ಗುಲ್ಬರ್ಗಾ

ಜೇವರ್ಗಿ ಒಡಲೆಲ್ಲ ಕೊಳಕು

Published On :

-ರವೀಂದ್ರ ವಕೀಲ
ಜೇವರ್ಗಿ: ಪಟ್ಟಣದ ಖಾಜಾ ಕಾಲೋನಿ ಹಾಗೂ ಗಾಂಧಿ ನಗರಕ್ಕೆ ಹೊಂದಿಕೊಂಡಿರುವ ರಸ್ತೆ ಅಕ್ಷರಶಃ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದ್ದು, ಇಲ್ಲಿಯ ಜನತೆ 'ನೋಡಿ ಸ್ವಾಮಿ ಇಲ್ಲಿರುವುದು ಹಿಂಗೆ, ನಾವು ಬದುಕವುದು ಹೆಂಗೆ' ಎಂಬ ದುಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಮುಖ್ಯರಸ್ತೆಗಳ ಪಕ್ಕದ ಬದಿಗಳ ಅಲ್ಲಲ್ಲಿ ಕೊಚ್ಚೆ ಗುಂಡಿಗಳು ನಿರ್ಮಾಣಗೊಂಡು ಜನತೆಗೆ ಯಾವಾಗ ಯಾರಿಗೆ ಈ ಕಲುಷಿತ ವಾತಾವರಣದಿಂದ ರೋಗ ರುಜಿನಗಳು ಹರಡುತ್ತವೆಯೋ ಎಂಬ ಆತಂಕ ಎದುರಾಗಿದೆ. ಇಂತಹ ಕಲುಷಿತ ವಾತಾವರಣ ಹಾಗೂ ಪರಿಸರದಿಂದ ಈಗಾಗಲೇ ಅನೇಕರು ಕಾಲರಾ ಹಾಗೂ ಮಲೇರಿಯ ರೋಗಕ್ಕೆ ತುತ್ತಾಗಿ ಬಳಲ್ಲಿದ್ದೂ ಉಂಟು.
ರಸ್ತೆಯಲ್ಲಿ ಕೊಚ್ಚೆ ಗುಂಡಿಗಳು ನಿರ್ಮಾಣವಾಗಿದ್ದು ಇಲ್ಲೆಲ್ಲ ಆಶ್ರಯ ಪಡೆದಿರುವ ಹಂದಿಗಳು ಈ ಭಾಗದಲ್ಲಿ ಕೊಳಕು ಹೆಚ್ಚಿಸುತ್ತಿವೆ. ರಸ್ತೆಯೇ ಇವುಗಳಿಗೆ ಆಶ್ರಯ ತಾಣ. ಇಂತಹ ಅಧೋಗತಿ ಮಧ್ಯೆ ಬದುಕು ಸಾಗಿಸುತ್ತಿರುವ ಜನತೆ ಸ್ಥಳೀಯ ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಚರಂಡಿಗಳ್ಳಿಲ್ಲದ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಚರಂಡಿ ಸೇರಬೇಕಾದ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದು ನೈರ್ಮಲ್ಯಕ್ಕೆ ಸಂಚಕಾರ ತಂದಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ ವಾರ್ಡ್ ಸದಸ್ಯರು ಹಾಗೂ ಇಲಾಖೆ ಸಿಬ್ಬಂದಿ ಗೊತ್ತಿದ್ದೂ ಜಾಣ ಕುರುಡರಂತೆ ಮೌನ ವಹಿಸಿದ್ದಾರೆ. ಕಲುಷಿತ ವಾತಾವರಣದಿಂದ ಅಲ್ಲಿಯ ಜನತೆ ರೋಸಿ ಹೋಗಿದ್ದಾರೆ.

ಕೆಟ್ಟು ನಿಂತ ಕೊಳವೆಬಾವಿ
ಇಲ್ಲಿಯ ಖಾಜಾ ಕಾಲೋನಿಯಲ್ಲಿರುವ ರಸ್ತೆ ಕೊಳಚೆಯಿಂದ ಕೂಡಿದ್ದು ಒಂದೆಡೆಯಾದರೆ ಅದಕ್ಕೆ ಹೊಂದಿಕೊಂಡಿರುವಂತೆ ಇರುವ ಕೊಳವೆಬಾವಿಯ ಪಂಪ್‌ಸೆಟ್ ದುರಸ್ತಿಗಾಗಿ ಕಳೆದ ಒಂದೂವರೆ ತಿಂಗಳ ಹಿಂದೆ ರಸ್ತೆಯಲ್ಲಿ ದೊಡ್ಡ ಹೊಂಡ ತೋಡಲಾಗಿದೆ. ಹೀಗಾಗಿ ಇಲ್ಲಿಯ ಜನತೆ ಹೊಂಡ ಕೊಳಚೆಗಳ ಮಧ್ಯೆ ಜೀವನ ಸಾಗಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈಗಲಾದರೂ ಗಮನಹರಿಸಿ ಸಂಕಷ್ಟದಲ್ಲಿರುವ ಜನತೆಯ ನೆರವಿಗೆ ಧಾವಿಸುವುದು ಅಗತ್ಯ.

21 ಪೌರ ಕಾರ್ಮಿಕರು
ಶಾಸ್ತ್ರೀ ಚೌಕ್ ಬಡಾವಣೆ ರಸ್ತೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಜನರು ಬಾಯಿ ಮೂಗು ಮುಚ್ಚಿಕೊಂಡೇ ಸಂಚರಿಸಬೇಕು. ಇಂತಹ ವಾತಾವರಣದಲ್ಲಿ ವಾಸಿಸುವ ಜನರ ಬದುಕು ಹೇಗಿರಲಿಕ್ಕಿಲ್ಲ ಎನ್ನವುದು ಊಹಿಸಲು ಅಸಾಧ್ಯ. ಕಸ ವಿಲೇವಾರಿಗಾಗಿ 21 ಜನ ಕಾರ್ಮಿಕರು ಸ್ಥಳೀಯ ಪಪಂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ದಿನ ಕಳೆದಂತೆ ಬೃಹದಾಕಾರವಾಗಿ ಬೆಳೆಯುತ್ತಿರುವ ಪಟ್ಟಣದಿಂದ ಇರುವ ಸಿಬ್ಬಂದಿ ಕೊರತೆಯಿಂದ ಎಲ್ಲವನ್ನೂ ಏಕಾಏಕಿ ಮಾಡಲು ಅಸಾಧ್ಯ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ. ಪಟ್ಟಣ ಹಾಗೂ ಜನಸಂಖ್ಯೆ ಅನುಗುಣವಾಗಿ ಇನ್ನಷ್ಟು ಕಾರ್ಮಿಕರ ಅವಶ್ಯಕತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.