ಮುಗ್ಧ ರೈತರಿಗೆ ನಕಲಿ ಕೀಟ ನಾಶಕ ಮಾರಾಟ: ರೈತ ಸಂಘ ಆರೋಪ
ಕ.ಪ್ರ.ವಾರ್ತೆ ಕೋಲಾರ ಜು.27
ಜಿಲ್ಲೆಯ ವಿವಿಧ ಕಡೆ ಮುಗ್ಧ ರೈತರಿಗೆ ಕಳಪೆ ನಕಲಿ ಕೀಟ ನಾಶಕ ಔಷಧಿಗಳನ್ನು ಮಾರಾಟ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘದ ಮುಖಂಡರು ಜಿಲ್ಲಾ ಆಡಳಿತವನ್ನು ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು, ಜಿಲ್ಲೆಯಾಧ್ಯಂತ ಕೆಲ ನಕಲಿ ಕೀಟನಾಶಕ ಔಷಧಿ ಕಂಪನಿಗಳ ಪ್ರತಿನಿಧಿಗಳು ಮುಗ್ಧ ರೈತರ ಬಳಿ ಹೋಗಿ ತರಕಾರಿ, ಹಣ್ಣುಗಳಿಗೆ ಕೀಟ ಬಾಧೆ ಹರಡದಂತೆ ನೋಡಿಕೊಳ್ಳಲು ನಮ್ಮ ಕಂಪನಿಯ ಔಷಧಿ ಬಳಸಿ ಎಂದು ಸಾಲದ ರೂಪದಲ್ಲಿ ಔಷಧಿ ನೀಡುತ್ತಿದ್ದು. ಈ ಔಷಧಿಗಳು ರೈತರಿಗೆ ವರದಾನವಾಗುವ ಬದಲಿಗೆ ರೈತರ ಜೀವನ ಪರಿಸ್ಥಿತಿಯನ್ನು ಮತ್ತಷ್ಟು ಹಾಳು ಮಾಡುತ್ತಿವೆ ಎಂದು ಆರೋಪಿಸಿದರು.
ಕಳಪೆ ಕೀಟ ನಾಶಕಗಳ ಮಾರಾಟದ ಬಗ್ಗೆ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಕಳಪೆ ಕೀಟ ನಾಶಕಗಳ ಕಂಪನಿಯಿಂದ ಮಾಮೂಲಿ ಪಡೆದು ರೈತರನ್ನು ಹಾಳು ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಕೀಟ ನಾಶಕ ಔಷಧಿ ಮಾರಾಟ ಮಳಿಗೆಗಳು ನಾಯಿಕೊಡೆಯಂತೆ ಬೆಳೆದು ರೈತರ ರಕ್ತ ಹೀರುತ್ತಿವೆ, ದುಪ್ಪಟ್ಟು ಬೆಲೆಗೆ ರಸಗೊಬ್ಬರ ಮಾರಾಟ ಒಂದು ಕಡೆಯಾದರೆ, ಮತ್ತೊಂದು ಕಡೆ ಸಾವಿರಾರು ರು.ಗಳನ್ನು ಸುರಿದು ಔಷಧಿಗಳನ್ನು ತಂದು ಬೆಳೆಗಳ ಮೇಲೆ ಸಿಂಪಡಿಸಿದರೆ ರೋಗ ಹತೋಟಿಗೆ ಬರುವ ಬದಲು ಸಂಪೂರ್ಣವಾಗಿ ನಷ್ಟವಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ ದೂರಿದರು.
ಕಳಪೆ ಔಷಧಿಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಅವರು, 1 ಎಕರೆ ಜಮೀನಿನಲ್ಲಿ ಬೆಳೆಗಳ ಸಂರಕ್ಷಣೆಗಾಗಿ 10ರಿಂದ 15 ಸಾವಿರು ವೆಚ್ಚದಲ್ಲಿ ಕೀಟನಾಶಗಳು ಖರೀದಿ ಮಾಡಿದರೆ ಸಾಕಾಗುತ್ತದೆ, ಆದರೆ ಕೆಲ ಕಂಪನಿಗಳ ಮಾರಾಟ ಪ್ರತಿನಿದಿಗಳು ನಕಲಿ ಕಳಪೆ ಕೀಟನಾಶಕಗಳನ್ನು ರೈತರಿಗೆ ನೀಡಿರುವುದರಿಂದ ಒಂದು ಎಕರೆಗೆ 50 ರಿಂದ 60 ಸಾವಿರ ರು. ವೆಚ್ಚವಾಗುತ್ತಿದೆ ಎಂದರು.
ಕಳೆದ ಜನವರಿಯಿಂದ ಜುಲೈವರೆಗೆ ಔಷಧಿ ಅಂಗಡಿ ಮಾಲೀಕರು ಸುಮಾರು 2 ಕೋಟಿ ರು. ವಹಿವಾಟನ್ನು ಮಾಡಿದ್ದಾರೆ ಕಳಪೆ ಕೀಟ ನಾಶಕಗಳನ್ನು ಪತ್ತೆ ಹಚ್ಚಲು ಸರ್ಕಾರ ಕೃಷಿ ಇಲಾಖೆಯ ಮೂಲಕ ಜಾಗೃತ ದಳವನ್ನು ನೇಮಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ,ನಕಲಿ ಕೀಟನಾಶಕ ಮತ್ತು ಕಳಪೆ ಬಿತ್ತನೇ ಬೀಜ ಮಾರಾಟದ ಹಿಂದೆ ಶ್ರೀನಿವಾಸಪುರದ ತಾಲೂಕಿನ ಸಹಾಯಕ ಕೃಷಿ ಅಧಿಕಾರಿ ರವಿ ಎಂಬುವರ ಕೈವಾಡವಿದೆ ಎಂದು ಆರೋಪಿಸಿದರು.
ನಕಲಿ ಕಂಪನಿಗಳಿಗೆ ಕೂಡಲೇ ಕಡಿವಾಣ ಹಾಕದಿದ್ದರೆ ಕೃಷಿ ಇಲಾಖೆಯ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ನಾರಾಯಣಗೌಡ, ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್, ವಿದ್ಯಾರ್ಥಿ ಘಟಕದ ಹೂವಳ್ಳಿ ನಾಗರಾಜ್, ಕೋಲಾರ ತಾಲೂಕು ಅಧ್ಯಕ್ಷ ನೀಲಕಂಠಪುರ ಮುನೇಗೌಡ, ಮುಳಬಾಗಿಲಿನ ಗೊಟ್ಟುಕುಂಟೆ ಕೃಷ್ಣ, ಮುಖಂಡರಾದ ಶಿವಾರೆಡ್ಡಿ, ಐತಾಂಡಹಳ್ಳಿ ಉದಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

