ಎಕರೆಗೆ ರು. 10 ಲಕ್ಷ ಪರಿಹಾರ ನೀಡಿ
ಕೋಲಾರ: ಕುಡಿಯುವ ನೀರಿನ ಯೋಜನೆಗಾಗಿ ಬಂಗಾರಪೇಟೆ ತಾಲೂಕಿನ ಯರಗೋಳು ಬಳಿ ಮಳೆ ನೀರು ಸಂಗ್ರಹಣೆಗಾಗಿ ಅಣೆಕಟ್ಟೆ ನಿರ್ಮಾಣಕ್ಕಾಗಿ ರೈತರಿಂದ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಕೃಷಿ ಭೂಮಿಗೆ ಎಕರೆಗೆ 10 ಲಕ್ಷ ರು. ಪರಿಹಾರ ನೀಡುವಂತೆ ಆಗ್ರಹಿಸಿ ಈ ಪ್ರದೇಶದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಮೂರು ಪಟ್ಟಣಗಳಿಗೆ ಮತ್ತು ಕೆಲವು ಹಳ್ಳಿಗಳಿಗೆ ಶುದ್ಧವಾದ ಕುಡಿಯುವ ನೀರು ಒದಗಿಸುವ ಯರಗೋಳು ಯೋಜನೆಯ ಅಣೆಕಟ್ಟೆ ನಿರ್ಮಾಣ ಸ್ಥಳದಲ್ಲಿ ಮುಳುಗಡೆಯಾಗಲಿರುವ 50 ಕುಟುಂಬಗಳ ರೈತರು ತಾ.ಪಂ ಸದಸ್ಯೆ ಅಂಬೂಬಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಎಂ. ಲಕ್ಷ್ಮಣರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಈ ಭಾಗದಲ್ಲಿ ರೈತರ 127 ಎಕರೆ ಕೃಷಿ ಭೂಮಿ ಮುಳುಗಡೆಯಾಗುವುದರಿಂದ ಈ ಜಮೀನನ್ನೇ ನಂಬಿರುವ ರೈತರ ಬದುಕಿಗೆ ಸಮಸ್ಯೆ ಆಗುವುದರಿಂದ ಜಮೀನು ಮತ್ತು ಮನೆಗಳ ಬದಲು ಪರ್ಯಾಯ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೈಗಾರಿಕೆಗಳಿಗೆ ವಶಪಡಿಸಿಕೊಂಡ ಭೂಮಿಗೆ ಎಕರೆಗೆ 30 ಲಕ್ಷಕ್ಕೂ ಮೀರಿ ಪರಿಹಾರ ನೀಡುತ್ತಿದ್ದು ನಮಗೆ ಮಾತ್ರ ಎಕರೆಗೆ ಕೇವಲ 60 ಸಾವಿರ ರು. ನಿಗದಿಪಡಿಸಿರುವುದು ಸರಿಯಲ್ಲ, ಇದು ಬಡ ರೈತರನ್ನು ವಂಚಿಸಿದಂತಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮುಳುಗಡೆಯಾಗಲಿರುವ ಪ್ರದೇಶದಲ್ಲಿ ಬಾವಿ, ಪಂಪ್ಸೆಟ್ಗಳು, ಕೊಳವೆ ಬಾವಿಗಳು, ನೀರಾವರಿ, ಖುಷ್ಕಿ ಜಮೀನುಗಳು, ವಾಸದ ಮನೆಗಳು, ಒಂದು ದೇವಾಲಯವಿದ್ದು, ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದರು.
ಜಿಲ್ಲಾ ಕೇಂದ್ರವಾದ ಕೋಲಾರ, ಮಾಲೂರು, ಬಂಗಾರಪೇಟೆ ಸೇರಿದಂತೆ ಕೆಲವು ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಂಕಷ್ಟ ಗಮನಿಸಿ ಯೋಜನೆಗೆ ನಮ್ಮ ಭೂಮಿ ಬಿಟ್ಟುಕೊಡಲು ಮಾನವೀಯತೆಯಿಂದ ಒಪ್ಪಿಗೆ ನೀಡಿದ್ದೇವೆ. ಆದರೆ, ನಮಗೆ ನೀಡುತ್ತಿರುವ ಪರಿಹಾರವನ್ನು ಗಮನಿಸಿದಾಗ ನಮ್ಮ ಬದುಕಿನೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.
ಈ ಯೋಜನೆಯಿಂದ ಮುಳುಗಡೆಯಾಗಲಿರುವ ಅರಣ್ಯ ಭೂಮಿಗೆ ಕೋಟ್ಯಂತರ ರು. ನೀಡಿರುವ ಸರ್ಕಾರ ರೈತರ ಭೂಮಿಯ ಬಗ್ಗೆ ತಾತ್ಸಾರ ಏಕೆ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಅರಣ್ಯ ಇಲಾಖೆಗೆ ನೀಡಿರುವಂತೆ ಪರ್ಯಾಯವಾಗಿ ನಮಗೆ ಬೇರೆ ಕಡೆ ಭೂಮಿ ನೀಡಬೇಕು ಹಾಗೂ ಎಕರೆಗೆ 10 ಲಕ್ಷ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಪಂ ಸದಸ್ಯೆ ಅಂಬೂಬಾಯಿ, ಗ್ರಾ.ಪಂ ಅಧ್ಯಕ್ಷ ಪಿ.ಎಂ. ಲಕ್ಷ್ಮಣರಾವ್, ಮುಖಂಡರಾದ ಕೇದಾರರಾವ್, ರಘುರಾವ್, ಮನ್ನೋಜಿರಾವ್, ಗೋಪಾಲರಾವ್, ಗ್ರಾ.ಪಂ ಸದಸ್ಯ ಜರಿಪ್ರಸಾದ್, ವೇಣುಗೋಪಾಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

