ಬೆಸ್ಕಾಂ ಗ್ರಾಹಕರ ಸಭೆಗೆ ಬಂದಿದ್ದು ನಾಲ್ವರು ಮಾತ್ರ!
ಕ.ಪ್ರ.ವಾರ್ತೆ ಕೋಲಾರ ಜೂ. 25
ಗ್ರಾಹಕರ ಸಮಸ್ಯೆ ಅರಿಯಲು ಬೆಸ್ಕಾಂನಿಂದ ಮಂಗಳವಾರ ಕರೆಯಲಾಗಿದ್ದ ಸಭೆಗೆ ಕೇವಲ ನಾಲ್ಕು ಮಂದಿ ಗ್ರಾಹಕರಷ್ಟೇ ಭಾಗವಹಿಸಿದ್ದರಿಂದ ಸಭೆಯು ನೀರಸವಾಗಿತ್ತು.
ಸೋಮವಾರ ನಗರ ವಿಭಾಗದಿಂದ ಕರೆದಿದ್ದ ಸಭೆಗೆ ಒಬ್ಬರು ಸಹ ಭಾಗವಹಿಸದಿದ್ದರಿಂದ ಸಭೆಯನ್ನು ಮುಂಡೂಡಲಾಗಿತ್ತು. ಮಂಗಳವಾರ ನಡೆದ ಗ್ರಾಮಾಂತರ ವಿಭಾಗದ ಗ್ರಾಹಕರ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುವ ನಿರೀಕ್ಷೆಯಿಂದ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರು ಸೇರಿದಂತೆ 9 ಮಂದಿ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ, ಗ್ರಾಹಕರ ಸಂಖ್ಯೆ ಕೇವಲ ನಾಲ್ಕು.
ಸಭೆಯಲ್ಲಿ ಭಾಗವಹಿಸಿದ್ದ ಮನ್ವಂತರ ಪ್ರಕಾಶನದ ಸಲಹೆಗಾರ ಹಾಗೂ ಕರ್ನಾಟಕ ನೀರಾವರಿ ವೇದಿಕೆಯ ಸದಸ್ಯ ತ್ಯಾಗರಾಜ್ ಅವರು ಕಳೆದ ಎರಡು ತಿಂಗಳ ಹಿಂದೆ ವಿದ್ಯುತ್ ಸಮಸ್ಯೆ ನಿವಾರಣೆ ಸಂಬಂಧ ಪತ್ರಕರ್ತರ ಭವನದಲ್ಲಿ ಮನ್ವಂತರ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಗ್ರಾಹಕರ ಸಭೆಗೆ 70ಕ್ಕೂ ಹೆಚ್ಚು ಮಂದಿ ಹಾಜರಿದ್ದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಬೆಸ್ಕಾಂ ವತಿಯಿಂದ ಕರೆದಿರುವ ಸಭೆಯ ಬಗ್ಗೆ ಗ್ರಾಹಕರಿಗೆ ಮಾಹಿತಿ ಇಲ್ಲದೆ ಕಡಿಮೆ ಬಂದಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಇಇ ಶಿವರಾಮ್ ಅವರು ಗ್ರಾಹಕರ ಸಭೆ ಕುರಿತು ಪತ್ರಿಕೆಗಳಲ್ಲಿ ಮಾಹಿತಿ ನೀಡಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿತ್ತು ಎಂದು ಹೇಳಿದಾಗ, ಗ್ರಾಮೀಣ ಪ್ರದೇಶದಲ್ಲಿ ಟಿಸಿಗಳ ದುರಸ್ತಿ ಮತ್ತು ಬದಲಾವಣೆಗೆ ಹೋಗುವ ಸಿಬ್ಬಂದಿ ರೈತರಿಗೆ ಕರಪತ್ರ ನೀಡಿ ಸಭೆಗೆ ಬರುವಂತೆ ಕರೆದಿದ್ದ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದರೆಂದು ಹೇಳಿದರು.
ಮುಂದಿನ ಸಭೆಗಳಿಗೆ ನಿಮ್ಮ ಸಲಹೆಯಂತೆ ಕರಪತ್ರಗಳ ಮೂಲಕ ಗ್ರಾಹಕರಿಗೆ ಆಹ್ವಾನ ನೀಡುವುದಾಗಿ ಶಿವರಾಂ ಭರವಸೆ ನೀಡಿದರು. ಕೋಲಾರ ಜಿಲ್ಲೆಗೆ ಕನಿಷ್ಠ ದಿನಕ್ಕೆ 140 ರಿಂದ 150 ಮೆವಾ ವಿದ್ಯುತ್ ಬೇಕಾಗುತ್ತದೆ, ವಿದ್ಯುತ್ ಅಭಾವವಿರುವುದರಿಂದ 80 ಮೆವಾ ನೀಡಿದರೂ ಪರಿಸ್ಥಿತಿ ನಿಭಾಯಿಸಬಹುದು ಎಂದು ತ್ಯಾಗರಾಜ್ ಪ್ರಶ್ನೆಗೆ ಉತ್ತರಿಸಿದ ಇಇಯವರು, ಕೋಲಾರ ಪವರ್ ಗ್ರೀಡ್ನಿಂದ ವಿದ್ಯುತ್ ಪಡೆಯುವ ಹಾಗೂ ನೀರಾವರಿ ಪಂಪ್ಸೆಟ್ಗಳ ಮಾಹಿತಿ ಕುರಿತು ತಾವೇನು ಹೇಳಲು ಅಧಿಕಾರವಿಲ್ಲ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಬಳಿ ಮಾಹಿತಿ ಪಡೆಯಬಹುದೆಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಟಿ.ಎಂ. ನಾಗರಾಜು ಅವರು ಕಬ್ಬಿಣದ ವಿದ್ಯುತ್ ಕಂಬಗಳನ್ನು ತೆರವು ಮಾಡಿ ಸಿಮೆಂಟ್ ಕಂಬಗಳನ್ನು ಅಳವಡಿಸುವಂತೆ ಹಾಗೂ ಟಿಸಿಗಳ ದುರಸ್ತಿ ಕಾರ್ಯ ವಿಳಂಬ ಮಾಡದಂತೆ ಕೋರಿದರು. ಮತ್ತೊಬ್ಬ ಗ್ರಾಹಕ ಜಂಗಾಲಹಳ್ಳಿ ವೆಂಕಟೇಶ್ ಅವರು, ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ವಿಳಂಬ ಮಾಡದಂತೆ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು. ಸರ್ಕಾರವು ಖಾಸಗಿ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಸೂಚಿಸಿದೆ. ಆದರೂ ಸರ್ಕಾರಕ್ಕೆ ಗ್ರಾಹಕರ ಪ್ರಸ್ತಾವನೆ ಕಳುಹಿಸುವುದಾಗಿ ಇಇ ಶಿವರಾಂ ತಿಳಿಸಿದರು.
ಸಭೆಯಲ್ಲಿ ಎಇಇಗಳಾದ ರವೀಂದ್ರ, ರಮೇಶ್, ಎಇಗಳಾದ ಮುನಿರಾಜು ಹಾಗೂ ಲೆಕ್ಕವಿಭಾಗದ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

