ವಿವೇಕ ವಾಣಿ ಪಸರಿಸಿದ ರಥಯಾತ್ರೆ
ಚಿಕ್ಕಬಳ್ಳಾಪುರ: ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಮತ್ತು ವಿವೇಕಾನಂದರ ಬಹುಮುಖ ವ್ಯಕ್ತಿತ್ವದ ಬಗ್ಗೆ ಯುವಕರಿಗೆ ಪರಿಚಯಿಸುವ ಸಲುವಾಗಿ ರಾಜ್ಯಾದ್ಯಂತ ಸಂಚರಿಸುತ್ತ ಜಿಲ್ಲೆಗೆ ಆಗಮಿಸಿದ ವಿವೇಕಾನಂದರ ರಥವನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಿಂದ ಮೆರವಣಿಗೆ ಸಾಗಿದ ರಥಯಾತ್ರೆಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಶಿವಪ್ರಸಾದ್ ಚಾಲನೆ ನೀಡಿದರು. ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್ ಹಾಗೂ ರಾಮಕೃಷ್ಣ ಭಾವ ಪರಿಷತ್ ನೇತೃತ್ವದಲ್ಲಿ ಪಂಚಗಿರಿ ಬೋಧನಾ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ, ಸರ್ ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆ ಸೇರಿದಂತೆ ಇನ್ನಿತರ ಶಾಲೆಗಳ ಮಕ್ಕಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸ್ವಾಮಿ ವಿವೇಕಾನಂದರ ವಾಣಿ ಹಾಗೂ ವಿಚಾರಧಾರೆಗಳನ್ನು ತಿಳಿಸುವ ಬ್ಯಾನರ್ಗಳು ಕಂಗೊಳಿಸುತ್ತಿದ್ದವು. ವೀರಗಾಸೆ, ಡೊಳ್ಳುಕುಣಿತ ಮತ್ತು ಮಂಗಳವಾದ್ಯಗಳ ಜೊತೆಗೆ ಕಳಶಗಳನ್ನು ಹೊತ್ತು ಸಾಗಿದ ಇಲ್ಲಿನ ಗಾಯಿತ್ರಿಸೇವಾ ಸಮಿತಿ ಮತ್ತು ಗಾಯತ್ರಿ ಮಹಿಳಾ ಮಂಡಳಿ ಸದಸ್ಯರಿಂದ ಮೆರವಣಿಗೆಗೆ ಮೆರುಗು ಬಂದಿತು. ಈ ಸಂದರ್ಭದಲ್ಲಿ ಬೆಂಗಳೂರು ರಾಮಕೃಷ್ಣ ಮಠದ ಶ್ರೀ ತ್ಯಾಗೀಶ್ವರಾನಂದಜೀ ಮಹಾರಾಜ್, ಚಿಕ್ಕಬಳ್ಳಾಪುರ ರಾಮಕೃಷ್ಣ ವಿವೇಕಾನಂದ ಮಠದ ಪೂರ್ಣಾನಂದಜೀ ಮಹಾರಾಜ್, ಕೈವಾರದ ರಾಮಕೃಷ್ಣ ಧ್ಯಾನ ಮಂದಿರದ ಶಿವಸ್ವರೂಪಾನಂದಜೀ ಮಹಾರಾಜ್, ಪೂಜ್ಯ ಸ್ವಾಮಿ ರಘುರಮಾನಂದಜೀ ಮಹಾರಾಜ್, ಪೂಜ್ಯ ಸ್ವಾಮಿ ಸೌಖ್ಯಾನಂದಜೀ ಮಹಾರಾಜ್, ಕರ್ನಾಟಕ ಹಾಲು ಒಕ್ಕೂಟದ ನಿರ್ದೇಶಕ ಕೆ.ವಿ.ನಾಗರಾಜ್, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಡಾ. ಕೋಡಿರಂಗಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚಂದ್ರಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಪಿ.ನವಮೋಹನ್, ಬ್ರಾಹ್ಮಣ ಸಂಘದ ತಾಲೂಕು ಅಧ್ಯಕ್ಷ ಶೇಷಭಟ್, ರಮೇಶ್ ಶಾಸ್ತ್ರಿ ಇದ್ದರು.
ರಸಗೊಬ್ಬರ ನಿಗದಿತ ದರ ಮಾರಾಟ
ಮೈಸೂರು: ಕೇಂದ್ರ ಸರ್ಕಾರವು 2013ರ ಏಪ್ರಿಲ್ ಒಂದರಿಂದ ರಸಗೊಬ್ಬರಗಳ ಗರಿಷ್ಠ ಮಾರಾಟ ಬೆಲೆಯನ್ನು ಪರಿಷ್ಕೃತಗೊಳಿಸಿ ಬೆಲೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಈಗಾಗಲೇ ಈ ಪರಿಷ್ಕೃತ ರಸಗೊಬ್ಬರಗಳ ಗರಿಷ್ಠ ಬೆಲೆಯನ್ನು ಜಿಲ್ಲೆಯ ಎಲ್ಲ ರಸಗೊಬ್ಬರ ಮಾರಾಟಗಾರರಿಗೆ ತಲುಪಿಸಿದ್ದು, ಮಾರಾಟಗಾರರು ಸರ್ಕಾರವು ನಿಗದಿಪಡಿಸಿರುವ ಗರಿಷ್ಠ ಬೆಲೆಗೆ ಮಾತ್ರ ಮಾರಾಟ ಮಾಡಲು ಸೂಚಿಸಿದೆ. ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಪರವಾನಗಿ ರದ್ದುಪಡಿಸಿ ಅಥವಾ ಅಮಾನತುಗೊಳಿಸಿ ರಸಗೊಬ್ಬರ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಜಂಟಿ ಕೃಷಿ ನಿರ್ದೇಶಕ ಕೆ.ಆರ್. ಕೃಷ್ಣಯ್ಯ ಜಿಲ್ಲೆಯ ಎಲ್ಲ ರಸಗೊಬ್ಬರ ಮಾರಾಟಗಾರರಿಗೆ ಎಚ್ಚರಿಸಿದ್ದಾರೆ.
ವ್ಯಕ್ತಿ ಬಂಧನ: 2 ಸ್ಕಾರ್ಪಿಯೋ ವಶ
ಮೈಸೂರು: ಎನ್.ಆರ್. ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ 12.50 ಲಕ್ಷ ರು. ಮೌಲ್ಯದ 2 ಸ್ಕಾರ್ಪಿಯೋ ಕಾರುಗಳ ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಕಾಟನ್ಪೇಟೆ ಓಟಿಸಿ ರಸ್ತೆ ನಿವಾಸಿ ತೌಸೀಫ್ (24) ಬಂಧಿತ ಆರೋಪಿ. ಮೈಸೂರಿನ ಬನ್ನಿಮಂಟಪದ ಬಾಲಭವನದ ಬಳಿ ಸ್ಕಾರ್ಪಿಯೋ ಕಾರಿನೊಂದಿಗೆ ಈತ ನಿಂತಿದ್ದಾಗ ಪೊಲೀಸರು ವಿಚಾರಿಸಿದಾಗ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಎನ್.ಆರ್. ಠಾಣೆಯ ಇನ್ಸ್ಪೆಕ್ಟರ್ ಟಿ.ಆರ್. ರಾಜಶೆಟ್ಟಿ, ಎಸ್ಐಗಳಾದ ಮುಸ್ತಾಕ್ ಪಾಷಾ. ಪರಶುರಾಮ್ ಮತ್ತು ಸಿಬ್ಬಂದಿ ಲಿಂಗರಾಜಪ್ಪ, ಡಿ.ಎಸ್. ಸುರೇಶ, ರಮೇಶ, ಜೊಸೇಪ್ ನರೋನ್ಹಾ, ಎಲಿಯಾಸ್, ವನಜಾಕ್ಷಿ ಈ ಪತ್ತೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

