ರಾಜ್ಯದಲ್ಲಿ 50 ಪದವಿ ಕಾಲೇಜು ಆರಂಭ
ಗುಲ್ಬರ್ಗ: ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಭಾನುವಾರ ನಗರದ ಹತ್ತು ಹಲವು ಸಭೆ- ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ತಲೆಎತ್ತಿರುವ 4 ಕೋಟಿ ವೆಚ್ಚದ ಅಂಬೇಡ್ಕರ್ ಭವನ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಮಹಿಳಾ ವಸತಿ ನಿಲಯ ಕಟ್ಟಡಗಳನ್ನು ಉದ್ಘಾಟಿಸಿದರು. ಇದೇ ವೇಳೆ ಜಿಲ್ಲಾ ವಿಪ್ರ ಸಮಾಜದವರು ಸಚಿವರಿಗೆ ಸಂಜೆ ಸನ್ಮಾನ ಸಮಾರಂಭ ಆಯೋಜಿಸಿದ್ದರು.
ಇನ್ನೂ 50 ಪದವಿ ಕಾಲೇಜು: ರಾಜ್ಯದಲ್ಲಿ ಹೊಸತಾಗಿ ಇನ್ನೂ 50 ಪದವಿ ಕಾಲೇಜು ಸ್ಥಾಪಿಸಲಾಗುತ್ತದೆ. ಈ ಪೈಕಿ 23 ಮಹಿಳಾ ಪದವಿ ಕಾಲೇಜುಗಳಿವೆ. ಇವುಗಳಿಗೆ ಎಲ್ಲ ಮೂಲ ಸೌಕರ್ಯ ಇರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಸಚಿವ ದೇಶಪಾಂಡೆ ಗುಲ್ಬರ್ಗ ವಿವಿ ಅಂಬೇಡ್ಕರ್ ಭವನ ಉದ್ಘಾಟಿಸಿದ ಬಳಿಕ ಸಮಾರಂಭದಲ್ಲಿ ತಿಳಿಸಿದರು.
ಅಲ್ಲದೆ 1,000 ಉಪನ್ಯಾಸಕರ ಹುದ್ದೆ ನೇಮಕಾತಿಗೆ ಶೀಘ್ರವೇ ಕ್ರಮ ಜರುಗಿಸಲಾಗುತ್ತದೆ. ರಾಜ್ಯದಲ್ಲಿರುವ ವಿವಿಗಳಲ್ಲಿ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಇರುವಂತೆ ಕ್ರಮ ಜರುಗಿಸಲಾಗುತ್ತದೆ. ಬರುವ ದಿನಗಳಲ್ಲಿ ಈ ವಿಚಾರದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಸಂವಿಧಾನ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉನ್ನತ ಶಿಕ್ಷಣ ರಂಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಸಾಗಿವೆ. ಬರುವ ದಿನಗಳಲ್ಲಿ ಈ ಪ್ರದೇಶಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಲಾಗುತ್ತದೆ ಎಂಬ ಭರವಸೆ ನೀಡಿದರು. ಭಾರತದ ಸಂವಿಧಾನ ಸರ್ವರಿಗೂ ಅವಕಾಶಗಳನ್ನು ನೀಡಿದೆ. ಸಂವಿಧಾನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಖರ್ಗೆ ಹೇಲಿದರು.
ಸಚಿವ ಖಮರುಲ್ ಇಸ್ಲಾಂ, ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಅಮರನಾಥ ಪಾಟೀಲ್, ಶಾಸಕರಾದ ಡಾ. ಉಮೇಶ ಜಾಧವ, ಕುಲಪತಿ ಡಾ. ಪುಟ್ಟಯ್ಯ, ಕುಲಸಚಿವ ಚಂದ್ರಕಾಂತ ಯಾತನೂರ್ ಇದ್ದರು.
ಸ್ವಾಭಿಮಾನಿಗಳಾಗಿ: 21ನೇ ಶತಮಾನ ಸ್ಪರ್ಧೆಯ ಯುಗ. ವಿಪ್ರರು ಜ್ಞಾನದ ಬಲದಿಂದಲೇ ಸ್ವಾಭಿಮಾನಿ ಬದುಕು ಕಟ್ಟಬೇಕೆಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಕರೆ ನೀಡಿದರು.
ಬ್ರಹ್ಮಪೂರದಲ್ಲಿರುವ ರಾಯರಮಠದಲ್ಲಿ ಭಾನುವಾರ ಸಂಜೆ ಜಿಲ್ಲಾ ಬ್ರಾಹ್ಮಣ ಸಮಾಜದಡಿಯಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಸಚಿವರು, ವಿಪ್ರ ಸಮುದಾಯ ಸ್ಪರ್ಧಾ ಯುಗದಲ್ಲಿ ತನ್ನತನ ಸಾಧಿಸಬೇಕಾಗಿದೆ ಎಂದರು.
ವಸತಿ ನಿಲಯ ಉದ್ಘಾಟನೆ: ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ತಲೆಎತ್ತಿರುವ ಮಹಿಳಾ ವಸತಿ ನಿಲಯವನ್ನು ಸಚಿವ ದೇಶಪಾಂಡೆ ಲೋಕಾರ್ಪಣೆ ಮಾಡಿದರು.
ಈ ಸಂಬಂಧ ವಸತಿ ನಿಲಯದ ಅಂಗಳದಲ್ಲೇ ಸಮಾರಂಭ ಆಯೋಜಿಸಲಾಗಿತ್ತು. ಪಾಲಿಟೆಕ್ನಿಕ್ ವಿದ್ಯಾರ್ಥಿನಿಯರಿಗೆ ಇದು ಉತ್ತಮ ಸವಲತ್ತು. ಇನ್ನೂ ಹಲವು ಸವಲತ್ತುಗಳನ್ನು ಕಲ್ಪಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ ಎಂದು ಸಚಿವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

