ಇನ್ನೂ ಕಾಣಲಿಲ್ಲ ರಾಜಕೀಯ ರಂಗು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.16
ಬಣ್ಣದ ಹಬ್ಬ ಹೋಳಿಯ ಬಣ್ಣಗಳಿಂದ ರಂಗೇರಿರುವ ಗುಲ್ಬರ್ಗ ನಗರದಲ್ಲಿ ಕಾಮ ದಹನದ ಪೂರ್ಣಿಮೆ ದಿನವೇ ಅನೇಕ ಬಡಾವಣೆಗಳಲ್ಲಿ ಬಣ್ಣ ಎರಚಿ ಸಂತಸಪಡುವ ನೋಟಗಳು ಕಂಡವು. ಇಲ್ಲಿನ ಬಸ್ ನಿಲ್ದಾಣ, ಬ್ರಹ್ಮಪುರ, ಶಹಾಬಜಾರ್, ರೇಲ್ವೆ ಸ್ಟೇಷನ್ ಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ಬಣ್ಣದ ಹಬ್ಬ ತುಂಬ ಸಂಭ್ರಮದಿಂದ ಆಚರಿಸಲಾಯ್ತು.
ಅನೇಕ ಬಡಾವಣೆಗಳಲ್ಲಿ ಮಕ್ಕಳು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರೆ ಅನೇಕ ಕಡೆಗಳಲ್ಲಿ ಗುಂಪಾಗಿ ದಾರಿ ಹೋಕರನ್ನು ಅಡ್ಡಗಟ್ಟಿ ಹಣ ಕೇಳುತ್ತ ಪೀಡಿಸುತ್ತಿದ್ದ ನೋಟಗಳೂ ಕಂಡವು.
ಗುಲ್ಬರ್ಗದಲ್ಲಿ ಬಣ್ಣದೋಕುಳಿ ಸೋಮವಾರ ನಡೆಯಲಿದೆ. ಇಡೀ ನಗರ ಈ ದಿನ ಬಣ್ಣಗಳಲ್ಲಿ ಮಿಂದೇಳಲಿದೆ. 16ಕ್ಕೂ ಹೆಚ್ಚು ಬಣ್ಣದ ಬಂಡಿಗಳು ನಗರಾದ್ಯಂತ ಬಣ್ಣದೋಕುಳಿಯ ಸಂಭ್ರಮ ಹುಟ್ಟು ಹಾಕಲಿವೆ. ಬಣ್ಣದ ಹಬ್ಬಕ್ಕಾಗಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ಆದಾಗ್ಯೂ ನಗರದಲ್ಲಿ ಸೈಲನ್ಸರ್ ಇಲ್ಲದ ಬೈಕ್ ಸಂಚಾರ, ಗುಂಪುಗಳಿಂದ ಹಣ ವಸೂಲಿಯಂತಹ ಪಿಡುಗುಗಳಿಗೆ ತಡೆ ಹಾಕಿ, ಜನರೆಲ್ಲರೂ ಸಂತಸದಿಂದ ಹೋಳಿ ಆಚರಿಸಿ ಸಂಭ್ರಮಿಸುವಂತೆ ಮಾಡಬೇಕಾಗಿದೆ.
ಇನ್ನೂ ರಂಗೇರಿಲ್ಲ ರಾಜಕೀಯ: ಬಣ್ಣದೋಕುಳಿಗೆ ಗುಲ್ಬರ್ಗ ನಗರ ಹಾಗೂ ಜಿಲ್ಲೆ ರಂಗೇರಿದರೂ ಬರಲಿರುವ ಲೋಕಸಭೆ ರಾಜಕೀಯ ಇನ್ನೂ ರಂಗೇರಬೇಕಾಗಿದೆ. ಘಟಾನುಘಟಿ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ಗೆ ಹಾಗೂ ಮಾಜಿ ಸಚಿವ ರೇವು ನಾಯಕ ಬೆಳಮಗಿ ಬಿಜೆಪಿಯಿಂದ ಕಣಕ್ಕಿಳಿದಿರುವ ಈ ಪ್ರದೇಶದಲ್ಲಿ ಭಾರಿ ಕುಸ್ತಿಯೇ ನಿರೀಕ್ಷಿಸಲಾಗುತ್ತಿದೆ. ಸೋಲಿಲ್ಲದ ಸರದಾರ ಖರ್ಗೆ ಮುಂದೆ ರೇವು ನಾಯಕ ಬೆಳಮಗಿ ತಮ್ಮ ಪ್ರತಿಷ್ಠೆ 2ನೇ ಬಾರಿಗೆ ಪಣಕ್ಕಿಟ್ಟಿರುವ ಅಖಾಡ ಇದಾಗಿದೆ.
ಹೀಗಾಗಿ ಈ ಬಾರಿ ಇಲ್ಲಿನ ರಾಜಕೀಯ ಹಿಂದೆಂದಿಗಿಂತಲೂ ಹೆಚ್ಚು ರಂಗೇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಆದಾಗ್ಯೂ ಲೋಕಸಭೆ ಚುನಾವಣೆ ಘೋಷಣೆಯ ನಂತರ ಕಾಂಗ್ರೆಸ್ ಪಾದಯಾತ್ರೆ ನಡೆಸುವ ಮೂಲಕ ಜನಮನ ಸೆಳೆಯುವ ಯತ್ನ ಮಾಡಿದೆ.
ಅಭಿವೃದ್ಧಿಯೇ ಶ್ರೀರಕ್ಷೆ ಎಂದು ಖರ್ಗೆ ಜಿಲ್ಲೆಯ ಮತದಾರರ ಮನ ಸೆಳೆಯುವ ಯತ್ನದಲ್ಲಿದ್ದರೆ, ರೇವು ನಾಯಕ ಬೆಳಮಗಿ ಬಿಜೆಪಿ ಮಾಡಿರುವ ಪ್ರಗತಿಗಳನ್ನೆಲ್ಲ ತಾನೇ ಮಾಡಿದ್ದೆಂದು ಕಾಂಗ್ರೆಸ್ ಹೇಳುತ್ತಿದೆ ಎಂದು ಗಮನ ಸೆಳೆಯುವ ಯತ್ನದಲ್ಲಿದ್ದಾರೆ.
ಗುಂಪುಗಾರಿಕೆ: ಖರ್ಗೆಯವರು ಈ ಭಾಗದಲ್ಲಿ ರೇಲ್ವೆ ಸಚಿವರಾಗಿ ಮಾಡಿದ ಸಾಧನೆಗಳು ನಿರೀಕ್ಷೆಯಂತೆ ಬಿಂಬಿತವಾಗುತ್ತಿಲ್ಲ ಎಂಬ ಅಸಮಾಧಾನ ಕಂಡುಬರುತ್ತಿದ್ದರೂ, ಅದು ಪಕ್ಷದ ಒಳಗೇ ಗುಂಪುಗಾರಿಕೆಯಿಂದಾಗಿ ಆಗುತ್ತಿರುವ ಲೋಪದೋಷ ಎಂದು ಅರ್ಥೈಸಲಾಗುತ್ತಿದೆ.
ಬರುವ ದಿನಗಳಲ್ಲಿ ಇವುಗಳನ್ನೆಲ್ಲ ಕಾಂಗ್ರೆಸ್ ಮೆಟ್ಟಿ ನಿಲ್ಲಬೇಕಾಗಿದೆ. ಇತ್ತ ಬಿಜೆಪಿಲ್ಲಿಯೂ ಗುಂಪುಗಾರಿಕೆ ಸಾಕಷ್ಟಿದ್ದು, ಆ ಪಕ್ಷಕ್ಕೂ ಇದು ಮುಳುವಾಗುವ ಲಕ್ಷಣಗಳಿವೆ. ಕಮಲ ಪಡೆಗೂ ಗುಂಪುಗಾರಿಕೆ ಶಮನಕ್ಕೆ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಡಿ.ಜಿ. ಸಾಗರ್ ಎಂದು ಹೆಸರು ತೇಲಿ ಬಿಟ್ಟರೂ, ಇದೀಗ ಸುರೇಶ ಭರಣಿ ಹೆಸರು ಚರ್ಚೆಯಲ್ಲಿದೆ. ಆದರೆ ಯಾರ ಹೆಸರೂ ಇನ್ನೂ ಅಂತಿಮವಾಗಿಲ್ಲ. ಆಮ್ ಆದ್ಮಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕರನ್ನು ಗುಲ್ಬರ್ಗ ಕಣಕ್ಕಿಳಿಸಿ ಅಚ್ಚರಿ ಮೂಡಿಸಿದ್ದು, ಜನರೆಲ್ಲರೂ ಲಂಬಾಣಿ ಸಮುದಾಯದ ಮತಗಳ ವಿಭಜನೆ ಬಗ್ಗೆ ಚರ್ಚೆಯಾಗುತ್ತಿದೆ.
ಶಾಂತಿಯುತ ಹೋಳಿ ಆಚರಣೆಗೆ ಮನವಿ
ಚಿಂಚೋಳಿ: ಪಟ್ಟಣದಲ್ಲಿ ಮಾ.17 ರಂದು ಸೋಮವಾರ ನಡೆಯುವ ಹೋಳಿ ಹಬ್ಬವನ್ನು ಜನರು ಶಾಂತಿಯುತವಾಗಿ ಆಚರಿಸಬೇಕೆಂದು ಚಿಂಚೋಳಿ ಠಾಣೆ ಸಬ್ ಇನ್ಸ್ಪೆಕ್ಟರ್ ಶಿವಶಂಕರ ಸಾಹು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಸಾರ್ವಜನಿಕರ ಶಾಂತಿಸಭೆಯಲ್ಲಿ ಮಾತನಾಡಿ, ಚಂದಾಪುರ- ಚಿಂಚೋಳಿ ಅವಳಿ ನಗರದಲ್ಲಿ ಸಾರ್ವಜನಿಕರು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಹೋಳಿ ಬಣ್ಣ ಆಡಬಹುದಾಗಿದೆ ಸಾರ್ವಜನಿಕರಿಗೆ ಮತ್ತು ಪಿಯುಸಿ ಪರೀಕ್ಷಾರ್ಥಿಗಳಿಗೆ ತೊಂದರೆಯಾಗದಂತೆ ಸಹಕರಿಸಬೇಕೆಂದು ಪಿಎಸೈ ಶಿವಶಂಕರ ಸಾಹು ಸಾರ್ವಜನಿಕರಿಗೆ ಮನವಿ ಮಾಡಿದರು.
ಪಪಂ ಉಪಾಧ್ಯಕ್ಷ ಶಾಮರಾವ ಕೊರವಿ, ಕಾಂಗ್ರೆಸ್ ಮುಖಂಡ ಕೆ.ಎಂ. ಬಾರಿ, ಅಶೋಕ ಪಾಟೀಲ್, ಶಿವನಾಗಯ್ಯ ಸ್ವಾಮಿ, ಗೌತಮ್ಮ ಬೊಮ್ಮನಳ್ಳಿ ಮುಂತಾದವರು ಹೋಳಿ ಹಬ್ಬದ ಕುರಿತು ಮಾತನಾಡಿದರು. ಪಿಸಿ ಸಿದ್ದು ಸ್ವಾಗತಿಸಿ, ಪಿಸಿ ಮಂಜುನಾಥ ವಂದಿಸಿದರು. ಶಾಂತಿಸಭೆಯಲ್ಲಿ ನಗರದ ಅನೇಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

