ಕೋಲಾರ

ಅಪರಾಧ ಸುದ್ದಿಗಳು

Published On :

ಮದುವೆಯಾಗುವುದಾಗಿ ನಂಬಿಸಿ ವಂಚನೆ: ದೂರು
ಕೆಜಿಎಫ್: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ ಯುವಕ ಇದೀಗ ಬೇರೆ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾನೆ ಎಂದು ಆರೋಪಿಸಿ ಯುವತಿ ಪೊಲೀಸ್  ಠಾಣೆಯಲ್ಲಿ ದೂರು ನೀಡಿರುವ ಘಟನೆ ನಡೆದಿದೆ.  ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ನಿವಾಸಿ ರವಿ ಎಂಬುವರ ಮಗಳಾಗ ಉಷಾಳನ್ನು  ಇ.ಟಿ. ಬ್ಲಾಕ್‌ನ ನಿವಾಸಿ ಪ್ರವೀಣ್‌ಕುಮಾರ್ ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಂಬಿಸಿ ಉಷಾಳೊಂದಿಗೆ ದೈಹಿಕ ಸಂಪರ್ಕ ಹೊಂದಿ ಗರ್ಭಪಾತ ಮಾಡಿಸಿದ್ದಾನೆ ಎಂದು ಹೇಳಲಾಗಿದೆ. ಈ ವಿಷಯ ಉಷಾಳ ಪೋಷಕರಿಗೆ ತಿಳಿದಿದ್ದು ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ಪಂಚಾಯಿತಿ ನಡೆಸಿ ಮದುವೆಯಾಗುವಂತೆ ತಿಳಿಸಿದ್ದು  ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದ ಪ್ರವೀಣ್‌ಕುಮಾರ್ ಬೇರೆ ಹುಡುಗಿಯನ್ನು  10-7-13 ರಂದು ಮದುವೆಯಾಗಲು ಹೊರಟಿದ್ದು ಇದೀಗ ನನಗೆ ಮೋಸ ಮಾಡಿ ವಂಚಿಸಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ವಂಚನೆ ಮತ್ತು ಅತ್ಯಾಚಾರ ಪ್ರಕರಣ ದೂರು ದಾಖಲಿಸಿಕೊಂಡ ರಾಬರ್ಟ್‌ಸನ್‌ಪೇಟೆ ಪೊಲೀಸರು ತಲೆ ಮರೆಸಿಕೊಂಡಿರುವ ಪ್ರವೀಣ್‌ಕುಮಾರ್‌ನ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಯುವಕ ಆತ್ಮಹತ್ಯೆ
ಕೆಜಿಎಫ್: ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಬಲುವನಹಳ್ಳಿ ಗ್ರಾಮದ ನಿವಾಸಿ ಚಿನ್ನಮಯ್ಯ ಎಂಬುವರ ಮಗ ಸುನಿಲ್‌ಕುಮಾರ್(21) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ 5 ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದು ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದನು ಎಂದು ತಿಳಿಸಲಾಗಿದೆ. ತನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ಸಂಜೆ ತಮ್ಮ ಜಮೀನಿನ ಹುಣಸೆ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ತಂದೆ ಚಿನ್ನಮಯ್ಯ ಬೇತಮಂಗಲ ಪೊಲೀಸರಿಗೆ ತಿಳಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕುಡಿದ ಅಮಲಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನ
ಚಿಂತಾಮಣಿ: ಹಾಡಹಗಲೇ ಕುಡುಕನೊಬ್ಬ ಅಮಲಿನಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಕೂಡಲೇ ಆಸ್ಪತ್ರೆಗೆ ರವಾನಿಸಿರುವ ದಾರುಣ ಘಟನೆ ಬಟ್ಲಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯ ಯಗವಕೋಟೆ ಗ್ರಾಮದಲ್ಲಿ ಮಂಗಳವಾರನಡೆದಿದೆ. ಯಗವಕೋಟೆ ಗ್ರಾಮದ ಮುರಳಿ ಬಿನ್. ಮುನಿರತ್ನಪ್ಪ ಎಂಬಾತನು ಕಳೆದ ಹಲವು ತಿಂಗಳಿಂದ ಹೆಂಡತಿ ಮಕ್ಕಳೊಂದಿಗೆ ಜಿಗುಪ್ಸೆಗೊಂಡು ಮದ್ಯದ ದಾಸನಾಗಿ ಕುಡಿತದ ಚಟಕ್ಕೆ ಬಲಿಯಾಗಿ ತನ್ನ ಸಂಸಾರವನ್ನು ಸರಿಪಡಿಸಿಕೊಳ್ಳಲು ಆಗದೆ ನೊಂದು ಮಂಗಳವಾರ ಮಧ್ಯಾಹ್ನ ಹಾಡಹಗಲೇ ಯಗವಕೋಟೆ ಬಸ್‌ನಿಲ್ದಾಣದಲ್ಲಿ ಮುರಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ದೇಹದ ಶೇ.60 ಭಾಗ ಸುಟ್ಟು ಗಾಯಗಳಾಗಿ ಇರುವ ಈತನನ್ನು ಕೂಡಲೇ ಸಾವಜನಿಕರ ನೆರವಿನೊಂದಿಗೆ ಪಟ್ಟಣದಲ್ಲಿನ ಸಾರ್ವಜನಿಕರ ಆಸ್ಪತ್ರೆಗೆ ರವಾನಿಸಿ ಅಲ್ಲಿಂದ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜೂಜು ಅಡ್ಡೆ ಮೇಲೆ ದಾಳಿ: ಐವರ ಬಂಧನ
ಚಿಂತಾಮಣಿ: ಅಂದರ್‌ಬಾಹರ್‌ಜೂಜಿನಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ ಸಾವಿರಾರು ರು. ನಗದು, ದ್ವಿಚಕ್ರ ವಾಹನಗಳ ಸಮೇತ 5 ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಧನಮಿಟ್ಟೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ತಾಲೂಕಿನ ಬಾಗೇಪಲ್ಲಿ ರಸ್ತೆಯ ಬಳಿ ಇರುವ ಧನಮಿಟ್ಟೇನಹಳ್ಳಿ ನೀಲಗಿರಿ ತೋಪಿನಲ್ಲಿ ಮಂಗಳವಾರ ಸಂಜೆ ಅಂದರ್‌ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿ 5 ಜನ ಆರೋಪಿಗಳಾದ ಮಹಬೂಬ್, ಅಕ್ರಂಪಾಷ, ಶೌಕತ್ ಪಾಷ, ಮಹಮದ್ ಅಲ್ಲಾಬಕಾಷ್, ಇಲಿಯಾಸ್ ಅವರನ್ನು ಬಂಧಿಸಿ 2580 ನಗದು, 2 ದ್ವಿಚಕ್ರ ವಾಹನಗಳು 4 ಮೊಬೈಲ್ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮೊಬೈಲ್‌ನಲ್ಲಿ ಮಾತಾಡುವಾಗಲೇ ಹೃದಯಾಘಾತ: ವ್ಯಕ್ತಿ ಸಾವು
ಚಿಂತಾಮಣಿ: ಅಪರಿಚಿತ ವ್ಯಕ್ತಿಯೊಬ್ಬನು ಮೊಬೈಲ್‌ನಲ್ಲಿ ಸಂಭಾಷಣೆ ಮಾಡುತ್ತಿರುವಾಗ ಹೃದಯಾಘಾತವಾಗಿ ಕುಸಿದು ಬಿದ್ದ ಪರಿಣಾಮ ಕೂಡಲೇ ಸಾರ್ವಜನಿಕರು ಸಹಕಾರದೊಂದಿಗೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವನ್ನಪ್ಪಿರುವ ಘಟನೆ ಪಟ್ಟದ ಗಜಾನನ ವೃತ್ತದ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಪಟ್ಟಣದಲ್ಲಿನ ಗಜಾನನ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ಶಿಡ್ಲಘಟ್ಟ ತಾಲೂಕಿನ ಈ. ತಿಮ್ಮಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಪರಿಚಿತ ವ್ಯಕ್ತಿ ಸುಮಾರು 60 ವರ್ಷ ವಯಸ್ಸುಳ್ಳ ವ್ಯಕ್ತಿಯೂ ತನ್ನ ಮೊಬೈಲ್‌ನಲ್ಲಿ ಸಂಭಾಷಣೆ ಮಾಡುತ್ತಿರುವಾಗ ಹೃದಯಾಘಾತ ಕಾರಣದಿಂದ ಕುಸಿದು ಬಿದ್ದು ಸಾವನ್ನಪ್ಪಿರುವುದಾಗಿ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ.

ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
ಚಿಂತಾಮಣಿ: ವರದಕ್ಷಿಣೆ ದಾಹದಿಂದ ದೈಹಿಕ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಗಂಡನ ವಿರುದ್ಧ ಹೆಂಡತಿ ಇಂದು ಪೊಲೀಸ್ ಠಾಣೆಯ ಮೆಟ್ಟಿಲೇರಿ ತನಗೆ ಕಾನೂನು ರಕ್ಷಣೆ ನೀಡುವಂತೆ ಕೋರಿ ದೂರು ನೀಡಿರುವ ಘಟನೆ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಯಗವಕೋಟೆ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಯಗವಕೋಟೆ ಗ್ರಾಮದ ಜ್ಯೋತಿ ಎಂಬಾಕೆಯನ್ನು ತನ್ನ ಗಂಡನಾದ ರಾಮಮೂರ್ತಿ ವರದಕ್ಷಿಣೆಗಾಗಿ ಪದೇ ಪದೇ ಪೀಡಿಸುತ್ತಾ ತನಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ನೊಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಬ್ ಇನ್ಸೆಪೆಕ್ಟರ್ ಪ್ರವೀಣ್‌ಕುಮಾರ್ ವಿಚಾರಣೆ ನಡೆಸಿ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಆರೋಪಿ ರಾಮಮೂರ್ತಿ ತಲೆ ಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.