ಕೋಲಾರ

ರೇಷನ್ ಕಾರ್ಡ್‌ಗಾಗಿ ಸೈಬರ್ ಸೆಂಟರ್‌ಗೆ ಮುಗಿಬಿದ್ದ ಜನ

Published On :

- ಕೆ.ರಮೇಶ್
ಬಂಗಾರಪೇಟೆ: ರೇಷನ್ ಕಾರ್ಡ್‌ಗಳನ್ನು ನವೀಕರಿಸಿಕೊಳ್ಳಲು ಕಾರ್ಡ್‌ದಾರರು ಪಂಚಾಯಿತಿಗಳ ಮುಂದೆ ಹಾಗೂ ಪಟ್ಟಣಗಳಲ್ಲಿ ಸೈಬರ್ ಸೆಂಟರ್‌ಗಳ ಮುಂದೆ ಪ್ರತಿದಿನ ಬೆಳಗ್ಗೆಯಿಂದ ರಾತ್ರಿವರೆಗೂ ಎಲ್ಲಾ ಕೆಲಸ- ಕಾರ್ಯ ಬಿಟ್ಟು ಕಾದರೂ ಕೆಲಸ ಮಾತ್ರ ತ್ವರಿತವಾಗಿ ಆಗದೆ ಮಂದಗತಿಯಲ್ಲಿ ಸಾಗಿರುವುದರಿಂದ ಸಾರ್ವಜನಿಕರು ತೊಂದರೆಗೆ ಸಿಲುಕುವಂತಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಿನ ಜುಲೈ ಮಾಹೆಯಿಂದ ಅಗ್ಗದ ದರದಲ್ಲಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲು ಮುಂದಾಗಿರುವುದರಿಂದ ಪಡಿತರ ಚೀಟಿ ನವೀಕರಿಸಿಕೊಳ್ಳಲು ಜನತೆ ದುಂಬಾಲು ಬೀಳುತ್ತಿದ್ದಾರೆ. ಅಗ್ಗದ ಅಕ್ಕಿ ನೀಡುವ ಸರ್ಕಾರ ಅದೇ ರೀತಿಯಲ್ಲಿ ಅನರ್ಹರನ್ನು ಪಟ್ಟಿಯಿಂದ ರದ್ದುಗೊಳಿಸಲು ಮುಂದಾಗಿರುವುದು ಸಂತೋಷದ ವಿಷಯವೇ ಸರಿ. ಈ ಹಿನ್ನೆಲೆಯಲ್ಲಿ 2010ರಲ್ಲಿ ವಿತರಿಸಿರುವ ಬಿಪಿಎಲ್ ಕಾರ್ಡ್ ನವೀಕರಿಸಿಕೊಳ್ಳಲು ಸೂಚಿಸಿರುವುದರಿಂದ ಕ್ಷೇತ್ರಾದ್ಯಂತ ಕೆಲಸ ಭರದಿಂದ ಸಾಗಿದೆ. ಮತ್ತೊಂದೆಡೆ ಹೊಸ ಕಾರ್ಡ್ ನೀಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೇಳಿರುವುದರಿಂದ ಪಂಚಾಯಿತಿಗಳಲ್ಲಿ ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಕೈತುಂಬಾ ಕೆಲಸ ಸಿಕ್ಕಿದೆ. ಕಾರ್ಡ್‌ಗಳ ವಿಷಯ ಬಿಟ್ಟರೆ ಬೇರ ಕೆಲಸ ಕಾರ್ಯಗಳತ್ತ ಮುಖ ಮಾಡಲು ಆಗದಂತಾಗಿದೆ.
ಪ್ರತಿದಿನ ಪಂಚಾಯಿತಿಗಳ ಮುಂದೆ ಜನರು ಸಾಲಾಗಿ ನಿಂತಿ ಹೊಸ ಕಾರ್ಡ್‌ಗಾಗಿ ಮತ್ತು ಹಳೇ ಕಾರ್ಡ್‌ಗಳ ನವೀಕರಣಕ್ಕೆ ದುಂಬಾಲು ಬೀಳುತ್ತಿರುವುದು ಪಂಚಾಯಿತಿ ಸಿಬ್ಬಂದಿಗೆ ಪೀಕಲಾಟವಾಗಿದೆ. ಪಂಚಾಯಿತಿಯಲ್ಲಿ ಒಂದೇ ಕಂಪ್ಯೂಟರ್ ಇರುವುದರಿಂದ ಕುಟುಂಬದ ಪ್ರತಿಯೊಬ್ಬರ ವಿವರ, ಆಧಾರ್ ಸಂಖ್ಯೆ, ಫೋಟೋ, ಬಯೋವುಟ್ರಿಕ್ ಸಂಪೂರ್ಣ ಮಾಹಿತಿ ಪಡೆಯಬೇಕಿರುವುದರಿಂದ ತ್ವರಿತವಾಗಿ ನೋಂದಣಿ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಅಲ್ಲದೆ, ಕೆಲವೊಮ್ಮ ಸರ್ವರ್ ಬಿಜಿ ಆಗುವುದರಿಂದ ಇಡೀ ದಿನ ಕಾದರೂ ಪ್ರಯೋಜನವಾಗದೆ ಜನರು ಬಿಸಿಲಲ್ಲಿ ನಿಂತು ಅಧಿಕಾರಿಗಳ ವಿರುದ್ಧ ಶಪಿಸುವಂತಾಗಿದೆ. ಹಾಗಾಗಿ ಬೆಳಗ್ಗೆಯಿಂದ ಕುಟುಂಬದ ಮಹಿಳೆಯರು, ಮಕ್ಕಳು, ವೃದ್ಧರಿಂದ ಹಿಡಿದು ಎಲ್ಲರೂ ತಮ್ಮ ಕೆಲಸ- ಕಾರ್ಯ ಬಿಟ್ಟು ಪಂಚಾಯ್ತಿಗಳ ಮುಂದೆ ಜಮಾಯಿಸಿದರೂ ಕೆಲಸಗಳು ಮಾತ್ರ ತ್ವರಿತವಾಗಿ ಆಗುತ್ತಿಲ್ಲ. ಇದರಿಂದ ಜನರು ಹಲವು ತೊಂದರೆಗಳಿಗೆ ಸಿಲುಕಿದ್ದಾರೆ.
ಪಂಚಾಯಿತಿಗಳಿಗೆ ಮತ್ತೊಂದು ಕಂಪ್ಯೂಟರ್ ಅಳವಡಿಸಿ ಸಿಬ್ಬಂದಿ ಹೆಚ್ಚಿಸುವ ಮೂಲಕ ಗ್ರಾಮಸ್ಥರನ್ನು ವಿನಾಕಾರಣ ಅಲೆದಾಡಿಸದೆ ಬೇಗನೆ ಕೆಲಸವಾಗುವಂತೆ ಮಾಡಬೇಕು ಎಂಬುದು ಗ್ರಾಮಸ್ಥರ ವಾದವಾಗಿದೆ. ಗ್ರಾಮೀಣ ಜನರ ಸಮಸ್ಯೆ ಇದಾದರೆ ಪಟ್ಟಣದ ಜನರದು ಇದಕ್ಕಿಂತಲೂ ಭಿನ್ನವೇನಲ್ಲ. ಇಲ್ಲಿಯೂ ಕೂಲಿ, ಕಚೇರಿಗಳಿಗೆ ಹೋಗುವವರು ರಜೆ ಹಾಕಿ ಸೈಬರ್ ಕೇಂದ್ರಗಳ ಸುತ್ತ ಪ್ರತಿದಿನ ಸುತ್ತುವಂತಾಗಿದೆ. ಈ ಮಧ್ಯ ವಿದ್ಯುತ್ ಕೈಕೊಡುವುದರಿಂದ ಮತ್ತೆ ವಿದ್ಯುತ್ ಬರುವವರೆಗೂ ಬಿಸಿಲಲ್ಲಿ ಊಟವಿಲ್ಲದೆ ಮಕ್ಕಳೊಂದಿಗೆ ಕಾಯುವಂತಾಗಿದೆ. ಅಲ್ಲದೆ, ತಮ್ಮ ಹಳೇ ಕಾರ್ಡ್ ನವೀಕರಿಸಿಕೊಳ್ಳಲು ಇವರ ಜತೆ ಮತ್ತೊಬ್ಬ ಕಾರ್ಡ್‌ದಾರರನ್ನು ಸಾಕ್ಷಿಗೆ ಕಡ್ಡಾಯವಾಗಿ ಕರೆತರಲೇಬೇಕು ಎಂಬ ಸರ್ಕಾರದ ಆದೇಶದಿಂದ ಮತ್ತಷ್ಟು ಮಂದಿ ಸಮಸ್ಯೆಗಳಿಗೆ ಸಿಲುಕುವಂತಾಗಿದ್ದು, ಸಮಯಕ್ಕೆ ಎಲ್ಲಾ ದಾಖಲೆಗಳನ್ನು ನೀಡಿದ್ದರೂ ಅರ್ಹರ ಕಾರ್ಡ್‌ಗಳನ್ನು ರದ್ದುಗೊಳಿಸಿ ಬಡವರನ್ನು ಮತ್ತಷ್ಟು ಶೋಷಿತರಾಗುವಂತಾಗಿದೆ. ಸರ್ಕಾರದ ಈ ನೀತಿಯಿಂದ ಕಾರ್ಡ್ ಸಹವಾಸವೇ ಬೇಡ ಎಂಬಂತಾಗಿದೆ. ಸರ್ಕಾರದ ಈ ದ್ವಂದ್ವ ನೀತಿಯಿಂದ ಅರ್ಹರು ಪಡಿತರ ಚೀಟಿಗಳಿಂದ ವಂಚಿತರಾಗುವಂತಾಗಿದ್ದು, ಕೂಡಲೆ ಹಲವು ಕಠಿಣ ಕಾನೂನು ಸಡಿಲಗೊಳಿಸಿ ಅರ್ಹ ಬಡವರಿಗೆ ಮಾತ್ರ ಸುಲಭವಾಗಿ ಕಾರ್ಡ್‌ಗಳು ದೊರೆಯುವಂತೆ ಮಾಡಬೇಕೆಂಬುದು ಜನತೆಯ ಆಶಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.