ಕೋಲಾರ

ಯೋಜನೆಯ ದುರುಪಯೋಗ ಆಗದಂತೆ ನೋಡಿಕೊಳ್ಳಿ: ಕೃಷ್ಣಪ್ಪ

Published On :

ಚಿಕ್ಕಬಳ್ಳಾಪುರ: ನಗರದ ವೇಣುಗೋಪಾಲ ಸ್ವಾಮಿ ರಸ್ತೆ ಬಳಿ ಇರುವ ಸರ್ಕಾರಿ ಮಾದರಿ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ನಗರಸಭಾ ಸದಸ್ಯ ಕಿಸಾನ್ ಕೃಷ್ಣಪ್ಪ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ನಗರಸಭಾ ಸದಸ್ಯ ಕಿಸಾನ್ ಕೃಷ್ಣಪ್ಪ, ಸರ್ಕಾರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತಿರುವ ಬೆನ್ನಲ್ಲೆ ಮಕ್ಕಳ ಭೌತಿಕ ಹಾಗೂ ಶಾರೀರಿಕ ಶಕ್ತಿಗೆ ಭದ್ರ ಭುನಾದಿ ರೂಪಿಸುವ ನಿಟ್ಟಿನಲ್ಲಿ ಆಕ್ಷರ ದಾಸೋಹದ ಜೊತೆಗೆ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕ್ಷೀರಭಾಗ್ಯ ಯೋಜನೆ ದುರುಪಯೋಗವಾಗದಂತೆ ಶಿಕ್ಷಕರು ನೋಡಿಕೊಳ್ಳಬೇಕು. ಮಕ್ಕಳಿಗೆ ಸಮರ್ಪಕ ರೀತಿಯಲ್ಲಿ ಹಾಲನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಇಂದಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಅತ್ಯುತ್ತಮ ರೀತಿಯಲ್ಲಿ ಶಿಕ್ಷಣ ನೀಡುವತ್ತ ಸರ್ಕಾರ ಚಿಂತನೆ ನಡೆಸಿರುವುದು ಸ್ವಾಗತಾರ್ಹ. ಬದಲಾದ ಇಂದಿನ ವ್ಯವಸ್ಥೆಗೆ ತಕ್ಕಂತೆ ಮೌಲ್ಯಯುತ ಶಿಕ್ಷಣಕ್ಕೆ ಪೂರಕವಾಗಿ ಮಕ್ಕಳ ಪೌಷ್ಟಿಕತೆಗೆ ಮತ್ತಷ್ಟು ಉತ್ತೇಜನಕಾರಿ ಕಾರ್ಯಕ್ರಮಗಳನ್ನು ನೀಡಬೇಕೆಂದ ಅವರು, ಯಾರೂ ಎಂದಿಗೂ ಕದಿಯಲಾರದಂತಹುದು ವಿದ್ಯೆ ಮಾತ್ರ, ಆ ವಿದ್ಯೆಯನ್ನು ವಿನಯದಿಂದ ಪಡೆಯಬೇಕೆಂದು ಸಲಹೆ ನೀಡಿದರು.
ಕೇವಲ ಶಿಕ್ಷಣ ಮಾತ್ರ ಪಡೆದುಕೊಂಡರೆ ಏನೇನೂ ಸಾಲದು ಅದರ ಜೊತೆಗೆ ಕ್ರಮಬದ್ಧ ಶಿಸ್ತು, ಸಂಯಮ, ಮಾನವೀಯ ಮೌಲ್ಯಗಳು, ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರಂತೆ ದೂರದೃಷ್ಟಿಯನ್ನಿಟ್ಟುಕೊಂಡು ಶಿಕ್ಷಣ ಪಡೆಯಬೇಕು. ಅವರ ಆದರ್ಶ, ಜೀವನ ತತ್ವಗಳನ್ನು ರೂಢಿಸಿಕೊಳ್ಳಬೇಕಲ್ಲದೇ ಗುರು-ಹಿರಿಯರಿಗೆ ಗೌರವ ನೀಡಬೇಕು. ಆಗ ಮಾತ್ರ ವಿದ್ಯಾರ್ಥಿಗಳೂ ಸಹಾ ಸಮಾಜದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತದೆ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಉಮಾ ಮಾತನಾಡಿ, ಶಿಕ್ಷಕರು ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಅದೇ ರೀತಿ ಮನೆಯೇ ಮೊದಲ ಪಾಠ ಶಾಲೆ. ಇದನ್ನರಿತು ಪೋಷಕರು ಸಹ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಕೊಡುವಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದರು. ಶಿಕ್ಷಕರು ಮತ್ತು ಪೋಷಕರ ನಡುವೆ ಉತ್ತಮ ಬಾಂಧವ್ಯ ನಿರ್ಮಾಣವಾಗಬೇಕು. ಈ ಮೂಲಕ ಇಬ್ಬರೂ ಪರಸ್ಪರ ಕೈ ಜೋಡಿಸಿ ಮಕ್ಕಳ ಪ್ರಗತಿಗೆ ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಖಜಾಂಚಿ ಎಂ. ಕೃಷ್ಣಪ್ಪ, ದೈಹಿಕ ಶಿಕ್ಷಕ ವಿ.ನಾರಾಯಣಪ್ಪ, ಸಹ ಶಿಕ್ಷಕರಾದ ಕೃಷ್ಣವೇಣಿ, ಇಂದಿರಾ, ಎಂ.ಸುಧಾ, ಎಸ್.ಸಿ. ವನಿತಾ, ಡಿ. ಕುಸುಮಾ, ಎಸ್.ಜಿ.ಎಸ್. ರಾಣಿ, ಮುನಿರೇವಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.