ಜಿಲ್ಲೆಯಲ್ಲಿ 61.26 ಕೋಟಿ ಹಾನಿ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.23
ಜಿಲ್ಲೆಯಲ್ಲಿ ಮಾರ್ಚ್ ಮೊದಲ ವಾರ ಸುರಿದ ಅಕಾಲಿಕ- ಆಲಿಕಲ್ಲು ಮಳೆಗೆ ತೋಟಗಾರಿಕೆ ಹಾಗೂ ತರಕಾರಿ ಸೇರಿದಂತೆ ಒಟ್ಟಾರೆ ಕೃಷಿ ಹಾಗೂ ಜಾನುವಾರು ಹಾನಿ ಸೇರಿ 61.26 ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಜಿಲ್ಲೆಗೆ ಭೇಟಿ ನೀಡಿರುವ ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದೆ.
ಭಾನುವಾರ ಇಲ್ಲಿನ ಐವಾನ್- ಏ- ಷಾಹಿ ಅತಿಥಿ ಗೃಹದಲ್ಲಿ ಸ್ಲೈಡ್ಗಳನ್ನು ಹಾಕುವ ಮೂಲಕ ಜಿಲ್ಲೆಯಲ್ಲಿನ ಆಳಂದ, ಅಫಜಲ್ಪುರ ಸೇರಿದಂತೆ ವಿವಿಧೆಡೆ ಸುರಿದ ಅಕಾಲಿಕ ಹಾಗೂ ಆಲಿಕಲ್ಲು ಮಳೆಗೆ ಕೃಷಿಕರು ಅದ್ಹೇಗೆ ತೊಂದರೆಪಟ್ಟರು ಎಂಬುದರ ಮಾಹಿತಿ ನೀಡುವ ಪ್ರಯತ್ನ ಜಿಲ್ಲಾಡಳಿತ ಮಾಡಿತು.
ಕೃಷಿ ಬೆಳೆ ಹಾನಿ- 22 ಕೋಟಿ ಹಾಗೂ ತೋಟಗಾರಿಕೆ ಬೆಳೆ ಹಾನಿ- 39.23 ಕೋಟಿ, ಪಶು ಸಂಪತ್ತು ಹಾನಿ- 3,43 ಲಕ್ಷ ಸೇರಿದಂತೆ ಒಟ್ಟು 61.26 ಕೋಟಿ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ಕೇಂದ್ರ ತಂಡದೊಂದಿಗಿನ ಮಾತುಕತೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಹಾನಿಯ ಪ್ರಮಾಣ ಆಳಂದ ಹಾಗೂ ಅಫಜಲ್ಪುರಗಳಲ್ಲಿ ಹೆಚ್ಚಾಗಿದೆ. ಕೃಷಿ ಬೆಳೆಗಳಾದ ಜೋಳ, ಗೋಧಿ, ಕಡಲೆ ಹಾನಿಯಾಗಿದೆ. ತೋಟಗಾರಿಕೆಯ ದ್ರಾಕ್ಷಿ, ಪಪ್ಪಾಯಿ, ತರಕಾರಿ ಬೆಳೆಗಳು ಭಾರಿ ಪ್ರಮಾಣದಲ್ಲಿ ನಷ್ಟಗೊಂಡಿವೆ ಎಂದ ಜಿಲ್ಲಾಡಳಿತ, ತನ್ನ ವರದಿಯಲ್ಲಿ ಹಾನಿ ಪ್ರಮಾಣ ತಗ್ಗಿಸಿದೆಯೇ ಎಂಬ ಪ್ರಶ್ನೆಗೆ ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ. ದ್ರಾಕ್ಷಿ ಬೆಳೆಗಾರರ ಸಂಘದ ಪ್ರಕಾರ 100 ಕೋಟಿಗೂ ಅಧಿಕ ಪ್ರಮಾಣದಲ್ಲಿ ಕೇವಲ ದ್ರಾಕ್ಷಿ ಬೆಳೆಯೊಂದೇ ಹಾನಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ಅದ್ಹೇಗೆ ತೋಟಗಾರಿಕೆಯ ಬೆಳೆಗಳು ಕೇವಲ 39 ಕೋಟಿ ನಷ್ಟವಾಗಿವೆ ಎಂದು ತೀರ್ಮಾನಕ್ಕೆ ಬರಲಾಯ್ತು ಎಂಬ ಪ್ರಶ್ನೆಗಳಿಗೂ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ.
2 ಕೋಟಿ ಪರಿಹಾರ ಹಣ ಬಂದಿದೆ: ಪ್ರಕೃತಿ ವಿಕೋಪ ಪರಿಹಾರ ನಿಧಿ ನಿಯಮಗಳಂತೆ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಸಮೀಕ್ಷಾ ವರದಿ ತಮ್ಮ ಬಳಿ ಇದೆ ಎಂದ ಜಿಲ್ಲಾಧಿಕಾರಿ, ಚುನಾವಣಾ ಆಯೋಗಕ್ಕೆ ಹಾನಿಗೊಳಗಾದ ರೈತರ ಸವಿವರ ಮಾಹಿತಿ ರವಾನಿಸಿ ಅವರ ಅನುಮತಿ ಪಡೆದ ನಂತರವಷ್ಟೇ ಪರಿಹಾರ ವಿತರಣೆ ಆರಂಭಿಸಲಾಗುತ್ತದೆ ಎಂದರು.
ಸಿಆರ್ಎಫ್ ನಿಯಮಗಳಂತೆ ಜಿಲ್ಲೆಯ ಹಾನಿಗೊಳಗಾದ ಪ್ರದೇಶಗಳಲ್ಲಿ ಹಂಚಿಕೆ ಮಾಡಲು 6 ಕೋಟಿ ಅಗತ್ಯವಿದೆ. ಲಭ್ಯವಿರುವ ಮೊತ್ತ 2 ಕೋಟಿ, ಇನ್ನೂ ರಾಜ್ಯ ಸರ್ಕಾರದಿಂದ ಹಣ ಬರಬೇಕಾಗಿದೆ. ಸಂಪೂರ್ಣ ಹಣ ಬಂದ ನಂತರವೇ ಹಂಚಿಕೆ ಶುರುಮಾಡುವ ಇಂಗಿತ ಹೊರಹಾಕಿದರು.
ಜಿಪಂ ಸಿಇಒ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ತೋಟಗಾರಿಕೆ ಅಧಿಕಾರಿ ಮಂಜುನಾಥ, ಪಶುಸಂಗೋಪನೆ ಅಧಿಕಾರಿ ಡಾ. ಕರಲಗಿಕರ್ ಹಾಜರಿದ್ದರು.
ಕೇಂದ್ರ ತಂಡದ ಸದಸ್ಯರಾದ ಪ್ರಸನ್ನ ಸಾಲಿಯಾನ್ ಹಾಗೂ ಕಾಲಸಿಂಗ್ ಜಿಲ್ಲಾಡಳಿತದಿಂದ ಮಾಹಿತಿ ಪಡೆದು ಆಲಿಕಲ್ಲು ಮಳೆಯ ಸೆರೆಹಿಡಿಯಲಾದ ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡರು.
ಖರ್ಚಾಗಿದ್ದು 30 ಸಾವಿರ, ಕೊಟ್ಟಿದ್ದು 2 ಸಾವಿರ!
-ವಿಶೇಷ ವರದಿ
ಕ.ಪ್ರ. ವಾರ್ತೆ ಯಾದಗಿರಿ ಮಾ.23
ಮನೆ ಬಿದ್ದು ಹೋಗ್ಯಾದ್ರಿ, ರು. 25-30 ಸಾವಿರ ಖರ್ಚಾಗ್ಯಾದ್ರಿ, ಸರ್ಕಾರ ಬರೀ ರು. 2ಸಾವಿರ ಅಷ್ಟೇ ಕೊಟ್ಟಾದ್ರಿ ಸರ್..
ಆದರ ಅದು ಅಕೌಂಟ್ ಚೆಕ್ ಕೊಟ್ಟಾರ. ಬ್ಯಾಂಕಿನಾಗ ಅಕೌಂಟ್ ತೆಗೆಸಲಿಕ್ಕೆ ರು. 1 ಸಾವಿರ ಖರ್ಚು ಬಂದಾದ್ರಿ. ಇನ್ನೂ ಉಳಿದ ರು. 1ಸಾವಿರದಾಗ ಹ್ಯಾಗ ಮನೆ ಕಟ್ಟಿಸಬೇಕ್ರಿ. ಇಷ್ಟಾದರ ಯಾಕರಾ ಕೊಡ್ತಿರಿ. ನಾವು ಕೂಲಿ ಮಾಡಿ ಮನೆ ಕಟ್ಟಿಸಿಕೊಳ್ಳುತ್ತಿವಿ ಬಿಡ್ರಿ ಎಂದು ಮುಸ್ಲೆಪಲ್ಲಿ ನಿವಾಸಿ ಬಸವರಾಜ ಆಲಿಕಲ್ಲು ಮಳೆಯಿಂದಾದ ಹಾನಿಗೀಡಾದ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸಲು ಆಗಮಿಸಿದ ಕೇಂದ್ರದ ತಂಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ.
ಭಾನುವಾರ ಆಲಿಕಲ್ಲು ಮಳೆಯಿಂದಾದ ಹಾನಿಗೀಡಾದ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸಲು ಆಗಮಿಸಿದ ಕೇಂದ್ರದ ತಂಡ ಶಹಾಪುರ ಮತ್ತು ಯಾದಗಿರಿ ತಾಲೂಕಿನ ಹಾನಿಯಾದ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲಿಸಿದರು. ಬಸವರಾಜ ಸಮಜಾಯಿಷಿ ನೀಡಿದ ಕೇಂದ್ರ ತಂಡದ ಸದಸ್ಯರು, ಪೂರ್ಣ ಪ್ರಮಾಣದಲ್ಲಿ ಬೀಳದ ಮನೆಗಳಿಗೆ ರು. 2ರಿಂದ 3ಸಾವಿರ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು. ಕೊಟ್ಟಿದ್ದು ರು. 12,600, ನಮಗೆ ತಲುಪಿದ್ದು ರು. 12 ಸಾವಿರ ಪರಮೇಶಪಲ್ಲಿಯ ನಬೂಮಾ ಎಂಬ ಮಹಿಳೆಗೆ ಪರಿಹಾರ ಧನ ನೀಡಿದ್ದು, ರು. 12 ಸಾವಿರ ಆರುನೂರು, ಪರಿಹಾರ ಮೊತ್ತದಲ್ಲಿ ರು. 600 ತೆಗೆದುಕೊಂಡು ನಮಗೆ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಮ್ಮುಖದಲ್ಲೇ ಕೇಂದ್ರ ತಂಡಕ್ಕೆ ದೂರಿದಳು.
ನಂತರ ಇನ್ನಷ್ಟು ಫಲಾನುಭವಿಗಳು ಮುಂದೆ ಬಂದು ನಮಗೂ ಪರಿಹಾರದ ವಿತರಿಸಿದ್ದರಲ್ಲಿ ರು. 200 ರಿಂದ ರು. 400 ತೆಗೆದು ಪರಿಹಾರ ನೀಡಲಾಗುತ್ತಿದೆ ಎಂದು ದೂರಿದರು. ಈ ಸಮಸ್ಯೆಯನ್ನು ಕೇಳಿದ ಕೇಂದ್ರ ತಂಡ ತಕ್ಷಣ ಸರಿಪಡಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ವಿಷಯುಕ್ತ ನೀರು ಸೇವನೆ: ನೀರು ಕುಡಿದ್ರ ವಿಷ ಕುಡಿದಂಗ ಆಗಕತ್ತಾದರೀ. ಇಷ್ಟು ದಿನ ಆದರೂ ನಮ್ಮೂರಿಗೆ ಯಾರು ಬಂದಿಲ್ಲ. ಎರಡು ಮೂರು ದಿನಕೊಮ್ಮೆ ಕರೆಂಟ್ ಬರತಾದ ಎಂದು ಪರಮೇಶಪಲ್ಲಿ ಗ್ರಾಮದ ಬಾಬು ಕೊಂಡಾಸ್ ಜಿಲ್ಲಾಧಿಕಾರಿಗಳಿಗೆ ದೂರಿದರು. ಸ್ಥಳದಲ್ಲಿದ್ದ ಇಒ ಮತ್ತು ಪಿಡಿಒ ಹಾಗೂ ಕೆಇಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು 3 ದಿನದಲ್ಲಿ ಸಮಸ್ಯೆ ಬಗೆಹರಿಸುವಂತೆ ತಾಕಿತ್ತು ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿ.ಪಂ.ಸಿಇಒ ಅವರಿಗೆ ಸೂಚಿಸಿದರು.
ಇನ್ನುಳಿದಂತೆ ಬೆಳೆ ಹಾನಿ ಸಮೀಕ್ಷೆ ನಡೆಸಿದ ತಂಡ ರಸ್ತೆ ಬದಿಯ ತೋಟದಲ್ಲಿ ಹಾನಿಗೀಡಾದ ಟೊಮ್ಯಾಟೋ, ಉಳ್ಳಾಗಡ್ಡಿ, ಜೋಳದ ಬೆಳೆಯನ್ನು ಪರೀಕ್ಷಿಸಿದರು. ಈ ಸಂದರ್ಭದಲ್ಲಿದ್ದ ರೈತರನ್ನು ಅಂದಾಜು ಹಾನಿಯ ಬಗ್ಗೆ ಪ್ರಶ್ನಿಸಿದಾಗ, ರೈತರು ಶೇ. 70ರಷ್ಟು ಬೆಳೆ ಹಾನಿಯಾಗಿದ್ದು, ಅಂದಾಜು ಎಕರೆಗೆ 1.75 ಲಕ್ಷ ಹಾನಿಗೀಡಾಗಿದೆ ಎಂದು ರೈತರು ತಮ್ಮ ಅಳಲನ್ನು ತಂಡದ ಮುಂದೆ ತೋಡಿಕೊಂಡರು.
ಬೆಳೆ ಹಾನಿ ಮನವರಿಕೆ ಮಾಡಿದ ಜಿಲ್ಲಾಧಿಕಾರಿ: ಅಧ್ಯಯನ ತಂಡಕ್ಕೆ ವರದಿ ಸಲ್ಲಿಸಿದ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ಜಿಲ್ಲೆಯಲ್ಲಿ 2556.98 ಹೆಕ್ಟೇರ್ ಪ್ರದೇಶದಲ್ಲಿ ರು. 152.06 ಲಕ್ಷ, ಕೃಷಿ ಬೆಳೆ, 38.37 ಹೆಕ್ಟೇರ್ ಪ್ರದೇಶದಲ್ಲಿ ರು. 42.21 ಲಕ್ಷ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಅದರಂತೆ 50ಕ್ಕೂ ಹೆಚ್ಚು ಜಾನುವಾರು ಮತ್ತು ಪಶುಗಳಿಗೆ ಹಾನಿಯಾಗಿ ಒಟ್ಟು ರು. 3.85 ಲಕ್ಷ ಹಾನಿಯಾಗಿದೆ. ಅದೇ ರೀತಿ ರು. 32.50 ಲಕ್ಷ ಮೌಲ್ಯದ 459 ಮನೆಗಳಿಗೆ ಹಾನಿಯಾಗಿದೆ. ಅದೆ ರೀತಿ ವಿದ್ಯುತ್ ಸೌಕರ್ಯಕ್ಕೆ ಸಂಬಂಧಿಸಿದಂತೆ ರು. 45.27ಲಕ್ಷ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಈ ಮಳೆಯಿಂದ ಒಟ್ಟು ರು. 2.79 ಕೋಟಿಗೂ ಅಧಿಕ ಹಾನಿಯಾಗಿರುವ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಎಸ್.ಎ. ಜಿಲಾನಿ, ಉಪ ವಿಭಾಗಾಧೀಕಾರಿ ಬಿ.ಪಿ. ವಿಜಯ, ಯಾದಗಿರಿ ತಹಸೀಲ್ದಾರ್ ಶಿವಶರಣಪ್ಪ ಕಟೋಳಿ, ಗುರುಪಾಟೀಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಬಲರಾಜ ರಂಗರಾವ್ ಸೇರಿದಂತೆ ವಿದ್ಯುತ್ ಇಲಾಖೆ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ನಿರೀಕ್ಷಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

