ಗುಲ್ಬರ್ಗಾ

19 ಕೋಟಿ ಕ್ರಿಯಾ ಯೋಜನೆಗೆ ಅಸ್ತು

Published On :

ಕ.ಪ್ರ. ವಾರ್ತೆ ಯಾದಗಿರಿ ಜೂ. 30
ಕೇಂದ್ರ ಸರ್ಕಾರದ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆ(ಬಿಆರ್‌ಜಿಎಫ್)ಯಡಿ ಒಟ್ಟು 19.07 ಕೋಟಿ ಕ್ರಿಯಾ ಯೋಜನೆಗೆ ಸೋಮವಾರ ಅನುಮೋದನೆ  ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿದ್ದಣಗೌಡ ಪೊಲೀಸ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಯೋಜನಾ ಸಮಿತಿ ಸಭೆಯಲ್ಲಿ ಈ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದಂತೆ 1.52 ಕೋಟಿ, ಯಾದಗಿರಿ, ಶಹಾಪುರ ಹಾಗೂ ಸುರಪುರ ತಾಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ 3.05 ಕೋಟಿ, ಜಿಲ್ಲೆಯ 117 ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ 10.68 ಕೋಟಿ ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ 3.80 ಕೋಟಿ ಸೇರಿದಂತೆ ಒಟ್ಟು 19.07 ಕೋಟಿ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.
ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ಹಿಂದುಳಿದ ಪ್ರದೇಶಾವೃದ್ಧಿ ಅನುದಾನದಡಿ ಕೈಗೊಳ್ಳಲಾಗುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ 3 ದಿನಗಳೊಳಗೆ ಟೆಂಡರ್ ಕರೆಯಬೇಕು. ಒಂದು ವೇಳೆ ಈ ಕ್ರಮಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ ಇದರ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಗ್ರಾಮೀಣ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವ ಜೊತೆಗೆ ನೀಡಿದ ಅನುದಾನವನ್ನು ಸಹ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಲಾಯಿತು.
ಜಿಪಂ ಸಿಇಒ ಜಿಲಾನಿ, ಹಿಂದುಳಿದ ಪ್ರದೇಶಾಭಿವೃದ್ಧಿ ಅನುದಾನದಡಿ ಸಮರ್ಪಕವಾಗಿ ಅನುದಾನ ಬಳಕೆ ಮಾಡದಿದ್ದಲ್ಲಿ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ನಿಗಮಕ್ಕೆ ಸಂಪೂರ್ಣ ಯೋಜನೆ ಅನುಷ್ಠಾನ ಜವಾಬ್ದಾರಿ ವಹಿಸಿಕೊಡುವ ಜೊತೆಗೆ ಅನುದಾನ ಹಿಂದಕ್ಕೆ ಪಡೆಯುವುದು ಮತ್ತು ತಪ್ಪಿತಸ್ಥ ಗ್ರಾಮ ಪಂಚಾಯಿತಿಗಳನ್ನು ವಿಸರ್ಜನೆಗೊಳಿಸುವಂತಹ ಕ್ರಮವನ್ನು ಸಹ ಕೈಗೊಳ್ಳಲಾಗುವುದೆಂದು ಸಭೆಗೆ ತಿಳಿಸಿದರು.
ಶಹಾಪುರ, ಸುರಪುರ ಮತ್ತು ಯಾದಗಿರಿ ತಾಪಂ ಪಿಡಿಒಗಳಿಂದ ಸಲ್ಲಿಸಲಾದ ಕ್ರಿಯಾ ಯೋಜನೆ ಬಗ್ಗೆ ಚರ್ಚೆ ನಡೆಸಲಾಯಿತು. ಉಪಾಧ್ಯಕ್ಷ ಮಲ್ಲಮ್ಮ, ಯೋಜನಾ ಸಮಿತಿ ಸದಸ್ಯರು, ಗ್ರಾಪಂ ಅಧ್ಯಕ್ಷರು  ಇದ್ದರು.

ಶಾಲಾ ಕಾಮಗಾರಿಗಳಿಗೆ ಹೈ-ಕ ಅನುದಾನ
ಯಾದಗಿರಿ: ಜಿಲ್ಲೆಯಲ್ಲಿನ ಶಾಲೆಗಳ ಉಳಿದ ಕಾಮಗಾರಿಗೆ ಹೆಚ್ಚಿನ ಅನುದಾನ ಒದಗಿಸುವ ಕುರಿತು ನಡೆದ ಚರ್ಚೆಯಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಜಿಲ್ಲೆಯ ಮದ್ದರಕಿ, ಖಾನಾಪುರ ಮತ್ತು ಕೆಂಭಾವಿ ಶಾಲೆಗಳ ಕಾಮಗಾರಿಗೆ 63 ಲಕ್ಷ ಅನುದಾನ ಒದಗಿಸಲು ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಇದಕ್ಕೆ ಬೆಂಬಲಿಸಿ ಜಿಪಂ ಸದಸ್ಯ ದೇವರಾಜ ನಾಯಕ, ನಮ್ಮ ಕ್ಷೇತ್ರದ ಖಾನಾಪುರ ಶಾಲೆಗೆ ವಿಶೇಷ ಅನುದಾನ ಒದಗಿಸುವುದು ಅತ್ಯವಶ್ಯಕವಾಗಿದೆ. ಈ ಸಂಬಂಧ ಇತ್ತೀಚಿಗೆ ಪ್ರತಿಭಟನೆ ನಡೆಸಲಾಗಿದೆ ಎಂದು ಅಧ್ಯಕ್ಷರಿಗೆ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಯೋಜನಾಧಿಕಾರಿ, ಜಿಪಂ ಅನುದಾನದಲ್ಲಿ ಇಷ್ಟು ಹಣ ಒದಗಿಸಲು ಸಾಧ್ಯವಿಲ್ಲ. ಕೆಂಭಾವಿ ಹಾಗೂ ಮದ್ದರಕಿ ಶಾಲೆಗೆ ಬೇಕಾಗುವ ತಲಾ 10 ಲಕ್ಷವನ್ನು ಆಯಾ ತಾಪಂನಲ್ಲಿ ಹಾಗೂ ಖಾನಾಪೂರ ಶಾಲೆಗೆ ಬೇಕಾಗುವ 21 ಲಕ್ಷವನ್ನು ಜಿಪಂ 13ನೇ ಹಣಕಾಸಿನ ಅನುದಾನದಲ್ಲಿ ಒದಗಿಸಬಹುದು ಎಂದು ತಿಳಿಸಿದರು.
ಕೇವಲ ಈ ಮೂರು ಶಾಲೆಗೆ ಒದಗಿಸಿದರೆ ಸಾಲದು. ಇತರ ಇಲಾಖೆಯ ಬೇಡಿಕೆಗಳಿಗೂ ಅನುದಾನ ಒದಗಿಸಬೇಕಾಗುತ್ತದೆ. ಅದಕ್ಕಾಗಿ ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸದಸ್ಯ ನಾಗನಗೌಡ ಸಗರ ವಿರೋಧ ವ್ಯಕ್ತಪಡಿಸಿದರು.
ಇವರ ವಿರೋಧಕ್ಕೆ ಒಮ್ಮತ ಸೂಚಿಸಿದ ಎಚ್.ಸಿ.ಪಾಟೀಲ ಮತ್ತು ಬಸವರಾಜ ಖಂಡ್ರೆಯವರು ಶಿಕ್ಷಣಕ್ಕೆ ಅದ್ಯತೆ ನೀಡೋಣ. ಆದರೆ ಇತರ ಇಲಾಖೆಯನ್ನು ಕಡೆಗಣಿಸಲಾಗದು ಎಂದು ಹೇಳಿದರು. ಕೊನೆಗೆ ಮಧ್ಯ ಪ್ರವೇಶಿಸಿದ ಅಧ್ಯಕ್ಷರು ಹೈ-ಕ ಅನುದಾನದಡಿ ಹಣ ನೀಡುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.