಲ್ಲ ಬಿಡ್ರಿ ಎನ್ನುತ್ತಾರೆ ನೊಣ ಜಾಡಿಸುತ್ತ ಕಟ್ಟೆ ಮೇಲೆ ಕುಳಿತುಕೊಳ್ಳಲು ಪ್ರಯಾಸ ಪಡುವ ಉದನೂರ್ ಮಂದಿ.

ಶಾಲೆಯ ಬಿಸಿಯೂಟ ತಟ್ಟೆಯಲ್ಲಿ ಅನ್ನ ಹಾಕ್ಕೊಂಡು ಮಕ್ಕಳು ಉಣ್ಣುವಾಗಲೇ ಮುತ್ತಿಕೊಳ್ಳುತ್ತವೆ ನೊಣಗಳು. ಇವುಗಳ ಜೊತೆಗೆ ಕಸಕ್ಕೆ ಹಚ್ಚಿದ ಬೆಂಕಿಯಿಂದ ಹೊರಸೂಸುವ ಹೊಗೆ, ಕೊಟ್ಟ ವಾಸನೆ, ದುರ್ನಾತಕ್ಕೆ ಊರಲ್ಲಿ ಅದೆಷ್ಟೋ ಮಂದಿ ನಿತ್ಯವೂ ವಾಂತಿ ಮಾಡಿಕೊಳ್ಳುತ್ತಲೇ ಕಾಲ ಕಳೆಯುತ್ತಿದ್ದಾರೆ. ಕಸದ ಸಂಗ ನಮ್ಮ ಜೀವನದ ನೆಮ್ಮದಿನೇ ಭಂಗ ಮಾಡ್ಯದ ಎಂದು ಊರಿನ ಚಂದವ್ವ ಎರಡೂ ಕೈ ಬೆರಳು ಮುಂದೆ ಮಾಡಿ ಲಟಕಿ ಮುರಿಯುತ್ತಲೇ ಶಪಿಸುತ್ತಾಳೆ.

-ಶೇಷಮೂರ್ತಿ ಅವಧಾನಿ
ಉದನೂರ್: ಗುಲ್ಬರ್ಗ ನಗರದಿಂದ ನಿತ್ಯ 100ಕ್ಕೂ ಹೆಚ್ಚು ಟನ್ ಲೋಡ್‌ನಲ್ಲಿ ತಮ್ಮೂರ ನೆತ್ತಿ ಮ್ಯಾಗೆ ಸುರಿಯಲ್ಪಡುತ್ತಿರುವ ಘನತ್ಯಾಜ್ಯ ಉದನೂರ್ ಮಂದಿ ಪಾಲಿಗೆ ಸೆರಗಿನ ಕೆಂಡ ಎಂಬುದಕ್ಕೆ ಮೇಲಿನ ಈ ಎರಡು ನೋಟಗಳೇ ಕನ್ನಡಿ.
ಅಬಾಲವೃದ್ಧರಾದಿಯಾಗಿ ಊರ ಮಂದಿಗೆಲ್ಲರಿಗೂ ಕಸ-ಕೊಚ್ಚೆ ಅದ್ಹೇಗೆ ತೊಂದರೆ ಕೊಡುತ್ತಿದೆ. ತರಹೇವಾರಿ ರೂಪಗಳಲ್ಲಿ ಕಾಡಲಾರಂಭಿಸಿದೆ ಎಂದರೆ ಇವರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಹಳ್ಳಿಗಾಡಲ್ಲಿನ ಬದುಕೇ ಭಾರ ಎಂದು ಊರು ತೊರೆಯುವ ಯೋಚನೆಯಲ್ಲಿದ್ದಾರೆ.
ಸ್ವಚ್ಛಂದ ಗಾಳಿ, ನೀರಿನಿಂದ ನಗರದ ಪಕ್ಕದಲ್ಲೇ ಪವಡಿಸಿದ್ದ ಉದನೂರಲ್ಲೀಗ ಕಸದಿಂದ ನಿತ್ಯ ಹೊರಸೂಸುವ ಕೊಳಕು ವಾಸನೆ, ಕೊಟ್ಟ ಹೊಗೆ ಊರ ಜನರನ್ನು ಉಸಿರು ಕಟ್ಟುವಂತೆ ಮಾಡಿದೆ. ಕಸದ ರಾಶಿಯಿಂದ ಗಾಳಿಗೆ ಹಾರಿ ಹೊರಬರುವ ಪ್ಲಾಸ್ಟಿಕ್, ಕಾಗದ ಚೂರುಗಳಂತೂ ಮನೆಯಂಗಳ ತುಂಬಿವೆ. ಹೊಲದಂಗಳದಲ್ಲಿಯೂ ಮನೆ ಮಾಡಿವೆ. ಹೀಗಾಗಿ ಮನೆ ಇರಲಿ, ಹೊಲವಿರಲಿ, ಗುಲ್ಬರ್ಗದವರ ಕಸ ಉದನೂರ್ ಜನರ ಬದುಕನ್ನೇ ಯಾತನಾಮಯವಾಗಿಸುತ್ತಿದೆ.
ಕಸದ ಪ್ರಭಾವಳಿ: ಈ ಗ್ರಾಮದ ಎತ್ತರದ ಸ್ಥಳದಲ್ಲಿ ಕಸ ಚೆಲ್ಲಲಾಗುತ್ತಿದೆ. 22 ಎಕರೆಯಷ್ಟು ಪ್ರದೇಶದಲ್ಲಿ ಕಸದ ರಾಶಿ ಶೇಖರಗೊಳ್ಳುತ್ತಿರುವುದರಿಂದ ದೂರದಿಂದ ನೋಡಿದವರಿಗೆ ಉದನೂರ್ ಸುತ್ತ ಕಸದ್ದೇ ಪ್ರಭಾವಳಿ ಕಾಣುತ್ತದೆ.
ಊರಲ್ಲಿ ಸೊಳ್ಳೆ ಹಾವಳಿ ಹೆಚ್ಚುತ್ತ ಸಾಗಿರುವುದರಿಂದ ಮಲೇರಿಯ, ಟೈಫಾಯ್ಡ್, ವಿಷಮಶೀತ ಜ್ವರದಂತಹ ಕಾಯಿಲೆಗಳ ಭೀತಿ ಕಂಡಿದೆ. ಇತ್ತ ನೊಣಗಳು ಹೆಚ್ಚಿದ್ದರಿಂದ ಊರಲ್ಲಿ ತರಹೇವಾರಿ ಸಾಂಕ್ರಾಮಿಕ ರೋಗಗಳ ಭೀತಿ ಕಾಡಲಾಂರಭಿಸಿದೆ.
ಕಸದಿಂದ ಹೊರಸೂಸುವ ಹೊಗೆ, ಅಲ್ಲಿಂದ ಹರಿದು ಬರುವ ಕೊಳಕು ನೀರಿನಿಂದಾಗಿಯೂ ಊದನೂರ್ ಪರಿಸರ ಹದಗೆಡುತ್ತಿದೆ. ಹೀಗಾಗಿ ಊರಿನ ಕಸ ಚೆಂದಾಗಿ ವಿಲೇವಾರಿ ಮಾಡಿ ನೆಮ್ಮದಿಯಿಂದ ಬದುಕುತ್ತಿದ್ದ ಉದನೂರ್ ಜನರ ನೆಮ್ಮದಿಯ ಬದುಕಿಗೆ ನಗರದವರ ಕಸ ಗರ ಬಡಿಯುವಂತೆ ಮಾಡಿದೆ.

ಉದನೂರ್ ನೆತ್ತಿಮ್ಯಾಗ ಕಸ ಹಾಕ್ಲಿಕತ್ತಾರ, ಅದನ್ನ ವೈಜ್ಞಾನಿಕವಾಗಿ ವಿಲೇವಾರಿ ಸಹ ಮಾಡ್ತಾ ಇಲ್ಲ. ಹೀಂಗಾದ್ರ ನಾವು ಉದ್ನೂರಾಗ ಬದುಕು ಕಟ್ಟೋದೇ ತ್ರಾಸ ಆಗ್ಯದ. ಸರ್ಕಾರ, ಜಿಲ್ಲಾಡಳಿತ ಹಳ್ಳಿ ಮಂದಿ ಹೈರಾಣ ನೋಡ್ಲಿ, ಕಸ ವಿಲೇವಾರಿಗೆ ಅನ್ಯ ಸ್ಥಳ ಹುಡುಕ್ಲಿ.
 ಶಾಂತಕುಮಾರ್, ಮಹಾಂತೇಶ, ನಿವಾಸಿಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.