ಕೋಲಾರ

ಪುರಸಭೆ ಹಣಾಹಣಿ: 30 ಮಂದಿ ನಾಮಪತ್ರ

Published On :

ಬಂಗಾರಪೇಟೆ:  ಮಾ.7ರಂದು ನಡೆಯುವ ಪುರಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳಿಂದ ರಾಜಕೀಯ ರಂಗು ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಗುರುವಾರ ವಿವಿಧ ಪಕ್ಷಗಳಿಂದ 16 ಮಂದಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದು, ಇದುವರೆಗೂ ಒಟ್ಟು 30 ಮಂದಿ ಸಲ್ಲಿಸಿದಂತಾಗಿದೆ.
ಬುಧವಾರ 14 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದು ಗುರುವಾರ 16ಮಂದಿ ಸಲ್ಲಿಸಿದ್ದು ಒಟ್ಟು 30 ಮಂದಿ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಗುರುವಾರ ನಾಮಪತ್ರಗಳನ್ನು ಸಲ್ಲಿಸಿರುವವರ ಪೈಕಿ ಪ್ರಮುಖರೆಂದರೆ ಹಾಲಿ ಸದಸ್ಯ ಎಂ.ಶಿವಕುಮಾರ್ ಜೆಡಿಎಸ್ ವತಿಯಿಂದ 16ನೇ ವಾರ್ಡಿಗೆ, ಕಳೆದ ಬಾರಿ ಶಿವಕುಮಾರ್ ವಿರುದ್ಧ ಪರಾಭವಗೊಂಡಿದ್ದ ಬಿ.ಎನ್. ರಾಜಶೇಖರ್ ಮತ್ತೆ ಸ್ಪರ್ಧಿಸಲು ಮುಂದಾಗಿದ್ದಾರೆ. 15ನೇ ವಾರ್ಡಿ ಹಾಲಿ ಸದಸ್ಯ ಸುಹೇಲ್ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದರೆ, 10ನೇ ವಾರ್ಡಿನಿಂದ ಕಳೆದ ಬಾರಿ ಅಲ್ಪಮತಗಳಿಂದ ಸೋಲುಂಡಿದ್ದ ಭಜರಂಗದಳದ ಸಂಚಾಲಕ ಬಿ.ಸಿ.ಶ್ರೀನಿವಾಸಮೂರ್ತಿ ಈ ಬಾರಿ ಮತ್ತೆ ಅಖಾಡಕ್ಕೆ ಇಳಿದ್ದಿದಾರೆ. ಶುಕ್ರವಾರ ಶುಭ ದಿನವಾಗಿರುವುದರಿಂದ 3 ಪಕ್ಷಗಳಿಂದಲೂ ಬಹುತೇಕ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸುವ ಸಾಧ್ಯತೆ ಇದೆ.
ಇತ್ತ ತಮ್ಮ ಉಮೇದುವಾರಿಕೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಸಲ್ಲಿಸಿ ನಂತರ ಅಭ್ಯರ್ಥಿಗಳು ವಾರ್ಡ್‌ಗಳತ್ತ ತೆರಳಿ ಮನೆ ಮನೆಗೂ ಹೋಗಿ ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ. ಭಾರಿ ಪೈಪೋಟಿ ಇರುವ ಕೆಲವು ವಾರ್ಡ್‌ಗಳಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಕಾಣಿಕೆಗಳ ಆಮಿಷವೊಡ್ಡುತ್ತಿರುವುದು ಕಂಡು ಬಂದಿದೆ.
ಮುಂದಿನ ವಾರ ಇದರ ಪ್ರಭಾವ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಚುನಾವಣೆ ಆಯೋಗವು ಮುಕ್ತವಾಗಿ ಚುನಾವಣೆ ನಡೆಸಲು ಹಲವು ತಂತ್ರಗಳನ್ನು ರೂಪಿಸಿದ್ದರೂ ಆಯೋಗದ ಕಣ್ಣು ತಪ್ಪಿಸಿ ಅಭ್ಯರ್ಥಿಗಳು ಲಕ್ಷಾಂತರ ವೆಚ್ಚ ಮಾಡುತ್ತಿದ್ದಾರೆ.

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು
ಬಾಗೇಪಲ್ಲಿ: ಸ್ಥಳೀಯ ಪುರಸಭೆಯ ಚುನಾವಣೆಯ ಅಂಗವಾಗಿ ಬಾಗೇಪಲ್ಲಿ ಪುರಸಭೆಯ ವ್ಯಾಪ್ತಿಯ ವಾರ್ಡ್‌ಗಳ ಪೈಕಿ ಹಲವು ವಾರ್ಡಿಗಳ ಅಭ್ಯರ್ಥಿಗಳು ಗುರುವಾರ ನಾಮಪತ್ರಗಳನ್ನು ಸಲ್ಲಿಸಿದರು. ಒಂದನೇ ವಾರ್ಡಿನಿಂದ ಪುರಸಭೆಯ ಸದಸ್ಯ ಜಿ. ಚಂದ್ರಶೇಖರ್, 3ನೇ  ವಾರ್ಡಿನಿಂದ ಮಹಮದ್ ಹನೀಫ್ ಮತ್ತು ಜಿ. ವೆಂಕಟೇಶ್, 4ನೇ ವಾರ್ಡಿನಿಂದ ಕೆ.ಎನ್. ಶ್ರೀನಿವಾಸರೆಡ್ಡಿ, 8ನೇ ವಾರ್ಡಿನಿಂದ ಪುರಸಭೆಯ ಸದಸ್ಯ ಬಿ.ವಿ. ಶಂಕರ, 10ನೇ ವಾರ್ಡಿನಿಂದ ಎಂ.ಎಚ್. ಅಬ್ದುಲ್ಲಾ, 11ನೇ ವಾರ್ಡಿನಿಂದ ಶಕೀಲಾ ಮತ್ತು ಹಸೀನಾ 12ನೇ ವಾರ್ಡಿನಿಂದ ಮಾಜಿ ಉಪಾಧ್ಯಕ್ಷ ಎ.ನರಸಿಂಹಮೂರ್ತಿ, 20ನೇ ವಾರ್ಡಿನಿಂದ ನಲ್ಲಪ್ಪ , 21ನೇ ವಾರ್ಡಿನಿಂದ ಮಾಜಿ ಅಧ್ಯಕ್ಷೆ ಸರೋಜಮ್ಮ ಸದಾಶಿವ, 23ನೇ ವಾರ್ಡಿನಿಂದ ವೆಂಕಟೇಶ್ ಎಂಬುವರು 2 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಎಸ್. ಜಯರಾಮ್ ಹಾಗೂ ಕೆ. ವೆಂಕಟೇಶ್ ತಿಳಿಸಿದ್ದಾರೆ.  ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಹಠಾತ್ತಾಗಿ ನಾಮಪತ್ರ ಸಲ್ಲಿಸಲು ಕಚೇರಿಗೆ ಏಕಕಾಲಕ್ಕೆ ನುಗ್ಗಿದ್ದರಿಂದ ಜನರನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಮಾಡಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.